ಗುರುವಾರ , ಡಿಸೆಂಬರ್ 3, 2020
19 °C
ಆಡಳಿತಾರೂಢ ಜೆಡಿಯು ಹಾಗೂ ಎಲ್‌ಜೆಪಿ ನಡುವೆ ವಾಕ್ಸಮರ

ಬಿಹಾರದಲ್ಲಿ ಬಿಜೆಪಿ ಜೊತೆ ಮಾತ್ರ ಮೈತ್ರಿ ಎಂದ ಜೆಡಿಯು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಿಹಾರ ವಿಧಾನಸಭೆಗೆ ನಿಗದಿಯಂತೆಯೇ ಅಕ್ಟೋಬರ್‌–ನವೆಂಬರ್‌ನಲ್ಲಿ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದ ಬೆನ್ನಲ್ಲೇ, ಜೆಡಿಯು ಮತ್ತು ಎಲ್‌ಜೆಪಿ ನಡುವೆ ವಾಕ್ಸಮರವೂ ಆರಂಭವಾಗಿದೆ

ಎನ್‌ಡಿಯ ಮೈತ್ರಿಕೂಟದಲ್ಲಿದ್ದರೂ ಬಿಹಾರದಲ್ಲಿ ಮಾತ್ರ ಬಿಜೆಪಿಯೊಂದಿಗೆ ಮಾತ್ರ ಮೈತ್ರಿ ಮಾಡಿಕೊಂಡಿದ್ದೇವೆ. ಎಲ್‌ಜೆಪಿಯೊಂದಿಗೆ ಅಲ್ಲ ಎಂದು ಆಡಳಿತಾರೂಢ ಪಕ್ಷ  ಜೆಡಿಯುನ ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಹೇಳಿರುವುದು, ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷಗಳಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಿಂಬಿಸಿದೆ.

ಇನ್ನೊಂದೆಡೆ, ‘ಕಳೆದ 15 ವರ್ಷಗಳಲ್ಲಿ ಬಿಹಾರದಲ್ಲಿ ಏನು ಬದಲಾವಣೆಯಾಗಿದೆ’ ಎಂದು ಸಂಸದ ಹಾಗೂ ಎಲ್‌ಜೆಪಿ ವರಿಷ್ಠ ರಾಮವಿಲಾಸ್‌ ಪಾಸ್ವಾನ್‌ ಪುತ್ರ ಚಿರಾಗ್‌ ಪಾಸ್ವಾನ್‌ ಇತ್ತೀಚೆಗೆ ಪ್ರಶ್ನಿಸಿದ್ದರು. ಕೋವಿಡ್‌–19 ಹಿನ್ನೆಲೆಯಲ್ಲಿ ವಿಧಾನಸಭೆ ಚುನಾವಣೆಯನ್ನು ಮುಂದೂಡಬೇಕು ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಆಗ್ರಹಿಸಿದ್ದರು. ಈ ಹೇಳಿಕೆಗೆ ಚಿರಾಗ್‌ ಸಹಮತ ವ್ಯಕ್ತಪಡಿಸಿದ್ದರು. ಇದು ಸಹ ಜೆಡಿಯು ತೀಕ್ಷ್ಣವಾಗಿ ಪ್ರತಿಕ್ರಿಯಿಸಲು ಕಾರಣ ಎನ್ನಲಾಗುತ್ತಿದೆ. 

ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗಲೂ ಚಿರಾಗ್‌ ಪಾಸ್ವಾನ್‌ ಅವರು ಮುಖ್ಯಮಂತ್ರಿ ನಿತೀಶ್‌ ಕುಮಾರ್ ವಿರುದ್ಧ ಹರಿಹಾಯ್ದಿದ್ದರು. ಕಾರ್ಮಿಕರ ಸಮಸ್ಯೆ ನಿಭಾಯಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿಯವರಿಂದ ನಿತೀಶ್‌ ಪಾಠ ಕಲಿಯಬೇಕು ಎಂದಿದ್ದ ಚಿರಾಗ್‌, ಪಡಿತರ ಚೀಟಿ ವಿತರಣೆ ವಿಷಯದಲ್ಲಿಯೂ ಸರ್ಕಾರ ಎಡವಿದೆ ಎಂದು ಟೀಕಿಸಿದ್ದರು.

‘ಬಿಹಾರದಲ್ಲಿ ನಿತೀಶ್‌ಕುಮಾರ್‌ ಅವರೇ ಎನ್‌ಡಿಎ ಮೈತ್ರಿಕೂಟದ ವಿವಾದಾತೀತ ನಾಯಕ ಎಂಬುದಾಗಿ  ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ವರಿಷ್ಠರೇ ಅನೇಕ ಬಾರಿ ಹೇಳಿದ್ದಾರೆ. ಈಗ ನಿತೀಶ್‌ ವಿರುದ್ಧ ಬೆರಳು ತೋರಲು ಎಲ್‌ಜೆಪಿ ಮುಖಂಡ ಯಾರು? ಈತ ಮೋದಿ ಅಥವಾ ಶಾಗಿಂತ ದೊಡ್ಡ ವ್ಯಕ್ತಿಯೇ’ ಎಂದೂ ತ್ಯಾಗಿ ಪ್ರಶ್ನಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು