ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರೆಂದು ಹೇಳಿಕೊಂಡು ಬಂದಿದ್ದವರಿಂದ ಚೇತನ್ ಅಪಹರಣ: ಪತ್ನಿ ಆರೋಪ

Last Updated 22 ಫೆಬ್ರುವರಿ 2022, 13:25 IST
ಅಕ್ಷರ ಗಾತ್ರ

ಬೆಂಗಳೂರು: ‘ಪೊಲೀಸರೆಂದು ಹೇಳಿಕೊಂಡು ಮನೆಗೆ ಬಂದಿದ್ದ ಕೆಲವರು, ಚೇತನ್ ಅವರನ್ನು ಕರೆದೊಯ್ದಿದ್ದಾರೆ. ಅವರು ಈಗ ಎಲ್ಲಿದ್ದಾರೆಂಬುದನ್ನು ಯಾರೂ ಹೇಳುತ್ತಿಲ್ಲ. ಇದೊಂದು ಅಹರಣ’ ಎಂದು ಚಿತ್ರ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅವರ ಪತ್ನಿ ಮೇಘಾ ಆರೋಪಿಸಿದ್ದಾರೆ.

ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಚೇತನ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು, ಇದೊಂದು ಅಪರಹಣ ಎಂದು ಮೇಘಾ ಆರೋಪಿಸಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಚೇತನ್‌ ಅವರನ್ನು ಮನೆಯಿಂದ ವಶಕ್ಕೆ ಪಡೆಯಲಾಗಿದೆ. ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ‘ಪತಿ ಎಲ್ಲಿದ್ದಾರೆ’ ಎಂಬುದನ್ನು ತಿಳಿಯಲು ಪತ್ನಿ ಮೇಘಾ, ಶೇಷಾದ್ರಿಪುರ ಠಾಣೆಗೆ ಬಂದಿದ್ದಾರೆ.

ಆದರೆ, ಚೇತನ್ ಶೇಷಾದ್ರಿಪುರ ಠಾಣೆಯಲ್ಲಿಲ್ಲ ಎಂಬ ಮಾಹಿತಿ ಮೇಘಾ ಅವರಿಗೆ ಗೊತ್ತಾಗಿದೆ. ಹೀಗಾಗಿ ಚೇನತ್‌ ಅವರ ಅಧಿಕೃತ ಫೇಸ್‌ಬುಕ್‌ ಖಾತೆ ಮೂಲಕವೇ ಲೈವ್‌ ಬಂದಿರುವ ಮೇಘಾ, ‘ಪೊಲೀಸರೆಂದು ಹೇಳಿಕೊಂಡು ಮನೆಗೆ ಬಂದಿದ್ದ ಕೆಲವರು, ಚೇತನ್ ಅವರನ್ನು ಕರೆದೊಯ್ದಿದ್ದಾರೆ. ಅವರು ಈಗ ಎಲ್ಲಿದ್ದಾರೆಂಬುದನ್ನು ಯಾರೂ ಹೇಳುತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ.

‘ಚೇತನ್ ಹಾಗೂ ಅವರ ಅಂಗರಕ್ಷಕನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದೊಂದು ಷಡ್ಯಂತ್ರದಂತೆ ಕಾಣುತ್ತಿದೆ’ ಎಂದೂ ಅವರು ದೂರಿದ್ದಾರೆ.

‘ಅಪರಾಧ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ನೋಟಿಸ್ ಸಹ ಕೊಟ್ಟಿಲ್ಲ. ಇದೊಂದು ಅಕ್ರಮ ಬಂಧನವಾಗಿದೆ. ಇದರ ವಿರುದ್ಧ ಹೋರಾಡಲು ಜನರು ಬೆಂಬಲ ನೀಡಬೇಕು’ ಎಂದೂ ಕೋರಿದ್ದಾರೆ.

‘ಅತ್ಯಾಚಾರ ಪ್ರಕರಣವೊಂದರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಜಾಮೀನು ಮಂಜೂರು ಮಾಡಿದ್ದರು. ಇದೇ ವಿಷಯ ಪ್ರಸ್ತಾಪಿಸಿ ಚೇತನ್ ಅವರು ನ್ಯಾಯಾಂಗ ನಿಂದನೆ ಮಾಡಿರುವ ಆರೋಪವಿದೆ. ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT