ಸೋಮವಾರ, ಜೂನ್ 27, 2022
24 °C

ಆಳ–ಅಗಲ: ಚುನಾವಣೆ ಮೊದಲಿನ ಪಕ್ಷಾಂತರ ತಂತ್ರ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರ ಬಂದಿದೆ. ಪಕ್ಷಾಂತರದ ಇನ್ನೊಂದು ಅಧ್ಯಾಯಕ್ಕೆ ಬಿಜೆಪಿ ಈಗಾಗಲೇ ಚಾಲನೆ ನೀಡಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕ ಜಿತಿನ್ ಪ್ರಸಾದ ಅವರು ಬುಧವಾರವಷ್ಟೇ ಬಿಜೆಪಿ ಸೇರಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಳು ಘೋಷಣೆಯಾಗುವ ಮುನ್ನ ಪ್ರತಿ ಬಾರಿಯೂ ಪಕ್ಷಾಂತರಗಳು ನಡೆದು ರಾಜಕೀಯವಾಗಿ ಹೊಸ ಸಮೀಕರಣಗಳು ಸೃಷ್ಟಿಯಾಗುತ್ತವೆ. ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆಗಳಿಗೆ ಚುನಾವಣೆಗಳು ಘೋಷಣೆಯಾಗುವ ಮುನ್ನವೇ ಪಕ್ಷಾಂತರ ಆರಂಭವಾಗಿತ್ತು. ಆದರೆ ಪಕ್ಷಾಂತರಿಗಳಲ್ಲಿ ಹೆಚ್ಚಿನವರು ವಲಸೆ ಹೋಗಿದ್ದು ಬಿಜೆಪಿಗೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರ ಬಂದಿದೆ. ಪಕ್ಷಾಂತರದ ಇನ್ನೊಂದು ಅಧ್ಯಾಯಕ್ಕೆ ಬಿಜೆಪಿ ಈಗಾಗಲೇ ಚಾಲನೆ ನೀಡಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕ ಜಿತಿನ್ ಪ್ರಸಾದ ಅವರು ಬುಧವಾರವಷ್ಟೇ ಬಿಜೆಪಿ ಸೇರಿದ್ದಾರೆ.

20 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಪ್ರಮಾಣ ಶೇ 13ರಷ್ಟಿದೆ. ಹಲವು ಕ್ಷೇತ್ರಗಳಲ್ಲಿ ಬ್ರಾಹ್ಮಣರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಅಲ್ಲದೆ, ಉತ್ತರ ಪ್ರದೇಶದಲ್ಲಿ ‘ಮೇಲುಜಾತಿ’ ಎಂದು ಗುರುತಿಸಿಕೊಳ್ಳುವ  ಮೂರು ಪ್ರಮುಖ ಜಾತಿಗಳಲ್ಲಿ ಬ್ರಾಹ್ಮಣ ಸಮುದಾಯ ಸಹ ಒಂದು. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಹಲವು ದಶಕಗಳ ಕಾಲ ಬ್ರಾಹ್ಮಣರು ಕಾಂಗ್ರೆಸ್‌ನ ಜತೆಗಿದ್ದರು. 90ರ ದಶಕದಲ್ಲಿ ಬಿಜೆಪಿಯ ಕಟ್ಟಾ ಬೆಂಬಲಿಗರಾಗಿ ಬದಲಾದರು. ಈ ಬೆಳವಣಿಗೆಯ ನಡುವೆಯೂ ಬ್ರಾಹ್ಮಣರ ಒಂದು ವರ್ಗವು ಕಾಂಗ್ರೆಸ್‌ನ ಜತೆಯಲ್ಲಿಯೇ ಇತ್ತು. ಈಗ ಇವರನ್ನೂ ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ಮುಂದಾಗಿದೆ.

ಬಿಜೆಪಿಯ ಕಟ್ಟಾ ಬೆಂಬಲಿಗರಾಗಿದ್ದರೂ 2017ರ ಚುನಾವಣೆಯ ನಂತರ ಯೋಗಿ ಆದಿತ್ಯನಾಥ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದರ ಬಗ್ಗೆ ಬ್ರಾಹ್ಮಣರಲ್ಲಿ ಪ್ರಬಲ ಅಸಮಾಧಾನವಿದೆ. ಠಾಕೂರ್‌ ಸಮುದಾಯದವರಾದ ಯೋಗಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದಕ್ಕೆ ಬಿಜೆಪಿಯ ಕೆಲವು ಬ್ರಾಹ್ಮಣ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಯೋಗಿಯ ಪರವಾಗಿ ಬೆಂಬಲ ಪ್ರಬಲವಾಗಿದ್ದ ಕಾರಣ ಈ ಆಕ್ಷೇಪಗಳಿಗೆ ಮಣೆಯನ್ನೇ ಹಾಕಿರಲಿಲ್ಲ. ತಮ್ಮ ಆಡಳಿತಾವಧಿಯಲ್ಲಿ ಯೋಗಿ ಅವರು ಬ್ರಾಹ್ಮಣರನ್ನು ತಮ್ಮ ಆಪ್ತವಲಯದಿಂದ ದೂರವೇ ಇಟ್ಟಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಯೋಗಿ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ಬಿಜೆಪಿ ಹೇಳಿದ ನಂತರ ಬ್ರಾಹ್ಮಣರ ಈ ಅಸಮಾಧಾನ ಮತ್ತಷ್ಟು ತೀವ್ರಗೊಂಡಿದೆ ಎಂಬ ವಿಶ್ಲೇಷಣೆ ಇದೆ.

ಕೋವಿಡ್‌ ನಿರ್ವಹಣೆಯಲ್ಲಿ ಯೋಗಿ ಅವರು ವಿಫಲವಾಗಿದ್ದಾರೆ ಎಂಬ ಟೀಕೆ ಬಿಜೆಪಿಯಲ್ಲೇ ವ್ಯಕ್ತವಾಗುತ್ತಿದೆ. ಯೋಗಿ ವಿರುದ್ಧದ ಅಸಮಾಧಾನ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ಚುನಾವಣೆ ಯಲ್ಲಿ ಯಾವುದೇ ಎಡವಟ್ಟು ಆಗುವುದನ್ನು ತಡೆಯಲು ಬಿಜೆಪಿ ಮುಂದಾಗಿದೆ. ಮತಗಳನ್ನು ಉಳಿಸಿಕೊಳ್ಳುವ ಮತ್ತು ಸೆಳೆಯುವ ಎಲ್ಲಾ ಪ್ರಯತ್ನಗಳನ್ನು ಬಿಜೆಪಿ ಮಾಡಲಿದೆ.

ಈ ಪ್ರಯತ್ನದ ಭಾಗವಾಗಿಯೇ ಈಗ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊಂದಿರುವ ಬ್ರಾಹ್ಮಣ ಸಮುದಾಯವನ್ನು ಓಲೈಸಲು ಬಿಜೆಪಿ ಮುಂದಾಗಿದೆ. ಜಿತಿನ್‌ ಅವರ ಈವರೆಗಿನ ರಾಜಕೀಯ ಸಾಧನೆಗೆ ಬಂಗಾರದ ಹೊಳಪೇನೂ ಇಲ್ಲ. ಜಿತಿನ್‌ ಅವರು ತಳಮಟ್ಟದಲ್ಲಿ ಭಾರಿ ಬೆಂಬಲ ಇರುವ ನಾಯಕ ಅಲ್ಲ. 2009ರ ನಂತರದ ಎರಡು ಲೋಕಸಭಾ ಚುನಾವಣೆಯಲ್ಲಿಯೂ ಅವರು ಸೋತಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಜಿತಿನ್‌ ಅವರು ಕಾಂಗ್ರೆಸ್‌ ಉಸ್ತುವಾರಿ ಆಗಿದ್ದರು. ಅಲ್ಲಿ ಒಂದು ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ ಗೆದ್ದಿಲ್ಲ. 

ಬ್ರಾಹ್ಮಣ ಸಮುದಾಯದ ಜಿತಿನ್ ಅವರನ್ನು ಪಕ್ಷಕ್ಕೆ ಸೇರಿಸುವ ಮೂಲಕ ತನ್ನ ಬೆಂಬಲಕ್ಕಿರುವ ಬ್ರಾಹ್ಮಣರನ್ನು ಸಮಾಧಾನಪಡಿಸುವುದು ಬಿಜೆಪಿಯ ಗುರಿ ಆಗಿರಬಹುದು. ಜತೆಗೆ ಇದು, ಕಾಂಗ್ರೆಸ್‌ ಬೆಂಬಲಕ್ಕಿದ್ದ ಬ್ರಾಹ್ಮಣರನ್ನು
ಸೆಳೆಯುವ ತಂತ್ರವೂ ಆಗಿದೆ. ಬಿಜೆಪಿಯಲ್ಲಿ ಈವರೆಗೆ ಬ್ರಾಹ್ಮಣ ಸಮುದಾಯವನ್ನು ಪ್ರತಿನಿಧಿಸುವ ಪ್ರಬಲ ನಾಯಕರೇ ಇರಲಿಲ್ಲ. ಈ ಕೊರತೆಯನ್ನು ಜಿತಿನ್ ತುಂಬಬಹುದೇ ಎಂಬ ಪ್ರಶ್ನೆಯೂ ಇದೆ. 

ಬಿಜೆಪಿ ಈ ಹಿಂದೆಯೂ ರಾಜ್ಯದ ಎಲ್ಲಾ ಬ್ರಾಹ್ಮಣರನ್ನು ಸೆಳೆಯುವ ತಂತ್ರಗಳನ್ನು ಹೂಡಿತ್ತು. ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೇಮಾವತಿ ನಂದನ ಬಹುಗುಣ ಅವರ ಮಗಳು, ರೀತಾ ಬಹುಗುಣ ಜೋಶಿ ಅವರು 2016ರಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಆದರೆ ಆಗಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಆ ಪಕ್ಷಾಂತರದಿಂದ ಯಾವುದೇ ಲಾಭವಾಗಿರಲಿಲ್ಲ. ಈಗಿನ ತಂತ್ರ ಕೆಲಸಕ್ಕೆ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಬಂಗಾಳದಲ್ಲಿ ಬಿಜೆಪಿಗೆ ಕೈಕೊಟ್ಟ ‘ಸಿದ್ಧಸೂತ್ರ’

2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ರಾಜ್ಯಗಳಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರುವ ಮಹತ್ವಾಕಾಂಕ್ಷೆ ಹೊತ್ತಿದ್ದ ಬಿಜೆಪಿ, ನಂತರದ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿಯಿತು. ಕೆಲವು ಕಡೆ ಚುನಾವಣೆಗೂ ಮುನ್ನ ಪಕ್ಷಾಂತರದ ಮೂಲಕ ಶಾಸಕರನ್ನು ಸೆಳೆದು ಅಧಿಕಾರ ಹಿಡಿಯುವ ಯತ್ನ ಮಾಡಿ ಅದರಲ್ಲಿ ಯಶಸ್ವಿಯೂ ಆಯಿತು. ಇದು ಮುಂದೆ ಬಿಜೆಪಿಯ ನೀತಿಯೇ ಆಗಿಹೋಯಿತು. ಒಕ್ರಮ್ ಐಬೊಬಿ ಸಿಂಗ್, ಪೆಮಾ ಖಂಡು, ಹಿಮಂತ ಬಿಸ್ವ ಶರ್ಮಾ ಅವರು ಬಿಜೆಪಿಗೆ ಬಂದು ಮುಖ್ಯಮಂತ್ರಿ ಪಟ್ಟಕ್ಕೇರಿದರು. ಅಸ್ಸಾಂ, ಮಣಿಪುರ ಮೊದಲಾದೆಡೆ ನಡೆಸಿದ ಈ ಪ್ರಯೋಗವನ್ನು ಪಶ್ಚಿಮ ಬಂಗಾಳದಲ್ಲಿ ಪ್ರಯೋಗಿಸಲು ಹೋಗಿ ಎಡವಿತು.

ತನಗೆ ನೆಲೆ ಇಲ್ಲದ ಹಿಂದಿಯೇತರ ಪ್ರದೇಶ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯುವ ಉಮೇದಿನಿಂದ ಟಿಎಂಸಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳಿಂದ ಭಾರಿ ಸಂಖ್ಯೆಯ ಮುಖಂಡರನ್ನು ಬಿಜೆಪಿ ಸೆಳೆಯಿತು. ಚುನಾವಣೆಯ ಹೊಸ್ತಿಲಲ್ಲಿ ಸುವೇಂದು ಅಧಿಕಾರಿ, ರಾಜೀವ್‌ ಬ್ಯಾನರ್ಜಿ ಅವರಂತಹ ಪ್ರಭಾವಿ ನಾಯಕರನ್ನು ಪಕ್ಷಕ್ಕೆ ಕರೆತರಲಾಯಿತು. ಪಕ್ಷ ಭಾರಿ ಬಲಿಷ್ಠವಾಗಿದೆ ಎಂದು ಬಿಂಬಿಸಲಾಯಿತು. ಪಕ್ಷ ಅಧಿಕಾರಕ್ಕೆ ಬಂದೇಬಿಟ್ಟಿತು ಎನ್ನುವಂತೆ ಉತ್ಸಾಹ ಪ್ರದರ್ಶಿಸಿತು.

ಆದರೆ ಬಿಜೆಪಿಯ ಸರ್ವ ಪ್ರಯತ್ನವೂ ಬುಡಮೇಲಾಗಿದೆ ಎಂಬುದನ್ನು ಫಲಿತಾಂಶವು ತೋರಿಸಿತು. ಸುವೇಂದು ಅಧಿಕಾರಿ ಮಾತ್ರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ನಂದಿಗ್ರಾಮದಲ್ಲಿ ಗೆದ್ದುಬಂದರು. ಉಳಿದೆಡೆ ಭಾರಿ ಸ್ಪರ್ಧೆ ಒಡ್ಡುವುದು ಬಿಜೆಪಿಯಿಂದ ಆಗಲಿಲ್ಲ. ಚುನಾವಣಾ ಪ್ರಕ್ರಿಯೆ ಆರಂಭವಾದಾಗಿನಿಂದ ಬಿರುಸಿನ ವಾಕ್ಸಮರ, ನಿಂದನೆ, ಹಲ್ಲೆ, ಘರ್ಷಣೆ, ಗೋಲಿಬಾರ್‌, ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಬಂಗಾಳದಲ್ಲಿ ಮಮತಾ ಅವರಿಗೆ ಲಗಾಮು ಹಾಕಲು ಬಿಜೆಪಿಗೆ ಸಾಧ್ಯವಾಗಲಿಲ್ಲ.

ಹೊರಗಿನಿಂದ ಬಂದವರಿಗೆ ಪಕ್ಷ ಹೆಚ್ಚು ಮಣೆ ಹಾಕಿದ್ದರಿಂದ ಸ್ಥಳೀಯ ಕಾರ್ಯಕರ್ತರು ಪ್ರಚಾರ ಕಾರ್ಯದಿಂದ ವಿಮುಖರಾದರು. ರಾಜ್ಯದ ಮೂಲ ಬಿಜೆಪಿಗರ ಬೆಂಬಲ ಅಷ್ಟಾಗಿ ಸಿಗಲಿಲ್ಲ. ರಾಜ್ಯ ಬಿಜೆಪಿ ಘಟಕದ ಬದಲು ಕೇಂದ್ರ ಬಿಜೆಪಿ ನಾಯಕತ್ವವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಯಿತು. ಅತಿಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಇವೆಲ್ಲ ಕಾರಣಗಳು ಮುಳುವಾದವು.

ಬಿಜೆಪಿಯ ಅಸ್ತ್ರ ಕೈಕೊಟ್ಟಿದ್ದರ ಪರಿಣಾಮ, ಅನ್ಯ ಪಕ್ಷಗಳಿಂದ ಕರೆತಂದವರ ಪೈಕಿ ಗೆದ್ದಿದ್ದು 8 ಮಂದಿ ಮಾತ್ರ. ಮಮತಾಗೆ ಸೆಡ್ಡು ಹೊಡೆಯಲು ಹೊರಟಿದ್ದ ಬಿಜೆಪಿಗೆ ಪಕ್ಷಾಂತರಿಗಳೇ ಮುಳುವಾದರು. ಎಲ್ಲ ರಾಜ್ಯಗಳಲ್ಲಿ ಅನುಸರಿಸಿದ್ದ ಬಿಜೆಪಿಯ ಸಿದ್ಧಸೂತ್ರಕ್ಕೆ ಸೋಲಾಯಿತು. ಬಿಜೆಪಿಗೆ ಹೋಗಿದ್ದವರು ಇದೀಗ ತಮ್ಮ ಮಾತೃ ಪಕ್ಷಗಳತ್ತ ಮುಖಮಾಡವಷ್ಟರ ಮಟ್ಟಿಗೆ ಬಿಜೆಪಿಯಲ್ಲಿ ಬದಲಾವಣೆ ಆಗುತ್ತಿದೆ.

ಬಚ್ಚು ಹಂಸದಾ, ಸೋನಾಲಿ ಗುಹಾ, ಸರಳಾ ಮುರ್ಮು, ಅಮಲ್ ಆಚಾರ್ಯ, ದೀಪೇಂದು ಬಿಸ್ವಾಸ್ ಮೊದಲಾದವರು ಮರಳಿ ಟಿಎಂಸಿ ಸೇರಲು ಹಾತೊರೆಯುತ್ತಿದ್ದು, ಮಮತಾ ಒಪ್ಪಿಗೆಗೆ ಕಾಯುತ್ತಿದ್ದಾರೆ. ಇವರಿಗೆ ಮತ್ತೆ ಅವಕಾಶ ನೀಡುವ ಭರವಸೆಯನ್ನೂ ಮಮತಾ ನೀಡಿದ್ದಾರೆ ಎನ್ನಲಾಗಿದೆ.

ಪುದುಚೇರಿಯಲ್ಲಿ ಸಿಹಿ ಕೇರಳ, ತಮಿಳುನಾಡಲ್ಲಿ ಕಹಿ

ಚುನಾವಣೆಗೂ ಮೊದಲೇ ಬೇರೆ ಪಕ್ಷಗಳಿಂದ ಪ್ರಭಾವಿ ನಾಯಕರನ್ನು ಸೆಳೆದು, ಅಧಿಕಾರವನ್ನು ಹಿಡಿಯುವ ಬಿಜೆಪಿಯ ಪ್ರಯತ್ನಕ್ಕೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಂಥ ಯಶಸ್ಸು ಸಿಕ್ಕಿಲ್ಲ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡು, ಕೇರಳ ಹಾಗೂ ಪುದುಚೇರಿಯಲ್ಲಿ ಅಂಥ ಪ್ರಯತ್ನಗಳನ್ನು ಬಿಜೆಪಿ ಮಾಡಿತ್ತು. ಸ್ವಲ್ಪಮಟ್ಟಿನ ಯಶಸ್ಸು ಕಂಡಿದ್ದು ಪುದುಚೇರಿಯಲ್ಲಿ ಮಾತ್ರ.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕೆ ಕಾಂಗ್ರೆಸ್‌ನಿಂದ ಉಚ್ಚಾಟಿತರಾಗಿದ್ದ ಎ. ನಮಶ್ಶಿವಾಯಂ ಹಾಗೂ ಈ. ತೀಪ್ಪೈಂದನ್‌ ಅವರನ್ನು ಬಿಜೆಪಿಯು ಚುನಾವಣೆಗೂ ಮೊದಲು ತನ್ನತ್ತ ಸೆಳೆದುಕೊಂಡಿತು. ಇದಾದ ನಂತರ ಇನ್ನಿಬ್ಬರು ಶಾಸಕರನ್ನು ಸೆಳೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಇದರಿಂದ, ಅವಧಿ ಮುಗಿಯುವುದಕ್ಕೂ ಎರಡು ತಿಂಗಳು ಮೊದಲು ಪುದುಚೇರಿಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನವಾಗುವಂತಾಯಿತು. ಈ ನಾಯಕರನ್ನು ಕಣಕ್ಕಿಳಿಸುವುದರ ಜತೆಗೆ ಕಾಂಗ್ರೆಸ್‌ ಒಳಗಿನ ಅತೃಪ್ತರನ್ನೂ ಬಳಸಿಕೊಂಡು, ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಲು ಬಿಜೆಪಿಗೆ ಸಾಧ್ಯವಾಯಿತು. ಹಿಂದಿನ ಚುನಾವಣೆಯಲ್ಲಿ ಇಲ್ಲಿ ಖಾತೆ ತೆರೆಯಲು ಸಹ ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಈ ಬಾರಿ ಮಿತ್ರಪಕ್ಷ ಎನ್‌ಆರ್‌ ಕಾಂಗ್ರೆಸ್‌ ಜತೆ ಸೇರಿ ಅಧಿಕಾರ ಹಿಡಿಯಲು ಯಶಸ್ವಿಯಾಯಿತು.

ಬಿಜೆಪಿಯು ಇಂಥದ್ದೇ ಪ್ರಯತ್ನವನ್ನು ತಮಿಳುನಾಡು ಮತ್ತು ಕೇರಳದಲ್ಲೂ ನಡೆಸಿತ್ತಾದರೂ ಎರಡೂ ರಾಜ್ಯಗಳಲ್ಲಿ ದೊಡ್ಡ ಮೀನುಗಳು ಬಿಜೆಪಿಯ ಬಲೆಗೆ ಬಿದ್ದಿರಲಿಲ್ಲ.

ತಮಿಳುನಾಡಿನಲ್ಲಿ ನಟಿ ಖುಷ್ಬೂ, ಶಿವಾಜಿಗಣೇಶನ್‌ ಅವರ ಪುತ್ರ ರಾಮ್‌ಕುಮಾರ್‌, ಚೆನ್ನೈಯ ಮಾಜಿ ಮೇಯರ್‌ ಕರಾಟೆ ಆರ್‌. ತ್ಯಾಗರಾಜನ್‌ನಂಥ ಕೆಲವು ನಾಯಕರನ್ನು ಮಾತ್ರ ಪಕ್ಷಕ್ಕೆ ಸೆಳೆದುಕೊಳ್ಳಲು ಸಾಧ್ಯವಾಯಿತು. ಅದು ಹೆಚ್ಚು ಸಹಾಯಕವಾದಂತೆ ಕಾಣಿಸಲಿಲ್ಲ. ಎಐಎಡಿಎಂಕೆ ಜತೆಗಿನ ಮೈತ್ರಿ ಹಾಗೂ ಇತರ ಸ್ಥಳೀಯವಾದ ಕೆಲವು ಕಾರಣಗಳಿಂದ ರಾಜ್ಯದಲ್ಲಿ ಬಿಜೆಪಿಗೆ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ರಾಜ್ಯದಲ್ಲಿ ಬಿಜೆಪಿಯ ಇತಿಹಾಸವನ್ನು ನೋಡಿದರೆ ಇದು ದೊಡ್ಡ ಸಾಧನೆಯೇ. 20 ವರ್ಷಗಳ ನಂತರ ಪಕ್ಷದ ಪ್ರತಿನಿಧಿಗಳಿಗೆ ತಮಿಳುನಾಡು ವಿಧಾನಸಭೆಯೊಳಗೆ ಪ್ರವೇಶ ಲಭಿಸಿದೆ. ಆದರೆ, ಬಿಜೆಪಿ ಇದಕ್ಕೂ ದೊಡ್ಡ ಗೆಲುವನ್ನು ನಿರೀಕ್ಷಿಸಿತ್ತು. ರಾಜ್ಯದಲ್ಲಿ ಬಿಜೆಪಿಯ ಒಟ್ಟಾರೆ ಮತಗಳಿಕೆ ಪ್ರಮಾಣ ಈಗಲೂ ಶೇ 2.6ರ ಆಸುಪಾಸಿನಲ್ಲೇ ಇದೆ. ಕಳೆದ ಹಲವು ಚುನಾವಣೆಗಳಿಂದ ಈ ಪ್ರಮಾಣ ಹೀಗೆಯೇ ಇದೆ.

ಕೇರಳದಲ್ಲೂ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಯುಡಿಎಫ್‌, ಎಲ್‌ಡಿಎಫ್‌ ಪಾಳಿ ಆಡಳಿತವನ್ನೇ ನಾಲ್ಕು ದಶಕಗಳಿಂದ ನೋಡಿಕೊಂಡು ಬಂದಿರುವ ಕೇರಳವು ಈ ಬಾರಿ ಆ ಸಂಪ್ರದಾಯವನ್ನು ಮುರಿದಿದೆ. ಇತರ ಪಕ್ಷಗಳ ಪ್ರಭಾವಿ ಮುಖಂಡರನ್ನು ತನ್ನತ್ತ ಸೆಳೆಯಲು ಬಿಜೆಪಿಗೆ ಇಲ್ಲಿ ಸಾಧ್ಯವಾಗಿಲ್ಲ. ಅದಕ್ಕಾಗಿ ಮೆಟ್ರೋ ಮ್ಯಾನ್‌ ಖ್ಯಾತಿಯ ಶ್ರೀಧರನ್‌ ಅವರ ವರ್ಚಸ್ಸನ್ನು ಬಳಸಿಕೊಳ್ಳುವ ಪ್ರಯತ್ನ ನಡೆಸಿತು.

ಶ್ರೀಧರನ್‌ ಅವರನ್ನು ಮುಂಚೂಣಿಯ ನಾಯಕನೆಂದು ಬಿಂಬಿಸಲಾಯಿತು. ಬಿಜೆಪಿ ಅಧಿಕಾರಕ್ಕೆ ಬಂದರೆ ಅವರೇ ಮುಖ್ಯಮಂತ್ರಿ ಎಂದು ಪರೋಕ್ಷವಾಗಿ ಹೇಳಲಾಯಿತು. 30ರಿಂದ 40 ಸ್ಥಾನಗಳನ್ನು ಗೆದ್ದರೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚಿಸಲಿದೆ ಎಂಬ ವಾದವನ್ನು ತೇಲಿಬಿಡುವ ಮೂಲಕ, ಅಷ್ಟು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಬಿಂಬಿಸುವ ಪ್ರಯತ್ನವೂ ನಡೆಯಿತು. ಯಾವುದೂ ಫಲನೀಡಲಿಲ್ಲ. ಇದ್ದ ಒಂದು ಸ್ಥಾನವನ್ನೂ ಬಿಜೆಪಿ ಕಳೆದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು