ಭಾನುವಾರ, ಸೆಪ್ಟೆಂಬರ್ 26, 2021
22 °C

ಸೀತಾರಾಮ ಯೆಚೂರಿ ಬರಹ: ಸದನದ ಸುಗಮ ನಿರ್ವಹಣೆ ಆಡಳಿತ ಪಕ್ಷದ್ದೇ ಹೊಣೆ

ಸೀತಾರಾಮ ಯೆಚೂರಿ Updated:

ಅಕ್ಷರ ಗಾತ್ರ : | |

ಸಂಸದೀಯ ಪ್ರಜಾಸತ್ತೆಯಲ್ಲಿ, ಸಂಸತ್ತಿನ ಕಲಾಪ ಸುಲಲಿತವಾಗಿ ನಡೆಯುವಂತೆ ನೋಡಿಕೊಳ್ಳುವ ಮುಖ್ಯ ಹೊಣೆಗಾರಿಕೆ ಆಡಳಿತ ಪಕ್ಷದ್ದು. ಸ್ವಾತಂತ್ರ್ಯ ಬಂದಾಗಿನಿಂದಲೇ ಭಾರತವು ಈ ತತ್ವವನ್ನು ಅನುಸರಿಸಿಕೊಂಡು ಬಂದಿದೆ. ವಿವಾದಾತ್ಮಕ ವಿಚಾರಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಸಭಾಪತಿ ಮತ್ತು ಸ್ಪೀಕರ್‌ ಹಾಗೂ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಸರ್ಕಾರವು ಮಾಡಬೇಕು. ಈ ಹೊಣೆಗಾರಿಕೆಯಲ್ಲಿ ಬಿಜೆಪಿ ವಿಫಲವಾಗಿದೆ. ಈ ವೈಫಲ್ಯವೇ ಈಗ ಸಂಸತ್‌ ಕಲಾಪವು ಸ್ಥಗಿತಗೊಳ್ಳಲು ಕಾರಣ.

ಮೊದಲನೆಯದಾಗಿ, ಬಿಜೆಪಿ ಮುಖ್ಯ ವಿರೋಧ ಪಕ್ಷವಾಗಿದ್ದಾಗ, ಅದರಲ್ಲೂ ಮುಖ್ಯವಾಗಿ 2009–2014ರ ಅವಧಿಯಲ್ಲಿ ಈ ಪಕ್ಷದ ಸಂಸದರು ಸಂಸತ್‌ ಕಲಾಪಕ್ಕೆ ಕೊನೆಯಿಲ್ಲದ ರೀತಿಯಲ್ಲಿ ಅಡ್ಡಿಪಡಿಸಿದ್ದರು. 2ಜಿ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕೆಲವೊಮ್ಮೆ ಸಂಪೂರ್ಣ ಅವಧಿಯೇ ವ್ಯರ್ಥವಾಗುವ ಹಾಗೆ ಮಾಡಿದ್ದರು. ಆಗ ಸಂಸತ್ತಿನಲ್ಲಿ ಈ ಪಕ್ಷದ ನಾಯಕರಾಗಿದ್ದವರು, ನಂತರ ಬಿಜೆಪಿ ಸರ್ಕಾರದಲ್ಲಿ ಹಣಕಾಸು ಮತ್ತು ವಿದೇಶಾಂಗದಂತಹ ಪ್ರಮುಖ ಖಾತೆಗಳ ಸಚಿವರಾದರು. ‘ಸಂಸತ್‌ ಕಲಾಪಕ್ಕೆ ಅಡ್ಡಿಪಡಿಸುವುದು ಕೂಡ ಪ್ರಜಾಸತ್ತಾತ್ಮಕ ಹಕ್ಕು’ ಎಂದು ಸಂದೇಹಕ್ಕೆ ಎಡೆ ಇಲ್ಲದ ರೀತಿಯಲ್ಲಿ ಇವರು ಹೇಳಿದ್ದರು. ಇದು ಭಿನ್ನಮತದ ಪ್ರಜಾಸತ್ತಾತ್ಮಕವಾದ ಅಭಿವ್ಯಕ್ತಿ ಎಂದಿದ್ದರು. ಇದು ದಾಖಲೆಯಲ್ಲಿ ಇದೆ. ಹಾಗಾಗಿ, ಕಲಾಪಕ್ಕೆ ಅಡ್ಡಿಪಡಿಸುವುದು ಸಂಸದೀಯ ಪ್ರಜಾಸತ್ತೆಯಲ್ಲಿ ಅಸಹಜ ಏನೂ ಅಲ್ಲ ಹಾಗೂ ಇದು ಆಕ್ಷೇಪಾರ್ಹವೂ ಅಲ್ಲ. ಎರಡನೆಯದಾಗಿ, ಸದನ ನಡೆಸುವುದು ಸರ್ಕಾರದ ಹೊಣೆ ಎಂಬ ನಿಲುವನ್ನು ಬಿಜೆಪಿ ಆಗ ಹೊಂದಿತ್ತು. ಈ ಎರಡೂ ವಿಚಾರಗಳಲ್ಲಿಯೂ ಬಿಜೆಪಿಯದ್ದು ಈಗ ಆತ್ಮವಂಚನೆ.

ಮೂರನೆಯದಾಗಿ, ನರೇಂದ್ರ ಮೋದಿ ಅವರು ಪ್ರತಿಪಾದಿಸುತ್ತಿರುವ ಮತ್ತು ಆರ್‌ಎಸ್‌ಎಸ್‌ನ ಧರ್ಮಾಂಧ ಹಿಂದೂ ಭಾರತ ಎಂಬ ಪರಿಕಲ್ಪನೆಯೇ ಆಗಿರುವ ‘ನವ ಭಾರತ’ದ ಸ್ಥಾಪನೆಗೆ ಸಂಸತ್ತು ಮತ್ತು ಸಂಸತ್ತಿನ ಎಲ್ಲ ಸಂಸ್ಥೆಗಳನ್ನು ನಿರ್ನಾಮಗೊಳಿಸಬೇಕಿದೆ ಎಂಬುದು ಬಿಜೆಪಿಯ ನಿಲುವು. ಅದರ ಆರಂಭವನ್ನು ನಾವು ಕಂಡಿದ್ದೇವೆ. ಸ್ವತಂತ್ರ ನ್ಯಾಯಾಂಗ, ಚುನಾವಣಾ ಆಯೋಗ, ಮಾನವ ಹಕ್ಕುಗಳ ಆಯೋಗ ಇತ್ಯಾದಿಗಳ ಮೇಲೆ ಅವರು ಹೇಗೆ ಪ್ರಭಾವ ಬೀರುತ್ತಿದ್ದಾರೆ ಎಂಬುದನ್ನೂ ನೋಡುತ್ತಿದ್ದೇವೆ. ಸಂಸತ್‌ ಕಲಾಪ ನಡೆಯದಂತೆ ಮಾಡುವುದು ದೊಡ್ಡ ಕಾರ್ಯತಂತ್ರದ ಭಾಗ. ಭಾರತದ ಸಂವಿಧಾನ ಮತ್ತು ಸಂಸದೀಯ ಪ್ರಜಾತಂತ್ರವನ್ನು ಧ್ವಂಸ ಮಾಡುವುದು ಇದರ ಗುರಿ. 

ಪೆಗಾಸಸ್‌ ಕುತಂತ್ರಾಂಶ ಬಳಸಿಕೊಂಡು ನಡೆಸಿರುವ ಬೇಹುಗಾರಿಕೆಯು ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆ ಮಾತ್ರ ಅಲ್ಲ. ಅದಕ್ಕಿಂತಲೂ ಬಹಳ ಗಾಢವಾದ ವಿಚಾರ ಅದು. ಬೇಹುಗಾರಿಕೆಗೆ ಒಳಗಾಗಿದ್ದಾರೆ ಎಂದು ಹೇಳಲಾದ ವ್ಯಕ್ತಿಗಳ ಪಟ್ಟಿಯಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು, ನ್ಯಾಯಾಧೀಶರು, ಚುನಾವಣಾ ಆಯೋಗದ ನಿವೃತ್ತ ಆಯುಕ್ತರು, ಸಿಬಿಐನ ಮಾಜಿ ನಿರ್ದೇಶಕರು, ಅಧಿಕಾರಿಗಳು, ಹಿರಿಯ ರಾಜಕಾರಣಿಗಳು ಮತ್ತು ಪತ್ರಕರ್ತರಿದ್ದಾರೆ. ಇವರೆಲ್ಲರೂ ಸರ್ಕಾರದ ಜತೆಗೆ ವಿವಿಧ ವಿಷಯಗಳಲ್ಲಿ ಭಿನ್ನಮತ ಹೊಂದಿದ್ದವರು. 

ಪೆಗಾಸಸ್‌ ಬೇಹುಗಾರಿಕೆಯು ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆಯ ಜತೆಗೆ, ಸಂಸದೀಯ ಪ್ರಜಾಸತ್ತೆಯ ಎಲ್ಲ ಸಂಸ್ಥೆಗಳ ಮೇಲೂ ನಡೆದ ದಾಳಿ. ನ್ಯಾಯಾಂಗ, ಚುನಾವಣಾ ಆಯೋಗ, ಸಿಬಿಐ, ವಿರೋಧ ಪಕ್ಷಗಳು, ಮಾಧ್ಯಮ ಎಲ್ಲದರ ಮೇಲೆಯೂ ಬೇಹುಗಾರಿಕೆ ನಡೆಸಲಾಗಿದೆ. ಈ ಗೂಢಚರ್ಯೆಯ ಮೂಲಕ ಪ್ರಜಾಪ್ರಭುತ್ವದ ಈ ಎಲ್ಲ ಸಂಸ್ಥೆಗಳನ್ನು ನಾಶ ಮಾಡಲು ಯತ್ನಿಸಲಾಗಿದೆ. ಪೆಗಾಸಸ್‌ ಅನ್ನು ಕಣ್ಗಾವಲಿಗೆ ಮಾತ್ರ ಬಳಸಿಕೊಂಡಿದ್ದಲ್ಲ, ಮೊದಲೇ ಪ‍್ರಸ್ತಾಪಿಸಿದ ಹಾಗೆ, ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ನಾಶಗೊಳಿಸುವ ಯತ್ನ ಇದು. ಹಾಗಾಗಿ, ಸ್ವತಂತ್ರವಾದ, ಉನ್ನತಾಧಿಕಾರದ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯ
ತನಿಖೆಯು ಅತ್ಯಗತ್ಯ. ಹಾಗಾದಾಗ ಮಾತ್ರ ಸತ್ಯ ಹೊರಗೆ ಬರುತ್ತದೆ. 

ಪೆಗಾಸಸ್‌ ಪ್ರಕರಣವನ್ನು ಚರ್ಚಾರ್ಹ ವಿಚಾರವೇ ಅಲ್ಲ ಎಂದು ಸರ್ಕಾರ ಏಕೆ ಹೇಳುತ್ತಿದೆ? ಸರ್ಕಾರ ಹೀಗೆ ಹೇಳುತ್ತಿರುವುದು ಹಾಸ್ಯಾಸ್ಪದ. ಫ್ರಾನ್ಸ್, ಮೆಕ್ಸಿಕೊ, ಮೊರಕ್ಕೊ ಸರ್ಕಾರಗಳು ತನಿಖೆಗೆ ಆದೇಶಿಸಿವೆ. ಇಸ್ರೇಲ್‌ ಕೂಡ ತನಿಖೆಗೆ ಆದೇಶ ನೀಡಿದೆ. ಪೆಗಾಸಸ್‌ ಕುತಂತ್ರಾಂಶವನ್ನು ‘ಪ್ರಮಾಣೀಕೃತ ಸರ್ಕಾರ’ಗಳಿಗೆ ಮಾತ್ರ ಮಾರಾಟ ಮಾಡಿರುವುದಾಗಿ ‍ಪೆಗಾಸಸ್‌ ಕುತಂತ್ರಾಂಶವನ್ನು ತಯಾರಿಸುವ ಎನ್‌ಎಸ್‌ಒ ಗ್ರೂಪ್‌ ಹೇಳಿದೆ. ಭಾರತ ಸರ್ಕಾರ ಮಾತ್ರ ತನಿಖೆಗೆ ಏಕೆ ಹಿಂಜರಿಯುತ್ತಿದೆ? ಏನನ್ನೂ ಮುಚ್ಚಿಡುತ್ತಿಲ್ಲ ಎಂದಾದರೆ ಸರ್ಕಾರಕ್ಕೆ ಹಿಂಜರಿಕೆ ಏಕೆ?

ಹೆಚ್ಚು ಮುಖ್ಯ ವಿಷಯ ಏನೆಂದರೆ, ಮೋದಿ ನೇತೃತ್ವದ ಸರ್ಕಾರ ಅಥವಾ ಅದರ ಯಾವುದಾದರೂ ಸಂಸ್ಥೆಗಳು ಇಸ್ರೇಲ್‌ನ ಎನ್‌ಎಸ್‌ಒ ಕಂಪನಿ ಜತೆ ಸಂಪರ್ಕ ಹೊಂದಿವೆಯೇ, ಆ ಸಂಸ್ಥೆ ತಯಾರಿಸುತ್ತಿರುವ ಸೇನಾ ಬಳಕೆಯ ಕುತಂತ್ರಾಂಶವನ್ನು ಖರೀದಿಸಿವೆಯೇ? ಇದಕ್ಕೆ ‘ಹೌದು ಅಥವಾ ಅಲ್ಲ’ ಎಂಬ ಉತ್ತರ ಕೊಟ್ಟರೆ ಆಯಿತು. ಖರೀದಿಸಿಲ್ಲ ಎಂದಾದರೆ ‘ಇಲ್ಲ’ ಎಂದರೆ ಮುಗಿಯಿತಲ್ಲವೇ? ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರವು ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸುತ್ತಿದೆ. ಈ ನಿರಾಕರಣೆಯೇ ಸರ್ಕಾರ ಕುತಂತ್ರಾಂಶವನ್ನು ಬಳಸಿಕೊಂಡಿದೆ ಮತ್ತು ಆ ಮೂಲಕ ಭಾರತದ ಸಾರ್ವಭೌಮ, ಸಾಂವಿಧಾನಿಕ ಮತ್ತು ಸಂಸದೀಯ ಪ್ರಜಾಸತ್ತೆಯನ್ನು ದಮನಿಸಿದೆ ಹಾಗೂ ನಾಶಪಡಿಸಲು ಯತ್ನಿಸಿದೆ ಎಂಬುದನ್ನು ದೃಢಪಡಿಸುತ್ತದೆ.

ರೈತರ ಸಮಸ್ಯೆಗಳು ಮತ್ತು ಇತರ ವಿಚಾರಗಳ ಚರ್ಚೆಗೆ ವಿರೋಧ ಪಕ್ಷಗಳು ಅಡ್ಡಿ ಮಾಡುತ್ತಿವೆ ಎಂದು ಸರ್ಕಾರ ಹೇಳುತ್ತಿದೆ. ಕಳೆದ ಅಧಿವೇಶನದಲ್ಲಿ ರೈತರ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರವೇ ಅವಕಾಶ ಕೊಟ್ಟಿರಲಿಲ್ಲ. ಸರ್ಕಾರ ಈಗ ತನ್ನ ನಿಲುವು ಬದಲಿಸಿಕೊಂಡಿದ್ದು ಏಕೆ? ಇದು ನೆಪ ಅಷ್ಟೇ. ತಾನು ನಡೆಸಿರುವ, ಸ್ವತಂತ್ರ ಭಾರತದ ಅತ್ಯಂತ ನಾಚಿಕೆಗೇಡಿನ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಇದನ್ನು ಸರ್ಕಾರ ಬಳಸಿಕೊಳ್ಳುತ್ತಿದೆ.

ಎಲ್ಲ ವಿಚಾರಗಳಲ್ಲಿಯೂ ಚರ್ಚೆ ನಡೆಸಲು ಸರ್ಕಾರ ಒಪ್ಪಬಹುದಲ್ಲವೇ? ಪೆಗಾಸಸ್‌ ಜತೆಗೆ, ರೈತರ ಸಮಸ್ಯೆಗಳು, ಆರ್ಥಿಕತೆಯ ಸಮಸ್ಯೆಗಳು ಎಲ್ಲವನ್ನೂ ಚರ್ಚೆಗೆ ಒಳಪಡಿಸಬಹುದಲ್ಲವೇ? ಪೆಗಾಸಸ್‌ ವಿಚಾರದ ಚರ್ಚೆ ಮಾತ್ರ ಏಕೆ ಬೇಡ? ಏಕೆಂದರೆ, ಈ ವಿಚಾರದಲ್ಲಿ ಸರ್ಕಾರದ ಬಳಿ ಉತ್ತರ ಇಲ್ಲ. ಕಣ್ಗಾವಲಿಗೆ ಒಳಗಾದವರ ಪಟ್ಟಿಯಲ್ಲಿ ನಿವೃತ್ತ ನ್ಯಾಯಮೂರ್ತಿಯೊಬ್ಬರ ಹೆಸರು ಇದೆ. ತನಿಖೆ ನಡೆದರೆ ಇಂತಹ ಇನ್ನಷ್ಟು ಹೆಸರುಗಳು ಬಹಿರಂಗ ಆಗುತ್ತವೆ. ಭಾರತವು ಪ್ರಜಾಪ್ರಭುತ್ವವಾಗಿ ಉಳಿದಿಲ್ಲ, ಇದೊಂದು ಕಣ್ಗಾವಲು ದೇಶ ಎಂಬುದನ್ನೂ ಅದು ಹೇಳುತ್ತದೆ.

ಚರ್ಚೆಯೇ ಇಲ್ಲದೆ ಮಸೂದೆಗಳನ್ನು ಅಂಗೀಕರಿಸಿರುವುದು ಕೂಡ ಅನೈತಿಕ, ಅಸಂಸದೀಯ ಮತ್ತು ನಿರಂಕುಶವಾದುದು. ಈ ರೀತಿಯಲ್ಲಿ ಹಿಂದೆ ಎಂದೂ ಆಗಿರಲಿಲ್ಲ. ಮಹತ್ವದ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಸಂಸತ್ತು ಸುಗಮವಾಗಿ ನಡೆಯುತ್ತಿಲ್ಲ ಎಂಬುದನ್ನು ಸರ್ಕಾರವು ಒಂದು ಅವಕಾಶವಾಗಿ ಬಳಸಿಕೊಳ್ಳುತ್ತಿದೆ. ಈ ಹಿಂದೆಯೂ ಮಸೂದೆಗಳು ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಳಪಡುವುದನ್ನು, ವ್ಯವಸ್ಥಿತ ಚರ್ಚೆ ನಡೆಯುವುದನ್ನು ಸರ್ಕಾರ ಬಯಸಿರಲಿಲ್ಲ. ಸರ್ಕಾರದ ಧೋರಣೆಯೇ ಇದು. ಸಂಸತ್ತಿನ ಸದಸ್ಯನಾಗಿದ್ದಾಗ ನಾನು ಹೇಳಿದಂತೆ, ಇದು ಪ್ರಜಾಪ್ರಭುತ್ವ ಅಲ್ಲ, ಇದು ಬಿಜೆಪಿಯ ಬಹುಮತದ ನಿರಂಕುಶಾಧಿಕಾರ.

ಲೇಖಕ: ಸಿಪಿಎಂ ಪ್ರಧಾನ ಕಾರ್ಯದರ್ಶಿ

ನಿರೂಪಣೆ: ಶೆಮಿನ್‌ ಜಾಯ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು