ಶನಿವಾರ, ಮೇ 28, 2022
21 °C
‘ಅಮೃತ ಗ್ರಾಮ ಪಂಚಾಯಿತಿ ಯೋಜನೆ’ಗೆ ಕೇಂದ್ರ ಸಚಿವ ಚಾಲನೆ

2024ರೊಳಗೆ ಗ್ರಾ.ಪಂ.ಗಳ ಡಿಜಿಟಲ್ ಸಂಪರ್ಕ: ಗಿರಿರಾಜ್ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಎಲ್ಲ ಗ್ರಾಮ ಪಂಚಾಯಿತಿಗಳು 2024ರ ಒಳಗೆ ಡಿಜಿಟಲ್ ಸಂಪರ್ಕ ಹೊಂದಿರಬೇಕು. ರಾಜ್ಯದಲ್ಲಿಯೂ ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಜಾರಿಗೊಳಿಸಬೇಕು’ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಹೇಳಿದರು.

75ನೇ ಸ್ವಾತಂತ್ರೋತ್ಸವದ ನೆನಪಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಆಗಸ್ಟ್‌ 15ರಂದು ಘೋಷಿಸಿದ್ದ ‘ಅಮೃತ ಗ್ರಾಮ ಪಂಚಾಯಿತಿ ಯೋಜನೆ’ಗೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಅ. 2ರಂದು ದೇಶದಾದ್ಯಂತ ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆ ನಡೆಸಿ, ‘ನನ್ನ ಗ್ರಾಮ, ನನ್ನ ಪರಂಪರೆ’ ಎಂಬ ಘೋಷಣೆಯಡಿ ಗ್ರಾಮಕ್ಕಾಗಿ ಶ್ರಮಿಸಿದ ಹಿರಿಯರು, ವಿದ್ವಾಂಸರು, ಸ್ವಾತಂತ್ರ್ಯಹೋರಾಟಗಾರರನ್ನು ಸ್ಮರಿಸುವ ಕೆಲಸ ಮಾಡಬೇಕು. ಅ. 1ರಿಂದ 15 ರ ವರೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ಎಂದರು.

‘ಪಂಚಾಯಿತಿಗಳು ಸಬಲಗೊಳಿಸಲು ಕೇಂದ್ರ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಅನುದಾನ ನೀಡುತ್ತಿದೆ. ಕರ್ನಾಟಕದಲ್ಲಿ 12 ಮತ್ತು 13ನೇ ಹಣಕಾಸು ಆಯೋಗದಡಿ 2008–2014ರ ನಡುವೆ ₹ 3,988 ಕೋಟಿ ಅನುದಾನ ನೀಡಲಾಗಿತ್ತು. 14 ಮತ್ತು 15ನೇ ಹಣಕಾಸು ಆಯೋಗದಲ್ಲಿ ಎರಡೂವರೆ ಪಟ್ಟು ಹೆಚ್ಚು ₹ 9,626 ಕೋಟಿ ನೀಡಲಾಗಿದೆ. ಗ್ರಾಮ ಸ್ವರಾಜ್ ಅಭಿಯಾನದಡಿ 2008-2014ರ ವರೆಗೆ ₹ 35 ಕೋಟಿ, 2014ರಿಂದ ಈವರೆಗೆ ₹ 135 ಕೋಟಿ ನೀಡಲಾಗಿದೆ’ ಎಂದು ವಿವರಿಸಿದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ‘ಅಮೃತ ಯೋಜನೆಯಡಿ 750 ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಯ ಗುರಿ ಹೊಂದಲಾಗಿದೆ. ಇದಕ್ಕಾಗಿ ಪ್ರತಿ ಪಂಚಾಯಿತಿಗೆ ಸರಾಸರಿ ₹ 3 ಕೋಟಿಯಂತೆ ಸುಮಾರು ₹2,300 ಕೋಟಿ ವೆಚ್ಚ ಮಾಡಲಾಗುತ್ತಿದೆ. ಮಾರ್ಚ್ 31ರ ಒಳಗೆ ಯೋಜನೆ ಪೂರ್ಣಗೊಳಿಸಿದ ಪಂಚಾಯಿತಿಗಳಿಗೆ ₹ 25 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು‘ ಎಂದರು.

‘ಎಲ್ಲ ಗ್ರಾಮ ಪಂಚಾಯಿತಿಗಳು ಇದನ್ನು ಪೂರ್ಣಗೊಳಿಸಿದರೆ ಮುಂದಿನ ವರ್ಷ 1,500 ಪಂಚಾಯಿತಿಗಳಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ರಾಜ್ಯದಲ್ಲಿ ಜಲ ಜೀವನ್ ಮಿಷನ್ ಅನುಷ್ಠಾನಗೊಳಿಸಲು ₹ 2,000 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ‘ಯೋಜನೆಗೆ ಆಯ್ಕೆಯಾದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಬೀದಿದೀಪಗಳ ಅಳವಡಿಕೆ, ಪ್ರತಿ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ, ಶೇ 100ರಷ್ಟು ಘನ ತ್ಯಾಜ್ಯ ವಿಂಗಡಣೆ, ವಿಲೇವಾರಿ, ಅಮೃತ್ ಉದ್ಯಾನವನಗಳ ನಿರ್ಮಾಣ, ಗ್ರಂಥಾಲಯಗಳ ಡಿಜಿಟಲೀಕರಣ, ಶಾಲೆ,  ಅಂಗನವಾಡಿಗಳಿಗೆ ಕುಡಿಯುವ ನೀರು, ರೈತರ ಉಪಯೋಗಕ್ಕಾಗಿ ಗ್ರಾಮೀಣ ಗೋದಾಮಗಳ ನಿರ್ಮಾಣ, ಕೆರೆಗಳ, ಕಲ್ಯಾಣಿಗಳ ಪುನಶ್ಚೇತನಗೊಳಿಸಲು ಉದ್ದೇಶಿಸಲಾಗಿದೆ’ ಎಂದರು.

ಈ ಸಂದರ್ಭದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ತರಬೇತಿ ಪಡೆದ ನಾಲ್ವರು ಯುವತಿಯರಿಗೆ ಉದ್ಯೋಗ ಪ್ರಮಾಣಪತ್ರ ನೀಡಲಾಯಿತು. ಕಲಬುರ್ಗಿಯಲ್ಲಿ ನಿರ್ಮಿಸಲಾಗಿರುವ ಅಬ್ದುಲ್ ನಝೀರ್ ಸಾಬ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರವನ್ನು ಉದ್ಘಾಟಿಸಲಾಯಿತು.

ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಎಸ್‌.ಟಿ. ಸೋಮಶೇಖರ್, ಎನ್. ಮುನಿರತ್ನ, ಬಿ.ಸಿ. ನಾಗೇಶ್ ಇದ್ದರು.

ಗ್ರಾ.ಪಂ.ಗೆ ‘ಆನ್‌ಲೈನ್‌’ ಸೇವೆ
‘ಗ್ರಾಮ ಪಂಚಾಯಿತಿ ಹಂತದಲ್ಲಿಯೇ ಆನ್‌ಲೈನ್ ಮೂಲಕ ನಾಗರಿಕ ಸೇವೆಗಳನ್ನು ಒದಗಿಸುವ ವಿನೂತನ ‘ಗ್ರಾಮ ಸೇವಾ’ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ 5 ಜಿಲ್ಲೆಗಳಲ್ಲಿ ಮುಂಬರುವ ಗಣರಾಜ್ಯೋತ್ಸವ ದಿನದಂದು (ಜ. 26) ಜಾರಿಗೊಳಿಸಲಾಗುವುದು’ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಅಭಿವೃದ್ಧಿ ಜನರ ಸುತ್ತ ಆಗಬೇಕು. ಜನರು ಅಭಿವೃದ್ಧಿ ಸುತ್ತ ಸುತ್ತುವಂತಾಗಬಾರದು. ಈ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳು ಜನರಿಗೆ ವಿವಿಧ ಸೇವೆಗಳನ್ನು ಒದಗಿಸುವ ಗ್ರಾಮ ಸೇವಾ ಸಂಸ್ಥೆ ಆಗಬೇಕು. ಮನೆ ಬಾಗಿಲಿಗೆ ಸೌಲಭ್ಯಗಳು ತಲುಪಬೇಕು. ಈ ಆಶಯದೊಂದಿಗೆ ಈ ಯೋಜನೆ ಜಾರಿಗೊಳಿಸಲಾಗುವುದು’ ಎಂದರು.

ನರೇಗಾ ಅಡಿ ಶಾಲಾ ದುರಸ್ತಿಗೆ ಅವಕಾಶ ಕಲ್ಪಿಸಿ: ಈಶ್ವರ‍ಪ್ಪ
‘ಶಾಲಾ ಕಟ್ಟಡಗಳ ದುರಸ್ತಿ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಲು ಅವಕಾಶ ಕಲ್ಪಿಸಿ’ ಎಂದು ಪಂಚಾಯತ್ ರಾಜ್ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಕೇಂದ್ರ ಸಚಿವರಿಗೆ ಕಾರ್ಯಕ್ರಮದಲ್ಲೇ ಮನವಿ ಮಾಡಿದರು.

‘ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 1700 ಕಿ.ಮೀ ನಷ್ಟು  ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಬೇಕು’ ಎಂದೂ ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು