ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UP Polls | ಬಿಜೆಪಿ ತೊರೆದವರ ವಿರುದ್ಧ ಕಿಡಿಕಾರಿದ ಉತ್ತರ ಪ್ರದೇಶ ಸಿಎಂ ಯೋಗಿ

Last Updated 19 ಫೆಬ್ರುವರಿ 2022, 13:07 IST
ಅಕ್ಷರ ಗಾತ್ರ

ಲಖನೌ: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ತೊರೆದು ಬೇರೆ ಪಕ್ಷಗಳಿಗೆ ಸೇರಿರುವ ನಾಯಕರು ಇದೀಗ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಟೀಕಿಸಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಐಎಎನ್‌ಎಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಯೋಗಿ,'ನಾವು ರಾಷ್ಟ್ರೀಯವಾದ, ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ವಿಚಾರಗಳ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ' ಎಂದು ಹೇಳಿದ್ದಾರೆ. ಹಾಗೆಯೆ,ತಮ್ಮ ಪಕ್ಷವು (ಬಿಜೆಪಿ) 300ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಜಯಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ನಮ್ಮ ಪಕ್ಷವನ್ನು ತೊರೆದವರಿಗೆ ಇದೀಗ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಅವರೆಲ್ಲ ಜನಸಮೂಹದ ಬೆಂಬಲ ಹೊಂದಿದ್ದರೆ, ನನ್ನ ಹಾಗೆ ಅವರು ಈ ಹಿಂದೆ ಕಣಕ್ಕಿಳಿಯುತ್ತಿದ್ದ ಕ್ಷೇತ್ರದಿಂದಲೇ ಚುನಾವಣೆ ಎದುರಿಸಬೇಕಿತ್ತು. ಅವರೆಲ್ಲ ತಮ್ಮ ಸ್ಥಾನಗಳನ್ನು ಬಿಟ್ಟು ಓಡುತ್ತಿದ್ದಾರೆ' ಎಂದು ಚಾಟಿ ಬೀಸಿದ್ದಾರೆ.

ರಾಜ್ಯದಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯೋಗಿ, ಆ ಪಕ್ಷವು ವೃತ್ತಿಪರ ಅಪರಾಧಿಗಳಿಗೆ ಟಿಕೆಟ್ ನೀಡಿದೆ ಎಂದು ಟೀಕಿಸಿದ್ದಾರೆ.

ಅಧಿಕಾರಕ್ಕೇರಿದರೆ ದೇವಾಲಯಗಳು ಮತ್ತು ಮಠಗಳಿಗೆ ಅನುದಾನ ನೀಡುವುದಾಗಿ ಎಸ್‌ಪಿ ಭರವಸೆ ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯೋಗಿ, 'ಎಸ್‌ಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕರಸೇವಕರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯನ್ನು ಅಯೋಧ್ಯೆಯ ಸಂತರು, ದೇಶದ ಜನರು ಮತ್ತು ರಾಮ ಭಕ್ತರು ಮರೆಯುವುದಿಲ್ಲ' ಎಂದಿದ್ದಾರೆ.

ಮುಂದುವರಿದು, 'ಸತ್ಯವೇನೆಂದರೆ, ಆ ಪಕ್ಷದ ಹೆಸರಷ್ಟೇ 'ಸಮಾಜವಾದಿ'. ಆದರೆ, ಅವರು 'ದಂಗಾವಾದಿಗಳು' (ಗಲಭೆ ಪ್ರಚೋದಕರು) ಮತ್ತು ಮಾನಸಿಕವಾಗಿ 'ಪರಿವಾರವಾದಿಗಳು'. ಸಮಗ್ರ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಉತ್ತಮ ಆಡಳಿತದಚಿಂತನೆಯೇ ಅವರಲ್ಲಿ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಅವರ ಪಾಲಿಗೆ ಹಗಲುಗನಸಿದ್ದಂತೆ' ಎಂದು ಗುಡುಗಿದ್ದಾರೆ.

ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಒಂದಾಗುತ್ತಿದ್ದಾರೆ. ಅವರನ್ನು ಬೆಂಬಲಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಆಗಮಿಸಿದ್ದಾರೆ ಎಂಬುದರ ಬಗ್ಗೆ ಮಾತನಾಡಿ, 2019ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಎಸ್‌ಪಿ, ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಮತ್ತು ರಾಷ್ಟ್ರೀಯ ಲೋಕದ ದಳ (ಆರ್‌ಎಲ್‌ಡಿ) ಒಂದಾಗಿದ್ದವು. ಆಗ ಬಿಜೆಪಿ ಶೇ 80 ರಷ್ಟು ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿಯ ಮೈತ್ರಿಯು ಅಷ್ಟೇನೂ ದೊಡ್ಡದಾಗಿಲ್ಲ. ಅಷ್ಟಲ್ಲದೆ, ಜನರು ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ಚಲಾಯಿಸುತ್ತಾರೆ ಎಂದಿದ್ದಾರೆ.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ (ಎಲ್ಲರ ಜೊತೆ, ಎಲ್ಲರ ಅಭಿವೃದ್ಧಿ) ಬಗ್ಗೆ ಮಾತನಾಡುವ ಬಿಜೆಪಿ, ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡದಿರುವುದೇಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಗಳು ಜನರ ಬೆಂಬಲ ಮತ್ತು ನಂಬಿಕೆಯ ಆಧಾರದಲ್ಲಿ ನಡೆಯುತ್ತವೆ ಎಂದು ಹೇಳಿದ್ದಾರೆ.

'ಟಿಕೆಟ್‌ ಆಕಾಂಕ್ಷಿಗಳ ಹೆಸರುಗಳನ್ನು ಜಿಲ್ಲೆ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಪರಿಶೀಲಿಸಲಾಗುತ್ತದೆ. ನಂತರ ಹೈಕಮಾಂಡ್‌ಗೆ ಶಿಫಾರಸು ಮಾಡಲಾಗುತ್ತದೆ. ಸಾರ್ವಜನಿಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದವರಿಗಷ್ಟೇ ಟಿಕೆಟ್ ನೀಡಲಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT