ಶನಿವಾರ, ಸೆಪ್ಟೆಂಬರ್ 19, 2020
22 °C

ಅನ್ನದೆಡೆಗೆ ಶಾಲಾ ಕಾಲೇಜಿನ ಎಳೆಯ–ಕುಡಿ ಮನಸ್ಸಿನ ವಿದ್ಯಾರ್ಥಿಗಳ ನಡಿಗೆ...

ನರೇಂದ್ರ ರೈ ದೇರ್ಲ Updated:

ಅಕ್ಷರ ಗಾತ್ರ : | |

Prajavani

ಕರಾವಳಿ –ಮಲೆನಾಡಿನ ಶಾಲಾ–ಕಾಲೇಜು ಮಕ್ಕಳನ್ನು ಮಳೆಗಾಲದಲ್ಲಿ ಗದ್ದೆಗಿಳಿಸಿ ನೇಜಿ ನೆಡುವ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿವೆ. ಬರೆಯುವ ಪರೀಕ್ಷೆಯೊಂದಿಗೆ ಬದುಕುವ ಪರೀಕ್ಷೆಗೂ ಸಜ್ಜುಗೊಳಿಸುವ ಈ ಹಸಿರು ಪಾಠ ಪ್ರಧಾನ ಪಠ್ಯವಾಗಬೇಕು.

ಅತ್ಯಂತ ವೇಗವಾಗಿ ಗದ್ದೆಗಳಿಗೆ ‌‌ಕೆಂಪು ಮಣ್ಣು ಬೀಳುವ, ಭತ್ತದ ಕೃಷಿ ಸರ್ವನಾಶವಾಗುತ್ತಿದೆಯೋ ಎಂಬ ಹೊತ್ತಿಗೆ ಕರಾವಳಿಯ ಅಳಿದುಳಿದ ಗದ್ದೆ– ಹೊಲಗಳಲ್ಲಿ ಹೊಸ ಹಸಿರು ದೃಶ್ಯಗಳು ಕಾಣಲಾರಂಭಿಸಿವೆ. ಇವು ಶಾಲಾ ಕಾಲೇಜುಗಳ ಎಳೆಯ–ಕುಡಿ ಮನಸ್ಸಿನ ವಿದ್ಯಾರ್ಥಿಗಳು ಗದ್ದೆಗಿಳಿದು ಕೆಸರಲ್ಲಿ ಓಡಾಡಿ ನಾಟಿ ಮಾಡುವ ಕೆಲಸದ ನೆಲಪರ ಚಿತ್ರಗಳವು.  ಪರಂಪರಾಗತ ಹಿರಿಯರ ಜೀವನಕ್ರಮ ತಿಳಿಯುವ, ಅನ್ನದ ದಾರಿಯನ್ನು ಪರಿಚಯಿಸಿಕೊಳ್ಳುವ ಅಗತ್ಯದ ಕಾಯಕವಿದು.

‘ನಮ್ಮ ನಡಿಗೆ ಅನ್ನದೆಡೆಗೆ’ ಎಂಬ ಈ ಹೊಸ ಹೆಜ್ಜೆಯಲ್ಲಿ ವ್ಯಕ್ತವಾಗುವ ಸಂಭ್ರಮ, ಉತ್ಸಾಹ ತಾತ್ಕಾಲಿಕವಾಗಿ ಇರಬಾರದು. ನೆಟ್ಟ ನೇಜಿ, ಪೈರು ಬಿಟ್ಟು ತೆನೆ ತುಂಬಿ ಅದನ್ನು ತಾವೇ ಕೊಯ್ಯುವ ಧಾನ್ಯ ಸಂಗ್ರಹಿಸಿ ಕುಟ್ಟಿ ಉಣ್ಣುವವರೆಗೆ ಸರಳ ಕಾರ್ಯಕ್ರಮವಾಗಿ ಕೃಷಿ ಆವರ್ತನದ ಪರಿಪೂರ್ಣ ಪ್ರಜ್ಞೆ ಕಿರಿಯರದ್ದಾಗಬೇಕು. 

ಕರಾವಳಿ– ಮಲೆನಾಡು ಜಗತ್ಪ್ರಸಿದ್ಧ ಮೆಡಿಕಲ್‌, ಎಂಜಿನಿ ಯರಿಂಗ್‌ ಕಾಲೇಜುಗಳಿರುವ ಊರು. ಯುವಕರು ಓದಿದ ದಾರಿಯಲ್ಲಿ ಅತ್ಯಂತ ವೇಗವಾಗಿ ನಗರಮುಖಿಯಾಗುತ್ತಿದ್ದಾರೆ. ಕೃಷಿ ಸಾಗುವಳಿಯಿಲ್ಲದೆ ಪಾಳುಬಿದ್ದ ಗದ್ದೆಗಳು ಕಡಿಮೆಯಿಲ್ಲ. ಕೃಷಿ ಕಾರ್ಮಿಕರ ಕೊರತೆ ಹೀಗೆ ಬೇರೆ ಬೇರೆ ಕಾರಣಗಳಿಂದ ಬೇಸಾಯವಿಲ್ಲದೆ ಕಾಡಾಗಿ ಪರಿವರ್ತಿತವಾದ ನೂರಾರು ಎಕರೆ ಗದ್ದೆಗಳು ಇಲ್ಲಿವೆ. ಕೃಷಿಕರು ಮುಂಬೈ, ಅರಬ್‌ ರಾಷ್ಟ್ರಗಳ ವಲಸೆ ಹೋದ ಕಾರಣ ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಇಂಥ ಬರಡು ಗದ್ದೆಗಳು ಹೆಚ್ಚು.

ಹತ್ತಾರು ವರ್ಷಗಳಿಂದ ಬೇಸಾಯ ಕಾಣದ ಇಂಥ ಗದ್ದೆಗಳನ್ನು ಹುಡುಕಿ ಅವುಗಳ ವಾರಸುದಾರರೊಂದಿಗೆ ಒಪ್ಪಂದ ಮಾಡಿಕೊಂಡು ಕಾಲೇಜುಗಳ ಎನ್‌ಎಸ್‌ಎಸ್‌ ಘಟಕಗಳು ಕಾರ್ಯೋನ್ಮುಖವಾಗುತ್ತಿವೆ. ಕಳೆದ ವರ್ಷ ಮಂಗಳೂರಿನ ಕಾರ್‌ಸ್ಟ್ರೀಟ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾಲಯದ ‘ಮಂಗಳ ಗಂಗೋತ್ರಿಯ’ ಸಮೀಪದಲ್ಲೇ ನಾಲ್ಕೈದು ಹೆಕ್ಟೇರ್‌ನಷ್ಟು ವಿಸ್ತಾರದ ಗದ್ದೆಯನ್ನು ತಾವೇ ಕಳೆ ಕಿತ್ತು ಉಳುಮೆ ಮಾಡಿ ನಾಟಿ ಮಾಡಿದ್ದರು. ನಾಟಿಯಿಂದ ಕೊಯ್ಲುವರೆಗೆ ಸುಮಾರು ಒಂದು ಸಾವಿರ ಮಾನವ ಶ್ರಮವನ್ನು ಅದಕ್ಕಾಗಿ ವ್ಯಯಿಸಲಾಗಿತ್ತು. ಸ್ವಯಂ ಕುಲಪತಿಯೊಂದಿಗೆ ವಿಶ್ವವಿದ್ಯಾಲಯದಲ್ಲಿ ದೇಶ ವಿದೇಶದ ಮಕ್ಕಳೂ ಗದ್ದೆಗಿಳಿದು ನಾಟಿಯ ಸಂಭ್ರಮದಲ್ಲಿ ಭಾಗಿಯಾದರು. ಕರಾವಳಿಯ ಉಸ್ತುವಾರಿ ಸಚಿವರು ಕೆಸರುಗದ್ದೆಯಲ್ಲಿ ಓಡಾಡಿ ನೇಜಿ ನೆಟ್ಟು ಮಕ್ಕಳಿಗೆ ಸಾಥ್ ನೀಡಿದ್ದರು. 

‘ಅಜ್ಜನ ಮನೆಯಲ್ಲಿ ಗದ್ದೆ ನೋಡಿದ್ದೆ. ನನ್ನಮ್ಮನಿಗೆ ನೇಜಿ ನೆಟ್ಟು ಅಭ್ಯಾಸವಿದೆ. ಅಪ್ಪ ನಗರದಲ್ಲಿ ವ್ಯಾಪಾರಿ. ಮೊನ್ನೆ ಗದ್ದೆಗಿಳಿದು ನೇಜಿ ನೆಟ್ಟಿದ್ದು ತುಂಬಾ ಖುಷಿಕೊಟ್ಟಿತು. ಕೆಂಪು ನೀರಿನಲ್ಲಿ ನೇಜಿ ನೆಡುವುದು ಅದ್ಭುತ ಕೌಶಲ. ಕದಡಿದ ನೀರಲ್ಲಿ ಮಣ್ಣು ಕಾಣಿಸುವುದಿಲ್ಲ. ಬೆರಳು ಮತ್ತು ನೇಜಿಯ ಬುಡ ಒಟ್ಟಿಗೇ ಮಣ್ಣಿನೊಳಗೆ ಸೇರಬೇಕು. ಕೊನೆಗೆ ಬೆರಳನ್ನಷ್ಟೇ ಎತ್ತಬೇಕು ಹಾಗೆ ಎತ್ತುವಾಗ ನೇಗಿಯೂ ಬೆರಳಿನೊಂದಿಗೆ ನೇಜಿ ಬರದಂತೆ ಮಾಡುವುದು ಕೌಶಲ. ಕೆಂಪು ನೀರಲ್ಲಿ ಏನೂ ಕಾಣಿಸದೆ ಇವೆಲ್ಲವನ್ನು ಅನುಭವ, ಅಭ್ಯಾಸದಿಂದಲೇ ನಿಭಾಯಿಸಬೇಕು. ಇಲ್ಲದೇ ಹೋದರೆ, ನೆಡುತ್ತಾ ಹೋದ ನೇಜಿ ತೇಲಾಡುತ್ತಾ ಹೋಗುತ್ತದೆ. ನಮಗೆ ಇವನ್ನೆಲ್ಲಾ ಹೇಳಿಕೊಟ್ಟವರು ಆ ಗದ್ದೆಯಲ್ಲಿ ನಮ್ಮೊಂದಿಗೆ ನೆಡಲು ನಿಂತ ವಾಸಮ್ಮ ಅಜ್ಜಿ. ಅವರಿಗೆ ಅಂದಾಜು 80 ವರ್ಷ. ನೆಡುವಾಗ ನಮಗೆ ಆಯಾಸವಾಗದಂತೆ ಪಾಡ್ಡನ ಸಂಧಿ ಹೇಳುತ್ತಿದ್ದರು’ ಎನ್ನುತ್ತಾರೆ ಲಿಖಿತ ಕುಮಾರಿ. ಸವಣೂರಿನಲ್ಲಿ ಸಂಭ್ರಮದಿಂದ ನೇಜಿ ನೆಟ್ಟ ಈಕೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ.

ಕರಾವಳಿ, ಮಲೆನಾಡು ಯಾವುದೇ ಶಾಲಾ ಕಾಲೇಜಿನ ತರಗತಿ ಇರಲಿ, ಅಲ್ಲಿನ ವಿದ್ಯಾರ್ಥಿಗಳಿಗೆ ‘ನಿಮಗೆ ಕೃಷಿ ಇದೆಯೇ’ ಎಂದು ಪ್ರಶ್ನಿಸಿದರೆ ಐದಾರು ಮಂದಿಯಾದರೂ ಕೈಯತ್ತುತ್ತಾರೆ. ಖಾಸಗಿ ನಗರ ಕೇಂದ್ರಿತ ಶ್ರೀಮಂತ ಕಾಲೇಜುಗಳಲ್ಲಿ ಈ ಸಂಖ್ಯೆ ಕಡಿಮೆ ಇರಬಹುದು. ಹೀಗೆ ಕೈ ಎತ್ತುವವರಲ್ಲಿ ಹೆಚ್ಚಿನವರು ಭತ್ತದ ಕೃಷಿ ಇರುವವರು. ಹಾಗಂತ ಭತ್ತದ ನಾಲ್ಕು ತಳಿಗಳ ಹೆಸರು ಹೇಳಿ ಅಂದ್ರೆ, ಅವರ ಮನೆಗೆ ತರುವ ಅಕ್ಕಿ ಚೀಲದ ಮೇಲಿರುವ ಆನಂದ್, ರೈತಬಂಧು, ಜನಪ್ರಿಯ ಮೊದಲಾದ ಹೆಸರು ಹೇಳುತ್ತಾರೆ. ಆ ಒಂದೊಂದು ಚೀಲದೊಳಗೆ ಹತ್ತಾರು ತಳಿಯ ಭತ್ತ ಒಟ್ಟಾಗಿದೆ ಎಂಬುದು ಅವರಿಗೆ ಗೊತ್ತಿಲ್ಲ. ರಾಗಿ ಮುದ್ದೆಯನ್ನು ಮೊತ್ತ ಮೊದಲ ಬಾರಿ ನೋಡಿ, ಒಂದು ರಾಗಿಯ ಸೈಜ್ ಇಷ್ಟು ದೊಡ್ಡದಾಗಿರುತ್ತದೋ? ಎಂದು ಕೇಳುವ ತಲೆಮಾರು ಇದು!

ತಪ್ಪು ಮಕ್ಕಳದ್ದಲ್ಲ. ನಮ್ಮ ಶಿಕ್ಷಣ ಕ್ರಮದ್ದು. ಪಾಠದೊಳಗೆ ನಾವು ಚಂದ್ರಲೋಕಕ್ಕೆ ದಾರಿ ತೋರಿಸುತ್ತೇವೆ. ನಮ್ಮ ಮಕ್ಕಳನ್ನು ಗದ್ದೆಗಿಳಿಸುವುದಿಲ್ಲ. ನೀರು ಉಳಿಸುವುದು,  ಜಲಕೊಯ್ಲು ಪರಿಸರ ಮಾಲಿನ್ಯ, ಅನ್ನದ ವಿಷ– ಇವುಗಳ ಬಗ್ಗೆ ಪಾಠಗಳಿಲ್ಲ. ಪೇಟೆಯಿಂದ ಮೋಟಾರು ಬಸ್ಸು ಏರಿ ಹಳ್ಳಿ ಶಾಲೆಗೆ ಬರುವ ಮೇಷ್ಟ್ರುಗಳಿಗೆ ತರಗತಿಯ ಮಕ್ಕಳನ್ನು ಅಂಗಳಕ್ಕೆ ಗದ್ದೆಗೆ ಇಳಿಸುವ ಆಸಕ್ತಿಯೂ ಇಲ್ಲ. 

ಸುಮಾರು ನಾಲ್ಕೈದು ವರ್ಷಗಳ ಹಿಂದೆ ಮಂಡ್ಯದ ಎನ್‌ಜಿಓ ಒಂದರಲ್ಲಿ ಅಮೆರಿಕದ +11ರ (ಪಿಯುಸಿ) ನಂತರದ ವಿದ್ಯಾರ್ಥಿಗಳು ಎರಡು ಮೂರು ಎಕರೆ ಗದ್ದೆಯಲ್ಲಿ ಒಂದೊಂದು ಸೆಂಟ್ಸ್‌ ಜಾಗವನ್ನು ವಿಂಗಡಿಸಿಕೊಂಡು ತಮ್ಮ ತಮ್ಮ ಹೆಸರಿನ ಬೋರ್ಡ್‌ ನೆಟ್ಟು ಅಲ್ಲಿ ಉಳುವ, ನೆಡುವ, ಬಿತ್ತುವ, ಪೋಷಿಸುವ ಕೆಲಸ ಮಾಡುತ್ತಿದ್ದರು. ಅಮೆರಿಕದ ಕ್ರಮವೇ ಹಾಗಂತೆ. ಅಭಿವೃದ್ಧಿಶೀಲ ದೇಶವೊಂದರ ಸೇವಾಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಒಂದು ವರ್ಷ ಪದವಿ ತರಗತಿಗೆ ಪ್ರವೇಶ. ಕೆಸರಲ್ಲಿ ಹೊರಳಾಡುತ್ತಾ ಅಂದು ಆ ಬಿಳಿಯ ಮಕ್ಕಳು ಸಂಭ್ರಮಿಸುವುದನ್ನು ಕಂಡು ದಂಗಾಗಿದ್ದೆ. 

ಇಂದು ನಮ್ಮ ಕಾಲೇಜು, ವಿಶ್ವವಿದ್ಯಾಲಯಗಳು ನೀಡುವ ಪದವಿ ಪತ್ರಗಳು ಕೃಷಿ ಪಾಲಿಗೆ ಮರಣಪತ್ರಗಳಾಗುತ್ತಿರುವ, ಹಳ್ಳಿ, ಕೆಸರು, ಹಸಿರು ಬಿಡುವ ಅನುಮತಿ ಪತ್ರಗಳಾಗು ತ್ತಿರುವ ದಿನಮಾನದಲ್ಲಿ ಯವಕರ ಇಂಥ ಕೃಷಿ ನಡಿಗೆ ಬರೀ ಒಂದು ದಿನದ ಮಟ್ಟಿಗೆ ಸೀಮಿತವಾಗಬಾರದು. ಕರಾವಳಿ–ಮಲೆನಾಡಿನಲ್ಲಿಂದು ಬೇಸಾಯವಿಲ್ಲದೆ ಹಡಿಲು ಬಿದ್ದ ಸಾವಿರಾರು ಎಕರೆ ಹಾಳು ಗದ್ದೆಗಳಿವೆ. ಜಿಲ್ಲಾಡಳಿತ ಅವುಗಳನ್ನು ಹುಡುಕಿ ಹುಡುಕಿ ಕಾಲೇಜುಗಳ ಎನ್‌ಎನ್‌ಎಸ್‌ ಘಟಕಗಳಿಗೆವಹಿಸಿದರೆ, ಕಾಲೇಜು ವಿಶ್ಯ ವಿದ್ಯಾಲಯಗಳು ಅವುಗಳನ್ನು ದತ್ತು ಸ್ವೀಕರಿಸಿದರೆ ಭತ್ತದ ಕೃಷಿಯೂ ಉಳಿಯುತ್ತದೆ. ಹೊಸ ತಲೆಮಾರಿಗೆ ಕೃಷಿ ಹೆಸರಿನ ಪರಿಚಯವೂ ಆಗುತ್ತದೆ.

ಮಣ್ಣಿನೊಂದಿಗೆ ಬೆರೆಯುವ ಹಳ್ಳಿಗಳನ್ನು ಗಮನಿಸುವ ಮತ್ತೆ ಅನ್ನದ ದಾರಿಗೆ ಹೊರಳುವ ಈ ನಡೆಯನ್ನು ವಿಶ್ವವಿದ್ಯಾಲಯ ಪಠ್ಯೇತರ ಎಂದು ಗುರುತಿಸುವುದೇ ತಪ್ಪು. ಬರೆಯುವ ಪರೀಕ್ಷೆಗಿಂತ ಬದುಕುವ ಪರೀಕ್ಷೆಗೆ ಸಜ್ಜುಗೊಳಿಸುವ ಈ ನಡಿಗೆಯಲ್ಲಿ ಹೊಸ ತಲೆಮಾರು ಕನಿಷ್ಠ ನಮ್ಮ ನಗರ, ಮಹಾನಗರಗಳಿಗೆ ಹಾಲು, ನೀರು, ಅನ್ನ, ತರಕಾರಿ ಕೊಡುತ್ತಿರುವ ಹಳ್ಳಿಗಳು ಹೀಗಿವೆ ಎಂಬುದನ್ನು ನೋಡಬಲ್ಲರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು