ಬಿಸಿಗಾಳಿ: ಹಿಮಾಚಲ ಪ್ರದೇಶದತ್ತ ಪ್ರವಾಸಿಗರು

ಶಿಮ್ಲಾ: ಹಲವು ರಾಜ್ಯಗಳಲ್ಲಿ ಬಿಸಿಗಾಳಿ ಅಪ್ಪಳಿಸುತ್ತಿದ್ದು, ದೇಶದಲ್ಲಿ ಕೋವಿಡ್ ಎರಡನೇ ಅಲೆಯ ತೀವ್ರತೆಯು ಕಡಿಮೆಯಾಗುತ್ತಿರುವುದರಿಂದ ಹಿಮಾಚಲ ಪ್ರದೇಶದತ್ತ ಪ್ರವಾಸಿಗರ ಚಿತ್ತ ಹರಿದಿದೆ.
ಬಿಸಿಗಾಳಿ ಹೆಚ್ಚಾಗಿರುವ ರಾಜ್ಯಗಳಿಂದ ಜನರು ಪ್ರವಾಸಿಗರ ನೆಚ್ಚಿನ ತಾಣಗಳಾದ ಶಿಮ್ಲಾ, ಕುಫ್ರಿ, ನರ್ಕಂದ, ಡಾಲ್ ಹೌಸಿ, ಮನಾಲಿ, ಲಾಹೌಲ್ ಸೇರಿದಂತೆ ಇತರ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಕೋವಿಡ್ 2ನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿರುವುದನ್ನು ಮನಗಂಡು ಪ್ರವಾಸೋದ್ಯಮದ ಚೇತರಿಕೆಗಾಗಿ ಅಲ್ಲಿನ ಸರ್ಕಾರ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ವಾರಾಂತ್ಯದ ದಿನಗಳಲ್ಲಿ ಇಲ್ಲಿನ ಹೋಟೆಲ್‌ಗಳಲ್ಲಿ ಉಳಿಯುತ್ತಿದ್ದಾರೆ.
‘ಕಳೆದ ಕೆಲವು ದಿನಗಳಿಂದ ಹೋಟೆಲ್‌ಗಳಲ್ಲಿ ಉಳಿಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಪೂರ್ಣಪ್ರಮಾಣದಲ್ಲಿ ಇನ್ನೂ ಹೋಟೆಲ್‌ಗಳು ಭರ್ತಿಯಾಗಿಲ್ಲ’ ಎಂದು ಪ್ರವಾಸೋದ್ಯಮ ಉದ್ಯಮ ಪಾಲುದಾರರ ಸಂಘದ ಅಧ್ಯಕ್ಷ ಮೊಹಿಂದರ್ ಸೇಥ್ ಹೇಳುತ್ತಾರೆ.
‘ಆರ್‌ಟಿಪಿಸಿಆರ್ ವರದಿ ಮತ್ತು ಕೋವಿಡ್ ಪಾಸ್‌ಗಳಂಥ ಕಂಡೀಷನ್‌ಗಳನ್ನು ಸರ್ಕಾರವು ಹಿಂತೆಗೆದುಕೊಂಡಿರುವುದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗಿದೆ’ ಎಂದು ಶಿಮ್ಲಾ ಹೋಟೆಲ್ ಮತ್ತು ರೆಸ್ಟೊರೆಂಟ್ ಅಸೋಯೇಷನ್ ಅಧ್ಯಕ್ಷ ಸಂಜಯ್ ಸೂದ್ ಅವರು ತಿಳಿಸಿದ್ದಾರೆ.
ಆದಾಗ್ಯೂ, ಪ್ರವಾಸಿಗರ ಸಂಖ್ಯೆಯಲ್ಲಿನ ಹೆಚ್ಚಳವು ಕೋವಿಡ್ ಮೂರನೇ ಅಲೆ ಭೀತಿಯನ್ನುಂಟು ಮಾಡಿದೆ. ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರೆ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.