ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಕೋಟೆ ಹಿಂಸಾಚಾರ ಪ್ರಕರಣ: ನಟ ದೀಪ್ ಸಿಧು ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆ

Last Updated 16 ಫೆಬ್ರುವರಿ 2021, 8:31 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆದ ರೈತರ ಟ್ರ್ಯಾಕ್ಟರ್ ಪೆರೇಡ್ ವೇಳೆ ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಂಜಾಬಿ ನಟ ದೀಪ್ ಸಿಧು ಅವರ ಪೊಲೀಸ್ ಕಸ್ಟಡಿಯನ್ನು ಏಳು ದಿನಗಳವರೆಗೆ ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.

ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸಿಧು ಅವರ ಪೊಲೀಸ್ ಕಸ್ಟಡಿ ಅವಧಿ ಮುಗಿದ ನಂತರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಭುಜಲಿ ಅವರ ಮುಂದೆ ಹಾಜರುಪಡಿಸಲಾಯಿತು.

ಹೆಚ್ಚಿನ ವಿಚಾರಣೆಗೆ ಮತ್ತು ಪ್ರಕರಣದ ಇತರ ಆರೋಪಿಗಳನ್ನು ಗುರುತಿಸಲು ಬಂಧನ ಅವಧಿಯನ್ನು ವಿಸ್ತರಿಸುವುದು ಅಗತ್ಯವಾಗಿದೆ ಎಂದು ಪೊಲೀಸರು ಸಿಧು ಅವರ ವಿಚಾರಣೆ ನಡೆಸಲು ಪೊಲೀಸ್ ಕಸ್ಟಡಿ ಅವಧಿಯ ವಿಸ್ತರಣೆಗೆ ಮನವಿ ಮಾಡಿದರು.

ಕೆಂಪು ಕೋಟೆಯಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಪ್ರಮುಖ ಪ್ರಚೋದಕರಲ್ಲಿ ಸಿಧು ಕೂಡ ಒಬ್ಬರು ಎಂದು ಪೊಲೀಸರು ಆರೋಪಿಸಿದ ನಂತರ ನ್ಯಾಯಾಲಯವು ಫೆಬ್ರವರಿ 9 ರಂದು ಸಿಧುನನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.

ಘಟನಾ ಸ್ಥಳದಲ್ಲಿ ಸಿಧು ಅವರಿದ್ದದ್ದನ್ನು ನೋಡಬಹುದಾದ ವಿಡಿಯೊಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

'ಅವರು ಗುಂಪನ್ನು ಪ್ರಚೋದಿಸುತ್ತಿದ್ದನು. ಅವರು ಪ್ರಮುಖ ದಂಗೆಕೋರರಲ್ಲಿ ಒಬ್ಬರು. ಇತರೆ ಸಂಚುಕೋರರನ್ನು ಗುರುತಿಸಲು ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹುಡುಕಬೇಕಾಗಿದೆ. ಅವರ ಶಾಶ್ವತ ವಿಳಾಸವನ್ನು ನಾಗ್ಪುರ ಎಂದು ನೀಡಲಾಗಿದೆ ಆದರೆ ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲು ಪಂಜಾಬ್ ಮತ್ತು ಹರಿಯಾಣದಲ್ಲಿ ಹಲವಾರು ಸ್ಥಳಗಳಿಗೆ ಭೇಟಿ ನೀಡಬೇಕಾಗಿದೆ' ಎಂದು ಪೊಲೀಸರು ಆರೋಪಿಸಿದ್ದರು.

'ಕೆಂಪು ಕೋಟೆಯಲ್ಲಿ ಧ್ವಜವನ್ನು ಹಾರಿಸಿದ ವ್ಯಕ್ತಿಯೊಂದಿಗೆ ಹೊರಬಂಧ ಸಿಧು, ಆತನನ್ನು ಅಭಿನಂದಿಸುತ್ತಾರೆ. ಅಲ್ಲಿಂದ ಅವರು ಹೊರಗೆ ಬಂದು ಜೋರಾಗಿ ಭಾಷಣ ಮಾಡಿದರು ಮತ್ತು ಅಲ್ಲಿದ್ದವರನ್ನು ಕೆರಳಿಸಿದರು. ಅವರು ಮುಖ್ಯ ಪ್ರಚೋದಕರಾಗಿದ್ದರು. ಹಿಂಸಾಚಾರದಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ' ಎಂದು ಪೊಲೀಸರು ಆರೋಪಿಸಿದ್ದಾರೆ.

ಆದಾಗ್ಯೂ, ಸಿಧು ಅವರ ವಕೀಲರು ಹಿಂಸಾಚಾರಕ್ಕೂ, ಸಿಧುಗೂ ಯಾವುದೇ ಸಂಬಂಧವಿಲ್ಲ ಮತ್ತು ತಪ್ಪಾದ ಸಮಯದಲ್ಲಿ ತಪ್ಪಾದ ಸ್ಥಳದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಗಲಭೆ (147 ಮತ್ತು 148), ಕಾನೂನುಬಾಹಿರ ಸಭೆ (149), ಕೊಲೆ ಯತ್ನ (120-ಬಿ), ಕ್ರಿಮಿನಲ್ ಪಿತೂರಿ (120-ಬಿ), ಸಾರ್ವಜನಿಕ ಸೇವಕನ ಮೇಲೆ ಹಲ್ಲೆ ಅಥವಾ ಅಡ್ಡಿಪಡಿಸುವುದು (152), ಡಕಾಯಿತಿ (395), ಅಪರಾಧಿ ನರಹತ್ಯೆ (308) ಮತ್ತು ಸಾರ್ವಜನಿಕ ಸೇವಕರಿಂದ ಘೋಷಿಸಲ್ಪಟ್ಟ ಆದೇಶಕ್ಕೆ ಅಸಹಕಾರ (188) ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳ ಅಡಿಯಲ್ಲಿ ಸಿಧು ಅವರನ್ನು ಬಂಧಿಸಲಾಗಿದೆ.

ನಟ ದೀಪ್ ಸಿಧು ಅವರ ಪತ್ತೆಗೆ ಪೋಲೀಸರು ವ್ಯಾಪಕ ಶೋಧ ನಡೆಸಿದ್ದಲ್ಲದೆ, ಅವರ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನೂ ಘೋಷಿಸಿದ್ದರು. ನಂತರ ಹರಿಯಾಣದ ಕರ್ನಾಲ್‌ನಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT