ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು, ಗಾಂಧಿ, ಅಂಬೇಡ್ಕರ್ ಮುಂತಾದವರ ಪಠ್ಯವಿಷಯ ಕೈಬಿಟ್ಟಿರಲಿಲ್ಲ: ಬರಗೂರು

ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಆರೋಪಕ್ಕೆ ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ
Last Updated 24 ಮೇ 2022, 15:13 IST
ಅಕ್ಷರ ಗಾತ್ರ

ಬೆಂಗಳೂರು:‘ಕುವೆಂಪು, ಗಾಂಧಿ, ಅಂಬೇಡ್ಕರ್, ಕಿತ್ತೂರು ರಾಣಿ ಚನ್ನಮ್ಮ ಸೇರಿದಂತೆ ವಿವಿಧ ಮಹನೀಯರ ಬಗೆಗಿನ ಪಠ್ಯವಿಷಯಗಳನ್ನು ಕೈಬಿಟ್ಟಿರಲಿಲ್ಲ. ಬೇರೆ ಬೇರೆ ತರಗತಿಯ ಪಠ್ಯಪುಸ್ತಕದಲ್ಲಿ ಅವರ ಬಗೆಗಿನ ಪಾಠಗಳಿವೆ’ ಎಂದು ಸಾಹಿತಿ ಹಾಗೂ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

‘ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ಕೆಲ ಮಹನೀಯರ ಪಠ್ಯಗಳನ್ನು ಕೈಬಿಟ್ಟಿದೆ’ ಎಂಬಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಅವರು, ‘ಸಚಿವರು ಹೇಳಿರುವುದು ಅಪ್ಪಟ ತಪ್ಪು ಮಾಹಿತಿ. ಕುವೆಂಪು ಅವರ ರಚನೆಗಳು 10 ಮತ್ತು 7ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳಲ್ಲಿವೆ. ಪ್ರೌಢಶಾಲೆ ಹಂತದಲ್ಲಿದ್ದ ಕುವೆಂಪು ಅವರ ‘ಭರತ ಭೂಮಿ ನಮ್ಮ ತಾಯಿ’ ಪದ್ಯವನ್ನು 7ನೇ ತರಗತಿಗೆ ಅಳವಡಿಸಲು ಸೂಚಿಸಿದ್ದೆವು. 7ನೇ ತರಗತಿಯ 2ನೇ ಭಾಗ ಮತ್ತು 10ನೇ ತರಗತಿಯ 2ನೇ ಭಾಗದ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಗಾಂಧಿಯವರ ಕುರಿತು ಸಾಕಷ್ಟು ವಿವರಗಳಿವೆ’ ಎಂದು ಹೇಳಿದ್ದಾರೆ.

‘8ನೇ ತರಗತಿಯ ಸಮಾಜ ವಿಜ್ಞಾನದ ಭಾಗ-1 ಮತ್ತು 10ನೇ ತರಗತಿಯ ಭಾಗ-2 ರಲ್ಲಿ ಅಂಬೇಡ್ಕರ್ ಅವರ ಬಗ್ಗೆ ಪಾಠಗಳಿವೆ. 9ನೇ ತರಗತಿಯ ಪಠ್ಯದಲ್ಲಿ ‘ನಮ್ಮ ಸಂವಿಧಾನ’ ಎಂಬ ಪಾಠವಿದ್ದು, ಅಲ್ಲಿಯೂ ಅಂಬೇಡ್ಕರ್ ಅವರ ಕುರಿತು ವಿವರಗಳಿವೆ. ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ 6ನೇ ತರಗತಿಯಸಮಾಜ ವಿಜ್ಞಾನದ ಭಾಗ-2 ಮತ್ತು 10ನೇ ತರಗತಿಯ ಭಾಗ-1 ರಲ್ಲಿ ಪಾಠಗಳಿವೆ. ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ 5ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಹೊಸದಾಗಿ ಒಂದು ಪಾಠವನ್ನು ಸೇರಿಸಲಾಗಿದೆ. ಮದಕರಿನಾಯಕರ ಬಗ್ಗೆ ಪಾಠ ಕೈಬಿಟ್ಟಿರಲಿಲ್ಲ. ಸುರಪುರ ಸಂಸ್ಥಾನದ ಬಗ್ಗೆಯೂ ಬರೆಸಿ, ಸೇರಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಬಗ್ಗೆ ವಿವರಗಳಿಲ್ಲ ಎನ್ನುವುದು ಕೂಡ ತಪ್ಪು ಮಾಹಿತಿ. ಯಲಹಂಕ ನಾಡಪ್ರಭುಗಳ ಬಗ್ಗೆ ಪ್ರತ್ಯೇಕ ವಿವರಗಳಿದ್ದು, ಇಮ್ಮಡಿ ಕೆಂಪೇಗೌಡರ ಬಗ್ಗೆ7ನೇ ತರಗತಿಯಸಮಾಜ ವಿಜ್ಞಾನದ ಭಾಗ–1ರ ಪಠ್ಯಪುಸ್ತಕದಲ್ಲಿ ವಿವರವಿದೆ. ‘ಮೈಸೂರು ಒಡೆಯರು’ ಎಂಬ ಪ್ರತ್ಯೇಕ ಅಧ್ಯಾಯವೂ ಇದೆ.ಇದೇ ಪಠ್ಯಪುಸ್ತಕದ ಭಾಗ–2ರಲ್ಲಿರಾಣಿ ಅಬ್ಬಕ್ಕ ಕುರಿತ ಮಾಹಿತಿಯಿದೆ. ಇಲ್ಲಿನ ವಿವರಗಳು ಕಡಿಮೆ ಎನ್ನಿಸಿದ್ದರೆ ಮರುಪರಿಷ್ಕರಣೆಯಲ್ಲಿ ವಿಸ್ತರಿಸಬಹುದಾಗಿತ್ತು’ ಎಂದು ಸ್ಪಷ್ಟಪಡಿಸಿದ್ದಾರೆ.

‘ಟಿಪ್ಪು, ಸಾವರ್ಕರ್ ಒಳಗೊಂಡಂತೆ ಯಾರ ಬಗ್ಗೆಯೂ ನಕಾರಾತ್ಮಕ ವಿಷಯಗಳನ್ನು ಹೇಳದೆ, ನಡೆದ ಘಟನೆಗಳ ವಾಸ್ತವದ ಮಾಹಿತಿಯನ್ನು ಕೊಡಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT