ತೆರವು ಕಾರ್ಯವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ: ಜಯಂತ್ ಚೌಧರಿ

ವಾರಾಣಸಿ (ಪಿಟಿಐ): ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುತ್ತಿರುವುದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜಕೀಯಗೊಳಿಸುತ್ತಿದೆ ಎಂದು ರಾಷ್ಟ್ರೀಯ ಲೋಕ ದಳ (ಆರ್ಎಲ್ಡಿ) ಮುಖ್ಯಸ್ಥ ಜಯಂತ್ ಚೌಧರಿ ಗುರುವಾರ ಆರೋಪಿಸಿದರು.
ಭಾರತೀಯರನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ‘ಆಪರೇಷನ್ ಗಂಗಾ’ ಎಂದು ಹೆಸರಿಡಲಾಗಿದೆ. ವಾರಾಣಸಿ ಮತ್ತು ಉತ್ತರ ಪ್ರದೇಶದ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡೇ ಕೇಂದ್ರ ಸರ್ಕಾರ ಈ ಹೆಸರಿಟ್ಟಿದೆ ಎಂದು ಹೇಳಿದರು.
ಸಮಾಜವಾದಿ ಪಕ್ಷ (ಎಸ್ಪಿ) ತನ್ನ ಮಿತ್ರ ಪಕ್ಷಗಳ ಜೊತೆ ಸೇರಿ ವಾರಾಣಸಿಯಲ್ಲಿ ನಡೆಸಿದ ಜಂಟಿ ರ್ಯಾಲಿಯಲ್ಲಿ ಜಯಂತ್ ಮಾತನಾಡಿದರು. ‘ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರು ಸುರಕ್ಷಿತವಾಗಿ ಅವರವರ ಮನೆಗಳನ್ನು ತಲುಪಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ವಿಚಾರದಲ್ಲಿ ಸಾಕಷ್ಟು ನಾಟಕ ನಡೆಯುತ್ತಿದೆ’ ಎಂದರು.
1990ರಲ್ಲಿ ಯುದ್ಧಪೀಡಿತ ಕುವೈಟ್ನಲ್ಲಿ ನಡೆದಿದ್ದ ಭಾರತೀಯರ ತೆರವು ಕಾರ್ಯಾಚರಣೆಯ ನೆನಪು ಮಾಡಿಕೊಂಡರು. ಕುವೈಟ್ನಲ್ಲಿ ಯುದ್ಧ ನಡೆಯುತ್ತಿದ್ದ ವೇಳೆ ಲಕ್ಷಾಂತರ ಭಾರತೀಯರು ಅಲ್ಲಿ ಸಂಕಷ್ಟದಲ್ಲಿದ್ದರು. ಅವರನ್ನು ಬಸ್ಸುಗಳಲ್ಲಿ ಕುವೈಟ್ನಿಂದ ಜೋರ್ಡನ್ಗೆ ಕರೆದೊಯ್ದು, ಅಲ್ಲಿಂದ ಭಾರತಕ್ಕೆ ವಿಮಾನಗಳಲ್ಲಿ ಕರೆತರಲಾಗಿತ್ತು. ಆ ಕಾರ್ಯಾಚರಣೆಯನ್ನು ಇಡೀ ವಿಶ್ವವೇ ಕೊಂಡಾಡಿತ್ತು. ಗಿನ್ನಿಸ್ ವಿಶ್ವ ದಾಖಲೆಯಲ್ಲೂ ಈ ಕಾರ್ಯಾಚರಣೆ ಕುರಿತು ಮಾಹಿತಿ ಇದೆ. ಆದರೆ ಆ ಕಾರ್ಯಾಚರಣೆಗೆ ಯಾವ ಹೆಸರನ್ನೂ ನೀಡಿರಲಿಲ್ಲ’ ಎಂದರು.
‘ಗಂಗಾ ಎಂಬ ಒಳ್ಳೆಯ ಹೆಸರು ಎಲ್ಲರಿಗೂ ಒಳ್ಳೆಯದನ್ನೇ ಮಾಡಲಿ. ಸಂಕಷ್ಟದಲ್ಲಿರುವ ಭಾರತೀಯರು ಸುರಕ್ಷಿತವಾಗಿ ಮನಗೆ ಮರಳಲಿ’ ಎಂದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೂಡಾ ಈ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಮೈತ್ರಿಕೂಟದ ವಿವಿಧ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಏಳನೇ ಹಂತದ ಮತದಾನ ಮಾರ್ಚ್ 7ರಂದು ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.