ಸೋಮವಾರ, ಮಾರ್ಚ್ 1, 2021
26 °C
ಪ್ರತಿಭಟನನಿರತ ರೈತರ ಟ್ರ್ಯಾಕ್ಟರ್‌ ರ್‍ಯಾಲಿಗೆ ತಡೆ ಒಡ್ಡಲು ಸುಪ್ರೀಂ ಕೋರ್ಟ್‌ ನಕಾರ

‘ಜಾಥಾ: ಪೊಲೀಸರೇ ನಿರ್ಧಾರ ಕೈಗೊಳ್ಳಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸು ತ್ತಿರುವ ರೈತರು ಗಣರಾಜ್ಯ ದಿನದಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್‌ ಜಾಥಾಕ್ಕೆ ತಡೆ ಕೊಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಇದು ‘ಕಾರ್ಯಾಂಗದ ವ್ಯಾಪ್ತಿ’ಯಲ್ಲಿರುವ ವಿಚಾರ ಎಂದಿದೆ. ಹಾಗಾಗಿ, ಜಾಥಾಕ್ಕೆ ತಡೆ ಕೊಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರವು ಬುಧವಾರ ಹಿಂದಕ್ಕೆ ಪಡೆದಿದೆ. 

ಜಾಥಾದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಪೊಲೀಸರಿಗೆ ಅಧಿಕಾರ ಇದೆ. ನ್ಯಾಯಾಲಯವು ಆದೇಶ ಹೊರಡಿಸುವ ಅಗತ್ಯ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ಪೀಠವು ಹೇಳಿದೆ. 

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್‌, ಟ್ರಾಲಿ ಜಾಥಾ ಅಥವಾ ಇನ್ನಾವುದೇ ರೀತಿಯ ಪ್ರತಿ ಭಟನೆಗೆ ಅವಕಾಶ ಕೊಡಬಾರದು ಎಂದು ಕೋರಿ ಕೇಂದ್ರವು ಅರ್ಜಿ ಸಲ್ಲಿಸಿತ್ತು. ಆ ದಿನ ರೈತರು ದೆಹಲಿ ಪ್ರವೇಶಕ್ಕೆ ಅವಕಾಶ ಕೊಟ್ಟರೆ ಅವರು ನಗರದೆಲ್ಲೆಡೆ ಹೋಗುತ್ತಾರೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ವಿಚಾರಣೆ ವೇಳೆ ಹೇಳಿದರು. 

ಜನವರಿ 26ರಂದು ನಡೆಸಲು ಉದ್ದೇಶಿಸಲಾಗಿರುವ ಟ್ರ್ಯಾಕ್ಟರ್‌ ಜಾಥಾವು ‘ಕಾನೂನು ಮತ್ತು ಸುವ್ಯವಸ್ಥೆ’ಗೆ ಸಂಬಂಧಿಸಿದ ವಿಚಾರ. ಇದನ್ನು ನಿರ್ವಹಿಸಲು ಪೊಲೀಸರಿಗೆ ಅಧಿಕಾರ ಇದೆ ಎಂದು ಸೋಮವಾರ ನಡೆದ ವಿಚಾರಣೆಯ ವೇಳೆಯಲ್ಲಿಯೂ ನ್ಯಾಯಾಲಯವು ಹೇಳಿತ್ತು. 

ಪ್ರಸ್ತಾವಿತ ಜಾಥಾವು ಗಣರಾಜ್ಯೋತ್ಸವ ಸಮಾರಂಭಕ್ಕೆ ಅಡ್ಡಿಪಡಿಸುವ ಉದ್ದೇಶ ಹೊಂದಿದೆ. ಹಾಗೆ ಅದರೆ ಅದು ದೇಶಕ್ಕೆ ಮುಜುಗರ ಉಂಟು ಮಾಡಬಹುದು ಎಂದು ಕೇಂದ್ರವು ತನ್ನ ಅರ್ಜಿಯಲ್ಲಿ ಹೇಳಿತ್ತು. 

ಮಾರ್ಗ ಬದಲಿಸಲು ನಕಾರ: ಟ್ರ್ಯಾಕ್ಟರ್‌ ಜಾಥಾದ ಮಾರ್ಗವನ್ನು ಬದಲಾಯಿ ಸುವಂತೆ ಪೊಲೀಸರು ಮಾಡಿದ ಮನವಿಯನ್ನು ರೈತ ಸಂಘಟನೆಗಳು ತಿರಸ್ಕರಿಸಿವೆ.

ವಾಹನ ದಟ್ಟಣೆ ಹೆಚ್ಚು ಇರುವ ದೆಹಲಿಯ ಹೊರ ವರ್ತುಲ ರಸ್ತೆಯ ಬದಲಿಗೆ ಕುಂಡ್ಲಿ–ಮನೇಸರ್‌–ಪಲ್ವಾಲ್‌ ಎಕ್ಸ್‌ಪ್ರೆಸ್‌ ವೇಯಲ್ಲಿ ಜಾಥಾ ನಡೆಸಿ ಎಂದು ಪೊಲೀಸರು ಸಲಹೆ ನೀಡಿದ್ದರು. 

ರೈತ ಸಂಘಟನೆಗಳ ಮುಖಂಡರು ಮತ್ತು ದೆಹಲಿ, ಉತ್ತರ ಪ್ರದೇಶ, ಹರಿಯಾಣ ಪೊಲೀಸ್‌ ಇಲಾಖೆಯ ಅಧಿಕಾರಿಗಳ ನಡುವೆ ದೆಹಲಿಯ ವಿಜ್ಞಾನ ಭವನದಲ್ಲಿ ಜಾಥಾ ಮಾರ್ಗದ ಬಗ್ಗೆ ಸಭೆ ನಡೆಯಿತು. ಈ ಸಭೆಯಲ್ಲಿ ಮುಂದಿಟ್ಟ ಮಾರ್ಗ ಬದಲಾವಣೆ ಕೋರಿಕೆಯನ್ನು ರೈತರು ಒಪ್ಪಿಕೊಂಡಿಲ್ಲ. ಗುರುವಾರ ಮತ್ತೆ ಸಭೆ ನಡೆಯಲಿದೆ.

ಸಮಿತಿ ಮೇಲೆ ಆರೋಪಕ್ಕೆ ಅತೃಪ್ತಿ

ಕೇಂದ್ರದ ಮೂರು ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ಸೃಷ್ಟಿಯಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ನೇಮಿಸಿದ ಸಮಿತಿಯ ಬಗ್ಗೆ ರೈತರ ಕೆಲವು ಸಂಘಟನೆಗಳು ವ್ಯಕ್ತಪಡಿಸಿರುವ ಆಕ್ಷೇಪದ  ಕುರಿತು ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಎಲ್ಲರ ಸಮಸ್ಯೆಗಳನ್ನು ಆಲಿಸಿ ವರದಿ ತಯಾರಿಸುವುದಷ್ಟೇ ಪರಿಣತರ ಸಮಿತಿಯ ಕೆಲಸ. ನ್ಯಾಯ ತೀರ್ಮಾನದ ಅಧಿಕಾರವನ್ನು ಈ ಸಮಿತಿಗೆ ಕೊಟ್ಟಿಲ್ಲ ಎಂದು ಕೋರ್ಟ್‌ ಹೇಳಿದೆ. 

ಸಮಿತಿಯಲ್ಲಿ ಉಳಿದಿರುವ ಮೂವರು ಸದಸ್ಯರನ್ನು ವಜಾ ಮಾಡಿ, ಹೊಸ ಸಮಿತಿಯನ್ನು ನೇಮಿಸಬೇಕು ಮತ್ತು ಈಗಾಗಲೇ ಹೊರಗೆ ಹೋಗಿರುವ ಸದಸ್ಯ ಭೂಪಿಂದರ್ ಸಿಂಗ್‌ ಮಾನ್‌ ಅವರ ಬದಲಿಗೆ ಬೇರೊಬ್ಬರನ್ನು ನೇಮಕ ಮಾಡಬೇಕು ಎಂದು ಕೋರಿ ರಾಜಸ್ಥಾನದ ರೈತರ ಸಂಘಟನೆ ಕಿಸಾನ್‌ ಮಹಾಪಂಚಾಯತಿ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠವು ವಿಚಾರಣೆಗೆ ಎತ್ತಿಕೊಂಡಿದೆ. ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರಿಗೆ ನೋಟಿಸ್‌ ನೀಡಿ, ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿದೆ. 

ಸಮಿತಿಯ ಸದಸ್ಯರು ಕೃಷಿ ಕಾಯ್ದೆಗಳ ಪರ ಇದ್ದಾರೆ ಎಂಬುದು ಮಾಧ್ಯಮ ವರದಿಗಳಿಂದ ರೂಪುಗೊಂಡ ಅಭಿಪ್ರಾಯ ಎಂದು ವಕೀಲರೊಬ್ಬರು ಪೀಠಕ್ಕೆ ತಿಳಿಸಿದರು. ಇದು ಪೀಠದ ಅಸಮಾಧಾನಕ್ಕೆ ಕಾರಣವಾಯಿತು. ‘ನೀವು ಅನಗತ್ಯವಾದ ಆಪಾದನೆ ಹೊರಿಸಿದ್ದೀರಿ. ಬೇರೊಂದು ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಸಮಿತಿಯಿಂದ ಹೊರಗೆ ಹಾಕಲಾಗುತ್ತದೆಯೇ? ಪ್ರತಿಯೊಬ್ಬರಿಗೂ ಅಭಿಪ್ರಾಯ ಇರಬೇಕು. ನ್ಯಾಯಮೂರ್ತಿಗಳಿಗೆ ಕೂಡ ಅಭಿಪ್ರಾಯ ಇರುತ್ತದೆ. ನಿಮಗೆ ಬೇಕಿಲ್ಲದ ಜನರನ್ನು ಬ್ರ್ಯಾಂಡ್‌ ಮಾಡಿಬಿಡುವುದು ಪದ್ಧತಿಯೇ ಆಗಿಬಿಟ್ಟಿದೆ. ಈ ಸಮಿತಿಗೆ ನ್ಯಾಯತೀರ್ಮಾನದ ಯಾವ ಅಧಿಕಾರವನ್ನೂ ಕೊಟ್ಟಿಲ್ಲ’  ಎಂದು ಪೀಠವು ಹೇಳಿತು. 

‘ಕೃಷಿ ಕಾಯ್ದೆಗಳಿಂದ ತೊಂದರೆಗೆ ಒಳಗಾಗುವ ಜನರ ಸಮಸ್ಯೆಗಳನ್ನು ಗುರುತಿಸಲು ಸಮಿತಿಯನ್ನು ನೇಮಿಸಲಾಗಿದೆ. ಅದಲ್ಲದೆ, ಕೃಷಿ ವಿಚಾರದಲ್ಲಿ ನಾವು ಪರಿಣತರೂ ಅಲ್ಲ. ಇಲ್ಲಿ ಪಕ್ಷಪಾತದ ಪ್ರಶ್ನೆ ಎಲ್ಲಿ ಬಂತು? ಸಮಿತಿಯ ಮುಂದೆ ಹೋಗಲು ಮನಸ್ಸಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಅವರ ಮೇಲೆ ಆರೋಪ ಹೊರಿಸಿದ್ದು ಏಕೆ’ ಎಂದು ಪೀಠವು ಕೇಳಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು