ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನ ಮನಸ್ಕ ಪಕ್ಷಗಳ ನಡುವೆ ಚುನಾವಣಾ ಪೂರ್ವ ಮೈತ್ರಿ ಅತ್ಯಗತ್ಯ: ಎಎಪಿ ನಾಯಕ

Last Updated 20 ಏಪ್ರಿಲ್ 2023, 8:00 IST
ಅಕ್ಷರ ಗಾತ್ರ

ನವದೆಹಲಿ: ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಸಮಾನ ಮನಸ್ಕ ಪಕ್ಷಗಳ ನಡುವೆ ಚುನಾವಣಾ ಪೂರ್ವ ಮೈತ್ರಿ ಅತ್ಯಗತ್ಯ ಎಂದು ಎಎಪಿ ಹಿರಿಯ ನಾಯಕ ಗೋಪಾಲ್ ರಾಯ್‌ ಅವರು ಪ್ರತಿಪಾದಿಸಿದ್ದಾರೆ. ಪ್ರತಿಪಕ್ಷಗಳು ಈಗ ಒಂದಾಗದಿದ್ದರೆ ಮುಂದಿನ ಪೀಳಿಗೆಗೆ ಗಂಭೀರ ಅಪಾಯವಿದೆ ಎಂದು ಅವರು ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಸಂಭವನೀಯ ಐಕ್ಯರಂಗದ ‘ನಾಯಕರಾಗಲು‘ ಪಕ್ಷಗಳು ಯೋಚಿಸುತ್ತಿವೆ. ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಬಿಜೆಪಿ ವಿರುದ್ಧದ ಹೋರಾಟದಲ್ಲಿ ಸಮಾನ ಮನಸ್ಕ ಪಕ್ಷಗಳನ್ನು ಒಂದೇ ವೇದಿಕೆಯಡಿ ತರುವ ಕಾಂಗ್ರೆಸ್ ಪ್ರಯತ್ನಗಳ ನಡುವೆಯೇ ಎಎಪಿ ನಾಯಕ ಗೋಪಾಲ್‌ ರಾಯ್‌ ಅವರ ಹೇಳಿಕೆಯೂ ಬಂದಿದೆ.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಸಿಬಿಐ ಸಮನ್ಸ್‌ ಜಾರಿ ಮಾಡಿತ್ತು. ಮರುದಿನ (ಏಪ್ರಿಲ್ 15) ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಜ್ರಿವಾಲ್ ಅವರಿಗೆ ದೂರವಾಣಿ ಕರೆ ಮಾಡಿ, 2024ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಂದಾಗುವ ಅಗತ್ಯವನ್ನು ಒತ್ತಿ ಹೇಳಿದ್ದರು.

2024ರ ಲೋಕಸಭೆ ಚುನಾವಣೆಗೆ ಎಎಪಿ ಕಾಂಗ್ರೆಸ್ ಜೊತೆ ಕೈಜೋಡಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಯ್‌, ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ವಿರೋಧ ಪಕ್ಷಗಳು ಒಂದಾಗುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಸಂಸದೀಯ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಮತ್ತು ವಿರೋಧವೇ ಇಲ್ಲದ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ. ಇದು ಭಾರತದ ಸಂವಿಧಾನದ ಮೇಲಿನ ನೇರ ದಾಳಿ. ದೇಶದಲ್ಲಿ ನಿರಂಕುಶಾಧಿಕಾರವನ್ನು ಸ್ಥಾಪಿಸುವ ಪರೋಕ್ಷ ಪ್ರಯತ್ನ ನಡೆಯುತ್ತಿದೆ ಎಂದು ರಾಯ್‌ ಆರೋಪಿಸಿದರು.

ಜಾರಿ ನಿರ್ದೇಶನಾಲಯ, ಕೇಂದ್ರೀಯ ತನಿಖಾ ದಳ, ಚುನಾವಣಾ ಆಯೋಗ ಮತ್ತು ನ್ಯಾಯಾಂಗವನ್ನೂ ವಶಪಡಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಈ ಸಂಸ್ಥೆಗಳು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡರೆ, ಭಾರತವು ಕಳೆದ 75 ವರ್ಷಗಳಲ್ಲಿ ಗಳಿಸಿದ್ದನ್ನೆಲ್ಲ ಕಳೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

‘ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸದರೆ ಕಾಂಗ್ರೆಸ್, ಎಎಪಿ, ಸಮಾಜವಾದಿ ಪಕ್ಷ ಮತ್ತು ಎಡಪಕ್ಷಗಳೂ ಸಣ್ಣ ಘಟಕಗಳಂತಾಗಿವೆ. 2024ರ ಚುನಾವಣೆಯನ್ನು ಈ ಹಿಂದಿನ ಸಾಂಪ್ರದಾಯಿಕ ಚುನಾವಣೆಗಳಿಗೆ ಹೋಲಿಸಲಾಗುವುದಿಲ್ಲ. ಈಗಿನದ್ದು ಸಂಪೂರ್ಣವಾಗಿ ವಿಭಿನ್ನ ಸಂದರ್ಭ. ಇದು (ಸಮಾನ ಮನಸ್ಕ ಪಕ್ಷಗಳ ನಡುವೆ ಚುನಾವಣಾ ಪೂರ್ವ ಮೈತ್ರಿ) ದೇಶಕ್ಕೆ ಅತ್ಯಗತ್ಯವಾಗಿದೆ. ನಾವು ಒಟ್ಟಾಗಿ ಸಮಸ್ಯೆಯನ್ನು ಪರಿಹರಿಸದಿದ್ದರೆ, ಮುಂದಿನ ಪೀಳಿಗೆಯನ್ನು ಗಂಭೀರ ಅಪಾಯಕ್ಕೆ ತಳ್ಳಿದಂತೆ ಎಂದು ನಾನು ಭಾವಿಸುತ್ತೇನೆ’ ಎಂದು ರಾಯ್‌ ಹೇಳಿದರು.

ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವ ಪ್ರಯತ್ನಗಳ ಮಧ್ಯೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳೆದ ವಾರ ರಾಷ್ಟ್ರ ರಾಜಧಾನಿಯಲ್ಲಿ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು. ಬಿಹಾರ ಉಪಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಜೊತೆಗಿದ್ದರು.

ವಿರೋಧ ಪಕ್ಷಗಳ ಐಕ್ಯರಂಗವನ್ನು ಕಾಂಗ್ರೆಸ್ ಮುನ್ನಡೆಸಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಯ್‌, ‘ನಾಯಕನಾಗುವುದಕ್ಕಲ್ಲ, ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕೆ’ ಎಂದು ಹೇಳಿದರು.

‘ಇದು ಸಂಪೂರ್ಣವಾಗಿ ವಿಭಿನ್ನ ಪರಿಸ್ಥಿತಿ ಎಂದು ಕಾಂಗ್ರೆಸ್‌ಗೂ ತಿಳಿದಿದೆ. ನಾಯಕನಾಗುವ ಬಗ್ಗೆ ಇನ್ನೂ ಯೋಚಿಸುತ್ತಿರುವವರಿಗೆ ಪರಿಸ್ಥಿತಿ ಅರ್ಥಮಾಡಿಕೊಳ್ಳಲಾಗಿಲ್ಲ’ ಎಂದು ಅವರು ಹೇಳಿದರು.

ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆರಿದ ನಂತರ ತಮ್ಮ ಪಕ್ಷದ ಯೋಜನೆಗಳ ಕುರಿತು ರಾಯ್‌, ಎಎಪಿ ದೇಶಾದ್ಯಂತ ತನ್ನ ಸಾಂಸ್ಥಿಕ ರಚನೆಯನ್ನು ಬಲಪಡಿಸುವುದರತ್ತ ಕೆಲಸ ಮಾಡಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT