ಕೋವ್ಯಾಕ್ಸಿನ್ ಲಸಿಕೆಯಲ್ಲಿ ಅಮೆರಿಕದ ಪ್ರತಿರೋಧಕ

ಹೈದರಾಬಾದ್: ‘ಭಾರತ ಮತ್ತು ಅಮೆರಿಕದ ಕಂಪನಿಗಳ ಸಹಯೋಗದಲ್ಲಿ 2019ರಲ್ಲಿ ಆರಂಭಿಸಿದ್ದ ಸಂಶೋಧನೆಯು ಈಗ ಭಾರತದಲ್ಲಿ ಕೋವಿಡ್ ವಿರುದ್ಧ ಬಳಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಯ ಪರಿಣಾಮದ ಪ್ರಮಾಣವನ್ನು ಹೆಚ್ಚಿಸಿದೆ’ ಎಂದು ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಎಚ್) ಹೇಳಿದೆ.
‘ಅಮೆರಿಕದ ಕಂಪನಿಯು ಅಭಿವೃದ್ಧಿಪಡಿಸಿದ್ದ ಲಸಿಕೆ ಪ್ರತಿರೋಧಕವನ್ನು ಕೋವ್ಯಾಕ್ಸಿನ್‌ನಲ್ಲಿ ಬಳಸಲಾಗುತ್ತಿದೆ. ಈ ಕಾರಣದಿಂದಲೇ ಆಲ್ಫಾ (ಬಿ.1.1.7) ಮತ್ತು ಡೆಲ್ಟಾ (ಬಿ.1.617) ತಳಿಯ ಕೊರೊನಾ ವೈರಾಣು ವಿರುದ್ಧ ಕೋವ್ಯಾಕ್ಸಿನ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ’ ಎಂದೂ ಎನ್‌ಐಎಚ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ಅಮೆರಿಕದ ಕನ್ಸಾಸ್‌ನಲ್ಲಿರುವ ವೈರೊವ್ಯಾಕ್ಸ್ ಎಲ್‌ಎಲ್‌ಸಿ ಎಂಬ ಕಂಪನಿಯು ಅಲ್‌ಹೈಡ್ರೋಕ್ಸಿಕ್ವಿಂ-2 ಎಂಬ ಲಸಿಕೆ ಪ್ರತಿರೋಧಕವನ್ನು ಅಭಿವೃದ್ಧಿಪಡಿಸಿತ್ತು. ಅಲ್‌ಹೈಡ್ರೋಕ್ಸಿಕ್ವಿಂ-2ನಂತಹ ಪ್ರತಿರೋಧಕವನ್ನು ಅಭಿವೃದ್ಧಿಪಡಿಸಲು ಅಮೆರಿಕದ ವೈರೊವ್ಯಾಕ್ಸ್ ಮತ್ತು ಭಾರತದ ಭಾರತ್ ಬಯೊಟೆಕ್ 2019ರಲ್ಲಿ ಜಂಟಿಯಾಗಿ ಸಂಶೋಧನೆ ಆರಂಭಿಸಿದ್ದವು. ಕೋವ್ಯಾಕ್ಸಿನ್ ಅಭಿವೃದ್ಧಿಯಲ್ಲಿ ಭಾರತ್ ಬಯೊಟೆಕ್ ಈ ಅಲ್‌ಹೈಡ್ರೋಕ್ಇಕ್ವಿಂ-2 ಅನ್ನು ಬಳಸಿದೆ ಎಂದು ಎನ್‌ಐಎಚ್ ಹೇಳಿದೆ.
‘ಅಲ್‌ಹೈಡ್ರೋಕ್ಸಿಕ್ವಿಂ-2 ಅನ್ನು ವಿವಿಧ ಲಸಿಕೆಗಳ ಅಭಿವೃದ್ಧಿಯಲ್ಲಿ ಬಳಸಲು ಒಪ್ಪಂದಕ್ಕೆ ಬರಲಾಗಿತ್ತು. ಜಗತ್ತಿನ ವಿವಿಧೆಡೆ ನಾಲ್ಕು ಕಂಪನಿಗಳು ಈ ಸಂಬಂಧ ಪ್ರಸ್ತಾವ ಸಲ್ಲಿಸಿದ್ದವು. ಭಾರತ್ ಬಯೊಟೆಕ್ ಈ ಒಪ್ಪಂದವನ್ನು ಅಂತಿಮಗೊಳಿಸಿತ್ತು. 2020ರಲ್ಲಿ ಕೋವಿಡ್ ಕಾಣಿಸಿಕೊಂಡ ನಂತರ, ಕೊರೊನಾ ವೈರಾಣು ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಅಲ್‌ಹೈಡ್ರೋಕ್ಸಿಕ್ವಿಂ-2 ಅನ್ನು ಬಳಸಿಕೊಳ್ಳಲು ವೈರೊವ್ಯಾಕ್ಸ್ ಮತ್ತು ಭಾರತ್ ಬಯೊಟೆಕ್ ಒಪ್ಪಂದವನ್ನು ವಿಸ್ತರಿಸಿಕೊಂಡಿದ್ದವು. ಕೋವ್ಯಾಕ್ಸಿನ್‌ನಲ್ಲಿ ಅಲ್‌ಹೈಡ್ರೋಕ್ಸಿಕ್ವಿಂ-2 ಅನ್ನು ಬಳಸುವ ಸಂಬಂಧ ದೀರ್ಘ ಸಂಶೋಧನೆ ನಡೆಸಲಾಗಿದೆ. ಆನಂತರವೇ ಲಸಿಕೆಯಲ್ಲಿ ಅದನ್ನು ಬಳಸಲಾಗಿದೆ’ ಎಂದು ವೈವೊವ್ಯಾಕ್ಸ್ ಬಯೊಟೆಕ್‌ನ ಸಿಇಒ ಸುನೀಲ್ ಡೇವಿಡ್ ಹೇಳಿದ್ದಾರೆ.
ಭಾರತ್ ಬಯೊಟೆಕ್ ಕಂಪನಿಯು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು, ರಾಷ್ಟ್ರೀಯ ವೈರಾಣುವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಕೋವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಕೋವಿಡ್ ಹರಡುವುದನ್ನು ತಡೆಯಲು ಪ್ರತಿ ವ್ಯಕ್ತಿಗೆ ಕೋವ್ಯಾಕ್ಸಿನ್‌ನ ಎರಡು ಡೋಸ್‌ಗಳನ್ನು ನೀಡಲಾಗುತ್ತಿದೆ. ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಕೋವಿಶೀಲ್ಡ್ ಜತೆಗೆ ಕೋವ್ಯಾಕ್ಸಿನ್ ಲಸಿಕೆಯನ್ನೂ ಬಳಸಲಾಗುತ್ತಿದೆ. ವಿಶ್ವದ 12 ದೇಶಗಳು ಕೋವ್ಯಾಕ್ಸಿನ್ ಅನ್ನು ಬಳಸುತ್ತಿವೆ.
‘ಪ್ರತಿರೋಧಕ್ಕೆ ಪ್ರಚೋದನೆ’
‘ಲಸಿಕೆಯಲ್ಲಿರುವ ಅಲ್‌ಹೈಡ್ರೋಕ್ಸಿಕ್ವಿಂ-2 ದೇಹವನ್ನು ಸೇರಿದ ನಂತರ ವೈರಾಣು ವಿರುದ್ಧ ಪ್ರತಿರೋಧಕಗಳನ್ನು ಉಂಟುಮಾಡಲು ಜೀವಕೋಶಗಳನ್ನು ಪ್ರಚೋದಿಸುತ್ತದೆ. ಈ ಜೀವಕೋಶಗಳು ದೇಹದಲ್ಲಿ ಪ್ರಬಲ ಪ್ರತಿರೋಧ ಶಕ್ತಿಯನ್ನು ಉಂಟು ಮಾಡುತ್ತವೆ’ ಎಂದು ಎನ್‌ಐಎಚ್ ಹೇಳಿದೆ.
‘ಮನುಷ್ಯನ ದೇಹದಲ್ಲಿ ಜೀವಕೋಶಗಳಲ್ಲಿ ಟಿಎಲ್‌ಆರ್7 ಮತ್ತು ಟಿಎಲ್‌ಆರ್8 ಎಂಬ ಕಣಗಳಿವೆ. ಇವು ದೇಹವನ್ನು ಸೇರುವ ವೈರಾಣುಗಳ ವಿರುದ್ಧ ಪ್ರತಿರೋಧ ಶಕ್ತಿಯನ್ನು ಉಂಟು ಮಾಡುತ್ತವೆ. ಪ್ರತಿರೋಧಕ ಶಕ್ತಿಯನ್ನು ಸೃಷ್ಟಿಸುವಂತೆ ಟಿಎಲ್‌ಆರ್7 ಮತ್ತು ಟಿಎಲ್‌ಆರ್8 ಕಣಗಳನ್ನು ಅಲ್‌ಹೈಡ್ರೋಕ್ಸಿಕ್ವಿಂ-2 ಪ್ರಚೋದಿಸುತ್ತದೆ. ಆ ಮೂಲಕ ಕೊರೊನಾವೈರಾಣು ವಿರುದ್ಧ ದೇಹದಲ್ಲಿ ಪ್ರಬಲ ಪ್ರತಿರೋಧ ಶಕ್ತಿ ಸೃಷ್ಟಿಯಾಗುತ್ತದೆ’ ಎಂದು ಎನ್‌ಐಎಚ್ ಹೇಳಿದೆ.
‘ಅಲ್‌ಹೈಡ್ರೋಕ್ಇಕ್ವಿಂ-2 ಅನ್ನು ಬಳಸಿರುವುದರಿಂದಲೇ ಕೋವ್ಯಾಕ್ಸಿನ್ ತೆಗೆದುಕೊಂಡವರಲ್ಲಿ ಪ್ರತಿರೋಧ ಶಕ್ತಿ ಹೆಚ್ಚುತ್ತದೆ. ಲಸಿಕೆ ಪಡೆದುಕೊಂಡ ನಂತರ ಲಸಿಕೆ ನೀಡಲಾದ ಜಾಗದ ಸಮೀಪದಲ್ಲೇ ಇರುವ ಬಿಳಿರಕ್ತಕಣಗಳನ್ನು ಅಲ್‌ಹೈಡ್ರೋಕ್ಸಿಕ್ವಿಂ-2 ಹುಡುಕುತ್ತದೆ. ಆ ಮೂಲಕ ವೈರಾಣು ವಿರುದ್ಧ ಹೋರಾಡಲು ಬಿಳಿರಕ್ತಕಣಗಳನ್ನು ಸಜ್ಜುಗೊಳಿಸುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ನಡೆಸಿರುವ ಎರಡು ಸಂಶೋಧನೆಗಳಲ್ಲಿ ಈ ಅಂಶ ಪತ್ತೆಯಾಗಿದೆ. ಕೋವ್ಯಾಕ್ಸಿನ್ ಪಡೆದುಕೊಂಡವರಲ್ಲಿ ಆಲ್ಫಾ ಮತ್ತು ಡೆಲ್ಟಾ ರೂಪಾಂತರ ಕೊರೊನಾವೈರಾಣುವನ್ನು ನಿಷ್ಕ್ರಿಯಗೊಳಿಸುವ ಪ್ರತಿರೋಧ ಶಕ್ತಿ ಪ್ರಬಲವಾಗಿದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ’ ಎಂದು ಎನ್‌ಐಎಚ್ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.