ಮಂಗಳವಾರ, ಆಗಸ್ಟ್ 16, 2022
29 °C

ಹಾರ್ಕಿವ್‌: ರಷ್ಯಾ ಪಡೆಗಳ ಕ್ಷಿಪಣಿ ದಾಳಿ; ಕರ್ನಾಟಕದ ವಿದ್ಯಾರ್ಥಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾರ್ಕಿವ್‌ ನಗರದ‌ಲ್ಲಿ ದಾಳಿ ನಡೆದಿರುವುದು; ಒಳಚಿತ್ರ: ಮೃತ ನವೀನ್‌

ನವದೆಹಲಿ: ಉಕ್ರೇನ್‌ನ ಹಾರ್ಕಿವ್‌ ನಗರದ‌ ಬಳಿ ಮಂಗಳವಾರ ಬೆಳಿಗ್ಗೆ ನಡೆದ ರಷ್ಯಾ ಪಡೆಗಳ ದಾಳಿಯಲ್ಲಿ ಭಾರತ ಮೂಲದ ಒಬ್ಬ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಮೃತ ವಿದ್ಯಾರ್ಥಿ ಕರ್ನಾಟಕ‌ ಮೂಲದ ಹಾವೇರಿ ಜಿಲ್ಲೆಯ ಜಿ. ನವೀನ್ ಶೇಖರಪ್ಪ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಖಚಿತ‌ ಮಾಹಿತಿ ಲಭಿಸಿಲ್ಲ.

ಬೆಳಿಗ್ಗೆ ರಷ್ಯಾ ಪಡೆಗಳು ನಡೆಸಿರುವ ದಾಳಿಯಲ್ಲಿ ಈ ವಿದ್ಯಾರ್ಥಿಗೆ ಗುಂಡು ತಗುಲಿ ತೀವ್ರ ಗಾಯಗೊಂಡಿದ್ದ. ನಂತರ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಭಾರತದ ಒಬ್ಬ ವಿದ್ಯಾರ್ಥಿ ಮೃತ ಪಟ್ಟಿರುವುದಾಗಿ ಖಚಿತ ಪಡಿಸಿರುವ ಕೇಂದ್ರ ಸರ್ಕಾರ, ವಿದ್ಯಾರ್ಥಿಯ ವಿವರ ತಿಳಿಸಿಲ್ಲ.

'ಹಾರ್ಕಿವ್‌ನಲ್ಲಿ ಇಂದು ಬೆಳಿಗ್ಗೆ ನಡೆದ ಶೆಲ್ಲಿಂಗ್‌ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ತಿಳಿಸಿಲು ವಿಷಾದವೆನಿಸುತ್ತಿದೆ. ಸಚಿವಾಲಯವು ವಿದ್ಯಾರ್ಥಿಯ ಕುಟುಂಬದ ಜೊತೆಗೆ ಸಂಪರ್ಕದಲ್ಲಿದೆ. ವಿದ್ಯಾರ್ಥಿಯ ಕುಟುಂಬಕ್ಕೆ ಸಂತಾಪ ಸೂಚಿಸಿದ್ದೇವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಟ್ವೀಟ್‌ ಮಾಡಿದ್ದಾರೆ.

ಬೆಳಿಗ್ಗೆ ಹಾರ್ಕಿವ್‌ ನಗರದಿಂದ ಲೀವ್ ನಗರದತ್ತ ತೆರಳಿ ಅಲ್ಲಿಂದ ರೋಮೆನಿಯಾ ಗಡಿಗೆ ಹೋಗಲು ರೈಲು ನಿಲ್ದಾಣದತ್ತ ಹೊರಟಾಗ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಆದರೆ, ಬೆಳಿಗ್ಗೆ ಅಗತ್ಯ ದಿನಸಿ ತರಲು ತೆರಳಿದ್ದ ಸಂದರ್ಭ ರಷ್ಯಾದ ಶೆಲ್ ದಾಳಿಯಲ್ಲಿ ಈ ವಿದ್ಯಾರ್ಥಿ ಅಸುನೀಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

'ಹಾರ್ಕಿವ್‌ ಮತ್ತು ಇತರ ನಗರಗಳಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ತುರ್ತಾಗಿ ಮತ್ತು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಸಹಕರಿಸುವಂತೆ ರಷ್ಯಾ ಮತ್ತು ಉಕ್ರೇನ್‌ನ ರಾಯಭಾರಿಗಳ ಜೊತೆ ವಿದೇಶಾಂಗ ಕಾರ್ಯದರ್ಶಿ ಸಂಪರ್ಕದಲ್ಲಿದ್ದಾರೆ. ರಷ್ಯಾ ಮತ್ತು ಉಕ್ರೇನ್‌ನಲ್ಲಿರುವ ನಮ್ಮ ರಾಯಭಾರಿಗಳು ಕ್ಷಿಪ್ರ ಕಾರ್ಯಚರಣೆ ನಡೆಸುತ್ತಿದ್ದಾರೆ'  ಎಂದು ಅರಿಂದಮ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು