ಶನಿವಾರ, ಮೇ 15, 2021
29 °C
ಮತದಾನದ ವೇಳೆ ಅಲ್ಲಲ್ಲಿ ಘರ್ಷಣೆ ಮತ್ತು ಹಿಂಸಾಚಾರ: ಹಲವೆಡೆ ಲಾಠಿ ಪ್ರಹಾರ

ಪಶ್ಚಿಮ ಬಂಗಾಳ ಚುನಾವಣೆ: ಮತ್ತೆ ಗುಂಡು ಹಾರಿಸಿದ ಸಿಐಎಸ್‌ಎಫ್‌

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ/ಸಿಲಿಗುರಿ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಮತಗಟ್ಟೆ ಒಂದರ ಬಳಿ ಸಿಐಎಸ್‌ಎಫ್‌ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಸುಮ್ಮನೆ ನಿಂತಿದ್ದ ಜನರತ್ತ ಸಿಐಎಸ್‌ಎಫ್‌ ಸಿಬ್ಬಂದಿ ಗುಂಡು ಹಾರಿಸುವ ವಿಡಿಯೊ ವೈರಲ್ ಆಗಿದೆ. ಉಳಿದಂತೆ, 45 ಲೋಕಸಭಾ ಕ್ಷೇತ್ರಗಳಿಗೆ ಶನಿವಾರ 5ನೇ ಹಂತದಲ್ಲಿ ನಡೆದ ಮತದಾನದ ವೇಳೆ ಅಲ್ಲಲ್ಲಿ ಘರ್ಷಣೆ ಮತ್ತು ಹಿಂಸಾಚಾರ ನಡೆದಿದೆ.

ಸಿಐಎಸ್‌ಎಫ್ ಸಿಬ್ಬಂದಿ ಗುಂಡುಹಾರಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಉತ್ತರ 24 ಪರಗಣ ಜಿಲ್ಲೆಯ ದೆಗಾಂಗ ಕ್ಷೇತ್ರದ ಕುರೂಲ್‌ಗಾಚಾ ಮತಗಟ್ಟೆಯಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಗುಂಡುಹಾರಿಸಿದ್ದಾರೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸಿಐಎಸ್‌ಎಫ್‌ ವಕ್ತಾರರು ಹೇಳಿದ್ದಾರೆ. ಆದರೆ, ಈ ಬಗ್ಗೆ ವರದಿ ನೀಡುವಂತೆ ಚುನಾವಣಾ ಆಯೋಗವು ಸೂಚಿಸಿದೆ.

‘ಸಿಐಎಸ್‌ಎಫ್‌ ಸಿಬ್ಬಂದಿ ಸುಮ್ಮನೆ ಗುಂಡು ಹಾರಿಸಿದ್ದಾರೆ ಎಂಬ ದೂರು ಬಂದಿದೆ. ಜತೆಗೆ ಮತಗಟ್ಟೆ ಬಳಿ ಸುಮ್ಮನೆ ಗುಂಪುಗೂಡಿದ್ದ ಜನರತ್ತ ಸಿಐಎಸ್‌ಎಫ್‌ ಸಿಬ್ಬಂದಿ ಗುಂಡು ಹಾರಿಸುತ್ತಿರುವ ವಿಡಿಯೊ ಸಹ ನಮಗೆ ದೊರೆತಿದೆ. ಹಲವು ಮಾಧ್ಯಮಗಳು ಆ ವಿಡಿಯೊವನ್ನು ಪ್ರಸಾರ ಮಾಡಿವೆ. ಈ ಬಗ್ಗೆ ವಿವರಣೆ ನೀಡಿ’ ಎಂದು ಚುನಾವಣಾ ಆಯೋಗವು ನೋಟಿಸ್‌ನಲ್ಲಿ ಸೂಚಿಸಿದೆ.

ಅಲ್ಲಲ್ಲಿ ಘರ್ಷಣೆ: ಮತದಾನ ನಡೆದ ಜಿಲ್ಲೆಗಳ ಹಲವು ಮತಗಟ್ಟೆಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಮತದಾರರು ಮತಗಟ್ಟೆಗೆ ಬರಲು ಬಿಡುತ್ತಿಲ್ಲ ಎಂದು ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ಆರೋಪಿಸಿದ್ದಾರೆ. ಆದರೆ ಪರಿಸ್ಥಿತಿ ಕೈಮೀರುವ ಮುನ್ನ ಭದ್ರತಾ ಸಿಬ್ಬಂದಿ ಜಗಳವನ್ನು ತಿಳಿಗೊಳಿಸಿದ್ದಾರೆ.

ಕೆಲವು ಮತಗಟ್ಟೆಗಳಲ್ಲಿ ಕಲ್ಲುತೂರಾಟವೂ ನಡೆದಿದೆ. ಈ ಘಟನೆಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಕಲ್ಯಾಣಿ ಜಿಲ್ಲೆಯ ಹಲವೆಡೆ ಎರಡೂ ಪಕ್ಷಗಳ ಕಾರ್ಯಕರ್ತರ ಸಂಘರ್ಷವನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿದ್ದಾರೆ.

ಶೇ 78.36ರಷ್ಟು ಮತದಾನ

ಪಶ್ಚಿಮ ಬಂಗಾಳದ 45 ವಿಧಾನಸಭಾ ಕ್ಷೇತ್ರಗಳಿಗೆ 5ನೇ ಹಂತದಲ್ಲಿ ಶನಿವಾರ ನಡೆದ ಮತದಾನದಲ್ಲಿ, ಶೇ 78.36ರಷ್ಟು ಮತದಾನ ದಾಖಲಾಗಿದೆ.

ಜಲಪೈಗುರಿ ಜಿಲ್ಲೆಯಲ್ಲಿ ಶೇ 81.73ರಷ್ಟು, ಪೂರ್ವ ವರ್ಧಮಾನ್‌ ಜಿಲ್ಲೆಯಲ್ಲಿ ಶೇ 81.72, ಉತ್ತರ 24 ಪರಗಣ ಜಿಲ್ಲೆಯಲ್ಲಿ ಶೇ 74.83, ಡಾರ್ಜಿಲಿಂಗ್‌ನಲ್ಲಿ ಶೇ 74.31 ಮತ್ತು ಕಲೀಂಪಾಂಗ್‌ ಜಿಲ್ಲೆಯಲ್ಲಿ ಶೇ 69.56ರಷ್ಟು ಮತದಾನ ನಡೆದಿದೆ.

ನುಡಿ-ಕಿಡಿ

ಈ ಚುನಾವಣೆಯಲ್ಲಿ ಟಿಎಂಸಿ ಸೋಲುತ್ತದೆ ಎಂಬುದು ಮಮತಾ ಬ್ಯಾನರ್ಜಿ ಅವರಿಗೆ ಚೆನ್ನಾಗಿ ಮನದಟ್ಟಾಗಿದೆ. ಹೀಗಾಗಿಯೇ ಅವರು ಬಿಜೆಪಿ ವಿರುದ್ಧ ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಲು ಯತ್ನಿಸುತ್ತಿದ್ದಾರೆ. ಆದರೆ, ಅವರ ಯಾವ ಪ್ರಯತ್ನವೂ ಫಲನೀಡುವುದಿಲ್ಲ. ಮೇ 2ರ ನಂತರ ಇವರೆಲ್ಲಾ ಮನೆಗೆ ಹೋಗುತ್ತಾರೆ

- ನರೇಂದ್ರ ಮೋದಿ, ಪ್ರಧಾನಿ

---

ಟಿಎಂಸಿಯದ್ದು ನಕಲಿ ರಾಷ್ಟ್ರಭಕ್ತಿ. ರಾಜ್ಯದ ಯಾವ ಸಮಸ್ಯೆಯನ್ನೂ ಟಿಎಂಸಿ ಬಗೆಹರಿಸಿಲ್ಲ. ಒಳನುಸುಳುವಿಕೆ ಮತ್ತು ನಕಲಿ ನೋಟಿನ ಹಾವಳಿ ಪಶ್ಚಿಮ ಬಂಗಾಳದ ಅತ್ಯಂತ ದೊಡ್ಡ ಸಮಸ್ಯೆಗಳು. ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರವೇ ಈ ಸಮಸ್ಯೆಗಳು ಬಗೆಹರಿಯಲಿವೆ. ಮೇ 2ರ ನಂತರ ಬಿಜೆಪಿ ಅಧಿಕಾರಕ್ಕೆ ಬರಲಿದೆ

- ಅಮಿತ್ ಶಾ, ಕೇಂದ್ರ ಗೃಹ ಸಚಿವ

---

ದೇಶದಲ್ಲಿ ಕೋವಿಡ್‌ ಅಟ್ಟಹಾಸ ನಡೆಸುತ್ತಿದೆ. ದೇಶ ನಲುಗಿದೆ. ಇಂತಹ ಸಂದರ್ಭದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಲಸಿಕೆ, ಆಮ್ಲಜನಕ, ರೆಮ್‌ಡಿಸಿವಿರ್ ಕೊರತೆ ನೀಗಿಸುವುದು ಪ್ರಧಾನಿ ಅವರ ಕರ್ತವ್ಯವಲ್ಲವೇ?

- ಪಿ.ಚಿದಂಬರಂ, ಕಾಂಗ್ರೆಸ್ ನಾಯಕ

---

ಆಮ್ಲಜನಕದ ಕೊರತೆ ಬಗ್ಗೆ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದೆ. ಅವರು ಪಶ್ಚಿಮ ಬಂಗಾಳ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿ ಆಗಿದ್ದರು

- ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ

***

ಚುನಾವಣಾ ಕಣದಲ್ಲಿ

l ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಹಲವೆಡೆ ಶನಿವಾರ ರೋಡ್‌ಶೋ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ

l ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಹಲವೆಡೆ ಶನಿವಾರ ರೋಡ್‌ಶೋ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ

l ಉತ್ತರ 24 ಪರಗಣ ಜಿಲ್ಲೆಯ ಮತಗಟ್ಟೆಒಂದರಲ್ಲಿ ಬಿಜೆಪಿಯ ಏಜೆಂಟ್ ಒಬ್ಬರು, ಕುಸಿದುಬಿದ್ದು ಮೃತಪಟ್ಟಿದ್ದಾರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು