ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಸಲ್ಮಾನರ ಓಟು ಅವಲಂಬಿಸಿಲ್ಲ: ಈಶ್ವರಪ್ಪ

Last Updated 26 ಜೂನ್ 2022, 10:13 IST
ಅಕ್ಷರ ಗಾತ್ರ

ಶಿವಮೊಗ್ಗ: 'ಆರ್‌ಎಸ್‌ಎಸ್ ಬೈದರೆ ಸತ್ತ ಮೇಲೆ ಸ್ವರ್ಗಕ್ಕೆ ಹೋಗಬಹುದು ಎಂದು ಕುಮಾರಸ್ವಾಮಿ ತಿಳಿದಿದ್ದಾರೆ. ಹೀಗಾಗಿ ಸಂಘಟನೆ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ. ಅವರು ಸ್ವರ್ಗಕ್ಕೆ ಹೋಗಲಿ ಎಂಬುದು ನಮ್ಮ ಆಸೆ' ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

ಬಿಜೆಪಿ ಸರ್ಕಾರಗಳ ರಚನೆಗೆ ಆರ್‌ಎಸ್‌ಎಸ್‌ ಪರ್ಸೆಂಟೇಜ್ ರೂಪದಲ್ಲಿ ಹಣ ಸಂಗ್ರಹಿಸುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಭಾನುವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಆರ್‌ಎಸ್‌ಎಸ್‌ಗೆ ಬೈಯೋದು ಸಿದ್ದರಾಮಯ್ಯನ ಕೆಟ್ಟ ಚಾಳಿ ಆಗಿತ್ತು. ಅದೀಗ ಕುಮಾರಸ್ವಾಮಿಗೂ ಬಂದಿದೆ. ಬೈಯ್ಯದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣ ಆಗೊಲ್ಲ ಎಂದರು.

ಬೇರೆ ಪಕ್ಷಗಳಲ್ಲಿ ಶಾಸಕರನ್ನು ಶಿಸ್ತುಬದ್ಧವಾಗಿ, ವಿಶ್ವಾಸದಿಂದ ಇಟ್ಟುಕೊಂಡರೆ, ಸ್ವಾತಂತ್ರ್ಯ ಕೊಟ್ಟರೆ ಅವರೇಕೆ ಬಿಟ್ಟು ಹೋಗುತ್ತಾರೆ. ಮಹಾರಾಷ್ಟ್ರದಲ್ಲಿ ಶಾಸಕರಿಗೆ ಮುಖ್ಯಮಂತ್ರಿ ಭೇಟಿಗೆ ಅವಕಾಶವೇ ಇರಲಿಲ್ಲ. ಬಿಜೆಪಿಯಲ್ಲಿ ಆ ಪ್ರಶ್ನೆಯೇ ಇಲ್ಲ. ಇಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡಲು ಅವಕಾಶವಿದೆ. ಮೋದಿಯಂತಹ ಒಳ್ಳೆಯ ನಾಯಕರು ಇದ್ದಾರೆ. ಹೀಗಾಗಿ ಬೇರೆ ಪಕ್ಷಗಳ ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ಮಹಾರಾಷ್ಟ್ರದಲ್ಲಿನ ಬೆಳವಣಿಗೆಗಳನ್ನು ಈಶ್ವರಪ್ಪ ಸಮರ್ಥಿಸಿಕೊಂಡರು.

ವಿರೋಧ ಪಕ್ಷ ಇರಬೇಕು ಎಂಬುದು ನಮಗೂ ಆಸೆ. ನಿಮ್ಮ ಎಂಎಲ್‌ಎಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆಗದಿದ್ದರೆ ನಾವೇನು ಮಾಡುವುದು ಎಂದು ಕುಟುಕಿದರು.

ಆರ್‌ಎಸ್‌ಎಸ್ ಬೈದರೆ ಮುಸಲ್ಮಾನರ ಓಟು ನಮಗೆ ಬಂದು ಬರುತ್ತದೆ ಎಂಬ ಲೆಕ್ಕದಲ್ಲಿ ಕಾಂಗ್ರೆಸ್, ಜೆಡಿಎಸ್‌ನವರು ಇದ್ದಾರೆ. ಓಟು ಅವರು ತೆಗೆದುಕೊಳ್ಳಲಿ. ನಾವು ಬೇಡ ಅನ್ನೊಲ್ಲ. ಬಿಜೆಪಿಯವರು ನಾವು ಎಲ್ಲಿಯೂ ಮುಸ್ಲಿಮರ ಮತಕ್ಕೆ ಅವಲಂಬನೆ ಆಗಿಲ್ಲ. ನಾನು ಶಿವಮೊಗ್ಗದಲ್ಲಂತೂ ಬಿಲ್‌ಕುಲ್ ಆಗಿಲ್ಲ. ಅವರ ಬೀದಿಗೆ ಹೋಗಿ ನಾನು ಓಟು ಕೇಳಿಲ್ಲ. ಕೇಳುವುದೂ ಇಲ್ಲ. ಆದರೂ ಅವರು ಮತ ಹಾಕುತ್ತಿದ್ದಾರೆ ಎಂದರು.

‘ನಾನೂ ಆರ್‌ಎಸ್‌ಎನ್‌ನವನು. ಟೀಕೆ ಮಾಡಿಕೊಳ್ಳುವುದಿದ್ದರೆ ಮಾಡಿಕೊಳ್ಳಿ. ಜನರು ನಿಮ್ಮನ್ನು ದಿನ ದಿನಕ್ಕೂ ಎಲ್ಲಿ ಇಡುತ್ತಿದ್ದಾರೆ ಎಂಬುದನ್ನು (ವಿರೋಧಿಗಳು) ನೋಡಿಕೊಳ್ಳಿ’ ಎಂದು ವ್ಯಂಗ್ಯವಾಡಿದರು.

****

ಎಲ್ಲದಕ್ಕೂ 40 ಪರ್ಸೆಂಟ್ ಆರೋಪ ಮಾಡುತ್ತಾರೆ. ಅವರ (ವಿರೋಧ ಪಕ್ಷಗಳು) ಹಣೇ ಬರಹಕ್ಕೆ ಇಲ್ಲಿಯವರೆಗೆ ಪರ್ಸೆಂಟೇಜ್ ಪಡೆದ ಒಂದೇ ಒಂದು ಪ್ರಕರಣ ತೋರಿಸಲು ಆಗಿಲ್ಲ

ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT