ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ವಿಚಾರ ಕೆದಕಿದ ಶಿವಸೇನಾ: ಬೆಳಗಾವಿಗೆ ಸರ್ವಪಕ್ಷ ನಿಯೋಗ

Last Updated 13 ಮಾರ್ಚ್ 2021, 20:02 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನಾ ಪಕ್ಷವು ಕರ್ನಾಟಕ– ಮಹಾರಾಷ್ಟ್ರ ಗಡಿ ವಿಚಾರವನ್ನು ಮತ್ತೊಮ್ಮೆ ಕೆದಕಿದೆ.

‘ಬೆಳಗಾವಿಯಲ್ಲಿ ನೆಲೆಸಿರುವ ಮರಾಠಿಗರನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ. ಮಹಾರಾಷ್ಟ್ರದಿಂದ ಸರ್ವಪಕ್ಷಗಳ ನಿಯೋಗವೊಂದನ್ನು ಅಲ್ಲಿಗೆ ಕಳುಹಿಸಿ, ಅಲ್ಲಿ ನೆಲೆಸಿರುವ ಮರಾಠಿ ಭಾಷಿಗರಿಗೆ ಬೆಂಬಲ ನೀಡಬೇಕು’ ಎಂದು ಪಕ್ಷದ ವಕ್ತಾರ, ರಾಜ್ಯಸಭೆಯ ಸದಸ್ಯ ಸಂಜಯ್‌ ರಾವುತ್‌ ಶನಿವಾರ ಒತ್ತಾಯಿಸಿದ್ದಾರೆ.

‘ಕಳೆದ ಎಂಟು ದಿನಗಳಲ್ಲಿ ಬೆಳಗಾವಿಯಲ್ಲಿ ಶಿವಸೇನಾದ ನಾಯಕರು ಹಾಗೂ ಪಕ್ಷದ ಕಚೇರಿಯ ಮೇಲೆ ಕನ್ನಡಪರ ಸಂಘಟನೆಗಳವರು ದಾಳಿ ನಡೆಸಿದ್ದಾರೆ. ಇದರ ಹಿಂದೆ ಬಿಜೆಪಿಯ ಕುಮ್ಮಕ್ಕು ಇದೆ ಎಂದು ಅವರು ಆರೋಪಿಸಿದರು.

‘ಮಹಾರಾಷ್ಟ್ರ ಮತ್ತು ಕರ್ನಾಟಕದ ಮಧ್ಯೆ ಇರುವುದು ಭಾಷೆಯ ಸಮಸ್ಯೆಯೇ ವಿನಾ ಭಾರತ– ಪಾಕಿಸ್ತಾನ ಸಮಸ್ಯೆಯಲ್ಲ. ಅದನ್ನು ತುಂಬ ದೀರ್ಘ ಎಳೆಯಬಾರದು. ಅದು ಕರ್ನಾಟಕ ಸರ್ಕಾರದ ಹೊಣೆಯೂ ಆಗಿದೆ. ಅಲ್ಲಿ ಪರಿಸ್ಥಿತಿ ಕೈಮೀರಿ ಹೋದರೆ, ಶಿವಸೇನಾ ಅಥವಾ ಮಹಾರಾಷ್ಟ್ರ ಸರ್ಕಾರವನ್ನು ದೂಷಿಸಬಾರದು’ ಎಂದು ಅವರು ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಬೆಳಗಾವಿಯ ಸ್ಥಿತಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿರುವ ಅವರು, ‘ಚುನಾವಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರಗಳು ಕೇಂದ್ರ ಸರ್ಕಾರಕ್ಕೆ ಕಾಣಿಸುತ್ತಿವೆ. ಆದರೆ, ಬೆಳಗಾವಿಯ ಬೆಳವಣಿಗೆಯ ಬಗ್ಗೆ ಕುರುಡಾಗಿದೆ. ಈ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಕಠಿಣ ನಿಲುವನ್ನು ತಳೆಯಬೇಕಾಗಿದೆ’ ಎಂದು ಹೇಳಿದರು.

‘ಇದು ರಾಜ್ಯದ ಸಮಸ್ಯೆಯಾಗಿರುವುದರಿಂದ ವಿರೋಧ ಪಕ್ಷದವರೂ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಜತೆ ನಿಲ್ಲಬೇಕು. ಬೆಳಗಾವಿಯಲ್ಲಿ ಮರಾಠಿ ಮಾತನಾಡುವ ಜನರಿಗೆ ನಾವು ಬೆಂಬಲ ನೀಡಬೇಕು. ಒಗ್ಗಟ್ಟು ಪ್ರದರ್ಶನಕ್ಕಾಗಿ ಬೆಳಗಾವಿಗೆ ಸರ್ವಪಕ್ಷ ನಿಯೋಗವೊಂದು ಹೋಗಬೇಕು ಎಂದಿದ್ದಾರೆ.

‘ಬೆಳಗಾವಿಯ ಬೆಳವಣಿಗೆಗಳಿಗೆ ಶಿವಸೇನೆಯೂ ತಕ್ಕ ಪ್ರತ್ಯುತ್ತರ ನೀಡಬಲ್ಲದು. ಆದರೆ, ಎರಡು ರಾಜ್ಯಗಳ ಮಧ್ಯೆ ಸಂಘರ್ಷ ಸೃಷ್ಟಿಸಲು ನಾವು ಇಚ್ಛಿಸುವುದಿಲ್ಲ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು’ ಎಂದು ರಾವುತ್‌ ಒತ್ತಾಯಿಸಿದ್ದಾರೆ.

ಮರಾಠಿ ಫಲಕಕ್ಕೆ ಎಂಇಎಸ್ ಬೇಡಿಕೆ (ಬೆಳಗಾವಿ ವರದಿ): ‘ಬೆಳಗಾವಿಯಲ್ಲಿ ಮರಾಠಿ ನಾಮಫಲಕಗಳನ್ನು ಅಳವಡಿಸಲು ಅವಕಾಶ ನೀಡಬೇಕು’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನಾ ಮುಖಂಡರು ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

‘ಮರಾಠಿಯಲ್ಲಿ ಫಲಕಗಳನ್ನು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಶಿವಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಶಿರೋಳಕರ ಅವರ ಕಾರಿನಲ್ಲಿ ಅಳವಡಿಸಿದ್ದ ಮರಾಠಿ ಫಲಕ ಕಿತ್ತೆಸೆದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಎಂಇಎಸ್ ಮುಖಂಡ ಶುಭಂ ಶೇಳಕೆ ಒತ್ತಾಯಿಸಿದರು.

ಈ ನಡುವೆ, ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ನಾಮಫಲಕಗಳಿಗೆ ಮಸಿ ಬಳಿಯುವ ಕೃತ್ಯವನ್ನು ಮುಂದುವರಿಸಿದ್ದಾರೆ.

ಗಡಿಯ ಕಾಗಲ್‌ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಕರ್ನಾಟಕಕ್ಕೆ ಬರುತ್ತಿದ್ದ ಲಾರಿ ಸೇರಿದಂತೆ ಕೆಲವು ಖಾಸಗಿ ವಾಹನಗಳನ್ನು ತಡೆದು ‘ಜೈ ಮಹಾರಾಷ್ಟ್ರ’ ಎಂದು ಸ್ಟಿಕ್ಕರ್ ಅಂಟಿಸಿದ್ದಾರೆ.

ಕೊಲ್ಹಾಪುರಕ್ಕೆ ಬಸ್‌ ಸ್ಥಗಿತ
ಬೆಳಗಾವಿ:
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿಯುವ ಕೃತ್ಯ ಆರಂಭಿಸಿದ್ದರಿಂದ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (ಎನ್‌ಡಬ್ಲ್ಯುಕೆಆರ್‌ಟಿಸಿ) ಅಲ್ಲಿಗೆ ಬಸ್‌ಗಳ ಕಾರ್ಯಾಚರಣೆಯನ್ನು ಶನಿವಾರ ಬೆಳಿಗ್ಗೆಯಿಂದ ಸ್ಥಗಿತಗೊಳಿಸಿದೆ.

ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡದ ನಾಮಫಲಕಗಳಿಗೆ ಮಸಿ ಬಳಿದಿದ್ದರು. ಇದಕ್ಕೆ ಪ್ರತೀಕಾರ ಎನ್ನುವಂತೆ, ಕನ್ನಡಪರ ಹೋರಾಟಗಾರರು ನಗರದ ಹೊರವಲಯದಲ್ಲಿ ಮರಾಠಿ ಫಲಕಗಳಿಗೆ ಮಸಿ ಬಳಿದಿದ್ದರು. ಇದಕ್ಕೆ ಪ್ರತಿಯಾಗಿ ಕೊಲ್ಹಾಪುರ ಬಸ್ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ರಾಜ್ಯದ ಬಸ್‌ಗಳ ಮುಂದಿನ ಗಾಜುಗಳಿಗೆ, ಪೊಲೀಸರ ಸಮ್ಮುಖದಲ್ಲೇ ಮಸಿ ಬಳಿದಿದ್ದಾರೆ. ಇದರಿಂದ, ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

‘ಮುಂಜಾಗ್ರತಾ ಕ್ರಮವಾಗಿ, ಕೊಲ್ಹಾಪುರಕ್ಕೆ ಬಸ್‌ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೊಲ್ಹಾಪುರಕ್ಕೆ ಇಲ್ಲಿಂದ ನಿತ್ಯ 97 ಹಾಗೂ ಅಲ್ಲಿಂದ ಇಲ್ಲಿಗೆ 57 ಬಸ್‌ಗಳು ಸಂಚರಿಸುತ್ತಿದ್ದವು’ ಎಂದು ಎನ್‌ಡಬ್ಲ್ಯುಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಿರುಕುಳ ಖಂಡನೀಯ: ‘ಎರಡು ದಿನಗಳಿಂದ ಮಹಾರಾಷ್ಟ್ರದ ಕೊಲ್ಹಾಪುರ ಹಾಗೂ ಸುತ್ತಮುತ್ತ ಶಿವಸೇನಾದವರು ಕನ್ನಡಿಗರಿಗೆ ಕಿರುಕುಳ ನೀಡುತ್ತಿರುವುದು ಖಂಡನೀಯ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ ಹೇಳಿದ್ದಾರೆ.

‘ನಮ್ಮ ಗೃಹಸಚಿವರು ಮಹಾರಾಷ್ಟ್ರದ ಗೃಹಸಚಿವರನ್ನು ಸಂಪರ್ಕಿಸಿ, ಕನ್ನಡಿಗರು ಹಾಗೂ ಮರಾಠಿ ಭಾಷಿಗರ ನಡುವೆ ಸೌಹಾರ್ದ ವಾತಾವರಣ ಮೂಡಿಸಲು ಶ್ರಮಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಮೋದಿ ಮಧ್ಯಪ್ರವೇಶಕ್ಕೆ ಮನವಿ
‘ಗಡಿ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೋರಿದರು.

‘ಕೊಲ್ಹಾಪುರದಲ್ಲಿ ಶಿವಸೇನಾದ ಕಾರ್ಯಕರ್ತರ ಪುಂಡಾಟಿಕೆ ಮಿತಿ ಮೀರಿದೆ. ಮಿತ್ರಪಕ್ಷಗಳ ಅಸಹಕಾರದಿಂದ ಬೇಸತ್ತಿರುವ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಜನರ ಗಮನ ಬೇರೆಡೆ ಸೆಳೆಯಲು ಗಡಿ ಕ್ಯಾತೆ ತೆಗೆಯುತ್ತಿದ್ದಾರೆ’ ಎಂದು ಅವರು ಅಥಣಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದರು.

ಸಾಸಿವೆ ಕಾಳಷ್ಟೂ ಜಾಗ ಬಿಡೆವು
‘ಮರಾಠಿಗರ ಪುಂಡಾಟಿಕೆ ಸಹಿಸುವುದಿಲ್ಲ. ಸಾಸಿವೆ ಕಾಳಿನಷ್ಟು ಜಾಗವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು. ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದಲ್ಲಿ ಶನಿವಾರ ಮಾತನಾಡಿದ ಅವರು, ‘ನಾಡು–ನುಡಿಯ ವಿಚಾರದಲ್ಲಿ ಪಕ್ಷಭೇದ ಮರೆತು ಹೋರಾಟಕ್ಕೆ ಸಿದ್ಧನಿದ್ದೇನೆ. ಯಾವ ಕಾರಣಕ್ಕೂ ಭೂಮಿ ಬಿಟ್ಟುಕೊಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT