ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಯಲ್ಲಿ ಕೋಲಾಹಲ: ವಿರೋಧದ ನಡುವೆಯೇ ಕೃಷಿ ಮಸೂದೆಗೆ ಅಸ್ತು

ಕೃಷಿ ಕ್ಷೇತ್ರದ ಮಸೂದೆಗಳಿಗೆ ಅಂಗೀಕಾರ * ಮೇಲ್ಮನೆಯಲ್ಲಿ ವಿರೋಧ ಪಕ್ಷಗಳ ಸದಸ್ಯರ ಗದ್ದಲ
Last Updated 23 ಸೆಪ್ಟೆಂಬರ್ 2020, 7:29 IST
ಅಕ್ಷರ ಗಾತ್ರ

ನವದೆಹಲಿ: ವಿರೋಧ ಪಕ್ಷಗಳ ಸದಸ್ಯರ ಭಾರಿ ಗದ್ದಲ, ಪ್ರತಿಭಟನೆ ಮತ್ತು ವಿರೋಧದ ನಡುವೆಯೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳಿಗೆ ರಾಜ್ಯಸಭೆ ಭಾನುವಾರ ಧ್ವನಿಮತದ ಅಂಗೀಕಾರ ನೀಡಿತು.

ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಮಸೂದೆಗಳನ್ನು ಮಂಡಿಸಿದಾಗ ರಾಜ್ಯಸಭೆಯಲ್ಲಿ ಜೋರು ಗಲಾಟೆ ಆರಂಭವಾಯಿತು.

ರೈತರ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ ಮತ್ತು ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮಸೂದೆಗಳನ್ನು ಪರಿಶೀಲನಾ ಸಮಿತಿಗೆ ಕಳಿಸುವಂತೆ ವಿರೋಧ ಪಕ್ಷಗಳ ಸದಸ್ಯರು ಪಟ್ಟು ಹಿಡಿದರು.

ಮಸೂದೆಗಳನ್ನು ಪರಿಶೀಲನಾ ಸಮಿತಿಗೆ ಕಳಿಸುವ ನಿರ್ಣಯವನ್ನು ಧ್ವನಿಮತಕ್ಕೆ ಹಾಕುವುದಾಗಿ ಉಪ ಸಭಾಪತಿ ಹರಿವಂಶ ಸಿಂಗ್‌ ಪ್ರಕಟಿಸಿದಾಗವಿರೋಧ ಪಕ್ಷಗಳ ಆಕ್ರೋಶ ಕಟ್ಟೆಯೊಡೆಯಿತು.

ಘೋಷಣೆ ಕೂಗುತ್ತಸಭಾಪತಿ ಪೀಠದತ್ತ ನುಗ್ಗಿದತೃಣಮೂಲ ಕಾಂಗ್ರೆಸ್‌(ಟಿಎಂಸಿ) ನಾಯಕ ಡೆರೆಕ್‌ ಒಬ್ರಿಯಾನ್, ರೂಲ್‌ ಬುಕ್‌ ಎತ್ತಿಕೊಂಡರು. ಅವರನ್ನು ಸೇರಿಕೊಂಡ ವಿರೋಧ ಪಕ್ಷಗಳ ಸದಸ್ಯರು ಕೈಗೆ ಸಿಕ್ಕ ಮೈಕ್ರೊಫೋನ್‌ಗಳನ್ನು ಮುರಿದು ಹಾಕಿದರು. ಕಾಗದದ ಚೂರುಗಳನ್ನು ಹರಿದು ತೂರಿದರು. ಟೇಬಲ್‌ಗಳ ಮೇಲೆ ಹತ್ತಿ ನಿಂತು ಘೋಷಣೆ ಕೂಗತೊಗಿದರು. ಕೊನೆಗೆ ಸಭಾಪತಿ ಪೀಠದ ಮುಂದೆ ಧರಣಿ ಕುಳಿತರು.

ಗದ್ದಲ ನಿಯಂತ್ರಣಕ್ಕೆ ಬಾರದ ಕಾರಣ ಸದನವನ್ನು ಮಧ್ಯಾಹ್ನ ಎರಡು ಗಂಟೆಗೆ ಮುಂದೂಡಲಾಯಿತು. ಆದರೂ ಪ್ರತಿಭಟನಾನಿರತ ಸದಸ್ಯರು ಸದನದಿಂದ ಕದಲಲಿಲ್ಲ. ಗದ್ದಲ ಮತ್ತು ವಿರೋಧದ ನಡುವೆಯೇ ಉಪ ಸಭಾಪತಿ ಹರಿವಂಶ‌ ಅವರು ಮಸೂದೆಗಳನ್ನು ಧ್ವನಿಮತಕ್ಕೆ ಹಾಕಿದರು.

ಲೋಕಸಭೆ ಕಲಾಪಕ್ಕೂ ಅಡ್ಡಿ:ಧರಣಿ ಮುಂದುವರಿದ ಕಾರಣಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಬೇಕಿದ್ದಲೋಕಸಭಾ ಕಲಾಪದಲ್ಲಿ ಭಾಗವಹಿಸಲು ಬಂದಿದ್ದ ಸದಸ್ಯರು ಹೊರಗಡೆ ಕಾಯುತ್ತ ಕುಳಿತಿದ್ದರು. ಕೋವಿಡ್‌–19 ಮಾರ್ಗಸೂಚಿಯಂತೆ ಸಭಾಂಗಣವನ್ನು ಸ್ಯಾನಿಟೈಸ್‌ ಮಾಡಲು ಸಾಧ್ಯವಾಗದ ಕಾರಣ ಲೋಕಸಭಾ ಕಲಾಪಕ್ಕೆ ಅಡ್ಡಿಯಾಯಿತು.

ಅವಿಶ್ವಾಸ:ವಿರೋಧದ ನಡುವೆಯೇ ಆತುರದಲ್ಲಿ ಮಸೂದೆಯನ್ನು ಧ್ವನಿ ಮತಕ್ಕೆ ಹಾಕಿದ ಉಪ ಸಭಾಪತಿ ಹರಿವಂಶ‌ ವಿರುದ್ಧ ಅವಿಶ್ವಾಸ ಮಂಡಿಸುವುದಾಗಿ ವಿರೋಧ ಪಕ್ಷಗಳು ಹೇಳಿವೆ.

ನಿಗದಿತ ವೇಳೆಯಂತೆ ಸದನದ ಕಲಾಪಗಳು ಮಧ್ಯಾಹ್ನ ಒಂದು ಗಂಟೆಗೆ ಮುಗಿಯಬೇಕಿತ್ತು. ಸೋಮವಾರ ಕಲಾಪ ಮುಂದುವರಿಸುವಂತೆ ವಿರೋಧ ಪಕ್ಷಗಳು ಸಲಹೆ ನೀಡಿದ್ದವು.

ಮಸೂದೆಗಳಿಗೆ ಅಂಗೀಕಾರ ನೀಡುವ ಉದ್ದೇಶದಿಂದ ಉಪ ಸಭಾಪತಿಯವರು ಮಧ್ಯಾಹ್ನ ಒಂದು ಗಂಟೆಯ ನಂತರವೂ ಕಲಾಪ ನಡೆಸಲು ಅವಕಾಶ ನೀಡಿದ್ದಾರೆ ಎಂದು ಕಾಂಗ್ರೆಸ್‌ ಮುಖ್ಯ ಸಚೇತಕ ಜೈರಾಂ ರಮೇಶ್‌ ಆರೋಪಿಸಿದ್ದಾರೆ.

ಇದೇ ಏಪ್ರಿಲ್‌ನಲ್ಲಿ ಹೊರಡಿಸಿದ್ದ ಸುಗ್ರೀವಾಜ್ಞೆಗಳಿಗೆ ಕಾನೂನು ರೂಪ ನೀಡುವುದಕ್ಕಾಗಿ ಸರ್ಕಾರ ಈ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಕಳೆದ ವಾರ ಲೋಕಸಭೆಯಲ್ಲಿ ಈ ಮಸೂದೆಗಳಿಗೆ ಅಂಗೀಕಾರ ದೊರೆತಿದೆ.

‘ಪ್ರಜಾಪ್ರಭುತ್ವದ ಕಗ್ಗೊಲೆ’
ರಾಜ್ಯಸಭೆಯ ಕಲಾಪಗಳಿಗೆ ಅಡ್ಡಿಪಡಿಸಿದ ವಿರೋಧ ಪಕ್ಷಗಳ ನಡೆಯನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

ಮಸೂದೆ ವಿರೋಧಿಸಲು ಅಗತ್ಯ ಸಂಖ್ಯಾಬಲ ಇಲ್ಲ ಎಂದು ಗೊತ್ತಿದ್ದ ವಿರೋಧ ಪಕ್ಷಗಳು ‘ಗೂಂಡಾಗಿರಿ’ ಮೂಲಕ ‘ಪ್ರಜಾತಂತ್ರದ ಕಗ್ಗೊಲೆ’ ಮಾಡಿವೆ ಎಂದು ಕೃಷಿ ಸಚಿವ ತೋಮರ್‌ ಟೀಕಿಸಿದ್ದಾರೆ.

ಸರ್ಕಾರದ ಸರ್ವಾಧಿಕಾರಿ ಧೋರಣೆ ಸದನದಲ್ಲೂ ಮುಂದುವರಿದಿದೆ ಎಂದು ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿವೆ. ಈ ಮಸೂದೆಗಳು ರೈತರ ಮರಣಶಾಸನ ಎಂದು ಕಾಂಗ್ರೆಸ್‌ ಸಂಸದ ಪ್ರತಾಪ್‌ ಸಿಂಗ್‌ ಆರೋಪಿಸಿದರು.

‘ಕನಿಷ್ಠ ಬೆಂಬಲ ಬೆಲೆಗೆ ಧಕ್ಕೆ ಇಲ್ಲ’
ರೈತರ ಕೃಷಿ ಉತ್ಪನ್ನಗಳಿಗೆ ದೊರೆಯುತ್ತಿರುವ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಈ ಮಸೂದೆಗಳಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ತೋಮರ್‌ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದರು.

ಜನರಲ್ಲಿ ಅನಗತ್ಯವಾಗಿ ಗೊಂದಲ ಹುಟ್ಟುಹಾಕಲಾಗುತ್ತಿದೆ. ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಗೂ ಮಸೂದೆಗಳಿಗೂ ಸಂಬಂಧವಿಲ್ಲ. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಯಥಾರೀತಿ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.

‘ಹಾಗಾದರೆ ಅಕಾಲಿದಳದ ಹರ್‌ಸಿಮ್ರತ್‌ ಕೌರ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಏಕೆ’ ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT