ಸೋಮವಾರ, ಡಿಸೆಂಬರ್ 5, 2022
22 °C
ನಿರುದ್ಯೋಗ ಸಮಸ್ಯೆ: ಕೇಂದ್ರದ ವಿರುದ್ಧ ಖರ್ಗೆ ಟೀಕೆ

ಉದ್ಯೋಗಕ್ಕೆ ಲಕ್ಷಾಂತರ ಮಂದಿ ಕಾತರ, ಪ್ರಧಾನಿಯಿಂದ ಕೆಲವೇ ಸಾವಿರ ನೇಮಕಾತಿ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಲಕ್ಷಾಂತರ ಯುವಕರು ಉದ್ಯೋಗದ ನಿರೀಕ್ಷೆಯಲ್ಲಿರುವಾಗ, ಪ್ರಧಾನಿ ಕೆಲವು ಸಾವಿರ ನೇಮಕಾತಿ ಪತ್ರಗಳನ್ನು ಮಾತ್ರ ಹಸ್ತಾಂತರಿಸುತ್ತಿದ್ದಾರೆ’ ಎಂದು ಟೀಕಿಸುವ ಮೂಲಕ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ  ಖರ್ಗೆ ಅವರು ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಶನಿವಾರ ಸರಣಿ ಟ್ವೀಟ್‌ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಯುವ ಸಮುದಾಯಕ್ಕೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ’ ಎಂದು ದೂರಿದ್ದಾರೆ.

‘ಅಧಿಕಾರ ನೀಡಿದರೆ ಪ್ರತಿ ವರ್ಷ ಹೊಸದಾಗಿ ಎರಡು ಕೋಟಿ ಜನರಿಗೆ ಉದ್ಯೋಗಾವಕಾಶ ಒದಗಿಸುವುದಾಗಿ ಮೋದಿ ಭರವಸೆ ನೀಡಿದ್ದರು. ಅದನ್ನು ಮರೆತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದು ಎಂಟು ವರ್ಷಗಳಾಗಿವೆ. ಆದರೆ ಈಗ ಕೇಂದ್ರ ಸರ್ಕಾರದ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಚಿಂತಿಸಿದೆ’ ಎಂದು ಖರ್ಗೆ ಟೀಕಿಸಿದ್ದಾರೆ.

ದೇಶದ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ ಎಂದಿರುವ ಖರ್ಗೆ, ಬಿಜೆಪಿಯ ಹುಸಿ ಭರವಸೆಗಳಿಂದಾಗಿ ದೇಶದ ಯುವ ಸಮುದಾಯ ಉದ್ಯೋಗಕ್ಕಾಗಿ ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ ಬಂದೆರಗಿದೆ ಎಂದು ಕಿಡಿಕಾರಿದ್ದಾರೆ.

‘ಅಗ್ನಿಪಥ’ ಯೋಜನೆಯಡಿ 40 ಸಾವಿರ ಹುದ್ದೆಗಳಿಗೆ 35 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಉತ್ತರ ಪ್ರದೇಶದಲ್ಲಿ ಕೆಲವು ಸಾವಿರ ಹುದ್ದೆಗಳಿಗೆ 37 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಸ್ನಾತಕೋತ್ತರ ಪದವೀಧರರು, ಪಿಎಚ್‌.ಡಿ ಪದವೀಧರರು ತಮ್ಮ ವಿದ್ಯಾರ್ಹತೆಗಿಂತ ಕಡಿಮೆ ಅರ್ಹತೆ ಅಗತ್ಯವಿರುವ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ

ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಅವುಗಳ ಭರ್ತಿಗೆ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವುದಾಗಿ ಬಿಜೆಪಿ ಕೊಚ್ಚಿಕೊಳ್ಳುತ್ತಿದೆ. ಆದರೆ ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಗೆ ಆಸಕ್ತಿ ತೋರುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ‘ರೆಗ್ಯುಲರ್‌’ ಉದ್ಯೋಗಿಗಳ ಪಾಲು ಸತತವಾಗಿ ಕಡಿಮೆಯಾಗುತ್ತಿದೆ. ಇದು 2011-12ರಲ್ಲಿ 14 ಲಕ್ಷದಿಂದ 2019-20ರಲ್ಲಿ 9 ಲಕ್ಷಕ್ಕೆ ಕುಸಿದಿದೆ. ಮತ್ತೊಂದೆಡೆ ಗುತ್ತಿಗೆ ನೌಕರರ ಪಾಲು 2011-12ರಲ್ಲಿ 2.6 ಲಕ್ಷದಿಂದ 2019-20ರಲ್ಲಿ 5.16 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಅವರು ಅಂಕಿ ಅಂಶಗಳನ್ನು ನೀಡಿದ್ದಾರೆ.

‘ಯುವ ಸಮುದಾಯಕ್ಕೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಮೇಕ್‌ ಇನ್‌ ಇಂಡಿಯಾ, ಸ್ಕಿಲ್‌ ಇಂಡಿಯಾ ಕಾರ್ಯಕ್ರಮಗಳು, ಘೋಷಣೆಗಳು ಏನಾದವು? ನೀವು ಭರವಸೆ ನೀಡಿದ್ದ 16 ಕೋಟಿ ಉದ್ಯೋಗಗಳು ಎಲ್ಲಿವೆ? ಈ ಕುರಿತು ಏಕೆ ಮೌನವಾಗಿದ್ದೀರಿ’ ಎಂದು ಖರ್ಗೆ ಅವರು ಪ್ರಶ್ನಿಸಿದ್ದಾರೆ.

ಬಿಜೆಪಿಯೊಂದಿಗೆ ಪ್ರಾದೇಶಿಕ ಪಕ್ಷಗಳು ‘ಮ್ಯಾಚ್‌ ಫಿಕ್ಸಿಂಗ್‌’: ಜೈರಾಂ
ಮೇದಕ್‌ (ತೆಲಂಗಾಣ):
ಬಿಜೆಪಿ ವಿರುದ್ಧ ದೇಶದಲ್ಲಿ ಸಮರ್ಥವಾಗಿ ಪೈಪೋಟಿ ನೀಡಬಲ್ಲ ಏಕೈಕ ಪಕ್ಷವೆಂದರೆ, ಅದು ಕಾಂಗ್ರೆಸ್‌ ಆಗಿದೆ. ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಇರುವ ವೈಎಸ್‌ಆರ್‌ಸಿಪಿ, ಟಿಡಿಪಿ, ಟಿಆರ್‌ಎಸ್‌ ಪಕ್ಷಗಳು ಬಿಜೆಪಿಯೊಂದಿಗೆ ‘ಮ್ಯಾಚ್‌ಫಿಕ್ಸಿಂಗ್‌’ ಮಾಡಿಕೊಳ್ಳುವ ಪಕ್ಷಗಳಾಗಿವೆ. ಇದಕ್ಕೆ ಎಐಎಂಐಎಂ ಪಕ್ಷವೂ ಹೊರತಲ್ಲ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಶನಿವಾರ ದೂರಿದರು.

ಭಾರತ್‌ ಜೊಡೊ ಯಾತ್ರೆಯಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಕೌಂಟ್‌ಡೌನ್‌’ ಆರಂಭವಾಗಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು