ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀಟ್‌’ಗೆ ತಮಿಳರ ವಿರೋಧ

ತಮಿಳು ಮಾಧ್ಯಮದ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹಿನ್ನಡೆ ಎಂಬ ಪ್ರತಿಪಾದನೆ
Last Updated 26 ಜುಲೈ 2022, 19:31 IST
ಅಕ್ಷರ ಗಾತ್ರ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ದೇಶದಾದ್ಯಂತ ನಡೆಸುವ ನೀಟ್‌ ಪರೀಕ್ಷೆಗೆ ತಮಿಳುನಾಡಿನಲ್ಲಿ ವ್ಯಾಪಕ ವಿರೋಧವಿದೆ. ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ, 12ನೇ ತರಗತಿಯ ಅಂಕಗಳ ಆಧಾರದಲ್ಲೇ ಅವಕಾಶ ಮಾಡಿಕೊಡಬೇಕು ಎಂದು ತಮಿಳುನಾಡು ಸರ್ಕಾರವು ವಾದಿಸುತ್ತಿದೆ. ಬಿಜೆಪಿ ಬಿಟ್ಟು ತಮಿಳುನಾಡಿನ ಬೇರೆಲ್ಲಾ ರಾಜಕೀಯ ಪಕ್ಷಗಳೂ ಸರ್ಕಾರದ ಈ ಪ್ರತಿಪಾದನೆಯನ್ನು ಬೆಂಬಲಿಸಿವೆ. ಈ ಸಂಬಂಧ 2021ರಲ್ಲಿ ಮಸೂದೆಯೊಂದನ್ನು ರೂಪಿಸಿ, ರಾಷ್ಟ್ರಪತಿಯವರ ಅಂಕಿತಕ್ಕೆ ಅದನ್ನು ಕಳುಹಿಸಲಾಗಿತ್ತು. ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಆ ಮಸೂದೆಯನ್ನು ತಿರಸ್ಕರಿಸಿದ್ದರು. ಮತ್ತೆ ಅಂಥದ್ದೇ ಮಸೂದೆಯನ್ನು ತಮಿಳುನಾಡಿನ ಉಭಯ ಸದನಗಳಲ್ಲೂ ಅಂಗೀಕರಿಸಿ, ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿ ತಿಂಗಳುಗಳು ಕಳೆದಿವೆ. ಆ ಮಸೂದೆ ಇನ್ನೂ ಕೇಂದ್ರ ಸರ್ಕಾರದ ಬಳಿಯೇ ಉಳಿದಿದೆ.

ದೇಶದ ಬೇರೆಲ್ಲಾ ರಾಜ್ಯಗಳು ನೀಟ್‌ ಪ್ರವೇಶ ಪರೀಕ್ಷೆ ಪದ್ಧತಿಯನ್ನು ಒಪ್ಪಿಕೊಂಡು, ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ನೀಡುತ್ತಿವೆ. ತಮಿಳುನಾಡು ಸರ್ಕಾರವು ಅನಿವಾರ್ಯವಾಗಿ ನೀಟ್‌ ಪದ್ಧತಿಯನ್ನು ಪಾಲಿಸುತ್ತಿದ್ದರೂ, ಅದನ್ನು ಪ್ರಬಲವಾಗಿ ವಿರೋಧಿಸುತ್ತಿದೆ. ನೀಟ್‌ ಪ್ರವೇಶ ಪರೀಕ್ಷೆ ಪದ್ಧತಿ ಏಕೆ ಬೇಡ ಎಂಬುದನ್ನು ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಎ.ಕೆ.ರಾಜನ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿ ನೀಡಿದ ವರದಿಯ ಆಧಾರದಲ್ಲೇ ನೀಟ್‌ ವಿನಾಯಿತಿ–2022 ಮಸೂದೆಯನ್ನು ತಮಿಳುನಾಡು ಸರ್ಕಾರ ಸಿದ್ಧಪಡಿಸಿದೆ. ನೀಟ್‌ ಪದ್ಧತಿಯಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಪ್ರತಿಕೂಲ ಬದಲಾವಣೆಗಳನ್ನು ಮತ್ತು ನೀಟ್‌ ಪದ್ಧತಿ ಹೇಗೆ ಮಾರಕ ಎಂಬುದನ್ನು ಈ ವರದಿಯಲ್ಲಿ ದತ್ತಾಂಶಗಳ ಸಮೇತ ವಿವರಿಸಲಾಗಿದೆ. ಈ ದತ್ತಾಂಶಗಳನ್ನು ಇರಿಸಿಕೊಂಡೇ ಸರ್ಕಾರವು ನೀಟ್‌ ಬೇಡ ಎಂದು ಪಟ್ಟು ಹಿಡಿದಿದೆ.

ಸಿಬಿಎಸ್‌ಇ ವಿದ್ಯಾರ್ಥಿಗಳಿಗಷ್ಟೇ ಅನುಕೂಲ: ಸರ್ಕಾರ

‘ನೀಟ್‌ ಪದ್ಧತಿಯು ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತರುತ್ತದೆ’ ಎಂಬುದು ತಮಿಳುನಾಡು ಸರ್ಕಾರದ ಮೊದಲ ಆಕ್ಷೇಪ. ರಾಜ್ಯದಲ್ಲಿ ಶೇ 72ರಷ್ಟು ವಿದ್ಯಾರ್ಥಿಗಳು ರಾಜ್ಯಪಠ್ಯಕ್ರಮ ಇರುವ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ನೀಟ್‌ ಪದ್ಧತಿ ಇಲ್ಲದೇ ಇದ್ದಾಗ, 2010–11ರಲ್ಲಿದ್ದ ಒಟ್ಟು ಸೀಟುಗಳಲ್ಲಿ ಪ್ರವೇಶ ಪಡೆದ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳ ಪ್ರಮಾಣ ಶೇ 99.2ರಷ್ಟಿತ್ತು. ಸಿಬಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳ ಪ್ರಮಾಣ ಶೇ 1ಕ್ಕಿಂತಲೂ ಕಡಿಮೆ ಇತ್ತು. ಆದರೆ 2020–21ನೇ ಸಾಲಿನಲ್ಲಿ ಈ ಕೋರ್ಸ್‌ಗಳಿಗೆ ಪ್ರವೇಶ ಪಡೆದ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳ ಪ್ರಮಾಣ ಶೇ 59ಕ್ಕೆ ಕುಸಿದಿದೆ. ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳ ಪ್ರಮಾಣ ಶೇ 41ಕ್ಕೆ ಏರಿಕೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ನೀಟ್‌ ಪರೀಕ್ಷೆಯ ಪಠ್ಯಕ್ರಮವು ಸಿಬಿಎಸ್‌ಇ ಪಠ್ಯಕ್ರಮಕ್ಕೆ ಹತ್ತಿರವಾದ ವಿಷಯಗಳನ್ನು ಒಳಗೊಂಡಿದೆ. ಹೀಗಾಗಿ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ನೀಟ್‌ ಪರೀಕ್ಷೆ ಸುಲಭವಾಗುತ್ತದೆ ಮತ್ತು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಷ್ಟವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರವೂ ಇದನ್ನೇ ಪ್ರತಿಪಾದಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT