ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ತತ್ವದಲ್ಲಿ ನಂಬಿಕೆಯುಳ್ಳ ಸರ್ಕಾರ ರಚನೆಯೇ ನಮ್ಮ ಗುರಿ: ಸೋನಿಯಾ ಗಾಂಧಿ

19 ವಿರೋಧ ಪಕ್ಷಗಳ ನಾಯಕರೊಂದಿಗೆ ವರ್ಚುವಲ್‌ ಸಭೆ
Last Updated 20 ಆಗಸ್ಟ್ 2021, 15:16 IST
ಅಕ್ಷರ ಗಾತ್ರ

ನವದೆಹಲಿ: ‘2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗಾಗಿ ವ್ಯವಸ್ಥಿತವಾಗಿ ಸಿದ್ಧತೆ ಆರಂಭಿಸಬೇಕು. ಸಂವಿಧಾನದ ಆಶಯ–ತತ್ವಗಳಲ್ಲಿ ನಂಬಿಕೆ ಹೊಂದಿರುವಂತಹ ಸರ್ಕಾರ ರಚನೆಯೇ ನಮ್ಮ ಗುರಿಯಾಗಿರಬೇಕು’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಹೇಳಿದರು.

ಅವರು 19 ವಿರೋಧ ಪಕ್ಷಗಳ ಮುಖಂಡರೊಂದಿಗೆ ಶುಕ್ರವಾರ ನಡೆಸಿದ ವರ್ಚುವಲ್‌ ಸಭೆಯಲ್ಲಿ ಮಾತನಾಡಿದರು. ಕೆಲವು ರಾಜ್ಯಗಳಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವುದು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕೈಗೊಳ್ಳಬೇಕಾದ ಹೋರಾಟಕ್ಕೆ ಸಂಬಂಧಿಸಿ ವಿರೋಧ ಪಕ್ಷಗಳಲ್ಲಿ ಒಮ್ಮತ ಮೂಡಿಸುವುದು ಸಹ ಸಭೆಯ ಉದ್ದೇಶವಾಗಿತ್ತು ಎಂದು ಮೂಲಗಳು ಹೇಳಿವೆ.

‘ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಸರ್ಕಾರ ರಚಿಸುವುದು ಸವಾಲೇ ಆದರೂ ನಾವೆಲ್ಲಾ ಒಗ್ಗಟ್ಟಿನಿಂದ ಹೋರಾಡಿದರೆ ಇದನ್ನು ಸಾಧಿಸಬಹುದು’ ಎಂದು ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.

‘ನಮಗೆ ನಮ್ಮವೇ ಆದ ಬಾಧ್ಯತೆಗಳು, ಮಿತಿಗಳು ಇವೆ. ಆದರೆ, ರಾಷ್ಟ್ರದ ಹಿತದೃಷ್ಟಿಯಿಂದ ನಾವೆಲ್ಲಾ ಇಂತಹ ಮಿತಿಗಳನ್ನು ಮೀರಿ ಒಂದುಗೂಡುವುದು ಅಗತ್ಯವಿದೆ. ಅಂಥ ಸಮಯ ಈಗ ಬಂದಿದೆ’ ಎಂದು ಪ್ರತಿಪಾದಿಸಿದರು.

ದೇಶ ಎದುರಿಸುತ್ತಿರುವ ಇತರ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಮೂಲಗಳು ಹೇಳಿವೆ.

ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪಾಲ್ಗೊಂಡಿದ್ದರು.

ಜೆಎಂಎಂ, ಸಿಪಿಐ, ಸಿಪಿಎಂ, ಎನ್‌ಸಿ, ಆರ್‌ಜೆಡಿ, ಎಐಯುಡಿಎಫ್‌, ವಿಸಿಕೆ, ಎಲ್‌ಜೆಡಿ, ಜೆಡಿಎಸ್‌, ಆರ್‌ಎಲ್‌ಡಿ, ಆರ್‌ಎಸ್‌ಪಿ, ಕೇರಳ ಕಾಂಗ್ರೆಸ್‌ (ಮಣಿ), ಪಿಡಿಪಿ ಹಾಗೂ ಐಯುಎಂಎಲ್‌ ಮುಖಂಡರು ಸಹ ಸಭೆಯಲ್ಲಿ ಭಾಗವಹಿಸಿದ್ದರು.

ಎಎಪಿ, ಬಿಎಸ್‌ಪಿ ಹಾಗೂ ಸಮಾಜವಾದಿ ಪಾರ್ಟಿ ಮುಖಂಡರು ಪಾಲ್ಗೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT