ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ಅಧಿಕಾರಿಗಳು, ಸಿಬ್ಬಂದಿ ಮೇಲೆ ಎಸಿಬಿ ದಾಳಿ l ಇಬ್ಬರು ಅಧಿಕಾರಿಗಳು ವಶಕ್ಕೆ?

ಕೋಟಿ ಕಾಂಚಾಣ, ರಾಶಿ ಬಂಗಾರ
Last Updated 24 ನವೆಂಬರ್ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಮನೆಯಲ್ಲಿ ಬೇರೆ ಬೇರೆ ತೂಕದ ಚಿನ್ನದ ಗಟ್ಟಿಗಳ ರಾಶಿ, ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್‌ ಮನೆಯ ಪ್ಲಂಬಿಂಗ್‌ ಪೈಪ್‌ನಲ್ಲಿ ಅಡಗಿಸಿಟ್ಟ ಕಂತೆ ಕಂತೆ ನೋಟುಗಳು, ಕೆಎಎಸ್‌ ಅಧಿಕಾರಿ ಮನೆಯ ಕಪಾಟಿನಲ್ಲಿ ಲಕ್ಷಗಟ್ಟಲೆ ನಗದು, ಒಬ್ಬೊಬ್ಬರ ಬಳಿಯೂ ನಾಲ್ಕಾರು ನಿವೇಶನ, ಎಕರೆಗಟ್ಟಲೆ ಕೃಷಿ ಜಮೀನು...

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 15 ಮಂದಿ ಅಧಿಕಾರಿಗಳು, ಸಿಬ್ಬಂದಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ನಡೆಸಿದ ದಾಳಿ ವೇಳೆ ಪತ್ತೆಯಾಗಿರುವ ಚರ ಮತ್ತು ಸ್ಥಿರಾಸ್ತಿಯ ಸಂಪತ್ತಿನ ಸಾಮ್ರಾಜ್ಯದ ಸ್ಥೂಲ ನೋಟ. ಸರ್ಕಾರಿ ಸೇವೆಯಿಂದ ಕೆಲವೇ ತಿಂಗಳ ಹಿಂದೆ ನಿವೃತ್ತರಾಗಿರುವ ಇಬ್ಬರ ಮೇಲೂ ದಾಳಿ ನಡೆದಿದೆ.

ರಾಜ್ಯದ 68 ಸ್ಥಳಗಳಲ್ಲಿ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಏಕಕಾಲಕ್ಕೆ ಶೋಧ ನಡೆದಿದೆ. ಆರೋಪಿತರ ಮನೆಗಳು, ಅವರ ನಿಕಟವರ್ತಿಗಳ ಮನೆಗಳು ಮತ್ತು ಇತರ ಸ್ಥಳಗಳಲ್ಲಿ ಒಟ್ಟು ₹ 1.53 ಕೋಟಿ ಮೊತ್ತದ ನಗದು, 16.49 ಕೆ.ಜಿ. ಚಿನ್ನ, 58.76 ಕೆ.ಜಿ. ಬೆಳ್ಳಿ ಮತ್ತು ₹ 2.34 ಕೋಟಿ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಪತ್ತೆ ಮಾಡಲಾಗಿದೆ ಎಂದು ಎಸಿಬಿ ತಿಳಿಸಿದೆ.

ದಾಳಿಗೊಳಗಾದ ಎಲ್ಲರ ಬಳಿಯಲ್ಲೂ ನಿವೇಶನ, ಮನೆ, ಕೃಷಿ ಜಮೀನು, ವಾಹನ ಹಾಗೂ ಬ್ಯಾಂಕ್‌ ಖಾತೆಗಳಲ್ಲಿ ಹಣವಿರುವುದು ಪತ್ತೆಯಾಗಿದೆ. ಬೃಹತ್‌ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಸ್ಥಿರಾಸ್ತಿ, ವಾಹನ ಮತ್ತು ಬ್ಯಾಂಕ್‌ ಖಾತೆಗಳಲ್ಲಿರುವ ಠೇವಣಿಗೆ ಸಂಬಂಧಿಸಿದ ಖಚಿತ ಮೌಲ್ಯ ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಆದಾಯ ಮೀರಿ ಅಪಾರ ಆಸ್ತಿ ಹೊಂದಿರುವ ಆರೋ‍‍ಪದ ಮೇಲೆ ಶಾಂತಗೌಡ ಬಿರಾದಾರ ಮತ್ತು ರುದ್ರೇಶಪ್ಪ ಅವರನ್ನು ಎಸಿಬಿ ಅಧಿಕಾರಿಗಳು ಬುಧವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನೂ ಬಂಧಿಸುವ ಸಾಧ್ಯತೆ ಇದೆ.

‘ಡಿ’ ದರ್ಜೆ ನೌಕರನ ಬಳಿ 6 ಮನೆ: ಯಶವಂತಪುರದ ಮಾರಪ್ಪನ‍ಪಾಳ್ಯದಲ್ಲಿರುವ ಬಿಬಿಎಂಪಿ ಪ್ರೌಢಶಾಲೆಯ ‘ಡಿ’ ದರ್ಜೆ ನೌಕರ ಜಿ.ವಿ.ಗಿರಿಯು ನಗರದಲ್ಲಿ ಆರು ಮನೆ ಹೊಂದಿರುವುದು ಪತ್ತೆಯಾಗಿದೆ. ತಲಾ ನಾಲ್ಕು ಕಾರು ಮತ್ತು ದ್ವಿಚಕ್ರ ವಾಹನಗಳೂ ಇವೆ.

ಬಿಬಿಎಂಪಿ ಕೇಂದ್ರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಾಯಣ್ಣ ಬೆಂಗಳೂರಿನಲ್ಲಿ ನಾಲ್ಕು ಮನೆ ಹೊಂದಿದ್ದು, ವಿವಿಧೆಡೆ ಆರು ನಿವೇಶನ, ಕುಣಿಗಲ್‌ನಲ್ಲಿ 2 ಎಕರೆ ಕೃಷಿ ಜಮೀನು ಹೊಂದಿರುವ ದಾಖಲೆಗಳನ್ನು ತನಿಖಾ ತಂಡ ಪತ್ತೆಮಾಡಿದೆ. ಇವರು ಇತ್ತೀಚೆಗೆ ನಡೆದ ಕನ್ನಡ ಸಾಹಿತ್ಯ ಪರಿಷತ್‌ ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದರು.

ಪೈಪ್‌ನಲ್ಲಿ ಬಚ್ಚಿಟ್ಟಿದ್ದ ₹ 13 ಲಕ್ಷ !

ಲೋಕೋಪಯೋಗಿ ಇಲಾಖೆಯ ಜೇವರ್ಗಿ ಉಪ ವಿಭಾಗದ ಕಿರಿಯ ಎಂಜಿನಿಯರ್‌ ಶಾಂತಗೌಡ ಎಂ. ಬಿರಾದಾರ ಮನೆ ಮೇಲೆ ಬೆಳಿಗ್ಗೆ 5.30ಕ್ಕೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಮನೆಯಲ್ಲಿದ್ದವರು 20 ನಿಮಿಷ ಬಾಗಿಲು ತೆರೆಯದೇ ಸತಾಯಿಸಿದರು. ಶೋಧ ನಡೆಸುತ್ತಿದ್ದ ವೇಳೆ ಶಾಂತಗೌಡರ ಮಗ ಪ್ಲಂಬಿಂಗ್‌ ಪೈಪ್‌ ಒಂದರ ಬಳಿಯೇ ತಿರುಗಾಡುತ್ತಿದ್ದುದು, ತನಿಖಾ ತಂಡದ ಸಂಶಯಕ್ಕೆ ಕಾರಣವಾಯಿತು.

ಪೈಪ್‌ ಕತ್ತರಿಸಿ ನೋಡಿದಾಗ ₹ 500ರ ನೋಟುಗಳ ಕಂತೆಗಳಿರುವುದು ಪತ್ತೆಯಾಯಿತು. ಒಟ್ಟು ₹ 13 ಲಕ್ಷವನ್ನು ಅದರೊಳಗೆ ಬಚ್ಚಿಡಲಾಗಿತ್ತು. ಪೈಪ್ ಕತ್ತರಿಸಿದ ಎಸಿಬಿ ಸಿಬ್ಬಂದಿ, ಬಕೆಟ್‌ನಲ್ಲಿ ನೋಟಿನ ಕಂತೆಗಳನ್ನು ತುಂಬಿಕೊಂಡರು. ಈ ಹಣವೂ ಸೇರಿದಂತೆ ₹ 54.50 ಲಕ್ಷ ನಗದು ಅವರ ಮನೆಯಲ್ಲಿ ಪತ್ತೆಯಾಗಿದೆ. ಕಲಬುರಗಿಯಲ್ಲಿ ಎರಡು ಮನೆ, ಬೆಂಗಳೂರಿನಲ್ಲಿ ಒಂದು ನಿವೇಶನ, ವಿವಿಧೆಡೆ 36 ಎಕರೆ ಕೃಷಿ ಜಮೀನು ಹೊಂದಿರುವ ದಾಖಲೆಗಳನ್ನೂ ಎಸಿಬಿ ಪತ್ತೆಹಚ್ಚಿದೆ.

ಕೋಟಿಗಟ್ಟಲೆ ಆಸ್ತಿ

ಮಂಡ್ಯ ಜಿಲ್ಲೆಯ ಹೇಮಾವತಿ ಎಡದಂಡೆ ಕಾಲುವೆ–3ರ ಕಾರ್ಯನಿರ್ವಾಹಕ ಎಂಜಿನಿಯರ್‌ ಶ್ರೀನಿವಾಸ್‌ ಕೆ. ಮೈಸೂರಿನಲ್ಲಿ ಎರಡು ಮನೆ, ಮೈಸೂರು ಜಿಲ್ಲೆಯಲ್ಲಿ 4 ಎಕರೆ 34 ಗುಂಟೆ ಕೃಷಿ ಜಮೀನು, ನಂಜನಗೂಡಿನಲ್ಲಿ ಫಾರ್ಮ್‌ ಹೌಸ್‌ ಹೊಂದಿರುವುದು ಪತ್ತೆಯಾಗಿದೆ.

9.4 ಕೆ.ಜಿ. ಚಿನ್ನಾಭರಣ ಪತ್ತೆ

ಕೃಷಿ ಇಲಾಖೆಯ ಗದಗ ಜಿಲ್ಲೆಯ ಜಂಟಿ ನಿರ್ದೇಶಕ ಟಿ.ಎಸ್‌. ರುದ್ರೇಶಪ್ಪ ಅವರಿಗೆ ಸೇರಿರುವ ಶಿವಮೊಗ್ಗದ ಚಾಲುಕ್ಯ ನಗರದ ಮನೆಯಲ್ಲಿ 9.4 ಕೆ.ಜಿ. ತೂಕದ ಚಿನ್ನಾಭರಣ ಪತ್ತೆಯಾಗಿದೆ. ಅಧಿಕಾರಿಯ ಮನೆಯಲ್ಲಿ ಚಿನ್ನದ ಗಟ್ಟಿಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದು ಶೋಧದಲ್ಲಿ ಬಯಲಾಗಿದೆ. ₹15.94 ಲಕ್ಷ ನಗದು ಕೂಡ ಮನೆಯಲ್ಲಿತ್ತು.

ಶೋಧ ನಡೆಸಿರುವ ಮನೆಯ ಮೌಲ್ಯ ₹ 3.5 ಕೋಟಿ ಎಂದು ಅಂದಾಜಿಸಲಾಗಿದೆ. ಶಿವಮೊಗ್ಗದ ಗೋಪಾಳದಲ್ಲಿ ಆರೋಪಿ ಅಧಿಕಾರಿ ಮತ್ತೊಂದು ಮನೆ ಹೊಂದಿದ್ದಾರೆ. ಆದರೆ, ಮನೆಯ ಬಾಗಿಲಿಗೆ ಬೀಗ ಹಾಕಿದ್ದ ಕಾರಣ ಬುಧವಾರ ಶೋಧ ಕಾರ್ಯಾಚರಣೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT