ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಪ್ರೇಮದ ಪ್ರಮಾಣಪತ್ರ ನೀಡುವರ ಬಣ್ಣ ಬಯಲು: ಸರ್ಕಾರದ ವಿರುದ್ಧ ಸೋನಿಯಾ ವಾಗ್ದಾಳಿ

Last Updated 22 ಜನವರಿ 2021, 19:30 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಮುಂಬರುವ ಬಜೆಟ್‌ ಅಧಿವೇಶನ
ದಲ್ಲಿ ಕಾಂಗ್ರೆಸ್‌ ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಕಟ್ಟಿಹಾಕಲುವ ಪ್ರಯತ್ನ ಮಾಡಲಿದೆ ಎಂಬ ಸೂಚನೆಯನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರವಾರ ನೀಡಿದ್ದಾರೆ.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯವರ್ಚುವಲ್‌ ಮಾಧ್ಯಮದಲ್ಲಿ ನಡೆದ ಸಭೆಯಲ್ಲಿ ಸೋನಿಯಾ ಮಾತನಾಡಿದರು.

ಸರ್ಕಾರವು ಕೋವಿಡ್‌–19 ಹಾಗೂ ಅರ್ಥ ವ್ಯವಸ್ಥೆಯನ್ನು ನಿರ್ವಹಿಸಿದ ರೀತಿ, ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಮಾಡಿಕೊಂಡಿರುವ ಹೊಂದಾಣಿಕೆ, ರೈತರ ಪ್ರತಿಭಟನೆ ಹಾಗೂ ಖಾಸಗೀಕರಣ ನೀತಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಭಟನಾನಿರತ ರೈತರ ಜತೆಗೆ ಕೃಷಿ ಸಚಿವರು ನಡೆಸಿದ 11 ಸುತ್ತುಗಳ ಮಾತುಕತೆಯನ್ನು ‘ಅಪಹಾಸ್ಯ’ ಎಂದು ಬಣ್ಣಿಸಿದರು.

ಮಾಜಿ ಪ್ರಧಾನಿ ಮನಮೋಹನ ಸಿಂಗ್‌, ರಾಹುಲ್‌ ಗಾಂಧಿ, ಕಾಂಗ್ರೆಸ್‌ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ಉಸ್ತುವಾರಿ ವಹಿಸಿದ್ದ ನಾಯಕರುಸಭೆಯಲ್ಲಿ ಪಾಲ್ಗೊಂಡಿದ್ದರು.

ಪತ್ರಕರ್ತ ಅರ್ನಬ್‌ ಗೋಸ್ವಾಮಿ ನಡೆಸಿದ್ದಾರೆ ಎನ್ನಲಾದ ವಾಟ್ಸ್‌ಆ್ಯಪ್‌ ಸಂವಾದವನ್ನು ಉಲ್ಲೇಖಿಸಿದ ಸೋನಿಯಾ, ‘ಇತರರಿಗೆ ದೇಶಪ್ರೇಮ, ರಾಷ್ಟ್ರೀಯತೆಯ ಪ್ರಮಾಣಪತ್ರ ನೀಡುವವರ ಬಣ್ಣ ಈಗ ಬಯಲಾಗಿದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದಿರುವ ಈ ಪ್ರಕರಣದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ಕಾಲಮಿತಿಯೊಳಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ದರು.

‘ದೇಶದ ಆರ್ಥಿಕತೆಯನ್ನು ನಿರ್ವಹಿಸಲು ಸರ್ಕಾರ ವಿಫಲವಾಗಿದ್ದ ರಿಂದ ಮತ್ತು ನೆರವಿನ ಹಸ್ತ ಚಾಚಲು ಸರ್ಕಾರ ನಿರಾಕರಿಸಿದ್ದರಿಂದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳು ನಾಶವಾಗಿವೆ. ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ದಿಂದಾಗಿ ನಾಗರಿಕರು ಹಿಂದೆಂದೂ ಕೇಳರಿಯದ ಸಂಕಷ್ಟಗಳನ್ನು ಅನುಭವಿಸಬೇಕಾಯಿತು. ಜನರಲ್ಲಿ ಉಂಟಾಗಿರುವ ಭಯ ದೂರವಾಗಲು ವರ್ಷಗಳೇ ಬೇಕಾಗುತ್ತವೆ ಎಂದರು.

‘ಸಾರ್ವಜನಿಕ ಹಣವನ್ನು ಅತಿ ಎಚ್ಚರಿಕೆಯಿಂದ ವೆಚ್ಚ ಮಾಡ ಬೇಕಾಗಿರುವ ಈ ಸಂದರ್ಭದಲ್ಲಿ, ವೈಯ ಕ್ತಿಕ ಹಿತಾಸಕ್ತಿಯ ಯೋಜನೆಗಳಿಗೆ ಭಾರಿ ಪ್ರಮಾಣದ ಹಣ ವ್ಯಯಿಸುತ್ತಿರುವುದು ಅತ್ಯಂತ ನೋವಿನ ವಿಚಾರ’ ಎಂದು ಸೆಂಟ್ರಲ್‌ ವಿಸ್ತಾ ಯೋಜನೆಯನ್ನು ಉಲ್ಲೇಖಿಸದೆಯೇ ಹೇಳಿದರು.

ಖಾಸಗೀಕರಣದ ವಿಚಾರವನ್ನು ಪ್ರಸ್ತಾಪಿಸುತ್ತಾ, ‘ಆತಂಕಕ್ಕೆ ಒಳಗಾದಂತೆ ಸರ್ಕಾರವು ಖಾಸಗೀಕರಣವನ್ನು ನಡೆಸುತ್ತಿದೆ. ಇದನ್ನು ಸ್ವೀಕರಿಸಲು ಕಾಂಗ್ರೆಸ್‌ ಸಿದ್ಧವಿಲ್ಲ’ ಎಂದು ಸೋನಿಯಾ ಹೇಳಿದರು.

ಕಾಂಗ್ರೆಸ್‌ಗೆ ಜೂನ್‌ನಲ್ಲಿ ಚುನಾಯಿತ ಅಧ್ಯಕ್ಷರು

ಪಕ್ಷದ ಅಧ್ಯಕ್ಷರನ್ನು ಜೂನ್‌ನಲ್ಲಿ ಚುನಾಯಿಸಲಾಗುವುದು ಎಂದು ಕಾಂಗ್ರೆಸ್‌ ಶುಕ್ರವಾರ ಹೇಳಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಪಕ್ಷದ ಚುನಾವಣೆಯ ವೇಳಾಪಟ್ಟಿ ನಿಗದಿ ವಿಚಾರದಲ್ಲಿ ಮುಖಂಡರ ನಡುವೆ ಸಭೆಯಲ್ಲಿ ಮಾತಿನ ಚಕಮಕಿಯೂ ನಡೆದಿದೆ.

ಸುದೀರ್ಘವಾಗಿ ನಡೆದ ಸಭೆಯಲ್ಲಿ ಪಕ್ಷದ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ ಮಿಸ್ತ್ರಿ ಅವರು ಮೇಯಲ್ಲಿ ಚುನಾವಣೆ ನಡೆಸುವ ವೇಳಾಪಟ್ಟಿಯನ್ನು ಮಂಡಿಸಿದರು. ಆದರೆ, ಏಪ್ರಿಲ್‌–ಮೇ ತಿಂಗಳಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಚುನಾವಣೆಯನ್ನು ಮುಂದೂಡಬೇಕು ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೆಲವು ಮುಖಂಡರು ಕೋರಿದರು.

ಪಕ್ಷ ಮತ್ತು ಸಿಡಬ್ಲ್ಯುಸಿಯ ಹುದ್ದೆಗಳಿಗೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದ 23 ಮುಖಂಡರ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಹರಿಹಾಯ್ದರು. ಇದು ವಾಕ್ಸಮರಕ್ಕೆ ಕಾರಣವಾಯಿತು. ಹಿರಿಯ ಮುಖಂಡ ಆನಂದ್‌ ಶರ್ಮಾ ಅವರು ಗೆಹ್ಲೋಟ್‌ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದ ಮುಖಂಡರನ್ನು ತೆಗಳುವುದು ಒಂದು ಪದ್ಧತಿಯೇ ಆಗಿಬಿಟ್ಟಿದೆ. ಪತ್ರ ಬರೆದವರಲ್ಲಿ ಯಾರು ಕೂಡ ಸೋನಿಯಾ ಮತ್ತು ರಾಹುಲ್‌ ಗಾಂಧಿ ನಾಯಕತ್ವವನ್ನು ಪ್ರಶ್ನಿಸಿಲ್ಲ ಎಂದರು.

ಚುನಾವಣೆಯ ವಿಚಾರವನ್ನು ಪಕ್ಷದ ಅಧ್ಯಕ್ಷರು ಅಂತಿಮಗೊಳಿಸಿದರೆ, ದೇಶವನ್ನು ಕಾಡುತ್ತಿರುವ ಪ್ರಮುಖ ವಿಚಾರಗಳತ್ತ ಗಮನ ಹರಿಸಬಹುದು ಎಂದು ಹೇಳುವ ಮೂಲಕ ರಾಹುಲ್‌ ಮಧ್ಯಪ್ರವೇಶಿಸಿದರು.

ವಿಧಾನಸಭೆ ಚುನಾವಣೆಯ ನಡುವಲ್ಲಿ ಪಕ್ಷದ ಚುನಾವಣೆ ಬೇಡ ಎಂದು ಎಲ್ಲ ಮುಖಂಡರು ಒತ್ತಾಯಿಸಿದ ಕಾರಣ, ಚುನಾವಣೆಯನ್ನು ಜೂನ್‌ನಲ್ಲಿ ನಡೆಸಲು ನಿರ್ಧರಿಸಲಾಯಿತು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

ರಾಹುಲ್ ಅವರು ಲೋಕಸಭಾ ಚುನಾವಣೆಯ ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ 2019ರಲ್ಲಿ ರಾಜೀನಾಮೆ ನೀಡಿದ್ದರು. ಅದರ ಬಳಿಕ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರು ಇಲ್ಲ. ಸೋನಿಯಾ ಅವರು 2019ರ ಆಗಸ್ಟ್‌ನಲ್ಲಿ ಮಧ್ಯಂತರ ಅವಧಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ತಮ್ಮ ಅನಾರೋಗ್ಯದ ಕಾರಣ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಅವರು ಕೋರಿದ್ದಾರೆ.

ಸಭೆಯ ನಿರ್ಣಯಗಳು

lಪತ್ರಕರ್ತ ಅರ್ನಬ್‌ ಗೋಸ್ವಾಮಿ ನಡೆಸಿದ್ದಾರೆ ಎನ್ನಲಾದ ವಾಟ್ಸ್‌ಆ್ಯಪ್‌ ಸಂವಾದವನ್ನು ಕುರಿತು ಜಂಟಿ ಸಂಸದೀಯ ಸಮಿತಿಯಿಂದ ಕಾಲಮಿತಿಯ ತನಿಖೆ ನಡೆಸಬೇಕು

lಪ್ರತಿಯೊಬ್ಬರಿಗೂ ಕೋವಿಡ್‌–19 ಲಸಿಕೆಯನ್ನು ಉಚಿತವಾಗಿ ನೀಡಬೇಕು

lಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT