ಶುಕ್ರವಾರ, ಮಾರ್ಚ್ 5, 2021
30 °C

ಕೃಷಿ ಸುಧಾರಣೆ: ಮುಖ್ಯಮಂತ್ರಿಗಳ ಸಮಿತಿ ವರದಿ ಬಹಿರಂಗಕ್ಕೆ ನೀತಿ ಆಯೋಗ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೃಷಿ ಸುಧಾರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಸಮಿತಿ ಸಲ್ಲಿಸಿದ್ದ ವರದಿಯ ಪ್ರತಿ ಒದಗಿಸಲು ನೀತಿ ಆಯೋಗ ನಿರಾಕರಿಸಿದೆ. ಸಮಿತಿಯ ವರದಿಯನ್ನು ಆಯೋಗದ ಗವರ್ನಿಂಗ್‌ ಕೌನ್ಸಿಲ್‌ ಮುಂದೆ ಇನ್ನೂ ಪರಾಮರ್ಶೆಗೆ ಮಂಡಿಸಿಲ್ಲ. ಹೀಗಾಗಿ, ಪ್ರತಿ ಒದಗಿಸಲು ಸಾಧ್ಯವಿಲ್ಲ ಎಂದು ಆಯೋಗ ತಿಳಿಸಿದೆ.

ಸಮಿತಿಯ ವರದಿ ನೀಡುವಂತೆ ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್‌ ಸಲ್ಲಿಸಿದ್ದ ಅರ್ಜಿಗೆ ಈ ಮಾಹಿತಿ ನೀಡಲಾಗಿದೆ. ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ಮುನ್ನ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ ಎನ್ನುವ ಕೇಂದ್ರ ಸರ್ಕಾರದ ಹೇಳಿಕೆಗೆ ವ್ಯತಿರಿಕ್ತವಾಗಿ ಈ ಮಾಹಿತಿ ಒದಗಿಸಲಾಗಿದೆ.

ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ಪ್ರಧಾನಿ ನೇಮಿಸಿದ್ದ ಮುಖ್ಯಮಂತ್ರಿಗಳ ಸಮಿತಿಯು ಶಿಫಾರಸು ಮಾಡಿತ್ತು. ಈ ವಿವಾದಿತ ಕಾಯ್ದೆ ವಿಷಯಕ್ಕೆ ಸಂಬಂಧಿಸಿದಂತೆ ರೈತರು ಸದ್ಯ ಪ್ರತಿಭಟನೆ ನಡೆಸುತ್ತಿದ್ದಾರೆ.

‘ಕೃಷಿ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದಂತೆ ಕಳೆದ ವರ್ಷ ಜೂನ್‌ನಲ್ಲಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಮೂರು ತಿಂಗಳ ಬಳಿಕ, ಸಂಸತ್‌ ಅನುಮೋದನೆ ಪಡೆಯಲಾಯಿತು. ಆದರೆ, ಈ ಕಾಯ್ದೆಯನ್ನು ಜಾರಿಗೊಳಿಸುವ ಮುನ್ನ ಉನ್ನತ ಮಟ್ಟದ ಸಮಿತಿಯ ವರದಿಯ ಬಗ್ಗೆ ಚರ್ಚೆಯನ್ನೇ ನಡೆಸಿಲ್ಲ. ನೀತಿ ಆಯೋಗದ ಗವರ್ನಿಂಗ್‌ ಕೌನ್ಸಿಲ್‌ ವಿಶ್ಲೇಷಣೆ ನಡೆಸಿಲ್ಲ. ಜತೆಗೆ, ಸಾರ್ವಜನಿಕವಾಗಿಯೂ ವರದಿಯನ್ನು ಬಹಿರಂಗಪಡಿಸಿಲ್ಲ. ಸಮಗ್ರವಾಗಿ ಪರಾಮರ್ಶೆಗೆ ಒಳಪಡಿಸದೆ ಕೃಷಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ’ ಎಂದು ಅಂಜಲಿ ದೂರಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ 14ರಂದು ಕೃಷಿ ಮಸೂದೆ ಮಂಡಿಸಿದ್ದ ಕೃಷಿ ಖಾತೆ ರಾಜ್ಯ ಸಚಿವ ರಾವಸಾಹೇಬ್‌ ದಾನ್ವೆ, ‘ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವ ಮುನ್ನ ಮುಖ್ಯಮಂತ್ರಿಗಳ ಸಮಿತಿ ರಚಿಸಲಾಗಿತ್ತು. ಎಲ್ಲ ವಿಷಯಗಳನ್ನು ಸಮಿತಿ ಸಮಗ್ರವಾಗಿ ಚರ್ಚಿಸಿದ್ದು, ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಬಹುದು ಎಂದು ತಿಳಿಸಿತ್ತು. ಹೀಗಾಗಿ ಮಸೂದೆ ಮಂಡಿಸಲಾಗಿದೆ’ ಎಂದು ಹೇಳಿದ್ದರು. ಆದರೆ, ಈ ರೀತಿಯ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ ಎಂದು ಸಮಿತಿಯ ಸದಸ್ಯರಾಗಿದ್ದ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ತಿಳಿಸಿದ್ದರು.

‘ಭಾರತದ ಕೃಷಿ ಕ್ಷೇತ್ರದ ಪರಿವರ್ತನೆ’ಗಾಗಿ 2019ರ ಜುಲೈ 1ರಂದು ನಡೆದ ನೀತಿ ಆಯೋಗದ ಗವರ್ನಿಂಗ್‌ ಕೌನ್ಸಿಲ್‌ ಸಭೆಯಲ್ಲಿ ಮುಖ್ಯಮಂತ್ರಿಗಳ ಉನ್ನತಮಟ್ಟದ ಸಮಿತಿಯನ್ನು ಪ್ರಧಾನಿ ನರೇಂದ್ರ ಮೋದಿ ರಚಿಸಿದ್ದರು. ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದರು. ಪಂಜಾಬ್‌, ಒಡಿಶಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಮತ್ತು ಅರುಣಾಚಲ ಪ್ರದೇಶದ ಮುಖ್ಯಮಂತ್ರಿಗಳು ಈ ಸಮಿತಿಯ ಸದಸ್ಯರಾಗಿದ್ದರು.

ಈ ಸಮಿತಿಯ ವರದಿ ಮತ್ತು ಸಭೆಯ ವಿವರಗಳನ್ನು ನೀಡುವಂತೆ ಅಂಜಲಿ ಭಾರದ್ವಾಜ್‌ ಕೋರಿದ್ದರು. ವರದಿಯ ಪ್ರತಿ ನೀಡಲು ನೀತಿ ಆಯೋಗ ನಿರಾಕರಿಸಿದೆ. ಸಮಿತಿಯು ವರದಿಯನ್ನು ನೀಡಿದ್ದು, ಇದನ್ನು 6ನೇ ಗವರ್ನಿಂಗ್‌ ಕೌನ್ಸಿಲ್‌ ಮುಂದೆ ಮಂಡಿಸಲಾಗುವುದು. ಹೀಗಾಗಿ, ಈ ಹಂತದಲ್ಲಿ ವರದಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು