ಸೋಮವಾರ, ಮೇ 17, 2021
28 °C

ಪಶ್ಚಿಮ ಬಂಗಾಳದಲ್ಲಿ ಘರ್ಷಣೆ: ದಾಳಿಗೆ ಮಮತಾ ಕುಮ್ಮಕ್ಕು ಎಂದು ಪ್ರಧಾನಿ ಮೋದಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಸೀತಾಲಕುಚ್‌ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಕೇಂದ್ರೀಯ ಪಡೆಯ ಸಿಬ್ಬಂದಿ ಗೋಲಿಬಾರ್‌ ನಡೆಸಿ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಹರಿಹಾಯ್ದಿದ್ದಾರೆ.

ಕೇಂದ್ರೀಯ ಪಡೆಗಳ ಮೇಲೆ ದಾಳಿ ನಡೆಸುವಂತೆ ಜನರಿಗೆ ಮಮತಾ ಅವರು ಪ್ರಚೋದನೆ ನೀಡಿದ್ದಾರೆ. ಹಿಂಸಾಚಾರವು ಕಳೆದ ಹತ್ತು ವರ್ಷಗಳ ದುರಾಡಳಿತದಿಂದ ಅವರನ್ನು ರಕ್ಷಿಸದು ಎಂದೂ ಮೋದಿ ಹೇಳಿದ್ದಾರೆ. 

‘ಕೇಂದ್ರೀಯ ಪಡೆಗಳ ಸಿಬ್ಬಂದಿಗೆ ಮುತ್ತಿಗೆ ಹಾಕುವುದು ಮತ್ತು ಅವರ ಮೇಲೆ ಹಲ್ಲೆ ನಡೆಸುವುದು ಹೇಗೆ ಎಂದು ದೀದಿ (ಮಮತಾ) ಅವರು ತಮ್ಮ ಚುನಾವಣಾ ರ್‍ಯಾಲಿಗಳಲ್ಲಿ ತರಬೇತಿ ನೀಡುತ್ತಿದ್ದಾರೆ. ಚುನಾವಣಾ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುವ ವಿಧಾನವು ನಿಮ್ಮ ರಕ್ಷಣೆಗೆ ಬಾರದು’ ಎಂದು ಸಿಲಿಗುರಿಯಲ್ಲಿ ನಡೆಸಿದ ಪ್ರಚಾರ ಭಾಷಣದಲ್ಲಿ ಮೋದಿ ಹೇಳಿದ್ದಾರೆ. 

‘ಭಯೋತ್ಪಾದಕರು ಮತ್ತು ನಕ್ಸಲರ ಬಗ್ಗೆ ಭದ್ರತಾ ಪಡೆಗಳಿಗೆ ಭಯ ಇಲ್ಲ. ಹಾಗಿರುವಾಗ ನಿಮ್ಮ ಬೆದರಿಕೆ ಮತ್ತು ಗೂಂಡಾಗಳಿಗೆ ಅವರು ಹೆದರುತ್ತಾರೆ ಎಂದು ನೀವು ಹೇಗೆ ಭಾವಿಸಿದಿರಿ’ ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ. 

‘ದೀದಿ ಅವರೇ, ನೀವು ಬಂಗಾಳದ ಭಾಗ್ಯ ವಿಧಾತ ಅಲ್ಲ. ಬಂಗಾಳವು ಯಾರದ್ದೇ ಆಸ್ತಿಯೂ ಅಲ್ಲ. ನೀವು ಹೋಗಬೇಕು ಎಂಬುದನ್ನು ಬಂಗಾಳದ ಜನರು ನಿರ್ಧರಿಸಿದ್ದಾರೆ. ನಿಮ್ಮನ್ನು ಹೊರಗೆ ಅಟ್ಟಲು ಅವರು ತೀರ್ಮಾನಿಸಿದ್ದಾರೆ. ನೀವು ಮತ್ತು ನಿಮ್ಮ ಇಡೀ ಗ್ಯಾಂಗ್‌ ಅನ್ನು ಹೊರಗೆ ಹಾಕಲಾಗುವುದು’ ಎಂದು ಮೋದಿ ಹೇಳಿದ್ದಾರೆ. 

ಕೂಚ್‌ ಬಿಹಾರ್‌ನಲ್ಲಿ ನಡೆದ ಘಟನೆಯ ಹಿಂದೆ ಇರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗವನ್ನು ಅವರು ಒತ್ತಾಯಿಸಿದರು. ಟಿಎಂಸಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸುಲಿಗೆ ಮುಕ್ತ ಬಂಗಾಳ ಸೃಷ್ಟಿಗೆ ಸಮಯ ಬಂದಿದೆ ಎಂದರು. 

‘ಕೂಚ್‌ಬಿಹಾರ್‌ನಲ್ಲಿ ಆಗಿರುವುದು ಅತ್ಯಂತ ದುರದೃಷ್ಟಕರ. ಈ ಸಾವಿಗೆ ಸಂತಾಪ ವ್ಯಕ್ತಪಡಿಸುತ್ತೇನೆ. ಆ ಕುಟುಂಬಗಳ ಜತೆಗೆ ನನ್ನ ಪ್ರಾರ್ಥನೆ ಇದೆ. ಬಿಜೆಪಿ ಪರವಾಗಿ ವ್ಯಕ್ತವಾಗುತ್ತಿರುವ ಬೆಂಬಲ ಕಂಡು ದೀದಿ ಮತ್ತು ಅವರ ಗೂಂಡಾಗಳು ತತ್ತರಿಸಿದ್ದಾರೆ’ ಎಂದರು.

ನಾದಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ಮಾತನಾಡಿದ ಮೋದಿ, ಸಮಸ್ಯೆ ಇರುವುದು ಕೇಂದ್ರೀಯ ಪಡೆಗಳಲ್ಲಿ ಅಲ್ಲ, ಬದಲಿಗೆ ಮಮತಾ ಅವರ ಹಿಂಸೆ ಮತ್ತು ಅಕ್ರಮ ರಾಜಕೀಯದಲ್ಲಿ ಎಂದರು.

ಇದನ್ನೂ ಓದಿ... ಕೇಂದ್ರ ಗೃಹಸಚಿವರ ಸೂಚನೆಯಂತೆ ಪಿತೂರಿ: ಕಾರ್ಯಕರ್ತರ ಹತ್ಯೆಗೆ ಮಮತಾ ಕಿಡಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು