ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿ ಮಾಡಲು ಸಾಧ್ಯವಾಗದ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಹೀಗೆ ಮಾಡಿ...

Last Updated 7 ಮಾರ್ಚ್ 2021, 4:48 IST
ಅಕ್ಷರ ಗಾತ್ರ

ನವದೆಹಲಿ: ಕೆಲವು ಕಾರಣಗಳಿಂದಾಗಿ ಕೊ–ವಿನ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಮಾನದಂಡ ಸಿದ್ಧಪಡಿಸಿದೆ.

ಈ ಕುರಿತು ದೆಹಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾರ್ಚ್ 5ರಂದು ಆದೇಶ ಹೊರಡಿಸಿದ್ದಾರೆ

ಲಸಿಕೆ ಪಡೆಯಲು ಏನು ಮಾಡಬೇಕು?

ಲಸಿಕೆ ನೀಡಿಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಕಾರ್ಯಕರ್ತರಾದರೆ ಅಲ್ಲಿನ ವೈದ್ಯಕೀಯ ಅಧೀಕ್ಷಕರು ಅಥವಾ ಉಸ್ತುವಾರಿ ವಹಿಸಿರುವವರು ಪ್ರಮಾಣೀಕರಿಸಿದ ಬಳಿಕ ಅಲ್ಲಿಯೇ ಲಸಿಕೆ ಪಡೆಯಬಹುದು. ನೋಂದಣಿ ಮಾಡಿರುವ ಫಲಾನುಭವಿಗಳಿಗೆ ನೀಡಿದ ಬಳಿಕ ಇವರಿಗೆ ಲಸಿಕೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಲಸಿಕೆ ನೀಡಿಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸದ ಇತರ ಆರೋಗ್ಯ ಕಾರ್ಯಕರ್ತರಿಗೂ ಗೊತ್ತುಪಡಿಸಿದ ಕೇಂದ್ರಗಳಲ್ಲಿ ಲಸಿಕೆ ನೀಡಬಹುದು. ಆದರೆ ಅವರು ಆರೋಗ್ಯ ಕಾರ್ಯಕರ್ತರಾಗಿದ್ದಾರೆ ಎಂಬುದಕ್ಕೆ ನಿಗದಿತ ನಮೂನೆಯಲ್ಲಿ ಪುರಾವೆ ಒದಗಿಸಬೇಕು. ಇದು ಆಯಾ ಆರೋಗ್ಯ ಕೇಂದ್ರದ ಉಸ್ತುವಾರಿಯ ಸಹಿ ಒಳಗೊಂಡಿರಬೇಕು.

ಸ್ವತಂತ್ರವಾಗಿ ವೈದ್ಯಕೀಯ ವೃತ್ತಿ ನಡೆಸುವವರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ತಮ್ಮ ಎಂಸಿಐ/ಡಿಎಂಸಿಐ ಸಂಬಂಧಿತ ನೋಂದಣಿ ದಾಖಲೆ ತೋರಿಸಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಖಾಸಗಿ ಸಂಸ್ಥೆಗಳ, ಆಸ್ಪತ್ರೆಗಳ, ಕ್ಲಿನಿಕ್‌ಗಳ ಸಿಬ್ಬಂದಿ ಅವರು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ನೀಡಿರುವ ಪ್ರಮಾಣಪತ್ರ (ಸರ್ಕಾರವು ನಿಗದಿಪಡಿಸಿರುವ ನಮೂನೆಯಲ್ಲಿರಬೇಕು) ತೋರಿಸಿ ಲಸಿಕೆ ಪಡೆಯಬಹುದು.

ಶನಿವಾರ ಒಂದೇ ದಿನ ದೆಹಲಿಯಾದ್ಯಂತ 33,000 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಈವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಲಸಿಕೆ ನೀಡಿದ ದಿನವೊಂದರ ಗರಿಷ್ಠ ಸಂಖ್ಯೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ 7,132 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 3,769 ಮುಂಚೂಣಿ ಕಾರ್ಯಕರ್ತರು ಮತ್ತು 2,274 ಆರೋಗ್ಯ ಕಾರ್ಯಕರ್ತರಿಗೂ ಲಸಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT