ಮಂಗಳವಾರ, ಡಿಸೆಂಬರ್ 1, 2020
21 °C

ತ್ವರಿತವಾಗಿ ಕುಡಿಯುವ ನೀರು ಒದಗಿಸುವ ಕಾರ್ಯಕ್ಕೆ ವೇಗ: ಪ್ರಧಾನಿ ನರೇಂದ್ರ ಮೋದಿ

ಎಎನ್‌ಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಉತ್ತರ ಪ್ರದೇಶದ ಮಿರ್ಜಾಪುರ ಮತ್ತು ಸೋನ್‌ಭದ್ರ ಜಿಲ್ಲೆಗಳಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರ್ಯದ ನಂತರ ದಶಕಗಳಿಂದಲೂ ಈ ಪ್ರದೇಶವನ್ನು ನಿರ್ಲಕ್ಷಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಪ್ರದೇಶದ ಪ್ರತಿ ಮನೆಗಳಿಗೆ ನೀರು ಸರಬರಾಜು ಮಾಡಲೆಂದೇ ಈ ಪ್ರದೇಶದಲ್ಲಿ ವೇಗವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಒತ್ತಿ ಹೇಳಿದ್ದಾರೆ.

ವಿಡಿಯೊ ಕಾನ್ಫರೆನ್ಸ್ ಮೂಲಕ 'ಜಲ ಜೀವನ್ ಮಿಷನ್'ಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರ ದಶಕಗಳಿಂದ ನಿರ್ಲಕ್ಷಿಸಲ್ಪಟ್ಟ ಯಾವುದೇ ಒಂದು ಪ್ರದೇಶವಿದ್ದರೆ, ಅದು ಈ ಪ್ರದೇಶವೇ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹಾಗಾಗಿಯೇ ಜನರು ತಮ್ಮ ಜೀವನೋಪಾಯಕ್ಕಾಗಿ ವಲಸೆ ಹೋಗಬೇಕಾಗಿ ಬಂತು. ಆದರೆ ಮುಂಬರುವ ದಿನಗಳಲ್ಲಿ 3,500 ಹಳ್ಳಿಗಳಿಗೆ ನೀರು ಸರಬರಾಜು ಆದಾಗ, ಇದು 40 ಲಕ್ಷಕ್ಕೂ ಹೆಚ್ಚು ಜನರ ಜೀವನವನ್ನು ಬದಲಾಯಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯಡಿ ಲಕ್ಷಾಂತರ ಕುಟುಂಬಗಳಿಗೆ ತಮ್ಮ ಮನೆಗಳಲ್ಲಿ ಕುಡಿಯುವ ನೀರು ಸಿಗಲಿದೆ. ವಿಂಧ್ಯಾಚಲ್‌ ಅಥವಾ ಬುಂದೇಲ್‌ಖಂಡ್‌ಗಳಲ್ಲಿ ಸಾಕಷ್ಟು ಸಂಪನ್ಮೂಲಗಳಿದ್ದರೂ ಕೂಡ ಕೊರತೆಯ ಪ್ರದೇಶಗಳಾಗಿ ಕಂಡಿವೆ. ಇಲ್ಲಿ ಹಲವಾರು ನದಿಗಳ ಹೊರತಾಗಿಯೂ, ಈ ಪ್ರದೇಶಗಳು ಅತ್ಯಂತ ಬರಡು ಮತ್ತು ಬರ ಪೀಡಿತ ಪ್ರದೇಶಗಳೆಂದು ಪ್ರಸಿದ್ಧವಾದವು ಎಂದಿದ್ದಾರೆ.

ಇದು ರಾಜ್ಯ ಮತ್ತು ದೇಶದ ಪ್ರತಿ ಮನೆಗಳಿಗೆ ನೀರು ಸರಬರಾಜು ಮಾಡುವ ಪ್ರಯತ್ನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸದ್ಯದ ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯೂ ಅಭಿವೃದ್ಧಿ ಕಂಡಿರುವುದಕ್ಕೆ ಉತ್ತರ ಪ್ರದೇಶ ಉದಾಹರಣೆಯಾಗಿದೆ. ಇದು ಉತ್ತರ ಪ್ರದೇಶದ ಸರ್ಕಾರ ಮತ್ತು ಅದರ ಜನರ ಮೇಲಿದ್ದ ಚಿತ್ರಣವನ್ನೇ ಬದಲಾಯಿಸುತ್ತಿದೆ ಎಂದು ಹೇಳಿದರು.

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರದ ಪ್ರಯತ್ನವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಸಾಂಕ್ರಾಮಿಕ ರೋಗದ ಸಮಯದಲ್ಲಿ ಇತರೆಡೆಗಳಿಂದ ಮರಳಿ ಬಂದ ವಲಸಿಗರನ್ನು ಹೇಗೆ ನೋಡಿಕೊಂಡರು ಎಂಬುದು ಸಣ್ಣ ಸಾಧನೆಯಲ್ಲ. 'ಹರ್ ಘರ್ ಜಲ' ಯೋಜನೆಗೆ ಒಂದು ವರ್ಷವಾಗಿದೆ. ಈ ಮೂಲಕ 2.60 ಕೋಟಿ ಕುಟುಂಬಗಳಿಗೆ ತಮ್ಮ ಮನೆಗಳಲ್ಲಿ ಟ್ಯಾಪ್ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದೆ. ಇಂದು ಪ್ರಾರಂಭವಾದ ಯೋಜನೆಗಳು ಅದನ್ನು ಇನ್ನಷ್ಟು ವೇಗಗೊಳಿಸುತ್ತವೆ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು