ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

Last Updated 23 ಜನವರಿ 2023, 18:38 IST
ಅಕ್ಷರ ಗಾತ್ರ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ಶಿಕ್ಷಕಿಯರೆಂದು ಪರಿಗಣಿಸಬೇಕು. ಗ್ರ್ಯಾಚ್ಯುಟಿ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಗರದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.

ವಿವಿಧ ಜಿಲ್ಲೆಗಳಿಂದ ನಗರಕ್ಕೆ ಬಂದಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಸ್ವಾತಂತ್ರ್ಯ ಉದ್ಯಾನದಲ್ಲಿ ಕುಳಿತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಳಿಯನ್ನೂ ಲೆಕ್ಕಿಸದೇ ಸೋಮವಾರ ಅಹೋರಾತ್ರಿ ಉದ್ಯಾನದಲ್ಲೇ ಮಲಗಿದರು.

ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ಅಧೀನದ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

‘ರಾಜ್ಯದ ಮಕ್ಕಳ ಬೆಳವಣಿಗೆಗೆ ಅಂಗನವಾಡಿಗಳು ಕೊಡುಗೆ ನೀಡುತ್ತಿವೆ. ಅನ್ನದ ಕೇಂದ್ರಗಳಾಗಿರುವ ಅಂಗನವಾಡಿಗಳನ್ನು ಅಕ್ಷರ ಕೇಂದ್ರಗಳಾಗಿ ಮಾರ್ಪಡಿಸಬೇಕು. ಕಾರ್ಯಕರ್ತೆಯರನ್ನು ಸರ್ಕಾರಿ ಶಿಕ್ಷಕಿಯರೆಂದು ಪರಿಗಣಿಸಿ, ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಹೇಳಿದರು.

‘ಬೇಡಿಕೆ ಈಡೇರಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಆದರೆ, ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ, ಪುನಃ ಪ್ರತಿಭಟನೆ ಆರಂಭಿಸಿದ್ದೇವೆ. ಲಿಖಿತ ಭರವಸೆ ಸಿಗುವವರೆಗೂ ಪ್ರತಿಭಟನೆ ಮುಂದುವರಿಸಲಿದ್ದೇವೆ’ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಎಚ್‌.ಎಸ್. ಸುನಂದಾ, ‘ರಾಜ್ಯದ ಬಹುತೇಕ ಅಂಗನವಾಡಿ ಸಹಾಯಕಿಯರು ಹಾಗೂ ಕಾರ್ಯಕರ್ತೆಯರು ಕೆಲಸಕ್ಕೆ ಗೈರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ನಿತ್ಯವೂ ಬೇರೆ ಬೇರೆ ಜಿಲ್ಲೆಗಳಿಂದ ಪ್ರತಿಭಟನಕಾರರು ಬೆಂಗಳೂರಿಗೆ ಬರಲಿದ್ದಾರೆ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಕೆ.ಎನ್‌. ಅನುರಾಧಾ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.

‘ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಸದ್ಯಕ್ಕೆ ಪ್ರತಿಭಟನೆ ಕೈಬಿಡಿ’ ಎಂದು ಅನುರಾಧಾ ಕೋರಿದರು.

ಅದಕ್ಕೆ ಒಪ್ಪದ ಮುಖಂಡರು, ‘ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಸ್ಥಗಿತಗೊಳಿಸುವುದಿಲ್ಲ’ ಎಂದರು. ನಂತರ, ಪ್ರತಿಭಟನೆ ಮುಂದುವರಿಸಿದರು.

‘ಪ್ರತಿಭಟನೆ ಕೈಬಿಟ್ಟಿದ್ದ ಬಣ’

‘ಸರ್ಕಾರಿ ಶಿಕ್ಷಕರ ಸ್ಥಾನಮಾನ ನೀಡಿ, ಸೇವಾ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದಿಂದ ಇತ್ತೀಚೆಗಷ್ಟೇ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆದಿತ್ತು.

ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ಭರವಸೆ ಮೇರೆಗೆ ಶನಿವಾರ (ಜ. 21) ಪ್ರತಿಭಟನೆ ಅಂತ್ಯಗೊಂಡಿತ್ತು. ಇದೀಗ, ಸಿಐಟಿಯು ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಪುನಃ ಸೋಮವಾರದಿಂದ ಪ್ರತಿಭಟನೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT