ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಿ ಸಮಾನಾಂತರ ಜಲಾಶಯಕ್ಕೆ ಆಂಧ್ರ ವಿರೋಧ

ತುಂಗಭದ್ರಾ ಅಣೆಕಟ್ಟೆಯ ನೀರಿನ ಸದ್ಬಳಕೆಯ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆ
Last Updated 2 ನವೆಂಬರ್ 2020, 17:38 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ತುಂಗಭದ್ರಾ ಅಣೆಕಟ್ಟೆಯ ನೀರಿನ ಸದ್ಬಳಕೆಗೆ ಕೊಪ್ಪಳದ ನವಲಿ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಸಮಾನಾಂತರ ಜಲಾಶಯಕ್ಕೆ ಆಂಧ್ರ ಪ್ರದೇಶ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆ ಉಂಟಾಗಿದೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯ ಸಭೆಯಲ್ಲಿ ಯೋಜನೆಯ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಆಂಧ್ರದ ನೀರಾವರಿ ಇಲಾಖೆಯ ಅಧಿಕಾರಿಗಳು ನವಲಿ ಜಲಾಶಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

‘ಒಂದು ವೇಳೆ ಸಮಾನಾಂತರ ಜಲಾಶಯ ನಿರ್ಮಿಸಿದರೆ, ಅದರಲ್ಲಿ ಸಂಗ್ರಹಿಸಲು ಉದ್ದೇಶಿಸಿರುವ ನೀರಿನ ಪಾಲು ಆಂಧ್ರಕ್ಕೂ ಕೊಡಬೇಕು. ತುಂಗ
ಭದ್ರಾ ಜಲಾಶಯದ ಮೇಲ್ಮಟ್ಟದಕಾಲುವೆಗೆ (ಎಚ್‌ಎಲ್‌ಸಿ) ಸಮಾನಾಂತರವಾಗಿ ಇನ್ನೊಂದು ಕಾಲುವೆ ನಿರ್ಮಿಸಬೇಕೆಂಬ ಆಂಧ್ರದ ದಶಕಗಳ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಯೋಜನೆ ಕೈಗೆತ್ತಿಕೊಳ್ಳಬಾರದು’ ಎಂದು ಆಗ್ರಹಿಸಿದ್ದಾರೆ. ಈ ವಿಷಯವನ್ನು ತುಂಗಭದ್ರಾ ಮಂಡಳಿಯ ಹಿರಿಯ ಅಧಿಕಾರಿ ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.

133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ 32 ಟಿಎಂಸಿ ಹೂಳು ತುಂಬಿಕೊಂಡಿದೆ. ಹೂಳು ತೆಗೆಸಲು ಸಾವಿರಾರು ಕೋಟಿ ವೆಚ್ಚ
ತಗಲುತ್ತದೆ. ಅದರ ಬದಲು ಸಮಾನಾಂತರ ಜಲಾಶಯ ನಿರ್ಮಿಸಿ, ಅಲ್ಲಿ ನೀರು ಸಂಗ್ರಹಿಸಲು ನೀರಾವರಿ ಇಲಾಖೆಯ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಯೋಜನೆಗೆ ಒಪ್ಪಿಗೆ ಸೂಚಿಸಿ, ಕೊಪ್ಪಳ ಜಿಲ್ಲೆಯ ನವಲಿಯಲ್ಲಿ 30 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಸಮಾನಾಂತರ ಜಲಾಶಯಕ್ಕೆ ₹6,000 ಕೋಟಿ ಅನುದಾನ ಘೋಷಿಸಿತ್ತು.

ಈಗಿನ ಸರ್ಕಾರ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಬಜೆಟ್‌ನಲ್ಲಿ ₹20 ಕೋಟಿ ಮೀಸಲಿಟ್ಟಿದೆ. ಯೋಜನೆ ಆರಂಭವಾಗುವ ಮುನ್ನವೇ ಆಂಧ್ರ ಪ್ರದೇಶ ಅದಕ್ಕೆ ಅಪಸ್ವರ ಎತ್ತಿದೆ.

‘ಯೋಜನೆ ಅನುಷ್ಠಾನದ ಬಗ್ಗೆ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ. ಹತ್ತು ವರ್ಷಗಳ ಹಿಂದೆಯೇ ಯೋಜನೆ ಆರಂಭಗೊಳ್ಳಬೇಕಿತ್ತು. ಆದರೆ, ವಿಳಂಬವಾಗುತ್ತಿರುವುದರಿಂದ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ಆಂಧ್ರ ಪ್ರದೇಶ ವಿರೋಧಿಸುತ್ತಿರುವುದು ತಾಜಾ ನಿದರ್ಶನ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್ ತಿಳಿಸಿದ್ದಾರೆ.ಆಂಧ್ರ ಪ್ರದೇಶದ ವಿರೋಧ ಕುರಿತು ಮಾಹಿತಿ ಪಡೆಯಲು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ‘ಪ್ರಜಾವಾಣಿ’ ಹಲವು ಸಲ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಲಭ್ಯರಾಗಲಿಲ್ಲ.

***

ಸಮಾನಾಂತರ ಜಲಾಶಯದಲ್ಲಿ ಸಂಗ್ರಹಿಸುವಷ್ಟು ನೀರು ತಮಗೂ ಕೊಡಬೇಕು ಎಂದು ಆಂಧ್ರ ಪ್ರದೇಶದವರು ಸಭೆಯಲ್ಲಿ ಆಗ್ರಹಿಸಿರುವುದು ನಿಜ

-ಮಂಜಪ್ಪ, ಮುಖ್ಯ ಎಂಜಿನಿಯರ್‌, ತುಂಗಭದ್ರಾ ನೀರಾವರಿ ನಿಗಮ

***

ಆಂಧ್ರ ಪ್ರದೇಶಕ್ಕೆ ಅದರ ಕೋಟಾದಡಿ ಪ್ರತಿ ವರ್ಷ ನೀರು ಹರಿಸಲಾಗುತ್ತಿದೆ. ಹೀಗಿದ್ದರೂ ಸಮಾನಾಂತರ ಜಲಾಶಯಕ್ಕೆ ವಿರೋಧಿಸುತ್ತಿರುವುದು ಸರಿಯಲ್ಲ

- ಜೆ. ಕಾರ್ತಿಕ್‌, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT