ನವದೆಹಲಿ: ‘ಜಾರಿ ನಿರ್ದೇಶನಾಲಯವು (ಇ.ಡಿ) ಆರೋಪಿಗೆ ಸಮನ್ಸ್ ನೀಡಲು ಸಂವಿಧಾನ ಉಲ್ಲಂಘನೆ ಆಗದ ರೀತಿಯ ಅವಕಾಶಗಳು ಹಣ ಅಕ್ರಮ ವರ್ಗಾವಣೆ ಕಾಯ್ದೆ 2002ರಲ್ಲಿ ಯಾವುವು ಇವೆ ಎಂಬುದನ್ನು ತಿಳಿಸಿ’ ಎಂದು ಕೋರಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಗೋವಿಂದ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
‘ಆರೋಪಿಯು ತನಿಖೆಗೆ ಬರುವಂತೆ ಸಮನ್ಸ್ ನೀಡಲು ಇ.ಡಿಗೆ ಹಣ ಅಕ್ರಮ ವರ್ಗಾವಣೆ ಕಾಯ್ದೆ 2002ರ (ಪಿಎಂಎಲ್‌ಎ) ಸೆಕ್ಷನ್ 50ರಲ್ಲಿ ಅವಕಾಶ ನೀಡಲಾಗಿದೆ. ಆರೋಪಿಯ ತನಿಖೆ ಸಂದರ್ಭದಲ್ಲಿ ಆರೋಪಿಯ ಹೇಳಿಕೆ ಮತ್ತು ಅವರಿಂದಲೇ ಸಂಗ್ರಹಿಸಿದ ದಾಖಲೆಗಳನ್ನು ಸಾಕ್ಷ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ, ಇದು ಸಂವಿಧಾನದ 20 (3) ವಿಧಿಯ ಉಲ್ಲಂಘಟನೆಯಾಗಿದೆ’ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
‘ಸ್ವಯಂ ಅಪರಾಧ ಹೊರಿಸಿಕೊಳ್ಳುವಿಕೆಯನ್ನು ವಿರೋಧಿಸುವ ಹಕ್ಕನ್ನು ವ್ಯಕ್ತಿಯೊಬ್ಬರಿಗೆ ಸಂವಿಧಾನದ 20 (3) ವಿಧಿ ನೀಡುತ್ತದೆ. ಆದರೆ, ಪಿಎಂಎಲ್‌ಎನ ಸೆಕ್ಷನ್ 50 ಇದಕ್ಕೆ ವಿರೋಧಾಭಾಸದಂತಿದೆ’ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಅರ್ಜಿದಾರರ ಪರ ವಾದಿಸಿದರು.
ಈ ಅರ್ಜಿಯ ವಿಚಾರಣೆಯನ್ನು ಆರು ವಾರಗಳಿಗೆ ಮುಂದೂಡಿದ ಪೀಠವು, ಅರ್ಜಿಯ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಹೇಳಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಸಾಸುದ್ದೀನ್ ಅಮಾನುಲ್ಲಾ ಹಾಗೂ ಅರವಿಂದ್ ಕುಮಾರ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.