ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯನ್‌ ಪಾರ್ಟಿಗೆ ಹೋಗಿರಲಿಲ್ಲ, ಹಣಕ್ಕಾಗಿ ಅಪಹರಿಸಲಾಗಿತ್ತು: ಮಹಾ ಸಚಿವ ಮಲಿಕ್‌

Last Updated 7 ನವೆಂಬರ್ 2021, 7:46 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅವರನ್ನು ಅಪಹರಿಸಿ, ಹಣಕ್ಕೆ ಒತ್ತಾಯಿಸಲಾಗಿತ್ತು ಎಂದು ಎನ್‌ಸಿಪಿ ಮುಖ್ಯ ವಕ್ತಾರ ಮತ್ತು ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಭಾನುವಾರ ಹೇಳಿದ್ದಾರೆ.

‘ನಾನು ಮಾತನಾಡಲು ಪ್ರಾರಂಭಿಸಿದ ಸಮಯದಿಂದ ಶಾರುಕ್‌ ಖಾನ್‌ಗೆ ಬೆದರಿಕೆ ಹಾಕಲಾಗುತ್ತಿದೆ’ ಎಂದೂ ಮಲಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಪ್ರಕರಣದಲ್ಲಿ ಎನ್‌ಸಿಬಿ ಕಚೇರಿಯಲ್ಲಿರುವ ನಾಲ್ವರು ಭಾಗಿಯಾಗಿರುವುದಾಗಿ ಮಲಿಕ್ ಆರೋಪಿಸಿದ್ದಾರೆ. ಸಮೀರ್ ವಾಂಖೆಡೆ, ಅವರ ಕೈಕೆಳಗಿನ ಅಧಿಕಾರಿಗಳಾದ ವಿವಿ ಸಿಂಗ್, ಆಶಿಶ್ ರಂಜನ್ ಮತ್ತು ಚಾಲಕ ಮಾನೆ ಇದರಲ್ಲಿರುವುದಾಗಿ ಅವರು ತಿಳಿಸಿದರು. ಇದು ಎನ್‌ಸಿಬಿ ಕಚೇರಿಯಲ್ಲಿನ ಕೂಟ. ಅವರ ಹಿಂದೆ ಖಾಸಗಿ ಪಡೆಯೇ ಇದೆ ಎಂದು ಮಲಿಕ್‌ ಪ್ರತಿಪಾದಿಸಿದ್ದಾರೆ.

ವಾಂಖೆಡೆ ಹಿಂದಿರುವ ಖಾಸಗಿ ಪಡೆಯಲ್ಲಿ ಕಿರಣ್ ಗೋಸಾವಿ, ಮೋಹನ್ ಭೌಶಾಲಿ, ಸ್ಯಾಮ್ ಡಿಸೋಜಾ ಸೇರಿದಂತೆ ಹಲವರು ಇರುವುದಾಗಿ ಮಲಿಕ್‌ ಈ ಹಿಂದೆ ಹೇಳಿದ್ದರು.

ಅಲ್ಲದೆ, ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಅಲಿಯಾಸ್ ಮೋಹಿತ್ ಭಾರತೀಯ ಕೂಡ ವಾಂಖೆಡೆಗೆ ಪರಿಚಿತರು. ಸುನೀಲ್ ಪಾಟೀಲ್ ಕೂಡ ಗುಂಪಿನ ಭಾಗವಾಗಿದ್ದಾರೆ. ಆದರೆ, ಸುನೀಲ್‌ ಪಾಟೀಲ್‌ಗೂ ಎನ್‌ಸಿಬಿಗೂ ಸಂಬಂಧವಿಲ್ಲ ಎಂದು ಮಲಿಕ್‌ ಅವರು ತಿಳಿಸಿದರು.
ಕಾಂಬೋಜ್‌ ಅವರ ಸೋದರ ಸಂಬಂಧಿ ರಿಷಬ್ ಸಚ್‌ದೇವ್ ಅವರತ್ತಲೂ ಮಲಿಕ್ ಬೊಟ್ಟು ಮಾಡಿದ್ದಾರೆ. ಆರ್ಯನ್ ಖಾನ್ ಅವರನ್ನು ಪಾರ್ಟಿಗೆ ಕರೆದದ್ದು ಪ್ರತೀಕ್ ಗಾಬಾ ಮತ್ತು ಅಮೀರ್ ಫರ್ನಿಚರ್‌ವಾಲಾ. ಇವರಿಬ್ಬರೂ ಸಚ್‌ದೇವ ಅವರ ಸ್ನೇಹಿತರಾಗಿದ್ದಾರೆ ಎಂದು ಮಲಿಕ್‌ ತಿಳಿಸಿದ್ದಾರೆ.

ಡ್ರಗ್ಸ್ ಪ್ರಕರಣವನ್ನು ಎಸ್‌ಐಟಿ ವಿಚಾರಣೆ ನಡೆಸುತ್ತಿದೆ. ಇದೇ ವೇಳೆ ಎನ್‌ಸಿಬಿಯು ತನಿಖೆ ನಡೆಸುತ್ತಿದೆ. ಆರ್ಯನ್ ಖಾನ್ ಅವರನ್ನು ಅಪಹರಿಸಿ ಹಣ ಕೇಳಲಾಗಿದೆ ಎಂಬುದು ಈಗ ದೃಢಪಟ್ಟಿದೆ. ಮೊದಲಿಗೆ ₹25 ಕೋಟಿ ಕೇಳಲಾಗಿದೆ. ಅಂತಿಮವಾಗಿ ₹18 ಕೋಟಿ ವ್ಯಾಪಾರ ಕುದುರಿಸಲಾಗಿದೆ. ₹50 ಲಕ್ಷ ಹಣವೂ ಸಂದಾಯವಾಗಿದೆ ಎಂದು ಸಚಿವ ಮಲಿಕ್‌ ಬಹಿರಂಗಪಡಿಸಿದ್ದಾರೆ.

‘ಆರ್ಯನ್ ಖಾನ್ ಐಷಾರಾಮಿ ಹಡಗಿನ ಪಾರ್ಟಿಗೆ ತೆರಳಲು ಟಿಕೆಟ್ ಖರೀದಿಸಿರಲಿಲ್ಲ. ಪ್ರತೀಕ್ ಗಾಬಾ ಮತ್ತು ಅಮೀರ್ ಫರ್ನಿಚರ್ ವಾಲಾ ಅರ್ಯನ್‌ರನ್ನು ಅಲ್ಲಿಗೆ ಕರೆತಂದಿದ್ದರು. ಇದು ಹಣಕ್ಕಾಗಿ ನಡೆದ ಅಪಹರಣ . ಮೋಹಿತ್ ಕಾಂಬೋಜ್ ಇದರ ಮಾಸ್ಟರ್ ಮೈಂಡ್’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT