ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಟ್ರಿಕ್‌ಗೆ ಬಿಜೆಪಿ ಯತ್ನ, ತಪ್ಪಿಸಲು ಕಾಂಗ್ರೆಸ್‌ ಹೊಂಚು

ಪಶ್ಚಿಮ ಪದವೀಧರ ಮತಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ l ಅನುಭವಕ್ಕೂ ಹೊಸತನಕ್ಕೂ ಹಣಾಹಣಿ l ಗೆಲುವಿಗಾಗಿ ಜಿದ್ದಾಜಿದ್ದಿಯಲ್ಲಿ ಪ್ರಮುಖ ಅಭ್ಯರ್ಥಿಗಳು
Last Updated 22 ಅಕ್ಟೋಬರ್ 2020, 20:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನವರಾತ್ರಿಯ ರಂಗೇರುತ್ತಿರುವಂತೆ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಕಣಕ್ಕೆ ಪ್ರಚಾರದ ಕಾವೇರುತ್ತಿದೆ.

ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ.

ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಒಟ್ಟು 75, 774 ಪದವೀಧರರು ನೊಂದಾಯಿಸಿದ್ದಾರೆ. ಡಿ-ನೋವೋ ಪದ್ಧತಿಯನ್ವಯ ಮತದಾರರ ಪಟ್ಟಿ ತಯಾರಿಸಲಾಗಿದೆ. ಈ ಸಲ 18 ಹೆಚ್ಚುವರಿ ಮತಗಟ್ಟೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಒಟ್ಟು 146 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.

ಈ ಸಲ ಅನುಭವಿ ಮತ್ತು ಹೊಸಬರ ನಡುವಿನ ಸ್ಪರ್ಧೆಯ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿ ಈ ಸಲವೂ ಪಟ್ಟುಬಿಡಬಾರದೆಂಬ ಹಟದಲ್ಲಿದ್ದರೆ, ಕಾಂಗ್ರೆಸ್ಸಿಗರು ಹೇಗಾದರೂ ತಮ್ಮ ಕೈ ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಆರ್‌.ಎಂ. ಕುಬೇರಪ್ಪ ಈ ಸಲವಾದರೂ ಮತದಾರರು ತಮ್ಮ ಕೈ ಹಿಡಿದಾರು ಎಂಬ ನಿರೀಕ್ಷೆಯಲ್ಲಿದ್ದಾರೆ. ಆರು ಜನ ಪಕ್ಷೇತರ ಅಭ್ಯರ್ಥಿಗಳೂ ಕಣದಲ್ಲಿದ್ದು, ಬಸವರಾಜ ಗುರಿಕಾರ್‌ ಅವರು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಎದಿರೇಟು ಕೊಡಲು ಸಜ್ಜಾಗಿದ್ದಾರೆ.

ಬಿಜೆಪಿಯ ವಿ.ಎಸ್‌.ಸಂಕನೂರು ಅವರಿಗಿದು ಎರಡನೆಯ ಅವಕಾಶ. 68ರ ಅಂಚಿನಲ್ಲಿರುವ ಅವರಿಗೆ ಹಾಗೂ ಪಕ್ಷದವರಿಗೆ ಇದೀಗ ಪ್ರತಿಷ್ಠೆಯ ಕಣವಾಗಿದೆ. ಹಿಂದೆ ಒಟ್ಟು 13 ಜನ ಶಾಸಕರಿದ್ದಾಗಲೇ 13 ಸಾವಿರ ಮತಗಳ ಮುನ್ನಡೆಯಿಂದ ಜಯ ಸಾಧಿಸಿದ್ದರು. ಈ ಸಲ ಗೆಲುವಿನ ಅಂತರ ಕನಿಷ್ಠವೆಂದರೂ 25 ಸಾವಿರಕ್ಕೆ ಏರಿಸಬೇಕು ಎನ್ನುವುದು ಇವರ ಗುರಿಯಾಗಿದೆ. ಸದನದಲ್ಲಿ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿರುವ ಹಲವು ಉದಾಹರಣೆಗಳು ಇವರ ಬೆನ್ನಿಗಿವೆ. ಇದಕ್ಕೆ ತಕ್ಕನಾಗಿ ಈ ಭಾಗದಲ್ಲಿ ಬರುವ 23 ವಿಧಾನಸಭೆ ಕ್ಷೇತ್ರಗಳಲ್ಲಿ, 19 ಬಿಜೆಪಿ ಶಾಸಕರು, ಮೂವರು ಸಂಸದರು (ಸುರೇಶ ಅಂಗಡಿಯವರನ್ನು ಹೊರತು ಪಡಿಸಿ) ಇರುವಾಗ ಗೆಲುವು ಸಲೀಸು ಎನ್ನುವುದು ಕಾರ್ಯಕರ್ತರ ಲೆಕ್ಕಾಚಾರವಾಗಿದೆ.ಈ ಕಾರಣಕ್ಕೇನೆ ಪಕ್ಷದ ಎಲ್ಲ ಹಿರಿಯ ನಾಯಕರೂ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಬಿಜೆಪಿ ಸ್ಥಾನವನ್ನ ಬಲಪಡಿಸಿಕೊಳ್ಳುವ ಹವಣಿಕೆಯಲ್ಲಿದ್ದಾರೆ.

ಶಿಕ್ಷಕ ಸಂಘಟನೆಗಳ ಮೂಲಕ ಗುರುತಿಸಿಕೊಂಡಿರುವ ಪ್ರೊ. ಆರ್‌.ಎಂ. ಕುಬೇರಪ್ಪ ಅವರಿಗೆ ಕಾಂಗ್ರೆಸ್‌ ಈ ಸಲ ಟಿಕೆಟ್‌ ನೀಡಿದೆ. ಕಳೆದ ಸಲ ಪಕ್ಷೇತರ ಅಭ್ಯರ್ಥಿಯಾಗಿ ಸೋಲನ್ನು ಅನುಭವಿಸಿದ್ದರು. ಆದರೆ ಈ ಸಲ ಮತ್ತೆ ತಮ್ಮ ವರ್ಚಸ್ಸನ್ನೇ ಬಂಡವಾಳವಾಗಿರಿಸಿಕೊಂಡು ಕಣಕ್ಕೆ ಇಳಿದಿದ್ದಾರೆ. ಅವರ ಬೆಂಬಲಿಗರು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ನೀಡುವುದೇ ತಮ್ಮ ಉದ್ದೇಶವಾಗಿದೆ ಎಂದವರು ಪ್ರಚಾರ ಕೈಗೊಂಡಲ್ಲಿ ಹೇಳುತ್ತಿದ್ದಾರೆ. ಜನರಲ್ಲಿ ತಮ್ಮ ಬಗ್ಗೆ ಅನುಕಂಪವಿದೆ. ಮಾಡುವ ತುಡಿತವಿದ್ದರೂ ಅವಕಾಶ ಸಿಕ್ಕಿಲ್ಲ, ಮೂರು ಸೋಲುಗಳನ್ನು ಅರಗಿಸಿಕೊಂಡಿರುವುದರಿಂದ ಈ ಸಲ ಅನುಕಂಪದ ಅಲೆ ಬಲವಾಗಿದೆ. ಅದು ಗೆಲುವಿನತ್ತ ಕರೆದೊಯ್ಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ರಾಷ್ಟ್ರೀಯ ಸಂಘದ ಉಪಾಧ್ಯಕ್ಷರಾಗಿರುವ ಬಸವರಾಜ ಗುರಿಕಾರ‌ ಈ ಸಲ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಶಿಕ್ಷಕ ಸಂಘದ ಬೆಂಬಲ ಇರುವುದರಿಂದ, ಗೆಲುವಿನತ್ತ ನಡೆ ಹಾಕಬಹುದು ಎಂಬ ಲೆಕ್ಕಾಚಾರ ಇವರದ್ದು.

ಜೆಡಿಎಸ್‌ನಿಂದ ಶಿವಶಂಕರ್ ಕಲ್ಲೂರ್‌ ಅವರು ಸ್ಪರ್ಧಿಸುತ್ತಿದ್ದು, ಕ್ಷೇತ್ರದಲ್ಲಿ, ಆಗಾಗ ಅಲ್ಲಲ್ಲಿ ಅವರ ಹೆಸರು ಕೇಳಿಬರುತ್ತಿದೆ. ಆರ್ಭಟವಿಲ್ಲದೆ, ತಣ್ಣಗೆ ಮತದಾರರನ್ನು ಸಂಪರ್ಕಿಸುವ ತಂತ್ರವನ್ನೂ ಅವರು ಅಳವಡಿಸಿಕೊಂಡಿದ್ದಾರೆ. ಆದರೂ ಜೆಡಿಎಸ್‌ ಎಂಬ ನಿರೀಕ್ಷಿತ ಚರ್ಚೆ, ಪ್ರಭಾವ ಕೇಳಿಬರುತ್ತಿಲ್ಲ.

ಕರ್ನಾಟಕ ರಾಷ್ಟ್ರಸಮಿತಿಯಿಂದ ಶಿವರಾಜ ಕಾಂಬಳೆ, ಶಿವಸೇನೆಯಿಂದ ಸೋಮಶೇಖರ್‌ ಉಮರಾಣಿ ಅವರೂ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಇದಲ್ಲದೆ, ದಶರಥ ಚಂದ್ರಹಾಸ ರಂಗರಡ್ಡಿ, ಬಿ.ಡಿ.ಹಿರೇಗೌಡರ, ಬಸವರಾಜ ತೇರದಾಳ, ನಾಗರಕಟ್ಟೆ ಮಹ್ಮದ್‌ ಶಫಿವುದ್ದೀನ್‌, ಶಿವಕುಮಾರ ತಳವಾರ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ.

ಮತದಾರರು ಮಾತ್ರ, ಅನುಭವಿಯ ನಾಯಕತ್ವದಲ್ಲಿ ನಂಬಿಕೆ ಇಡುವರೊ, ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸುವರೊ ಎಂಬುದು ಫಲಿತಾಂಶ ತಿಳಿಸಲಿದೆ.

ಕಳೆದ ಸಲದ ಫಲಿತಾಂಶ

ಎಸ್.ವಿ. ಸಂಕನೂರ(ಬಿಜೆಪಿ)-22506
ವಸಂತ ಹೊರಟ್ಟಿ(ಜೆಡಿಎಸ್)-8574
ಪಿ.ಎಚ್. ನೀರಲಕೇರಿ(ಕಾಂಗ್ರೆಸ್)-4685
ರವಿಕುಮಾರ್ ಬಸವರಾಜ ಅಸೂತಿ(ಪಕ್ಷೇತರ)-734

ವಿಧಾನ ಪರಿಷತ್‌ ಅಭ್ಯರ್ಥಿಗಳ ಸಂದರ್ಶನ

****

ವೈಯಕ್ತಿಕ ವರ್ಚಸ್ಸು ಗೆಲುವಿಗೆ ಸೋಪಾನ

*ಕಳೆದೆರಡು ಅವಧಿಯಿಂದಲೂ ಈ ಸ್ಥಾನದಲ್ಲಿರುವಿರಿ. ಈ ಸಲ ಹೊಸತೇನಿದೆ?

ಉದ್ಯೋಗ ಸೃಷ್ಟಿ ಮತ್ತು ಉದ್ಯೋಗಾವಕಾಶಗಳನ್ನು ನೀಡಲು ಈ ಎರಡು ಅವಧಿಯಲ್ಲಿ ಹೋರಾಡಿದ್ದಾಗಿದೆ. ಈ ಸಲ ಕೇಂದ್ರ ಸರ್ಕಾರದ ಯೋಜನೆಗಳೊಂದಿಗೆ ಸ್ವಯಂ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಕೈಗಾರಿಕಾ ಸಚಿವರೂ ಈ ಭಾಗದವರೇ ಆಗಿರುವುದರಿಂದ ಲಭ್ಯ ಇರುವ ಮಾನವ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲ ಬಳಸಿ ಹೊಸ ಉದ್ದಿಮೆಗಳನ್ನು ಸ್ಥಾಪಿಸುವ ಯೋಜನೆ ಇದೆ.

*ಈ ಸಲ ನಿಮ್ಮ ಆಯ್ಕೆ ಸುಲಭವಾಗಿದೆಯೇ?

ಬಿಜೆಪಿಯ ವರ್ಚಸ್ಸು, ವೈಯಕ್ತಿಕ ವರ್ಚಸ್ಸು ಇವೆರಡೂ ಆಯ್ಕೆ ಸುಲಭಗೊಳಿಸುತ್ತವೆ. ಕಳೆದ ಕೆಲವು ವರ್ಷಗಳಿಂದ ಈ ಕ್ಷೇತ್ರದಲ್ಲಿರುವೆ.ಕಳೆದೆರಡು ಅವಧಿಯಲ್ಲಿ ನೀಡಿರುವ ಆಶ್ವಾಸನೆಗಳು, ಒಣ ಭರವಸೆ ಅಲ್ಲ ಎಂಬುದು ನನ್ನ ಕ್ಷೇತ್ರದ ಮತದಾರರಿಗೆ ತಿಳಿದಿದೆ. ಬಿಜೆಪಿಯ ಮೇಲೆ ಜನರಿಗೆ ಪೂರ್ಣ ಭರವಸೆ ಇದೆ. ಶಿಕ್ಷಕರು ಮತ್ತಿತರ ಇಲಾಖೆಗಳ ಸಿಬ್ಬಂದಿ ಸಮಸ್ಯೆಗಳತ್ತ ಸದನದ ಗಮನ ಸೆಳೆದು, ಪರಿಹಾರ ಪಡೆದಿರುವೆ. ಜನರಿಗೆ ನನ್ನ ಕ್ರಿಯಾಶಕ್ತಿಯ ಮೇಲೆ ನಂಬಿಕೆ ಇದೆ. ಆಯ್ಕೆ ಕಷ್ಟವೇನಲ್ಲ.

*ಕ್ಷೇತ್ರದಲ್ಲಿ ಹೊಸತನ ಬೇಕು ಎನ್ನುವ ಮಾತು ಕೇಳುತ್ತಿದೆಯಲ್ಲ?

ಇಲ್ಲ. ನಾನೀಗ 32 ತಾಲ್ಲೂಕುಗಳಲ್ಲಿ ಬಹುತೇಕ ಎಲ್ಲ ತಾಲ್ಲೂಕುಗಳನ್ನೂ ಸುತ್ತುಹಾಕಿರುವೆ. ಒಂದೆರಡು ಉಳಿದಿರಬಹುದು. ಎಲ್ಲಿಯೂ ಯಾರೂ ಹೊಸತನಕ್ಕೆ ತುಡಿಯುತ್ತಿಲ್ಲ. ಸದನದಲ್ಲಿ ನಾನು ನನ್ನ ಮತದಾರರ ಧ್ವನಿಯಾಗಿರುವೆ. ನಿವೃತ್ತಿಯಿಂದ, ಅಕಾಲಿಕ ಮರಣದಿಂದ ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯಿಸಿರುವುದು ಎಲ್ಲರಿಗೂ ತಿಳಿದಿದೆ. ನಿರುದ್ಯೋಗ ನಿವಾರಣೆಗೆ ಉದ್ಯೋಗ ಮೇಳಗಳನ್ನೂ ಆಯೋಜಿಸಿದ್ದೆ. ಹಾಗಾಗಿ ಹೊಸತನ ಬೇಕೆನ್ನುವುದು ಪದವೀಧರರ ಸಮಸ್ಯೆಗಳಿಗೆ ಪರಿಹಾರ ಸ್ವರೂಪ ಆಗಿರಬಹುದು ಅಷ್ಟೆ. ವ್ಯಕ್ತಿ ಬದಲಾವಣೆಯಲ್ಲಿ ಯಾರಿಗೂ ನಂಬಿಕೆ ಇಲ್ಲ.

-ಎಸ್‌.ವಿ. ಸಂಕನೂರ, ಬಿಜೆಪಿ ಅಭ್ಯರ್ಥಿ

***

ಅನುಕಂಪದ ಅಲೆಯಿಂದಲೇ ಗೆಲುವಿನತ್ತ: ಕುಬೇರಪ್ಪ

* ಮತದಾರರು ನಿಮ್ಮನ್ನು ಯಾಕೆ ಆಯ್ಕೆ ಮಾಡಬೇಕು?

ಉದ್ಯೋಗಾರ್ಹತೆ ಹಾಗೂ ಉದ್ಯೋಗಗಳ ಸಂಖ್ಯೆ ಮತ್ತು ಉದ್ಯೋಗಾವಕಾಶಗಳು ಈ ಮೂವರ ನಡುವೆ ಒಂದು ಕಂದರ ಉಂಟಾಗಿದೆ. ಉದ್ಯೋಗಾರ್ಹತೆ ಮತ್ತು ಉದ್ಯೋಗಾವಕಾಶಗಳ ನಡುವೆಯೊಂದು ಮಾರ್ಗ ಕಲ್ಪಿಸಲು ನನ್ನನ್ನು ಆಯ್ಕೆ ಮಾಡುತ್ತಾರೆ.

* ನಿಮ್ಮ ಗೆಲುವಿಗೆ ಕಾರಣ ಆಗುವ ಅಂಶಗಳೇನು?

ಇಷ್ಟು ವರ್ಷಗಳಲ್ಲಿ ಕಾಂಗ್ರೆಸ್‌ ಯಾವತ್ತೂ ವಿಧಾನ ಪರಿಷತ್ತಿನ ಮೇಲ್ಮನೆಯ ಸ್ಥಾನಗಳಿಗೆ ಹೆಚ್ಚು ಮಹತ್ವ ನೀಡಿರಲಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ನಿರ್ಣಾಯಕ ಸ್ಥಾನದಲ್ಲಿರುವಂಥ ಅಧಿಕಾರ ಸಿಗುವುದು ಇಲ್ಲಿಯೇ. ಪ್ರಾಶಸ್ತ್ಯದ ಮೇಲೆ ಮತ ಸಿಗುವುದು ಈ ಚುನಾವಣೆಯಲ್ಲಿ ಮಾತ್ರ. ನಾನು ನನ್ನ ನಲ್ವತ್ತು ವರ್ಷಗಳ ವೃತ್ತಿ ಮತ್ತು ಸೇವೆಯಲ್ಲಿ ಅಕಾಡೆಮಿಕ್‌ಗೆ, ವಿವಿಧ ಸೆನೆಟ್‌ ಹಾಗೂ ಕೌನ್ಸಿಲ್‌ಗಳಲ್ಲಿ ಕೆಲಸ ಮಾಡಿರುವ ಅನುಭವ ನನಗಿದೆ. ಯೋಜನೆಗಳನ್ನು ನಿರೂಪಿಸುವಲ್ಲಿ ಅಗತ್ಯವಿರುವ ದೂರದೃಷ್ಟಿ, ಅನುಷ್ಠಾನಕ್ಕೆ ತರಲು ಅಗತ್ಯವಿರುವ ಕ್ರಿಯಾಶೀಲ ಮನಸು ನನಗಿವೆ. ಇದೇ ನನ್ನ ಶಕ್ತಿ ಆಗಲಿದೆ.

* ಮತದಾರರ ಒಲವು ಹೇಗಿದೆ?

ಒಂದೂವರೆ ವರ್ಷಗಳ ಹಿಂದೆಯೇ ಸೋನಿಯಾ ಗಾಂಧಿ ಅವರು ನನ್ನ ಹೆಸರನ್ನು ಘೋಷಿಸಿದ್ದರು. ಆಗಿನಿಂದಲೂ ಕ್ಷೇತ್ರದಲ್ಲಿ ಗುರುತಿಸಿಕೊಂಡು ಶ್ರಮಿಸುತ್ತ ಬಂದೆ. 32 ತಾಲ್ಲೂಕುಗಳನ್ನು ಓಡಾಡಿರುವೆ. ನನ್ನ ಪಕ್ಷ ಕಾಂಗ್ರೆಸ್‌ನತ್ತ ಒಲವು ಇರುವ ಪದವೀಧರರಿಗೆ ನೋಂದಣಿ ಮಾಡಿಸಿರುವೆ. ಎರಡು ಸಲ ಬಿಜೆಪಿ ಅಭ್ಯರ್ಥಿಗಳಿಗೆ ಈ ಅವಕಾಶ ನೀಡಿದ್ದಾರೆ. ನಾನು ಈ ಹಿಂದೆ ಶಿಕ್ಷಕ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿರುವೆ. ಆ ಅನುಕಂಪದ ಅಲೆಯೂ ಈ ಸಲ ಕೆಲಸ ಮಾಡುತ್ತಿದೆ. ಹೋರಾಟಗಾರನಿಗೆ ಅನ್ಯಾಯವಾಗಿದೆ. ಅವಕಾಶ ನೀಡಬೇಕು ಎಂಬ ಭಾವ ಮತದಾರರಲ್ಲಿ ಎದ್ದು ಕಾಣುತ್ತಿದೆ. ಇದು ನನ್ನನ್ನು ಗೆಲುವಿನತ್ತ ಕೊಂಡೊಯ್ಯಲಿದೆ.

-ಕುಬೇರಪ್ಪ, ಕಾಂಗ್ರೆಸ್‌

***

ಬದಲಾವಣೆಗಿದು ಸಕಾಲ

* ಮತದಾರರು ನಿಮ್ಮನ್ನು ಯಾಕೆ ಆಯ್ಕೆ ಮಾಡಬೇಕು?

ಪದವೀಧರರ ಸಮಸ್ಯೆಗಳ ಅರಿವು ನನಗಿದೆ. ಶಾಸನಾತ್ಮಕ ಹಾಗೂ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಳ್ಳುವಾಗ ಒಂದು ಸ್ಪಷ್ಟ ನಿಲುವಿನ ಅಗತ್ಯವಿರುತ್ತದೆ. ಅಂತ ಸಲಹೆ ಸೂಚನೆಗಳನ್ನು ನೀಡಲು, ಸಂಘಟನೆಯ ಹಿನ್ನೆಲೆಯಿಂದ ಬಂದ ನನಗೆ ಸುಲಭವಾಗಿದೆ. ಸರ್ವರ ಹಿತಾಸಕ್ತಿಗಾಗಿ ನನ್ನನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ.

* ಗೆಲುವಿನತ್ತ ಕರೆದೊಯ್ಯ ಬಹುದಾದ ಕಾರಣಗಳು ಯಾವವು?

ನಿರುದ್ಯೋಗಿ ಪದವೀಧರರ ಸಂಖ್ಯೆ ಹೆಚ್ಚಿದೆ. ಅರಸು ಅವರ ನಂತರ ಯಾರೂ ಅವರ ಸಮಸ್ಯೆಗಳನ್ನು ಅರಿಯಲು ಹೋಗಲಿಲ್ಲ. ನಿರುದ್ಯೋಗ ಭತ್ಯೆ ನೀಡಬೇಕು. ಶುಲ್ಕರಹಿತ ಪರೀಕ್ಷೆಗಳನ್ನು ಏರ್ಪಡಿಸಬೇಕು. ಬಹುತೇಕ ಪದವೀಧರರಲ್ಲಿ ಅರ್ಹತೆ ಹಾಗೂ ಪ್ರತಿಭೆ ಇದ್ದರೂ ಶುಲ್ಕ ಭರಿಸಲು ಹಣವಿಲ್ಲದೆ, ಪರೀಕ್ಷೆಗಳನ್ನು ಬರೆಯಲಾಗುವುದಿಲ್ಲ. ಇಂಥವರು ಬಹುಸಂಖ್ಯಾತದಲ್ಲಿದ್ದಾರೆ. ಇವರಿಗೆಲ್ಲ ಭತ್ಯೆ ನೀಡುವ ಯೋಜನೆ ಪುನರಾರಂಭಿಸಲು ಪ್ರಯತ್ನಿಸುವೆ. ಇಂಥ ಬಡ ಪದವೀಧರ ನಿರುದ್ಯೋಗಿಗಳ ಧ್ವನಿಯಾಗಲಿರುವುದು ನನ್ನ ಗೆಲುವಿನ ನಡೆಯನ್ನು ಸಲೀಸುಗೊಳಿಸಲಿದೆ.

* ಮತದಾರರ ಒಲವು ಯಾವ ಕಡೆ ಇದೆ?

ನಾನು ಪಕ್ಷಾತೀತ ವ್ಯಕ್ತಿ. ಶಿಕ್ಷಕ ಸಂಘದ ಹಿನ್ನೆಲೆಯಿಂದ ಬಂದವನು. ಶಿಕ್ಷಕರ ಬೆಂಬಲ ನನಗಿದೆ. ಅದಕ್ಕೂ ಮಿಗಿಲಾಗಿ ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ. ಪದವೀಧರರ ಪರ ಇರುವ ವ್ಯಕ್ತಿ. ಹೀಗಾಗಿ ನೇರ ಒಲವು ನನ್ನ ಕಡೆಯೇ ಇದೆ. ಬಹಿರಂಗವಾಗಿ ಇದನ್ನು ಹೇಳಲಾರರು. ಆದರೆ ಪ್ರಾಶಸ್ತ್ಯಮತಗಳಲ್ಲಿ ಇದು ಸಾಬೀತಾಗಲಿದೆ. ಸದ್ಯಕ್ಕೆ ಕೇವಲ ನಾಲ್ಕು ಜಿಲ್ಲೆಗಳಲ್ಲಿ ಈ ಸ್ಪರ್ಧೆ ಇದೆ. ನಾನು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿಯೇ ಮತದಾರರ ಒಲವು ಗಳಿಸಿರುವ ಅನುಭವ ನನಗಿದೆ. ಕ್ರಿಯಾತ್ಮಕ ಹಾಗೂ ಸೃಜನಾತ್ಮಕ ಕಾರ್ಯಗಳಿಂದಾಗಿ ಶಿಕ್ಷಕ ವೃಂದ ನನ್ನನ್ನು ಗೆಲುವಿನತ್ತ ಹೆಜ್ಜೆ ಹಾಕಲು ಸಹಾಯ ಮಾಡಲಿದೆ.

-ಬಸವರಾಜ ಗುರಿಕಾರ, ಪಕ್ಷೇತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT