ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

44 ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ: ವರ್ಚುವಲ್ ಸಮಾರಂಭದಲ್ಲಿ ರಾಷ್ಟ್ರಪತಿ ಭಾಗಿ

Last Updated 5 ಸೆಪ್ಟೆಂಬರ್ 2021, 8:15 IST
ಅಕ್ಷರ ಗಾತ್ರ

ನವದೆಹಲಿ: ಬೋಧನೆಯಲ್ಲಿ ಹೊಸ ವಿಧಾನವನ್ನು ಅಳವಡಿಸಿಕೊಳ್ಳುವಲ್ಲಿ ಕೊಡುಗೆ ನೀಡಿರುವ 44 ಶಿಕ್ಷಕರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಭಾನುವಾರ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರು.

ಶಾಲೆಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಜೊತೆಗೆ ವಿದ್ಯಾರ್ಥಿಗಳ ಬದುಕನ್ನೂ ಹಸನುಗೊಳಿಸುವ ಅದ್ವಿತೀಯ ಸಾಧನೆ, ಗಣನೀಯ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

'ಪ್ರತಿ ಮಗುವೂ ಭಿನ್ನ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಹೊಂದಿರುತ್ತದೆ. ಶಿಕ್ಷಕರು ವಿದ್ಯಾರ್ಥಿಗಳ ಭಿನ್ನ ಅಗತ್ಯಗಳು ಮತ್ತು ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸರ್ವತೋಮುಖ ಬೆಳವಣಿಗೆಯತ್ತ ಚಿತ್ತ ಹರಿಸಬೇಕಾಗುತ್ತದೆ' ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಹೇಳಿದರು.

'ವಿದ್ಯಾರ್ಥಿಗಳಲ್ಲಿ ಅಧ್ಯಯನದ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾಡುವುದು ಶಿಕ್ಷಕರ ಕರ್ತವ್ಯವಾಗಿರುತ್ತದೆ. ಸೂಕ್ಷ್ಮ ವ್ಯಕ್ತಿತ್ವದ ಶಿಕ್ಷಕರು ಅವರ ನಡೆ, ವರ್ತನೆ ಹಾಗೂ ಬೋಧನೆಯ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಬಹುದು' ಎಂದರು.

1958ರಲ್ಲಿ ಶಿಕ್ಷಕರ ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಲಾಯಿತು. 60ರ ದಶಕದ ಮಧ್ಯದಿಂದ ಮಾಜಿ ರಾಷ್ಟ್ರಪತಿ, ಶಿಕ್ಷಣತಜ್ಞ ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನುಮದಿನವಾದ ಸೆಪ್ಟೆಂಬರ್‌ 5ರಂದು ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತಿದೆ.

2021ರಲ್ಲಿ ಆನ್‌ಲೈನ್‌ ಮೂಲಕ ಸ್ವಯಂ ನಾಮನಿರ್ದೇಶನ ಪ್ರಕ್ರಿಯೆ ನಡೆಸಲಾಗಿದೆ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟ–ಮೂರು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ.

ಈ ಬಾರಿ ವರ್ಚುವಲ್‌ ಆಗಿ ಪ್ರಶಸ್ತಿ ಸಮಾರಂಭವನ್ನು ನಡೆಸಲಾಯಿತು. ರಾಷ್ಟ್ರದಾದ್ಯಂತ ಆಯ್ಕೆಯಾದ 44 ಶಿಕ್ಷಕರ ಕುರಿತು ಸಾಕ್ಷ್ಯಚಿತ್ರಗಳನ್ನು ಪ್ರಸಾರ ಮಾಡಲಾಯಿತು. ‌‌

ಕರ್ನಾಟಕದಿಂದ ಒಬ್ಬರು ಮಾತ್ರ ಆಯ್ಕೆ

‌ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ದೊಡ್ಡಬನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸಿ.ಎಂ. ನಾಗರಾಜ ಅವರು ಶಿಕ್ಷಕರಿಗೆ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬಾರಿ ಈ ಗೌರವಕ್ಕೆ ಪಾತ್ರರಾದ ರಾಜ್ಯದ ಏಕೈಕ ಶಿಕ್ಷಕ ಇವರು.

15 ವರ್ಷದಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ದೊಡ್ಡಬನಹಳ್ಳಿ ಶಾಲೆಯಲ್ಲಿ 2018ರಿಂದ ಕೆಲಸ ಮಾಡುತ್ತಿದ್ದಾರೆ. ಪಾಠ ಬೋಧನೆ ಮಾತ್ರವಲ್ಲದೆ, ಸಮುದಾಯ ಅಭಿವೃದ್ಧಿ ಕಾರ್ಯಗಳಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಾಲೆಗೆ ಎಲ್‌ಇಡಿ ಟಿವಿ, ಸೌರಫಲಕ, ಸೌರದೀಪಗಳನ್ನು ದೇಣಿಗೆಯಾಗಿ ನೀಡಿ ವಿದ್ಯಾರ್ಥಿಗಳಿಗೆ ಅನುಕೂಲವನ್ನೂ ಕಲ್ಪಿಸಿದ್ದಾರೆ.

ಎರೇಹುಳು ಘಟಕದ ಬಗ್ಗೆ ಅವರು ಮಂಡಿಸಿದ ವಿಷಯವು ರಾಷ್ಟ್ರೀಯ, ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT