ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಧು ಹಟ, ಪಕ್ಷ ಸರ್ವೋಚ್ಚ ಎಂದ ಚನ್ನಿ

ಪಂಜಾಬ್‌ ಕಾಂಗ್ರೆಸ್‌ ಬಿಕ್ಕಟ್ಟು: ಮಾತುಕತೆಗೆ ಆಹ್ವಾನ ಕೊಟ್ಟ ಮುಖ್ಯಮಂತ್ರಿ: ಹೊಸ ಅಧ್ಯಕ್ಷರ ಹುಡುಕಾಟ
Last Updated 29 ಸೆಪ್ಟೆಂಬರ್ 2021, 17:42 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ಕಾಂಗ್ರೆಸ್‌ ಪಕ್ಷದಲ್ಲಿನ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿ ಕುಳಿತು ಮಾತನಾಡೋಣ ಎಂದು ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನವಜೋತ್‌ ಸಿಂಗ್ ಸಿಧು ಅವರಿಗೆ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್‌ ಚನ್ನಿ ಬುಧವಾರ ಹೇಳಿದ್ದಾರೆ. ಆದರೆ, ಈ ಸಂದರ್ಭದಲ್ಲಿ ‘ಪಕ್ಷವೇ ಸರ್ವೋಚ್ಚ’ ಎಂಬ ಸೂಚ್ಯ ಎಚ್ಚರಿಕೆಯನ್ನೂ ಚನ್ನಿ ನೀಡಿದ್ದಾರೆ. ಸಿಧು ಅವರು ರಾಜಿಯಾಗದಿದ್ದರೆ ಆ ಸ್ಥಾನಕ್ಕೆ ಹೊಸಬರನ್ನು ತರುವ ಬಗ್ಗೆ ಕಾಂಗ್ರೆಸ್‌ ಯೋಚನೆ ಆರಂಭಿಸಿದೆ.

ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಸೆ. 18ರಂದು ಕೆಳಗಿಳಿಸಲು ಯಶಸ್ವಿಯಾದ ಸಿಧು ಅವರು, ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕವಾಗಿ 71ನೇ ದಿನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಪರಿಣಾಮವಾಗಿ ಪಕ್ಷವು ಮತ್ತೆ ಬಿಕ್ಕಟ್ಟಿಗೆ ಬಿದ್ದಿದೆ. ತಮ್ಮ ಮಹತ್ವ ಕುಂದಿದೆ ಎಂಬ ವಿಚಾರವೂ ಸಿಧು ಅವರಿಗೆ ಸಿಟ್ಟು ತರಿಸಿದೆ ಎನ್ನಲಾಗಿದೆ.

ತಮ್ಮದು ವಿಷಯಾಧಾರಿತ ಹೋರಾಟ ಎಂದು ಟ್ವಿಟರ್‌ನಲ್ಲಿ ವಿಡಿಯೊ ಪ್ರಕಟಿಸಿರುವ ಸಿಧು ಹೇಳಿದ್ದಾರೆ. ಈ ಮೂಲಕ ತಾವು ಸುಲಭದಲ್ಲಿ ಮಣಿಯುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಸಿಧು ಅವರನ್ನು ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಿಸುವಲ್ಲಿ ಮುತುವರ್ಜಿ ವಹಿಸಿದ್ದ ಮುಂಖಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಪಂಜಾಬ್‌ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಹರೀಶ್‌ ರಾವತ್ ಅವರನ್ನು ರಾಜ್ಯಕ್ಕೆ ಕಳುಹಿಸಲಾಗಿದೆ.

ಇಲ್ಲಿ ಅಹಂ ಸಂಘರ್ಷದ ಪ್ರಶ್ನೆಯೇ ಇಲ್ಲ. ನೇಮಕಾತಿಗಳ ಮರುಪರಿಶೀಲನೆಗೆ ತಾವು ಸಿದ್ಧ ಎಂದು ಚನ್ನಿ ಹೇಳಿದ್ದಾರೆ.

ಚನ್ನಿ ಅವರು ಸದ್ಯದ ಬಿಕ್ಕಟ್ಟಿನಿಂದ ದಿಕ್ಕೆಟ್ಟ ಹಾಗೆ ಇಲ್ಲ. ಅವರು ಬುಧವಾರ ಸಚಿವ ಸಂಪುಟ ಸಭೆ ನಡೆಸಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

ಸಿಧು ಅವರು ಪಕ್ಷವನ್ನು ಅನುಸರಿಸಬೇಕೇ ವಿನಾ ಬೇರೆ ದಾರಿ ಇಲ್ಲ ಎಂಬ ಸುಳಿವನ್ನು ಪಕ್ಷದ ಹೈಕಮಾಂಡ್‌ ಹಲವು ಬಾರಿ ನೀಡಿದೆ. ರಾಹುಲ್‌ ಅವರಿಗೆ ಆಪ್ತರಾಗಿರುವ ಕುಲಜೀತ್‌ ಸಿಂಗ್‌ ನಗ್ರಾ ಮತ್ತು ರವನೀತ್‌ ಬಿಟ್ಟು ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪರಿಶೀಲನೆಯಲ್ಲಿದೆ. ಬಿಕ್ಕಟ್ಟು ಶೀಘ್ರ ಪರಿಹಾರ ಆಗಲಿದೆ ಎಂದು ಸಿಧು ಅವರ ಆಪ್ತ ಶಾಸಕ ಪರಗತ್‌ ಸಿಂಗ್‌ ಹೇಳಿದ್ದಾರೆ.

ಪಂಜಾಬ್‌ನ ಮೊದಲದಲಿತ ಮುಖ್ಯಮಂತ್ರಿಯು ಮಧ್ಯಂತರ ಅವಧಿಗೆ ಸೀಮಿತ ಎಂಬ ಭಾವನೆ ಜನರಲ್ಲಿ ಮೂಡುವುದು ಕಾಂಗ್ರೆಸ್‌ಗೆ ಬೇಕಿಲ್ಲ. ಆದ್ದರಿಂದಲೇ, ಮುಖ್ಯಮಂತ್ರಿಯಾಗುವ ತಮ್ಮ ಆಕಾಂಕ್ಷೆ ಈಡೇರದು ಎಂಬುದೂ ಸಿಧು ಅವರ ಅತೃಪ್ತಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT