ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ತೆಲಂಗಾಣ ಸಿಎಂ ಕೆಸಿಆರ್, ಪ್ರಶಾಂತ್‌ ಕಿಶೋರ್‌ ಮಾತುಕತೆ

Last Updated 24 ಏಪ್ರಿಲ್ 2022, 16:30 IST
ಅಕ್ಷರ ಗಾತ್ರ

ಹೈದರಾಬಾದ್‌: ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಕಾಂಗ್ರೆಸ್‌ಗೆ ಸೇರುವ ಬಗ್ಗೆ ಊಹಾಪೋಹಗಳು ಎದ್ದಿದ್ದು, ಅದರ ಬೆನ್ನಲ್ಲೇ ಪ್ರಶಾಂತ್ ಟಿಆರ್‌ಎಸ್‌ ಅಧ್ಯಕ್ಷ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಶನಿವಾರ ಕೆ.ಚಂದ್ರಶೇಖರ್‌ ರಾವ್‌ (ಕೆಸಿಆರ್‌) ಅವರನ್ನು ಪ್ರಶಾಂತ್‌ ಭೇಟಿ ಮಾಡಿದ್ದು, ಭಾನುವಾರವೂ ಅವರೊಂದಿಗೆ ಮಾತುಕತೆ ಮುಂದುವರಿಸಿರುವ ಬಗ್ಗೆ ಪಕ್ಷದ ಮೂಲಗಳಿಂದ ತಿಳಿದು ಬಂದಿರುವುದಾಗಿ ಪಿಟಿಐ ವರದಿ ಮಾಡಿದೆ.

ಪ್ರಶಾಂತ್‌ ಮುಖ್ಯಸ್ಥರಾಗಿದ್ದ ಇಂಡಿಯನ್‌ ಪೊಲಿಟಿಕಲ್‌ ಆ್ಯಕ್ಷನ್‌ ಕಮಿಟಿಯು (ಐ–ಪ್ಯಾಕ್‌) ಟಿಆರ್‌ಎಸ್‌ನೊಂದಿಗೆ ಅಧಿಕೃತವಾಗಿ ಕಾರ್ಯಾಚರಿಸುತ್ತಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ದೇಶದಾದ್ಯಂತ ಪರಿವರ್ತನೆ ತರುವ ನಿಟ್ಟಿನಲ್ಲಿ ಪ್ರಶಾಂತ್‌ ಕಿಶೋರ್‌ ತಮ್ಮೊಂದಿಗೆ ಕಾರ್ಯಾಚರಿಸುತ್ತಿರುವುದಾಗಿ ಕೆಸಿಆರ್‌ ಮಾರ್ಚ್‌ನಲ್ಲಿ ಹೇಳಿದ್ದರು. ತೆಲಂಗಾಣದಲ್ಲಿಯೂ ಜೊತೆಯಾಗಿ ಕಾರ್ಯಾಚರಿಸುತ್ತಿರುವುದಾಗಿ ಹೇಳಿದ್ದ ಅವರು, 'ಪ್ರಶಾಂತ್‌ ಕಳೆದ ಏಳೆಂಟು ವರ್ಷಗಳಿಂದ ನನ್ನ ಒಳ್ಳೆಯ ಸ್ನೇಹಿತ' ಎಂದು ಬಣ್ಣಿಸಿದ್ದರು.

ಬಿಜೆಪಿಯ ನೀತಿಗಳನ್ನು ಜನ ವಿರೋಧಿ ಎಂದು ಟೀಕಿಸಿರುವ ಕೆಸಿಆರ್‌, ಬಿಜೆಪಿಯೇತರ ಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿದ್ದಾರೆ.

ಪ್ರಶಾಂತ್‌ ಅವರು ಯಾವುದೇ ಪೂರ್ವ ಷರತ್ತುಗಳು ಇಲ್ಲದೆ ಪಕ್ಷಕ್ಕೆ ಸೇರಲಿದ್ದಾರೆ, ಅವರ ಸೇರ್ಪಡೆಯು ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ತಾರಿಖ್‌ ಅನ್ವರ್‌ ಗುರುವಾರ ಹೇಳಿದ್ದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪ್ರಶಾಂತ್‌ ಪಕ್ಷಕ್ಕೆ ಸೇರುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ.

ತೃಣಮೂಲ ಕಾಂಗ್ರೆಸ್‌, ಎಎಪಿ ಮತ್ತು ಡಿಎಂಕೆ ಸೇರಿದಂತೆ ಹಲವು ಪಕ್ಷಗಳಿಗೆ ಪ್ರಶಾಂತ್‌ ಕಿಶೋರ್‌ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT