ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ಕಲಿಯುವೆ, ಮಹಾಭಾರತದ ಮೇಲೆ ಪಿಎಚ್‌ಡಿ ಮಾಡುವೆ: ಪಂಜಾಬ್‌ ಸಿಎಂ ಚನ್ನಿ

Last Updated 28 ನವೆಂಬರ್ 2021, 16:05 IST
ಅಕ್ಷರ ಗಾತ್ರ

ಚಂಡೀಗಢ: ಹಿಂದೂ ಗ್ರಂಥಗಳಾದ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿರುವ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಸಂಸ್ಕೃತವನ್ನು ಕಲಿತು, ಮಹಾಭಾರತದ ಮೇಲೆ ಪಿಎಚ್‌ಡಿ ಮಾಡುವುದಾಗಿ ಭಾನುವಾರ ಹೇಳಿದ್ದಾರೆ.

ಚಂಡೀಗಢದಲ್ಲಿ ‘ಭಗವಾನ್ ಪರಶುರಾಮ ತಪೋಸ್ಥಳ’ದ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಅವರು ಅಕಾಲಿ ದಳದ ವರಿಷ್ಠ ಪ್ರಕಾಶ್‌ ಸಿಂಗ್ ಬಾದಲ್ ಅವರನ್ನು ಮಹಾಭಾರತದ ಧೃತರಾಷ್ಟ್ರನಿಗೆ ಹೋಲಿಸಿದರು. ಅವರಿಗಿರುವ ಪುತ್ರ ಮೋಹವು ಅವರ ಪಕ್ಷವನ್ನು ಹಾಳು ಮಾಡಿತು ಎಂದರು.

ಸ್ಥಾಪನೆಯಾಗಲಿರುವ ಸಂಶೋಧನಾ ಕೇಂದ್ರಗಳಲ್ಲಿ ಹಿಂದೂ ಧರ್ಮದ ಮೂರು ಪವಿತ್ರ ಗ್ರಂಥಗಳ ಸಂದೇಶಗಳನ್ನು ಬಿತ್ತರಿಸಲಾಗುವುದು ಎಂದು ಅವರು ತಿಳಿಸಿದರು.

ಯುಗಯುಗಾಂತರಗಳಿಂದ ಈ ಗ್ರಂಥಗಳು ಇಡೀ ಮನುಕುಲಕ್ಕೆ ಸ್ಫೂರ್ತಿದಾಯಕವಾಗಿವೆ. ಇವುಗಳ ಸಂದೇಶವನ್ನು ಜನಸಾಮಾನ್ಯರಲ್ಲಿ ಅತ್ಯಂತ ಸರಳ ರೂಪದಲ್ಲಿ ಪ್ರಸಾರ ಮಾಡಲು ಸಂಶೋಧನಾ ಕೇಂದ್ರವು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.

ಸಂಸ್ಕೃತ ಭಾಷೆ ಕಲಿತು ಮಹಾಭಾರತದ ವಿಷಯದಲ್ಲಿ ಡಾಕ್ಟರೇಟ್ ಮಾಡುತ್ತೇನೆ ಎಂದೂ ಚನ್ನಿ ಇದೇ ವೇಳೆ ಹೇಳಿದರು.

‘ನನ್ನ ಜೀವನವನ್ನು ಅರ್ಥಪೂರ್ಣವಾಗಿಸಲು, ನೀತಿ ಮಾರ್ಗದಲ್ಲಿ ಸಾಗಲು ಪ್ರತಿದಿನ ಭಗವದ್ಗೀತೆಯ ಒಂದು ಶ್ಲೋಕವನ್ನು ಕಲಿಯಲು ವಿದ್ವಾಂಸರೊಬ್ಬರು ನನಗೆ ಸಲಹೆ ನೀಡಿದ್ದರು. ಗೀತೋಪದೇಶವು ಅಪ್ರತಿಮವಾದದ್ದು. ನನ್ನ ಈಗಿನ ಪಿಎಚ್‌ಡಿ ಅಧ್ಯಯನ ಮೂರು ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ. ನಂತರ ನಾನು ಸಂಸ್ಕೃತ ಕಲಿಯಲು ಪ್ರಾರಂಭಿಸುತ್ತೇನೆ. ಮಹಾಭಾರತದ ಮೇಲೆ ಪಿಎಚ್‌ಡಿ ಮಾಡುತ್ತೇನೆ,’ ಎಂದು ಅವರು ಹೇಳಿದರು.

ರಾಜ್ಯದಲ್ಲಿನ ಬಿಡಾಡಿ ದನಗಳ ಆರೈಕೆಯನ್ನು ಬ್ರಾಹ್ಮಣ ಕಲ್ಯಾಣ ಮಂಡಳಿಗೆ ವಹಿಸಲಾಗುವುದು. ಮಂಡಳಿಗೆ ಸೂಕ್ತ ಅನುದಾನ ನೀಡಲಾಗುವುದು. ಪ್ರಮುಖವಾದ ಈ ಸಮಸ್ಯೆಯನ್ನು ನೀಗಿಸುವುದು ಈ ಹೊತ್ತಿನ ಅಗತ್ಯವೂ ಆಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮಹಾಭಾರತವು ರಾಜ್ಯಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥವಾಗಿದೆ ಮತ್ತು ಇಂದಿಗೂ ಪ್ರಸ್ತುತವಾಗಿದೆ ಎಂದು ಚನ್ನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT