ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನ್‌ ಕಿ ಬಾತ್’ ಪ್ರಧಾನಿ ರೇಡಿಯೊ ಕಾರ್ಯಕ್ರಮ; ತಟ್ಟೆ ಬಡಿದು ರೈತರ ಪ್ರತಿರೋಧ

Last Updated 27 ಡಿಸೆಂಬರ್ 2020, 20:00 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಡೆಸಿದ ‘ಮನ್‌ ಕಿ ಬಾತ್’ ರೇಡಿಯೊ ಕಾರ್ಯಕ್ರಮಕ್ಕೆ, ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ತಟ್ಟೆಗಳನ್ನು ಬಡಿದು ಭಾನುವಾರ ಪ್ರತಿರೋಧ ತೋರಿದರು.

ದೆಹಲಿಯ ಸಿಂಘು, ಟಿಕ್ರಿ ಹಾಗೂ ಗಾಜಿಪುರ ಗಡಿಗಳಲ್ಲಿ 32 ದಿನಗಳಿಂದ ಧರಣಿ ಕುಳಿತಿರುವ ರೈತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಅಮೃತಸರ, ಫಿರೋಜ್‌ಪುರ, ಸಂಗ್ರೂರ್, ಭಟಿಂಡಾ, ತರನ್ ತಾರನ್, ಗುರುದಾಸ್‌ಪುರ ಜಿಲ್ಲೆಗಳಲ್ಲೂ ಜನರು ಪಾತ್ರೆಗಳನ್ನು ಬಡಿದರು. ‘ಸಾಮಾನ್ಯ ಜನರೂ ರೈತರ ಜೊತೆಗಿದ್ದಾರೆ’ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಮೃತಸರದ ಪ್ರತಿಭಟನಕಾರರೊಬ್ಬರು ನುಡಿದಿದ್ದಾರೆ.

ಮಂಗಳವಾರ ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ಜತೆ ಮಾತುಕತೆ ನಿಗದಿಯಾಗಿದೆ. ಬೇಡಿಕೆ ಈಡೇರದಿದ್ದರೆ ಬುಧವಾರ ಟ್ರ್ಯಾಕ್ಟರ್ ರ‍್ಯಾಲಿ ನಡೆಸುವುದಾಗಿ ರೈತರು ಎಚ್ಚರಿಸಿದ್ದಾರೆ. ಹೀಗಾಗಿ ಮೂರೂ ಗಡಿಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ವಕೀಲ ಆತ್ಮಹತ್ಯೆ: ಪಂಜಾಬ್‌ನ ವಕೀಲ ಅಮರ್‌ಜಿತ್ ಸಿಂಗ್ ಎಂಬುವರು ಟಿಕ್ರಿ ಗಡಿ ಸಮೀಪದಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿದ್ದ ಅವರನ್ನು ರೋಹ್ಟಕ್‌ನ ಪಿಜಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಬಿಜೆಪಿಗೆ ತಿರುಗೇಟು: ಪ್ರತಿಭಟನೆ ನಡೆಸುತ್ತಿರುವ ರೈತರನ್ನು ‘ನಗರ ನಕ್ಸಲರು’ ಎಂಬುದಾಗಿ ಕರೆದ ಬಿಜೆಪಿ ವರ್ತನೆಯನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ಅಕಾಲಿದಳ ಮುಖಂಡರು ಬಲವಾಗಿ ಖಂಡಿಸಿದ್ದಾರೆ.

ಕೇಜ್ರಿವಾಲ್ ಭೇಟಿ: ಸಿಂಘು ಗಡಿಗೆ ಎರಡನೇ ಬಾರಿ ಭೇಟಿ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದರು.

ಕೃಷಿ ಕಾಯ್ದೆಗಳ ಕುರಿತು ಚರ್ಚಿಸಲು ತಮ್ಮ ನಿವಾಸಕ್ಕೆ ಬರುವಂತೆ ಬಿಜೆಪಿ ಸಂಸದ ಮನೋಜ್ ತಿವಾರಿ ನೀಡಿದ್ದ ಆಹ್ವಾನವನ್ನು ಕೇಜ್ರಿವಾಲ್ ನಿರ್ಲಕ್ಷಿಸಿದ್ದಾರೆ.

ಇದೆಂಥ ಮ್ಯಾಜಿಕ್‌?: ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ರಾಹುಲ್‌ ಗಾಂಧಿ ಅವರನ್ನು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಟೀಕಿಸಿದ್ದಾರೆ.

‘ತಾವು ಬೆಳೆದ ಆಲೂಗಡ್ಡೆಯನ್ನು ಮಧ್ಯವರ್ತಿಗಳಿಲ್ಲದೆ, ನೇರವಾಗಿ ಕಾರ್ಖಾನೆಗಳಿಗೆ ಮಾರಾಟ ಮಾಡಲು ಅವಕಾಶ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ’ ಎಂದು 2015ರಲ್ಲಿ ಸಂಸತ್ತಿನಲ್ಲಿ ರಾಹುಲ್‌ ಗಾಂಧಿ ಅವರು ಮಾಡಿದ್ದ ಭಾಷಣದ ತುಣುಕನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿರುವ ನಡ್ಡಾ, ‘ಅಂದು ನೀವು ಪ್ರತಿಪಾಸಿಸಿದ್ದನ್ನು ಇಂದು ವಿರೋಧಿಸುತ್ತಿದ್ದೀರಿ. ಇದೆಂಥ ಮ್ಯಾಜಿಕ್‌ ರಾಹುಲ್‌ಜೀ’ ಎಂದು ಪ್ರಶ್ನಿಸಿದ್ದಾರೆ.

*
ರೈತರು ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ಬೀಡುಬಿಟ್ಟಿದ್ದಾರೆಯೇ ಹೊರತು ಪ್ರವಾಸಕ್ಕೆ ಬಂದಿಲ್ಲ. -ಹನ್ನನ್ ಮೊಲ್ಲಾ, ರೈತ ಮುಖಂಡ

ದೆಹಲಿಯ ಟಿಕ್ರಿ ಗಡಿಯಲ್ಲಿ ರೈತ ಮಹಿಳೆಯರು ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ ಘೋಷಣೆ ಕೂಗಿದರು –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT