ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಸುದ್ದಿ ಪೋರ್ಟಲ್, ಕಂಟೆಂಟ್ ಕ್ರಿಯೇಟರ್‌ಗಳ ಮೇಲೆ ಕೇಂದ್ರದ ನಿಯಂತ್ರಣ

ನಿಯಮ ರೂಪಿಸಲು ವಾರ್ತಾ ಸಚಿವಾಲಯಕ್ಕೆ ಅವಕಾಶ
Last Updated 11 ನವೆಂಬರ್ 2020, 18:35 IST
ಅಕ್ಷರ ಗಾತ್ರ

ನವದೆಹಲಿ: ಆನ್‌ಲೈನ್‌ನಲ್ಲಿ ಪ್ರಕಟವಾಗುವ ಸುದ್ದಿ, ಪ್ರಚಲಿತ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳು, ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಪ್ರೈಮ್‌ನಂತಹ ಒಟಿಟಿ ವೇದಿಕೆಗಳಲ್ಲಿ ಲಭ್ಯವಾಗುವ ವಿಡಿಯೊ, ಸಿನಿಮಾ ಮತ್ತು ಇತರ ಕಾರ್ಯಕ್ರಮಗಳನ್ನು (ಕಂಟೆಂಟ್‌) ನಿಯಂತ್ರಣ ವ್ಯವಸ್ಥೆಗೆ ಒಳಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಸಂಪುಟ ಕಾರ್ಯಾಲಯವು ಸೋಮವಾರ ತಡರಾತ್ರಿ ಪ್ರಕಟಿಸಿದೆ.

ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪ್ರಟಕವಾಗುವ ಸುದ್ದಿಗಳಿಗೂ ಇದು ಅನ್ವಯ ಆಗಲಿದೆ. ಈ ಎಲ್ಲವೂ ಇನ್ನು ಮುಂದೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವ ವ್ಯಾಪ್ತಿಗೆ ಬರಲಿವೆ. ಇದಕ್ಕೆ ಸಂಬಂಧಿಸಿದ ನೀತಿಯನ್ನು ಸಚಿವಾಲಯವು ರೂಪಿಸಬೇಕಿದೆ.

ಆನ್‌ಲೈನ್‌ನಲ್ಲಿ ಪ್ರಕಟವಾಗುವ ಸುದ್ದಿ, ಆಡಿಯೊ, ವಿಡಿಯೊಗಳಿಗೆ ನಿಯಂತ್ರಣ ಬೇಕು ಎಂಬ ಬೇಡಿಕೆ ಇತ್ತೀಚೆಗೆ ಕೇಳಿ ಬಂದಿತ್ತು.

ಭಾರತ ಸರ್ಕಾರದ (ಚಟುವಟಿಕೆ ಹಂಚಿಕೆ) ನಿಯಮಗಳು 1961ಕ್ಕೆ ತಿದ್ದುಪಡಿ ತಂದಿರುವುದರಿಂದ, ಆನ್‌ಲೈನ್‌ನಲ್ಲಿ ಪ್ರಕಟವಾಗುವ ಸುದ್ದಿ, ಆಡಿಯೊ, ವಿಡಿಯೊ ಮತ್ತು ಸಿನಿಮಾಗಳ ಮೇಲೆ ನಿಗಾ ಇರಿಸುವುದಕ್ಕಾಗಿ ನಿಯಮಗಳನ್ನು ರೂಪಿಸುವ ಅವಕಾಶವು ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಲಭ್ಯವಾಗುತ್ತದೆ.

ನಿಯಂತ್ರಣ ಯತ್ನ: ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಹಾಗೆಯೇ ಒಟಿಟಿ ವೇದಿಕೆಗಳಿಗೆ ಕೂಡ ಯಾವುದಾದರೂ ರೀತಿಯ ನಿಯಂತ್ರಣ ಅಗತ್ಯ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಕಳೆದ ವರ್ಷ ಹೇಳಿದ್ದರು. ಮಾಧ್ಯಮ ಸ್ವಾತಂತ್ರ್ಯವನ್ನು ಅದುಮಿಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದೂ ಅವರು ಸ್ಪ‍ಷ್ಟಪಡಿಸಿದ್ದರು.

ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ನಿಯಂತ್ರಿಸುವ ಅಧಿಕಾರವನ್ನು ತನಗೆ ವರ್ಗಾಯಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಕೋರಿತ್ತು.

ಒಟಿಟಿ ವೇದಿಕೆಗಳ ಮೇಲೆ ನಿಯಂತ್ರಣ ಇರುವ ಸ್ವಾಯತ್ತ ಸಂಸ್ಥೆಯೊಂದನ್ನು ಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಕೇಳಿತ್ತು. ಇದಕ್ಕೆ ಸಂಬಂಧಿಸಿ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ, ಕೇಂದ್ರದ ಅಭಿಪ್ರಾಯ ಕೇಳಲಾಗಿತ್ತು.

ವಿರೋಧದ ದನಿ

ಒಟಿಟಿ ವೇದಿಕೆಯನ್ನು ನಿಯಂತ್ರಣಕ್ಕೆ ಒಳಪಡಿಸುವ ನಿರ್ಧಾರಕ್ಕೆ ವಿರೋಧವೂ ವ್ಯಕ್ತವಾಗಿದೆ. ಈ ನಿರ್ಧಾರದಿಂದಾಗಿ ಭಾರತದ ವಿಡಿಯೊ–ಆಡಿಯೊ ನಿರ್ಮಾಪಕರಿಗೆ ಜಾಗತಿಕ ಮಟ್ಟದಲ್ಲಿ ಹಿನ್ನಡೆಯಾಗುತ್ತದೆ. ನಿರ್ಮಾಪಕರ ಸೃಜನಶೀಲತೆ ಮತ್ತು ವೀಕ್ಷಕರ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಿನಿಮಾ ನಿರ್ಮಾಪಕರಾದ ಹನ್ಸಲ್‌ ಮೆಹ್ತಾ ಮತ್ತು ರೀಮಾ ಕಾಗ್ತಿ ಅವರು ವಿರೋಧ ವ್ಯಕ್ತಪ‍ಡಿಸಿದವರಲ್ಲಿ ಸೇರಿದ್ದಾರೆ. ಆದರೆ, ಸ್ವಯಂ ನಿಯಂತ್ರಣ ಜಾರಿ ವಿಚಾರದಲ್ಲಿ ಸರ್ಕಾರದ ಜತೆಗೆ ಕೆಲಸ ಮಾಡುವುದನ್ನು ಎದುರು ನೋಡುವುದಾಗಿ ಎಂಎಕ್ಸ್‌ ಪ್ಲೇಯರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರಣ್‌ ಬೇಡಿ ಅವರು ಹೇಳಿದ್ದಾರೆ. ಒಟಿಟಿ ವೇದಿಕೆಯ ಪ್ರಮುಖ ಸಂಸ್ಥೆಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ.

ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ

ಆನ್‌ಲೈನ್ ಸುದ್ದಿ ಪೋರ್ಟಲ್‌ಗಳು, ಒಟಿಟಿ ಪ್ಲಾಟ್‌ಫಾರಂಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಂಚಿಕೊಳ್ಳುವುದರ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಹೇರಲು ಹೊರಟಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಇದು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕ್ರಮ ಎಂದು ಹಲವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುತ್ತದೆ ಎಂದು ಕೆಲವರು ಬರೆದುಕೊಂಡಿದ್ದಾರೆ.

‘ಸ್ವತಂತ್ರ ಮಾಧ್ಯಮ ಸಂಸ್ಥೆಗಳಿಗೆ, ಉತ್ತಮ ಮಾಹಿತಿ ನೀಡುತ್ತಿದ್ದ ಪೋರ್ಟಲ್‌ಗಳಿಗೆ ಟಾಟಾ ಹೇಳುವ ಸಮಯ ಬಂತು. ಅವೆಲ್ಲವೂ ಈಗ ಸೆನ್ಸಾರ್‌ಶಿಪ್‌ಗೆ ಒಳಪಡುತ್ತದೆ. ಸೆನ್ಸಾರ್‌ ಆಗದೇ ಇರುವ ಕಂಟೆಂಟ್‌ಗಳನ್ನು ನೋಡಲು ವಿಪಿಎನ್‌ ಮತ್ತು ಫ್ರಾಕ್ಸಿ ಬಳಕೆಯನ್ನು ಕಲಿತುಕೊಳ್ಳಿ’ ಎಂದು ಧೃವ ರಾಥೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಬರಹಕ್ಕೆ 1,500ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

‘ಸುಮ್ಮನೆ ಅತಿಶಯೋಕ್ತಿ ಬೇಡ. ಈ ನಿಯಮಗಳು ಒಟಿಟಿಗಳಿಗೆ ಅಷ್ಟೆ ಅನ್ವಯವಾಗುವುದು. ನಿಯಮಗಳನ್ನು ಇನ್ನೂ ರೂಪಿಸಿಲ್ಲ. ಅವು ರೂಪಿಸಿದಾಗ ನೋಡಿಕೊಳ್ಳೋಣ. ಬೆತ್ತಲೆಯಾಗದೆಯೇ ಒಳ್ಳೆಯ ಕಂಟೆಂಟ್‌ಗಳನ್ನು ತೋರಿಸಲು ಅವಕಾಶವಿದೆ. ಒಟಿಟಿ ಪ್ಲಾಟ್‌ಫಾರಂಗಳು ಇದನ್ನು ಅರ್ಥಮಾಡಿಕೊಳ್ಳಬೇಕು. ನಿಯಮಗಳಿಗೆ ಅತೀತವಾದುದೆಲ್ಲವೂ ಒಳ್ಳೆಯದೇ ಆಗಿರುವುದಿಲ್ಲ. ಸರ್ಕಾರದ ಈ ಕ್ರಮ ಸ್ವಾಗತಾರ್ಹ’ ಎಂದು ಶಬ್ರೀನ್ ಖಾನ್ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT