ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರತ್ನ ಬೆಂಬಲಿಗರಿಂದ ಹಣ ಹಂಚಿಕೆ ಆರೋಪ: ವಿಡಿಯೊ ಬಿಡುಗಡೆ ಮಾಡಿದ ಡಿಕೆಸು

Last Updated 1 ನವೆಂಬರ್ 2020, 16:39 IST
ಅಕ್ಷರ ಗಾತ್ರ

ಬೆಂಗಳೂರು: ‘ಆರ್‌.ಆರ್‌. ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಬೆಂಬಲಿಗರು ಮತದಾರರಿಂದ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಪಡೆಯುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಸಾವಿರ ರೂಪಾಯಿ ಕೊಟ್ಟು, ಮತದಾನ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಟ್ಟರೂ ಯಾವುದೇಕ್ರಮ ಕೈಗೊಂಡಿಲ್ಲ’ ಎಂದು ಸಂಸದ ಕಾಂಗ್ರೆಸ್‌ನ ಡಿ.ಕೆ. ಸುರೇಶ್‌ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ವಿಡಿಯೊ ತುಣುಕುಗಳನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಪೊಲೀಸ್ ಅಧಿಕಾರಿಗಳು ಅಕ್ರಮಕ್ಕೆ ರಕ್ಷಣೆ ನೀಡುತ್ತಿದ್ದಾರೆ’ ಎಂದೂ ದೂರಿದರು.

‘ಮುನಿರತ್ನ ಅವರೇ ಗೃಹಮಂತ್ರಿ ಆಗಿ ಬರುತ್ತೇನೆ ಎನ್ನುತ್ತಿದ್ದಾರೆ. ಯಡಿಯೂರಪ್ಪನವರು ಗೃಹ ಸಚಿವ ಸ್ಥಾನ ನೀಡುವುದಾಗಿ ಮಾತು ಕೊಟ್ಟಿದ್ದಾರಾ? ಕೆಲವು ಮಾಧ್ಯಮಗಳು ಕೂಡ ಅವರ ಪರವಾಗಿ ಕೆಲಸ ಮಾಡುತ್ತಿವೆ’ ಎಂದರು.

‘ಭಾನುವಾರ ರಾತ್ರಿ ಜಾಲಹಳ್ಳಿ ಯಲ್ಲಿ ನಮ್ಮ ಕಾರ್ಯಕರ್ತರ ಮನೆಗೆ ನುಗ್ಗಿ 3ನೇ ತಾರೀಕಿನ ನಂತರ ನೋಡಿಕೊಳ್ಳುತ್ತೇವೆ ಎಂದು ಜೀವಬೆದರಿಕೆ ಹಾಕಿದ್ದಾರೆ. ಪೊಲೀಸರಿಗೆ ದೂರು ಕೊಟ್ಟರೆ ಅದನ್ನು ತೆಗೆದುಕೊಳ್ಳುವುದಿಲ್ಲ. ಪೊಲೀಸ್ ಅಧಿಕಾರಿಗಳು ಚುನಾವಣೆ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿಯು ತ್ತಿದೆ. ಅಧಿಕಾರಿಗಳ ದುರುಪಯೋಗ ಆಗುತ್ತಿದೆ. ಆದರೂ ಚುನಾವಣಾ ಆಯೋಗ ಕಣ್ಣುಮುಚ್ಚಿ ಕೂತಿದೆ. ಈತನಿಗೆ ಚುನಾವಣಾ ಆಯೋಗ
ವಾಗಲಿ, ಪೊಲೀಸ್ ಇಲಾಖೆಯಾಗಲಿ ಯಾವುದೂ ಲೆಕ್ಕಕ್ಕೆ ಇಲ್ಲ’ ಎಂದರು.

ಅಂದು ದುಶ್ಶಾಸನ, ಇಂದು ಶಕುನಿ: ‘ಮುನಿರತ್ನ ಅವರು ಅಂದು ಪಾಲಿಕೆ ಸಭೆಯಲ್ಲಿ ದುಶ್ಶಾಸನನ ಪಾತ್ರ ಮಾಡಿದ್ದರು. ಇಂದು ಶಕುನಿ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರು ಮಾಡಿರುವ ಕೆಲಸಕ್ಕೆ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೆಸರು ಮೆತ್ತುತ್ತಿದ್ದಾರೆ’ ಎಂದೂ ವಾಗ್ದಾಳಿ ನಡೆಸಿದರು.

‘ಮತದ ರೂಪದಲ್ಲಿ ಭಿಕ್ಷೆ ನೀಡಿ’

‘ನಾನು ಐದು ವರ್ಷಗಳ ಹಿಂದೆ ಕಳೆದುಕೊಂಡಿರುವ ಅರಶಿನ-ಕುಂಕುಮವನ್ನು ಮತದ ಸ್ವರೂಪದಲ್ಲಿ ಭಿಕ್ಷೆಯಾಗಿ ನೀಡಿ, ನನ್ನ ಉಳಿದ ಬದುಕನ್ನು ನಿಮ್ಮ ಸೇವೆಗೆ ಮುಡಿಪಾಗಿಡುತ್ತೇನೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಮತದಾರರಲ್ಲಿ ಮನವಿ ಮಾಡಿದರು.

‘ನನ್ನ ಗಂಡನ ಹೆಸರು ಬಳಸಬಾರದು ಅಂತೀರಿ. ನನ್ನ ಮೇಲೆ ಸುಳ್ಳು ಎಫ್‌ಐಆರ್ ಹಾಕಿದ್ದೀರಿ. ಪ್ರಚಾರಕ್ಕೆ ಅಡ್ಡಿಪಡಿಸಿದ್ದೀರಿ. ಅಲ್ಲದೆ ನಾನು ಪ್ರಚಾರಕ್ಕೆ ಹೋದ ಕೆಲವು ಮನೆಗಳಲ್ಲಿ, ನನ್ನ ಬಗ್ಗೆ ನೀವು ಆಡಿರುವ ಮಾತು, ಬಳಸಿರುವ ಭಾಷೆ ಯಾವುದೇ ಹೆಣ್ಣು ಕೇಳುವಂಥದ್ದಲ್ಲ. ನಾನು ನಿಮಗೇನು ಅನ್ಯಾಯ ಮಾಡಿದ್ದೇ ಮುನಿರತ್ನ ಅಣ್ಣನವರೇ? ಎರಡು ಬಾರಿ ಶಾಸಕರಾಗಿರುವ ನೀವು ಈ ರೀತಿ ಮಾತನಾಡಿದರೆ ಜನರನ್ನು ಹೇಗೆ ರಕ್ಷಿಸುತ್ತೀರಿ’ ಎಂದೂ ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT