ಬೆಂಗಳೂರು: ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಕೆ.ಎಸ್. ಕಿರಣ್ ಕುಮಾರ್ , ವಿಧಾನ ಪರಿಷತ್ ಮಾಜಿ ಸದಸ್ಯ, ಜೆಡಿಎಸ್ ತ್ಯಜಿಸಿ ಬಿಜೆಪಿ ಸೇರಿದ್ದ ಸಂದೇಶ್ ನಾಗರಾಜ್ ಮತ್ತು ತುಮಕೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್‌ನ ಎಚ್. ನಿಂಗಪ್ಪ ಅವರು ಸೋಮವಾರ ಕಾಂಗ್ರೆಸ್ ಸೇರಿದರು.
ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸಮ್ಮುಖದಲ್ಲಿ ಈ ಮೂವರೂ ತಮ್ಮ ಬೆಂಬಲಿಗರ ಜೊತೆ ‘ಕೈ‘ ಹಿಡಿದರು. ಶಾಸಕ ಜಿ. ಪರಮೇಶ್ವರ, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ, ಮುಖಂಡರಾದ ಕೆ.ಎನ್. ರಾಜಣ್ಣ ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಕಾಂಗ್ರೆಸ್‌ಗೆ ಒಳ್ಳೆಯ ವಾತಾವರಣ ಇದೆ. ಹೀಗಾಗಿ ಹಲವರು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಬೇರೆ ಪಕ್ಷಗಳ ಬಹಳ ಜನ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ಜೊತೆಗೆ ಮಂತ್ರಿಯಾಗಿದ್ದ ಕೆಲವರು ಸೇರುವ ಸಂಭವ ಇದೆ’ ಎಂದರು.
‘ನಾವು ಬಿಜೆಪಿ ರೀತಿ ಒಳಗೊಂದು ಹೊರಗೊಂದು ಹೇಳುವುದಿಲ್ಲ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಧರ್ಮ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಳಿನ್ ಕುಮಾರ್ ಕಟೀಲ್ ಪಕ್ಷದ ಅಧ್ಯಕ್ಷನಾಗಲು ಲಾಯಕ್ಕಲ್ಲ. ಅಭಿವೃದ್ಧಿ ಚರ್ಚೆ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಹೇಳುವ ಇವರೆಲ್ಲಾ ರಾಜಕೀಯಕ್ಕೆ ನಾಲಾಯಕ್‘ ಎಂದು ವಾಗ್ದಾಳಿ ನಡೆಸಿದರು.
‘ಮೊದಲಿನಿಂದಲೂ ಬಿಜೆಪಿ ಧರ್ಮಗಳ ನಡುವೆ ಒಡಕು ಮೂಡಿಸಿ, ಸಮಾಜದಲ್ಲಿ ಶಾಂತಿ ಕದಡುತ್ತಿದೆ. ಇದರಿಂದ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಅವರು ಎಲ್ಲಾ ವರ್ಗಗಳ ವಿರೋಧಿಗಳು. ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ನಮ್ಮ ನಾಯಕರು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದಾರೆ. ಅಲ್ಲಿ ನಿರೀಕ್ಷೆ ಮೀರಿ ಜನರಿಂದ ಪ್ರತಿಕ್ರಿಯೆ ಸಿಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರಲಿದೆ‘ ಎಂದು ಜಿ. ಪರಮೇಶ್ವರ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.