ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ 17 ನದಿಗಳು ಕಲುಷಿತ: ಕೇಂದ್ರದ ಜಲಶಕ್ತಿ ಸಚಿವಾಲಯ ಮಾಹಿತಿ

ನಗರ ಮತ್ತು ಪಟ್ಟಣ ಪ್ರದೇಶಗಳ ಒಳಚರಂಡಿ ನೀರು, ಕೈಗಾರಿಕೆಗಳ ತ್ಯಾಜ್ಯ ಸೇರ್ಪಡೆಯೇ ಕಾರಣ
Last Updated 26 ಮಾರ್ಚ್ 2021, 20:00 IST
ಅಕ್ಷರ ಗಾತ್ರ

ನವದೆಹಲಿ: ನಗರ ಮತ್ತು ಪಟ್ಟಣ ಪ್ರದೇಶಗಳ ಒಳಚರಂಡಿ ನೀರು ಹಾಗೂ ಆಯಾ ಜಲಾನಯನ ಪ್ರದೇಶಗಳಲ್ಲಿನ ಕೈಗಾರಿಕೆಗಳ ತ್ಯಾಜ್ಯ ಸೇರುವುದರಿಂದ ರಾಜ್ಯದ 17 ನದಿಗಳು ಕಲುಷಿತಗೊಂಡಿವೆ ಎಂದು ಕೇಂದ್ರದ ಜಲಶಕ್ತಿ ಸಚಿವಾಲಯ ಬಹಿರಂಗಪಡಿಸಿದೆ.

ಜೀವರಾಸಾಯನಿಕ ಆಮ್ಲಜನಕದ ಬೇಡಿಕೆಯ ಪ್ರಮಾಣದ ಮೇಲ್ವಿಚಾರಣೆಯ ಫಲಿತಾಂಶದ ಪ್ರಕಾರ, ದೇಶದ ಒಟ್ಟು 351 ನದಿಗಳ ಪೈಕಿ 323 ನದಿಗಳು ಮಲಿನಗೊಂಡಿವೆ ಎಂದು ಜಲಶಕ್ತಿ ಖಾತೆ ರಾಜ್ಯ ಸಚಿವ ರತನ್‌ಲಾಲ್‌ ಕಟಾರಿಯಾ ಅವರು ಲೋಕಸಭೆಗೆ ಸಲ್ಲಿಸಿರುವ ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಸ್ತುವಾರಿ ಕೇಂದ್ರ ಜಾಲವು, ಆಯಾ ರಾಜ್ಯಗಳ ಮಾಲಿನ್ಯನಿಯಂತ್ರಣ ಮಂಡಳಿಗಳ ಸಹಯೋಗ
ದೊಂದಿಗೆ ನಿಯಮಿತವಾಗಿ ನದಿಗಳು ಹಾಗೂ ಇತರ ಜಲಮೂಲಗಳ ಗುಣಮಟ್ಟದ ಮೇಲ್ವಿಚಾರಣೆ ನಡೆಸುತ್ತಿದೆ. ಕೃಷಿ ತ್ಯಾಜ್ಯ, ಬಯಲು ಬಹಿರ್ದೆಸೆ, ಪಟ್ಟಣ ಮತ್ತು ನಗರ ಪ್ರದೇಶಗಳ ಘನತ್ಯಾಜ್ಯ ಮುಂತಾದವು ನದಿಗಳ ಮಾಲಿನ್ಯದ ಮೂಲಗಳಾಗಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ದೇಶದ ನಗರ ಪ್ರದೇಶಗಳಲ್ಲಿ ನಿತ್ಯವೂ ಅಂದಾಜು 61,948 ದಶಲಕ್ಷ ಲೀಟರ್ (ಎಂಎಲ್‌ಡಿ) ಒಳಚರಂಡಿ ನೀರು ಉತ್ಪತ್ತಿಯಾಗುತ್ತಿದ್ದು, ಆ ಪೈಕಿಕೇವಲ 23,277 ಎಂಎಲ್‌ಡಿ ನೀರನ್ನು ಸಂಸ್ಕರಿಸಿ ನದಿ, ಹಳ್ಳಗಳತ್ತ ಹರಿಸಲಾಗುತ್ತಿದೆ. ಕರ್ನಾಟಕದಲ್ಲಿ ನಾಲ್ಕು ಕೈಗಾರಿಕೆಗಳು ಅಧಿಕ ಮಾಲಿನ್ಯಕಾರಕವಾಗಿದ್ದು, ಎಲ್ಲವೂ ಪರಿಸರ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡ ಅನುಸರಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ಸಕ್ಕರೆ ಕಾರ್ಖಾನೆಗಳು ನಿರಂತರ ಹೊರಸೂಸುವ ತ್ಯಾಜ್ಯದ ಪರಿಶೀಲನಾ ವ್ಯವಸ್ಥೆ ಅಳವಡಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ. ದೇಶದಾದ್ಯಂತ ಒಟ್ಟು 2,968 ಮಾಲಿನ್ಯಕಾರಕ ಕೈಗಾರಿಕೆಗಳ ಪೈಕಿ 2,318 ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ.
650 ಕೈಗಾರಿಕೆಗಳು ಸ್ಥಗಿತಗೊಂಡಿವೆ. ಕಾರ್ಯ ನಿರ್ವಹಿಸುತ್ತಿರುವ ಕಾರ್ಖಾನೆಗಳ ಪೈಕಿ 2,190ರಲ್ಲಿ ನಿಗದಿತ ಪರಿಸರ ಮಾನದಂಡವನ್ನು ಅನುಸರಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಯಾವ್ಯಾವ ನದಿಗಳು?

ಅರ್ಕಾವತಿ, ಲಕ್ಷ್ಮಣತೀರ್ಥ, ಮಲಪ್ರಭಾ, ತುಂಗಭದ್ರಾ, ಕಾವೇರಿ, ಭದ್ರಾ, ತುಂಗಾ, ಕಬಿನಿ, ಕಾಗಿಣಾ, ಆಸಂಗಿ ನಾಲಾ, ಕಾಳಿ, ಕೃಷ್ಣಾ, ಶಿಂಶಾ, ಭೀಮಾ, ಕುಮಾರಧಾರಾ, ನೇತ್ರಾವತಿ ಮತ್ತು ಯಗಚಿ ನದಿಗಳು ಕಲುಷಿತಗೊಂಡಿದ್ದಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಹೇಳಿದ್ದಾಗಿ ಜಲಶಕ್ತಿ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT