ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆಗಳನ್ನು ಹಿಂಪಡೆವ ನಿರ್ಧಾರ: ಪಂಜಾಬ್‌ ರಾಜಕೀಯ ಸಮೀಕರಣ ಬದಲಾವಣೆ ಸಂಭವ

Last Updated 20 ನವೆಂಬರ್ 2021, 9:03 IST
ಅಕ್ಷರ ಗಾತ್ರ

ಚಂಡೀಗಡ: ಸುದೀರ್ಘ ರೈತ ಹೋರಾಟದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಘೋಷಿಸಿದ್ದು, ವಿಧಾನಸಭೆಚುನಾವಣೆ ಎದುರಿಸಲಿರುವ ಪಂಜಾಬ್ ರಾಜ್ಯದಲ್ಲಿ ರಾಜಕೀಯ ಪಕ್ಷಗಳಿಗೆ ಹೊಸ ಸವಾಲುಗಳ ಜೊತೆ ಅವಕಾಶಗಳನ್ನೂ ತೆರೆದಿಟ್ಟಿದೆ. ಅವು ಪಂಜಾಬ್ ರಾಜಕೀಯ ಸಮೀಕರಣವನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಗುರುನಾನಕ್ ಜಯಂತಿಯ ಶುಭದಿನದಂದು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಘೋಷಣೆ ಮಾಡಿದ ಮೋದಿ, ವರ್ಷದಿಂದ ನಡೆದಿದ್ದ ರೈತರ ಪ್ರತಿಭಟನೆಯ ಕಿಚ್ಚನ್ನು ಆರಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಪಂಜಾಬ್ ರಾಜ್ಯದ ಸಿಖ್ ಮತಗಳನ್ನು ಗಮನದಲ್ಲಿರಿಸಿಕೊಂಡೇ ಈ ನಿರ್ಧಾರ ಪ್ರಕಟಿಸಲಾಗಿದೆ ಎಂಬುದು ಸ್ಪಷ್ಟ. ಪಂಜಾಬ್‌ನಲ್ಲಿ ಇದ್ದ ನೆಲೆಯನ್ನೂ ಕಳೆದುಕೊಳ್ಳುವ ಆತಂಕದಲ್ಲಿದ್ದ ಬಿಜೆಪಿಗೆ ಈ ಬೆಳವಣಿಗೆಯಿಂದ ತಡೆಗೋಡೆ ಸರಿದಂತಾಗಿದೆ.

ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ರೈತ ಹೋರಾಟದ ಕೇಂದ್ರ ಬಿಂದುವಾಗಿದ್ದವು. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಮೋದಿ ಮಾಡಿರುವ ಈ ಘೋಷಣೆಯು ರಾಜಕೀಯ ಪಕ್ಷಗಳಿಗೆ ಹೊಸ ಅವಕಾಶಗಳನ್ನು ನೀಡಿದೆ. ಅಂದಹಾಗೆ, ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆಯು ಆಶ್ಚರ್ಯಕರ ನಿರ್ಧಾರವೇನೂ ಅಲ್ಲ. ಇದರಲ್ಲಿ ರಾಜಕೀಯ ಅಡಗಿದೆ ಎನ್ನಲಾಗುತ್ತಿದೆ. ಸುದೀರ್ಘ ರೈತ ಹೋರಾಟ ನಡೆದರೂ ಸಹ ಸರ್ಕಾರವು ಕಾಯ್ದೆಗಳನ್ನು ಹಿಂಪಡೆಯುವ ಯಾವುದೇ ಸೂಚನೆ ಇರಲಿಲ್ಲ. ಆದರೆ, ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಹೊಸ ಪಕ್ಷ ಘೋಷಿಸಿ, ಬಿಜೆಪಿ ಜೊತೆ ಸೀಟು ಹಂಚಿಕೆ ಘೋಷಣೆ ಮಾಡಿದರು. ಆ ಒಪ್ಪಂದದ ಭಾಗವಾಗಿಯೇ ಕಾಯ್ದೆಗಳನ್ನು ಹಿಂಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಕೃಷಿ ಕಾಯ್ದೆಗಳ ಜಾರಿ ಬಳಿಕ ಬಿಜೆಪಿಯು ತನ್ನ ಬಹುದಿನಗಳ ಮಿತ್ರ ಪಕ್ಷ ಅಕಾಲಿದಳವನ್ನು ಕಳೆದುಕೊಂಡಿತ್ತು. ಪಂಜಾಬ್‌ನಲ್ಲಿ ಪಕ್ಷದ ಭವಿಷ್ಯದ ಅನಿಶ್ಚಿತತೆ ಎದುರಾಗಿತ್ತು. ರೈತ ಹೋರಾಟವು ಪಂಜಾಬ್‌ನಲ್ಲಿ ಪಕ್ಷಕ್ಕೆ ಭಾರಿ ಹಿನ್ನಡೆಗೆ ಕಾರಣವಾಗಿತ್ತು. ಅಲ್ಲಿನ ಬಿಜೆಪಿ ನಾಯಕರಿಗೆ ಪಂಜಾಬ್‌ನ ಹಲವು ಹಳ್ಳಿಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು.

ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಹೊಸ ಪಕ್ಷ ಮತ್ತು ಬಿಜೆಪಿ ನಡುವೆ ಸೈದ್ಧಾಂತಿಕ ಭಿನ್ನತೆಗಳಿದ್ದರೂ ಈ ಘೋಷಣೆಯಿಂದ ಎರಡೂ ಪಕ್ಷಗಳಿಗೆ ಅನುಕೂಲವಾಗುವ ಸಾಧ್ಯತೆ ಇದೆ. ಆದರೆ, ಬಿಜೆಪಿ ಈಗಲೂ ಪ್ರತಿರೋಧ ಎದುರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ‘ರೈತ ಹೋರಾಟದಲ್ಲಿ 600 ರೈತರು ಜೀವ ಕಳೆದುಕೊಂಡ ಬಳಿಕವೂ ಸಹ ಇದು ರೈತ ಹೋರಾಟದ ಗೆಲುವೇ? ಪಂಜಾಬ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುವವರೆಗೂ ರೈತ ಹೋರಾಟವನ್ನು ಕೇಂದ್ರ ಸರ್ಕಾರ ಪರಿಗಣಿಸಿಯೇ ಇರಲಿಲ್ಲ’ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಹೋರಾಟದಲ್ಲಿ ರೈತರನ್ನು ಬೆಂಬಲಿಸಿದ್ದ ಕಾಂಗ್ರೆಸ್ ಪಕ್ಷವು ಪಂಜಾಬ್‌ನಲ್ಲಿ ತನ್ನದೇ ತಂತ್ರಗಳನ್ನು ಹೊಂದಿದೆ. ಮೋದಿ ಅವರ ಘೋಷಣೆಯಿಂದ ಚುನಾವಣೆಯಲ್ಲಿ ಲಾಭ ಪಡೆದುಕೊಳ್ಳಲು ಆಶಿಸುತ್ತಿದೆ. ಎಎಪಿ ಕೂಡ ದೇ ನಿರೀಕ್ಷೆಯಲ್ಲಿದೆ.

ಅಕಾಲಿದಳ ಮತ್ತು ಅದರ ಹೊಸ ಮಿತ್ರ ಪಕ್ಷವಾದ ಬಿಎಸ್‌ಪಿ ಸಹ ಚುನಾವಣೆ ಲಾಭದ ನಿರೀಕ್ಷೆಯಲ್ಲಿವೆ. ಕೃಷಿ ಕಾನೂನುಗಳನ್ನು ರಚಿಸುವಾಗ ಎನ್‌ಡಿಎಯ ಮಿತ್ರಪಕ್ಷವಾಗಿದ್ದ ಅಕಾಲಿದಳ,ರೈತರ ಹೋರಾಟ ಗಂಭೀರ ಸ್ವರೂಪ ಪಡೆಯುವವರೆಗೂ ಕಾಯ್ದೆ ಹಿಂಪಡೆಯಲು ಒತ್ತಡ ಹೇರುವ ಯಾವುದೇ ಪಯತ್ನ ಮಾಡಲಿಲ್ಲ. ಎಲ್ಲಾ ಮುಗಿದ ಮೇಲೆ ಬಿಜೆಪಿ ಜೊತೆ ಸಖ್ಯ ತೊರೆಯಿತು ಎಂದು ದೂಷಿಸಲಾಗಿತ್ತು.

ಈ ಮಧ್ಯೆ, ಬಿಜೆಪಿ ಜೊತೆ ಮರು ಮೈತ್ರಿ ಕುರಿತ ಸಾಧ್ಯತೆಯನ್ನು ಇಂದು ಅಕಾಲಿದಳ ತಳ್ಳಿಹಾಕಿದೆ. ಆದರೆ, ಚುನಾವಣೆ ಬಳಿಕ ರಾಜಕೀಯ ಚಿತ್ರಣ ಬದಲಾಗಬಹುದು ಎನ್ನಲಾಗುತ್ತಿದೆ. ಹೋರಾಟದಲ್ಲಿ ಗೆಲುವಿನ ಸಿಹಿ ಕಂಡಿರುವ ರೈತರು ಸಹ ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT