ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಭಾಷಣ: ಆಂದೋಲನಜೀವಿಗಳಿಂದ ಪವಿತ್ರ ಕೃಷಿ ಆಂದೋಲನ ಹೈಜಾಕ್!

Last Updated 10 ಫೆಬ್ರುವರಿ 2021, 13:52 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನೇಕ ವಿಷಯಗಳ ಕುರಿತು ಪ್ರಸ್ತಾಪಿಸಿದ್ದಾರೆ. ಈ ಕುರಿತು ಮುಖ್ಯಾಂಶಗಳು ಇಲ್ಲಿದೆ.

ಪವಿತ್ರ ಕೃಷಿ ಆಂದೋಲನ ಹೈಜಾಕ್!:
ದೇಶವು 'ಆಂದೋಲನಾಜೀವಿ' ಮತ್ತು 'ಆಂದೋಲನಕಾರಿ' ನಡುವಣ ವ್ಯತ್ಯಾಸವನ್ನು ಗುರುತಿಸುವುದು ಅತಿಮುಖ್ಯ. 'ಕಿಸಾನ್ ಆಂದೋಲನ' ಪವಿತ್ರವೆಂದು ನಾನು ಪರಿಗಣಿಸುತ್ತೇನೆ. ಆದರೆ ಆಂದೋಲನಾಜೀವಿಗಳು ಪವಿತ್ರ ಆಂದೋಲನವನ್ನು ಹೈಜಾಕ್ (ಅಪಹರಣ) ಮಾಡಿ, ಹಿಂಸಾಚಾರವನ್ನು ಮಾಡುತ್ತಿದ್ದಾರೆ. ಇವರಿಗೆ ಯಾವುದೇ ಉದ್ದೇಶವಿದೆಯೇ? ಟೋಲ್ ಪ್ಲಾಜಾಗಳನ್ನು ಕೆಲಸ ಮಾಡಲು ಬಿಡುತ್ತಿಲ್ಲ. ಟೆಲಿಕಾಂ ಟವರ್‌ಗಳನ್ನು ನಾಶಪಡಿಸುತ್ತಾರೆ ಎಂದು ಟೀಕೆ ಮಾಡಿದರು.

ಹಳೆಯ ಆಲೋಚನೆಗಳಿಂದ ಕೃಷಿಸುಧಾರಣೆ ಅಸಾಧ್ಯ:
18ನೇ ಶತಮಾನದ ಆಲೋಚನೆಗಳೊಂದಿಗೆ 21ನೇ ಶತಮಾನದಲ್ಲಿ ಕೃಷಿ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ. ನಾವದನ್ನು ಬದಲಾಯಿಸಬೇಕಿದೆ. ರೈತರು ಬಡತನದ ಚಕ್ರದಲ್ಲಿ ಸಿಲುಕಿಕೊಳ್ಳಲು ಯಾರೂ ಬಯಸುವುದಿಲ್ಲ. ರೈತರು ಇನ್ನೊಬ್ಬರಿಗೆ ಅವಲಂಬನೆಯಾಗಬಾರದು ಎಂದು ನಾನು ನಂಬುತ್ತೇನೆ. ಅದು ನಮ್ಮ ಜವಾಬ್ದಾರಿ ಕೂಡಾ ಹೌದು ಎಂದು ಹೇಳಿದರು.

ಖಾಸಗಿ ವಲಯದ ಪಾತ್ರವೂ ಅತ್ಯಂತ ಮುಖ್ಯ:
ಸಾರ್ವಜನಿಕ ವಲಯವು ಅವಶ್ಯಕವಾಗಿದೆ. ಅದೇ ಹೊತ್ತಿಗೆ ಖಾಸಗಿ ವಲಯದ ಪಾತ್ರವೂ ಅತ್ಯಗತ್ಯವಾಗಿದೆ. ಯಾವುದೇ ವಲಯವನ್ನು ತೆಗೆದುಕೊಳ್ಳಿ ಟೆಲಿಕಾಂ ಅಥವಾ ಔಷಧಿ. ನಾವು ಖಾಸಗಿ ವಲಯದ ಕೊಡುಗೆಯನ್ನು ಮನಗಾಣುತ್ತೇವೆ. ಖಾಸಗಿ ವಲಯದ ಕೊಡುಗೆಯಿಂದಾಗಿ ಮಾನವೀಯತೆಗೆ ಸೇವೆ ಸಲ್ಲಿಸಲು ಭಾರತಕ್ಕೆ ಸಾಧ್ಯವಾಗಿದೆ ಎಂದು ಉಲ್ಲೇಖಿಸಿದರು.

ಇದನ್ನೂ ಓದಿ:

ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ:
ಕಾಂಗ್ರೆಸ್ ಪಕ್ಷ ವಿಭಜನೆಯಾಗಿದ್ದು, ಗೊಂದಲಕ್ಕೊಳಗಾಗಿದೆ. ತನ್ನದೇ ಒಳಿತಿಗಾಗಿ ಕೆಲಸ ಮಾಡಲು ಅಥವಾ ದೇಶದ ಸಮಸ್ಯೆಗಳನ್ನು ಬಗೆ ಹರಿಸಲು ಸಾಧ್ಯವಿಲ್ಲ. ಇದಕ್ಕಿಂತಲೂ ಹೆಚ್ಚು ದುರದೃಷ್ಟಕರ ಯಾವುದು? ಎಂದು ಪ್ರಶ್ನಿಸಿದರು.

ಒಪ್ಪಿಕೊಳ್ಳುವುದು ಬಿಡುವುದು ನಿಮಗೆ ಬಿಟ್ಟ ವಿಚಾರ. ವರದಕ್ಷಿಣೆ ವಿರುದ್ಧ ಕಾನೂನನ್ನು ಯಾರು ಕೂಡಾ ಒತ್ತಾಯಿಸಿರಲಿಲ್ಲ. ಆದರೂ ದೇಶದ ಪ್ರಗತಿಗಾಗಿ ಜಾರಿಗೊಳಿಸಲಾಗಿದೆ. ತ್ರಿವಳಿ ತಲಾಖ್ ಹಾಗೂ ಬಾಲ್ಯ ವಿವಾಹ ವಿರುದ್ಧ ಕಾನೂನು ಸಹ ದೇಶದ ಪ್ರಗತಿಗಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಸಂಪೂರ್ಣವಾಗಿ ಆಲಿಸಿರಿ:

ಗದ್ದಲ ಯೋಜಿತ ಕೃತ್ಯ:
ಪ್ರಧಾನಿ ಭಾಷಣದ ವೇಳೆ ವಿಪಕ್ಷದ ಸಂಸದರು ನಿರಂತರವಾಗಿ ಗದ್ದಲವೆಬ್ಬಿಸುತ್ತಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಗದ್ದಲಗಳು ಭಾಷಣವನ್ನು ತಡೆಯುವ ಯೋಜಿತ ಕಾರ್ಯತಂತ್ರದ ಭಾಗವಾಗಿದೆ. ಇಲ್ಲದಿದ್ದರೆ ವಿಪಕ್ಷಗಳ ಸುಳ್ಳು ಹಾಗೂ ವದಂತಿಗಳು ಬಹಿರಂಗವಾಗುತ್ತದೆ. ಸತ್ಯವು ಹೊರಬರಲಿದ್ದು ಅವರ ಪಾಲಿಗೆ ಕಷ್ಟಕರವಾಗಲಿದೆ. ಈ ರೀತಿ ಮಾಡುವುದರಿಂದ ಜನರ ನಂಬಿಕೆಯನ್ನು ಪಡೆಯಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ರೈತರ ಬಗ್ಗೆ ಅಪಾರ ಗೌರವವಿದೆ:
ಈ ಮನೆ (ಸಂಸತ್), ಸರ್ಕಾರ ಹಾಗೂ ನಾವೆಲ್ಲರೂ ಕೃಷಿ ಕಾಯ್ದೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ರೈತರನ್ನು ಗೌರವಿಸುತ್ತೇವೆ. ಅದೇ ಕಾರಣಕ್ಕಾಗಿಯೇ ಸರ್ಕಾರದ ಹಿರಿಯ ಸಚಿವರು ರೈತರೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದಾರೆ. ರೈತರ ಬಗ್ಗೆ ನಮಗೆ ಅಪಾರ ಗೌರವಿದೆ ಎಂದು ತಿಳಿಸಿದರು.

ಕೃಷಿ ಸುಧಾರಣೆಗಳು ಅವಶ್ಯಕವಾಗಿದೆ:
ಕೇಂದ್ರ ಸರ್ಕಾರ ಮೂರು ನೂತನ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಈ ಕೃಷಿ ಸುಧಾರಣೆಗಳು ಮುಖ್ಯ ಹಾಗೂ ಅವಶ್ಯಕವಾಗಿದೆ. ಸದನದಲ್ಲಿ ಕಾಂಗ್ರೆಸ್ ಸಂಸದರು ಕಪ್ಪು/ಬಿಳಿಯ ಬಗ್ಗೆ ಚರ್ಚಿಸಿದರು. ಅವರು ಈ ಕಾಯ್ದೆಯ ವಿಷಯ ಹಾಗೂ ಉದ್ದೇಶದ ಬಗ್ಗೆ ಚರ್ಚಿಸಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಪ್ರಧಾನಿ ಮೋದಿ ತಿಳಿಸಿದರು.

ದೇಶದಲ್ಲಿ ಎಲ್ಲಿಯೂ ಎಂಎಸ್‌ಪಿ ಕೊನೆಗೊಂಡಿಲ್ಲ:
ಕೃಷಿ ಕಾಯ್ದೆಗಳನ್ನು ನಿರ್ಣಯದ ಮೂಲಕ ಸಂಸತ್ ಅಂಗೀಕರಿಸಿದೆ. ಈ ಕಾನೂನುಗಳ ಅನುಷ್ಠಾನದ ಬಳಿಕ ಯಾವುದೇ ಮಂಡಿಯನ್ನು ಮುಚ್ಚಲಾಗಿಲ್ಲ. ದೇಶದಲ್ಲಿ ಎಲ್ಲಿಯೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕೊನೆಗೊಂಡಿಲ್ಲ. ಇದು ನಾವು ಮರೆಮಾಚುತ್ತಿರುವ ಸತ್ಯವಾಗಿದ್ದು, ಅದರಲ್ಲಿ ಯಾವುದೇ ಅರ್ಥವಿಲ್ಲ. ಕಾನೂನುಗಳು ರೂಪುಗೊಂಡ ಬಳಿಕ ಎಂಎಸ್‌ಪಿ ಮೇಲಿನ ಖರೀದಿ ಹೆಚ್ಚಾಗಿದೆ ಎಂದು ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿದರು.

ಮಹಿಳಾ ಸಂಸದೆಯರಿಗೆ ಅಭಿನಂದನೆ:
ರಾಷ್ಟ್ರಪತಿಗಳ ಭಾಷಣ ಕುರಿತ ಚರ್ಚೆಯ ಸಂದರ್ಭದಲ್ಲಿ ಅನೇಕ ಮಹಿಳಾ ಸಂಸದೆಯರು ಭಾಗವಹಿಸಿದ್ದರು. ಇದು ಅತ್ಯುತ್ತಮವಾದ ಸಂಕೇತ. ಸದನದ ನಡವಳಿಕೆಗಳನ್ನು ಅವರ ಆಲೋಚನೆಗಳಿಂದ ಸಿರಿವಂತಗೊಳಿಸಿದ ಮಹಿಳಾ ಸಂಸದೆಯರನ್ನು ನಾನು ಅಭಿನಂದಿಸುತ್ತೇನೆ: ಪ್ರಧಾನಿ ಮೋದಿ

ಭಾರತದ 'ಸಂಕಲ್ಪ ಶಕ್ತಿ'ಯ ಪ್ರದರ್ಶನ:
ರಾಷ್ಟ್ರಪತಿಗಳ ಭಾಷಣವು ಭಾರತದ 'ಸಂಕಲ್ಪ ಶಕ್ತಿ'ಯನ್ನು ಪ್ರದರ್ಶಿಸಿದೆ. ಅವರ ಮಾತುಗಳು ದೇಶದ ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಹೊಸ ಸಂಕಲ್ಪಕ್ಕೆ ಕರೆ:
ನಾವು 75ನೇ ಸ್ವಾತಂತ್ರ್ಯೋತ್ಸವದ ಹತ್ತಿರದಲ್ಲಿದ್ದೇವೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಚಾರವಾಗಿದ್ದು, ನಾವೆಲ್ಲರೂ ಒಂದಾಗಿ ಮುನ್ನಡೆಯಬೇಕಿದೆ. ನಾವು ದೇಶದ ಯಾವುದೇ ಮೂಲೆಯಲ್ಲಿರಬಹದು ಅಥವಾ ಸಮಾಜದ ಯಾವುದೇ ವಿಭಾಗಕ್ಕೆ ಸೇರಿದವರಾಗಿರಬಹುದು. ಆದರೆ 100 ವರ್ಷಗಳ ಸ್ವಾತಂತ್ರ್ಯೋತ್ಸವ ಆಚರಿಸುವಾಗ ನಾವು ದೇಶವನ್ನು ಎಲ್ಲಿಗೆ ಕೊಂಡೊಯ್ಯಲು ಬಯಸುತ್ತೇವೆ ಎಂಬುದರ ಬಗ್ಗೆ ಹೊಸತಾದ ಸಂಕಲ್ಪವನ್ನು ಮಾಡಬೇಕಿದೆ ಎಂದು ತಿಳಿಸಿದರು.

ಆತ್ಮನಿರ್ಭರ್ ಭಾರತ ನಿರ್ಮಾಣ:
ಕೋವಿಡ್-19 ನಂತರದ ಜಗತ್ತು ಸಂಪೂರ್ಣ ವಿಭಿನ್ನವಾಗಿದೆ. ಅಂತಹ ಸಂದರ್ಭದಲ್ಲಿ ಜಾಗತಿಕ ಪ್ರವೃತಿಗಳಿಂದ ಪ್ರತ್ಯೇಕವಾಗಿ ಉಳಿಯುವುದು ಉತ್ಪಾದಕವೆನಿಸಲಿದೆ. ನಾವು ಶಕ್ತಿಯುತ ದೇಶವಾಗಿ ಹೊರಹೊಮ್ಮಬೇಕಿದೆ. ಅದಕ್ಕಾಗಿಯೇ ಭಾರತವು ಸ್ವಾವಲಂಬಿ ಭಾರತದ ನಿರ್ಮಾಣದತ್ತ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ನಾವಿಂದು ದೇಶದ ಪ್ರತಿ ಮೂಲೆಯಲ್ಲಿವೂ 'ವೋಕಲ್ ಫಾರ್ ಲೋಕಲ್' ಕೇಳಬಹುದು. ಜನರಲ್ಲಿ ಈ ಸ್ವಾವಲಂಬಿ ಭಾರತದ ಪ್ರಜ್ಞೆಯು ಆತ್ಮನಿರ್ಭರ್ ಭಾರತದತ್ತ ಸಹಕಾರಿಯಾಗಿದೆ ಎಂದು ತಿಳಿಸಿದರು.

ಬಡವರಿಗೆ ನೆರವು:
ಜನ್ - ಧನ್ - ಆಧಾರ್ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ. ಇದು ದೇಶದ ಬಡವರಿಗೆ ನೆರವಾಗಿದೆ. ಆದರೆ ದುರದೃಷ್ಟವಶಾತ್, ಕೆಲವು ಜನರು ಆಧಾರ್ ವಿರುದ್ಧ ನ್ಯಾಯಾಲಯಕ್ಕೆ ಹೋದರು ಎಂದು ವಿಷಾದಿಸಿದರು.

ಇದನ್ನೂ ಓದಿ:

ಕೊರೊನಾ ಸೇನಾನಿಗಳು ದೇವರ ಪ್ರತಿರೂಪ:
ಯಾರೂ ಕೂಡೂ ರೋಗಿಗಳ ಹತ್ತಿರಕ್ಕೆ ತೆರಳದಿದ್ದಾಗ ನಮ್ಮ ನೈರ್ಮಲ್ಯ ಸೇನಾನಿಗಳು ಅವರ ಆರೈಕೆಯನ್ನು ಮಾಡಿ ಕೋವಿಡ್-19 ವಿರುದ್ಧ ಗೆಲ್ಲಲು ನೆರವಾದರು. ಅವರ ಪಾಲಿಗಿದು ಜೀವನ್ಮರಣ ಹೋರಾಟವಾಗಿತ್ತು. ಅವರು ದೇವರ ಪ್ರತಿರೂಪದಲ್ಲಿ ಬಂದಿದ್ದಾರೆ ಎಂದು ಕೊಂಡಾಡಿದರು.

ದೇವರ ದಯೆಯಿಂದ ನಾವು ಕೊರೊನಾದಿಂದ ಪಾರಾಗಿದ್ದೇವೆ ಎಂದು ಮನೀಶ್ ತಿವಾರಿ ತಿಳಿಸಿದರು. ಆದರೆ ನಾನು ಏನನ್ನು ಹೇಳಲು ಬಯಸುತ್ತೇನೆಂದರೆ ಇಡೀ ಜಗತ್ತೇ ಕೊರೊನಾ ಪಿಡುಗಿನಿಂದ ನಡುಗಿದಾಗ ಭಾರತ ಸುರಕ್ಷಿತವಾಗಿತ್ತು. ವೈದ್ಯರು ಹಾಗೂ ದಾದಿಯರು ದೇವರ ಪ್ರತಿರೂಪದಲ್ಲಿ ಬಂದ ಕಾರಣ ನಾವೆಲ್ಲರೂ ಸುರಕ್ಷಿತರಾದೆವು. ಅವರಿಗೆ ಅನೇಕ ದಿನಗಳ ವರೆಗೆ ಮನೆಗಳಿಗೆ ಹಿಂತಿರುಗಲು ಸಾಧ್ಯವಾಗಲಿಲ್ಲ ಎಂದು ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT