ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಕಾಯ್ದೆಗಳನ್ನು ಪ್ರಶ್ನಿಸಿ ಕೇಂದ್ರದ ವಿರುದ್ಧ ವಾಟ್ಸ್‌ಆ್ಯಪ್ ದಾವೆ

ಬಳಕೆದಾರರ ಖಾಸಗಿತನ ಉಲ್ಲಂಘನೆ ಸಾಧ್ಯತೆ; ನೂತನ ಐಟಿ ಕಾಯ್ದೆ ಹಿಂಪಡೆಯಲು ಆಗ್ರಹ
Last Updated 26 ಮೇ 2021, 21:35 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಡಿಜಿಟಲ್ ಕಾಯ್ದೆಗಳನ್ನು ಪ್ರಶ್ನಿಸಿ ಪ್ರಮುಖ ಸಾಮಾಜಿಕ ಜಾಲತಾಣ ಕಂಪನಿ ವಾಟ್ಸ್‌ಆ್ಯಪ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸರ್ಕಾರದ ಹೊಸ ಕಾಯ್ದೆಗಳ ಪ್ರಕಾರ ಗೂಢಲಿಪೀಕರಿಸಿದ ಸಂದೇಶಗಳ (ಎನ್‌ಕ್ರಿಪ್ಟೆಡ್) ಮಾಹಿತಿ ಹಂಚಿಕೊಳ್ಳುವುರಿಂದ ಬಳಕೆದಾರರ ಗೌಪ್ಯತೆಯ ಉಲ್ಲಂಘನೆಯಾಗುತ್ತದೆ ಎಂದು ಕಂಪನಿ ವಾದಿಸಿದೆ.

ಪೋಸ್ಟ್ ಮಾಡಲಾದ ಯಾವುದೇ ಸಂದೇಶದ ‘ಮೂಲ’ವನ್ನು ಗುರುತಿಸುವುದುಸಂವಿಧಾನ ಒದಗಿಸಿದ ಖಾಸಗಿತನದ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಮಂಗಳವಾರ ಸಂಜೆ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಲಾಗಿದೆ.

‘ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಲಾದ ಪ್ರತಿಯೊಂದು ಸಂದೇಶದ ಮೇಲೆ ನಿಗಾ ವಹಿಸುವುದು ಎಂದರೆ, ಪ್ರತಿಯೊಂದು ಸಂದೇಶದ ಬೆರಳಚ್ಚು ಇಟ್ಟುಕೊಳ್ಳಿ ಎಂದು ಹೇಳುವುದಕ್ಕೆ ಸಮ. ಇದರಿಂದ ಗೂಢಲಿಪೀಕರಣವು ಅರ್ಥ ಕಳೆದುಕೊಂಡು, ಜನರ ಮೂಲಭೂತ ಖಾಸಗಿತನದ ಹಕ್ಕು ಕೊನೆಯಾಗುತ್ತದೆ’ ಎಂದು ಕಂಪನಿ ವಕ್ತಾರರು ಬುಧವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಸೂಕ್ತ ಪರಿಹಾರಕ್ಕಾಗಿ ಭಾರತ ಸರ್ಕಾರದ ಜೊತೆ ನಾವು ನಿರಂತರವಾಗಿ ಸಂಪರ್ಕದಲ್ಲಿರುತ್ತೇವೆ. ಕಾನೂನಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ’ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ನಿಯಮ ಜಾರಿ: ಹೊಸ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು, 2021 ಅನ್ನು ಫೆಬ್ರುವರಿ 25ರಂದು ಸರ್ಕಾರ ಘೋಷಿಸಿತ್ತು. ಮೇ 25ರಿಂದ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿತ್ತು. ಕೇಂದ್ರ ಸರ್ಕಾರ ರೂಪಿಸಿರುವ ಡಿಜಿಟಲ್ ನಿಯಮಗಳು ಜಾರಿಗೆ ಬಂದ ತಕ್ಷಣವೇ ವಾಟ್ಸ್‌ಆ್ಯಪ್ ಕೋರ್ಟ್ ಮೊರೆ ಹೋಗಿದೆ.

ಈ ನಿಯಮಗಳನ್ನು ಜಾರಿಗೊಳಿ ಸದಿದ್ದಲ್ಲಿ, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆ್ಯಪ್ ಕಂಪನಿಗಳಿಗೆ ಇರುವ ಕಾನೂನಿನ ರಕ್ಷಣೆಗೆ ಮೊಟಕುಗೊಳ್ಳುತ್ತದೆ. ಸರ್ಕಾರದ ಹೊಸ ನಿಯಮಗಳನ್ನು ಪಾಲಿಸದಿದ್ದಲ್ಲಿ ಈ ಸಾಮಾಜಿಕ ಜಾಲತಾಣಗಳು ತಮಗಿರುವ ‘ಮಧ್ಯವರ್ತಿ ಸ್ಥಾನಮಾನ’ವನ್ನು ಕಳೆದುಕೊಳ್ಳುತ್ತವೆ. ಅಲ್ಲದೇ, ತಮ್ಮ ವೇದಿಕೆಗಳಲ್ಲಿ ಯಾವುದೇ ಮೂರನೇ ವ್ಯಕ್ತಿಯು ಹಂಚಿಕೊಂಡ ಮಾಹಿತಿ ಮತ್ತು ದತ್ತಾಂಶಗಳಿಗೆ ಕಂಪನಿಗಳು ಇನ್ನುಮುಂದೆ ಹೊಣೆಗಾರರಾಗಿರುತ್ತವೆ. ಈ ವಿಚಾರದಲ್ಲಿ ಇಷ್ಟು ದಿನ ಇದ್ದ ವಿನಾಯಿತಿ ಕೊನೆಯಾಗಲಿದೆ.

ನಿಯಮಗಳು ಏನು ಹೇಳುತ್ತವೆ?
*
ಭಾರತದ ಸಾರ್ವಭೌಮತ್ವ, ರಾಜ್ಯದ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳುಮಾಡುವ ಮಾಹಿತಿಯ ‘ಮೂಲ’ವನ್ನು ಸಾಮಾಜಿಕ ಜಾಲತಾಣ ಕಂಪನಿಗಳು ಪತ್ತೆಹಚ್ಚಬೇಕು.
* ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ಯಾವುದೇ ಸಂದೇಶವನ್ನು ಅಳಿಸುವಂತೆ ಸರ್ಕಾರದ ಅಧಿಕಾರಿಗಳು ಸೂಚನೆ ನೀಡಿದ 36 ಗಂಟೆಯೊಳಗೆ ಆಯಾ ಕಂಪನಿಗಳು ಅದನ್ನು ಕಾರ್ಯಗತಗೊಳಿಸಬೇಕು.
* ಈ ಕುರಿತ ದೂರುಗಳಿಗೆ ಸ್ಪಂದಿಸುವ ವ್ಯವಸ್ಥೆಯನ್ನು ಕಂಪನಿಗಳು ರೂಪಿಸಬೇಕು.
*ಅಶ್ಲೀಲತೆಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ತೆಗೆದುಹಾಕಲು ಸ್ವಯಂಚಾಲಿತ ವ್ಯವಸ್ಥೆ ಜಾರಿಗೊಳಿಸಬೇಕು.
*ಮುಖ್ಯ ದೂರು ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ನಿವಾರಣೆ ಅಧಿಕಾರಿಗಳನ್ನು ಕಂಪನಿಗಳು ಭಾರತದಲ್ಲಿ ನೇಮಿಸಿಕೊಳ್ಳಬೇಕು.

ದ್ವಂದ್ವ ನಿಲುವಿಗೆ ಪೈ ಟೀಕೆ
ವಾಟ್ಸ್‌ಆ್ಯಪ್‌ ಕಂಪನಿಯ ನಡೆಯನ್ನು ದ್ವಿಮುಖ ನೀತಿ ಎಂದು ಐ.ಟಿ. ಉದ್ಯಮಿ ಟಿ.ವಿ. ಮೋಹನ್‌ದಾಸ್ ಪೈ ಟೀಕಿಸಿದ್ದಾರೆ. ಸರ್ಕಾರವು ಮೂಲ ಸಂದೇಶವನ್ನು ಹುಡುಕಿಕೊಡಿ ಎಂದು ಹೇಳಿದೆ. ಇದು ಖಾಸಗಿತನದ ಉಲ್ಲಂಘನೆ ಎಂದು ವಾಟ್ಸ್‌ಆ್ಯಪ್ ವಾದಿಸಿದೆ. ‘ಕೋಟ್ಯಂತರ ಜನರು ಬಳಕೆ ಮಾಡುತ್ತಿರುವ ಕಾರಣ ಸಾಮಾಜಿಕ ಜಾಲತಾಣಗಳು ಸಾರ್ವಜನಿಕ ತಾಣಗಳಾಗಿ ಮಾರ್ಪಟ್ಟಿವೆ. ನಮ್ಮ ದತ್ತಾಂಶಗಳು ಸುರಕ್ಷಿತವಾಗಿಲ್ಲ. ಈ ಕಂಪನಿಗಳು ಅಮೆರಿಕದ ಕಾನೂನಿಗೆ ಬದ್ಧವಾಗಿವೆ. ಅಲ್ಲಿನ ಭದ್ರತಾ ಸಂಸ್ಥೆಗಳು ನಮ್ಮ ದತ್ತಾಂಶಗಳನ್ನು ಖಂಡಿತವಾಗಿ ನೋಡಬಹುದು. ಖಾಸಗಿತನ ಎಂಬುದು ಎಲ್ಲಿದೆ? ನಮ್ಮ ಸರ್ಕಾರ ಮತ್ತು ನಮ್ಮ ಕಾನೂನುಗಳು ಖಾಸಗಿತನವನ್ನು ವ್ಯಾಖ್ಯಾನಿಸಬೇಕೇ ಹೊರತು ವಾಟ್ಸ್‌ಆ್ಯಪ್‌ನಂತಹ ಸಂಸ್ಥೆಗಳಲ್ಲ’ ಎಂದು ಮೋಹನ್‌ದಾಸ್ ಪೈ ಹೇಳಿದ್ದಾರೆ.

ಸರ್ಕಾರದ ಮಾರ್ಗಸೂಚಿಗೆ ಫೇಸ್‌ಬುಕ್, ಗೂಗಲ್ ಪ್ರತಿಕ್ರಿಯೆ
ಸರ್ಕಾರದ ನೂತನ ಮಾರ್ಗ ಸೂಚಿಗಳ ಅನ್ವಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬುದಾಗಿ ಗೂಗಲ್ ಹಾಗೂ ಫೇಸ್‌ಬುಕ್ ಮಂಗಳವಾರ ತಿಳಿಸಿವೆ. ನೂತನ ನೀತಿಗಳು ಜಾರಿಯಾಗುವ ಕೆಲವೇ ಗಂಟೆಗಳ ಮೊದಲು ಈ ಪ್ರತಿಕ್ರಿಯೆ ನೀಡಿವೆ.

‘ಕಾನೂನುಬಾಹಿರ ವಿಷಯವನ್ನು ಪರಿಣಾಮಕಾರಿ ಮತ್ತು ನ್ಯಾಯಯುತ ರೀತಿಯಲ್ಲಿ ಎದುರಿಸಲು ಕಂಪನಿ ಬದ್ಧವಾಗಿದೆ. ಸ್ಥಳೀಯ ಕಾನೂನುಗಳನ್ನು ಅನುಸರಿಸಲು ಕಂಪನಿಯ ನೀತಿಯಲ್ಲಿ ಮಾರ್ಪಾಡು ಮಾಡಿಕೊಳ್ಳಲಾಗಿದೆ’ ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಫೇಸ್‌ಬುಕ್ ಸಂಸ್ಥೆಯು ಸ್ವಯಂಪ್ರೇರಿತ ಪರಿಶೀಲನೆ, ‘ಅಶ್ಲೀಲ’ ವಿಡಿಯೊ, ಚಿತ್ರ ತೆಗೆದುಹಾಕಲು 24 ಗಂಟೆಗಳ ಕಾಲಮಿತಿ ನಿಗದಿಪಡಿಸಿದೆ. ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಸರ್ಕಾರದ ಸೂಚನೆಯಂತೆ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಭಾರತದ ಮೈಕ್ರೊಬ್ಲಾಗಿಂಗ್ ತಾಣ ‘ಕೂ’, ಸರ್ಕಾರದ ನಿಯಮಾವಳಿಗಳನ್ನು ಜಾರಿಗೆ ತಂದಿರುವುದಾಗಿ ಕಳೆದ ವಾರವೇ ತಿಳಿಸಿತ್ತು.

ಖಾಸಗಿತನದ ವಿರುದ್ಧ ಅಲ್ಲ: ಸರ್ಕಾರ
ಸಾಮಾಜಿಕ ಜಾಲತಾಣ ಬಳಕೆದಾರರ ಖಾಸಗಿತನವನ್ನು ಗೌರವಿಸುವುದಾಗಿ ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ. ಭಾರತದ ಸಾರ್ವಭೌಮತ್ವ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ‘ಅತ್ಯಂತ ಗಂಭೀರವಾದ ಅಪರಾಧಗಳ’ ತಡೆಗಟ್ಟುವಿಕೆ ಮತ್ತು ತನಿಖೆ ವಿಷಯದಲ್ಲಿ ಮಾತ್ರ ಸಂದೇಶಗಳ ಮೂಲವನ್ನು ಕಂಡುಹಿಡಿಯಲಾಗುವುದು ಎಂದು ತಿಳಿಸಿದೆ.

ಕೊನೆಯ ಕ್ಷಣದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ ವಾಟ್ಸ್‌ಆ್ಯಪ್‌ನ ಕ್ರಮವು ದುರದೃಷ್ಟಕರ ಎಂದು ಐ.ಟಿ ಸಚಿವಾಲಯ ಹೇಳಿದೆ. ‘ಬ್ರಿಟನ್, ಅಮೆರಿಕ, ನ್ಯೂಜಿಲೆಂಡ್, ಕೆನಡಾದಂತಹ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಜಾರಿಗಳಿಸಿರುವ ನಿಯಮಗಳು ತೀವ್ರತರವಾಗಿಲ್ಲ. ಹೊಸ ನಿಯಮಗಳು ಖಾಸಗಿತನ ಉಲ್ಲಂಘಿಸುತ್ತವೆ ಎಂಬುದಾಗಿ ವಾಟ್ಸ್‌ಆ್ಯಪ್ ಬಿಂಬಿಸುತ್ತಿದ್ದು, ಜನರ ದಾರಿ ತಪ್ಪಿಸುತ್ತಿದೆ’ ಎಂದು ಆರೋಪಿಸಿದೆ.

‘ಜನರ ಖಾಸಗಿತನ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಇದೇ ವೇಳೆ ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳಬೇಕಾದದ್ದು ಸರ್ಕಾರದ ಕರ್ತವ್ಯ. ಸರ್ಕಾರ ಜಾರಿಗೊಳಿಸಿರುವ ಯಾವುದೇ ನಿಯಮವು ವಾಟ್ಸ್‌ಆ್ಯಪ್‌ನ ಸಾಮಾನ್ಯ ಪ್ರಕ್ರಿಯೆಗೆ ಅಥವಾ ಬಳಕೆದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಬಳಕೆದಾರರ ಸಂಖ್ಯೆ
ವಾಟ್ಸ್‌ಆ್ಯಪ್
; 53 ಕೋಟಿ
ಫೇಸ್‌ಬುಕ್; 41 ಕೋಟಿ
ಇನ್‌ಸ್ಟಾಗ್ರಾಮ್; 21 ಕೋಟಿ
ಟ್ವಿಟರ್; 1.75 ಕೋಟಿ
ಕೂ: 60 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT