ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ವರ್ತಕರಿಗೆ ‘ಬಹಿಷ್ಕಾರ’: ವಿಧಾನಸಭೆಯಲ್ಲಿ ಕೋಲಾಹಲ

ರಾಜ್ಯದ ವಿವಿಧೆಡೆ ಜಾತ್ರೆಗಳಿಗೆ ವಿಸ್ತರಣೆ
Last Updated 23 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸಾಮರಸ್ಯದ ಕೊಂಡಿ ಬೆಸೆಯುವ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ‘ಬಹಿಷ್ಕಾರ’ ಹಾಕುವ ರೀತಿಯೊಳಗೆ ಉಡುಪಿಯಲ್ಲಿ ಆರಂಭವಾದ ಹೊಸ ಚಾಳಿ ರಾಜ್ಯದ ಹಲವು ಜಿಲ್ಲೆಗಳಿಗೆ ಬುಧವಾರ ಹರಡಿದೆ. ಎರಡು ಕೋಮುಗಳ ಮಧ್ಯೆ ಕಂದಕ ಸೃಷ್ಟಿಸುವ ಈ ಬೆಳವಣಿಗೆಯು ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

ಆಡಳಿತ ಮತ್ತು ವಿರೋಧ ಪಕ್ಷ ಗಳ ನಡುವೆ ವಾಕ್ಸಮರಕ್ಕೂ ಸದನ ಸಾಕ್ಷಿಯಾಯಿತು.

ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗಿತ್ತು. ನಂತರ ಉಡುಪಿಯ ವಿವಿಧ ದೇವಸ್ಥಾನಗಳು, ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆ, ಶಿವಮೊಗ್ಗ ಮಾರಿ ಜಾತ್ರೆ, ಶಿರಸಿ ಮಾರಿಕಾಂಬಾ ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳು ಪಾಲ್ಗೊಳ್ಳಬಾರದು ಎಂಬ ಬ್ಯಾನರ್‌ ಹಾಕಲಾಗಿತ್ತು. ಕೆಲವೆಡೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗಳಿಂದಲೇ ಆದೇಶ ಹೊರಡಿಸಲಾಗಿತ್ತು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಋಷ್ಯಶೃಂಗ ದೇವಸ್ಥಾನ, ಅಡ್ಡಗದ್ದೆ ವನದುರ್ಗಾಪರಮೇಶ್ವರಿ ಜಾತ್ರೆಗಳಲ್ಲೂ ಇಂತಹ ಪ್ರಯತ್ನಗಳು ನಡೆದಿವೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಕಾಟಿಪಳ್ಳದ ಗಣೇಶ ದೇವಸ್ಥಾನಗಳಲ್ಲೂ ಬ್ಯಾನರ್‌ ಹಾಕಲಾಗಿದೆ. ಬಪ್ಪನಾಡು ಜಾತ್ರೆಯಲ್ಲಿ ವ್ಯಾಪಾರ ನಡೆಸಲು ನೋಂದಣಿ ಮಾಡಿಸಿದ್ದ 85 ಮುಸ್ಲಿಂ ವ್ಯಾಪಾರಿಗಳ ಪೈಕಿ 53 ಮಂದಿ ಬುಧವಾರ ಠೇವಣಿ ವಾಪಸ್‌ ಪಡೆದಿದ್ದಾರೆ.

ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಯು.ಟಿ. ಖಾದರ್‌ ಮತ್ತು ರಿಜ್ವಾನ್‌ ಅರ್ಷದ್‌, ‘ರಾಜ್ಯದಲ್ಲಿ ಕೆಲವರಿಂದ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಅಂತಹವರನ್ನು ಪತ್ತೆಹಚ್ಚುವ ಪ್ರಯತ್ನ ಪೊಲೀಸರಿಂದ ಆಗುತ್ತಿಲ್ಲ’ ಎಂದು ದೂರಿದರು.

‘ನಿರ್ದಿಷ್ಟ ಧರ್ಮದ ಜನರಿಗೆ ವ್ಯಾಪಾರ ನಡೆಸಲು ಅವಕಾಶ ನೀಡಬಾರದು ಎಂದು ಪೋಸ್ಟರ್‌, ಬ್ಯಾನರ್‌ ಹಾಕಲಾಗುತ್ತಿದೆ. ಯಾರೂ ತಮ್ಮ ಹೆಸರಿನಲ್ಲಿ ಈ ಕೆಲಸ ಮಾಡುತ್ತಿಲ್ಲ. ‘ಬಾಂಧವರು’, ‘ಬಂಧುಗಳು’ ಎಂದು ಹೇಳಿಕೊಂಡು ಇಂತಹ ಕೃತ್ಯ ಎಸಗುವವರು ಹೇಡಿಗಳು’ ಎಂದು ಖಾದರ್‌ ಟೀಕಿಸಿದ್ದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

ಖಾದರ್‌ ಹೇಳಿಕೆಯನ್ನು ಬಿಜೆಪಿಯ ಕೆ.ಜಿ. ಬೋಪಯ್ಯ ಆಕ್ಷೇಪಿಸಿದರು. ಬಿಜೆಪಿಯ ಕೆ. ರಘುಪತಿ ಭಟ್‌, ಜಿ. ಸೋಮಶೇಖರ ರೆಡ್ಡಿ, ಸಂಜೀವ ಮಠಂದೂರು, ಹರೀಶ್ ಪೂಂಜ, ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಲವರು ಎದ್ದುನಿಂತು ಏರಿದ ದನಿಯಲ್ಲಿ ಖಾದರ್‌ ವಿರುದ್ಧ ವಾಗ್ದಾಳಿಗೆ ಇಳಿದರು.

‘ಯಾವುದೇ ಧರ್ಮವನ್ನು ಉದ್ದೇಶಿಸಿ ಹೇಡಿ ಎಂದು ಹೇಳಿಲ್ಲ. ಈ ರೀತಿ ಅನಾಮಿಕರಂತೆ ಬ್ಯಾನರ್‌ ಹಾಕುವವರಿಗೆ ಹೇಳಿದ್ದೇನೆ’ ಎಂದು ಖಾದರ್‌ ಹೇಳಿದರು.

‘ಯಾರು ಮಾಡಿದ್ದಾರೋ ಅವರೇ ಹೇಡಿಗಳು’ ಎಂದು ಜಮೀರ್‌ ಅಹಮ್ಮದ್ ಖಾನ್‌ ಏರು ದನಿಯಲ್ಲಿ ಕೂಗಿದರು.

ಪ್ರಿಯಾಂಕ್‌ ಖರ್ಗೆ, ಜಮೀರ್‌ ಅಹಮ್ಮದ್ ಖಾನ್‌, ರಿಜ್ವಾನ್‌ ಅರ್ಷದ್‌, ಪಿ.ಟಿ. ಪರಮೇಶ್ವರ ನಾಯ್ಕ್‌ ಸೇರಿದಂತೆ ಕಾಂಗ್ರೆಸ್‌ನ ಹಲವರು ಖಾದರ್‌ ಬೆಂಬಲಕ್ಕೆ ನಿಂತರು. ಕೆಲವು ಕಾಲ ಸದನದಲ್ಲಿ ತೀವ್ರ ಗದ್ದಲ ನಡೆಯಿತು. ಗುಂಪು ಗುಂಪಾಗಿ ವಾಕ್ಸಮರಕ್ಕೆ ಇಳಿದಿದ್ದರಿಂದ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ಗೊತ್ತಾಗದ ಸ್ಥಿತಿ ಉಂಟಾಯಿತು.

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಬಿಜೆಪಿ ಶಾಸಕರ ಬಳಿಯೇ ತೆರಳಿ ಸುಮ್ಮನಿರುವಂತೆ ಸೂಚಿಸಿ, ಎಲ್ಲರನ್ನೂ ಕುಳ್ಳಿರಿಸಿದರು. ಇತ್ತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಶಾಸಕರನ್ನು ಸಮಾಧಾನಪಡಿಸಿದರು.

ಬಳಿಕ ಮಾತನಾಡಿದ ಖಾದರ್‌, ‘ಅತ್ತೂರು ಚರ್ಚ್‌, ಬಪ್ಪನಾಡು ದೇವಸ್ಥಾನ, ಸೈಯದ್‌ ಮದೀನಾ ದರ್ಗಾಗಳಲ್ಲಿ ಜಾತ್ರೆ, ಉತ್ಸವ, ಉರೂಸ್‌ಗಳಲ್ಲಿ ಎಲ್ಲ ಧರ್ಮಗಳ ಜನರೂ ಭಾಗವಹಿಸುತ್ತಾರೆ. ಧರ್ಮದ ಹೆಸರಿನಲ್ಲಿ ಈ ರೀತಿಯ ದ್ವೇಷ ಸರಿಯೆ’ ಎಂದು ಪ್ರಶ್ನಿಸಿದರು.

ಮೂಲ್ಕಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರೇ ಬ್ಯಾನರ್‌ ತೆಗೆಸಿದ್ದಾರೆ. ಪೊಲೀಸರು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈ ರೀತಿಯ ದ್ವೇಷ ಬಿತ್ತುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಿಜ್ವಾನ್‌ ಅರ್ಷದ್‌ ಮಾತನಾಡಿ, ‘ಒಂದು ಸಮುದಾಯದ ವ್ಯಾಪಾರಿಗಳು ವಹಿವಾಟು ನಡೆಸದಂತೆ ತಡೆಯುವುದು ಆ ಸಮುದಾಯಕ್ಕೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಅಪಾಯಕಾರಿ. ಕಾಪು ಮಾರಿಗುಡಿ, ಬಪ್ಪನಾಡು ದೇವಸ್ಥಾನಗಳ ನಿರ್ಮಾಣದಲ್ಲಿ ಮುಸ್ಲಿಮರೂ ಪಾಲ್ಗೊಂಡಿದ್ದಾರೆ. ಇತಿಹಾಸ ಅಳಿಸಲು ಯಾರಿಗೂ ಸಾಧ್ಯವಿಲ್ಲ. ಸಾಮರಸ್ಯ ಹಾಳು ಮಾಡುವವರು ಸಮಾಜ ದ್ರೋಹಿಗಳು’ ಎಂದರು.

ನಂತರ ಮಾತನಾಡಲು ರಘುಪತಿ ಭಟ್‌, ಜಮೀರ್‌ ಅಹಮ್ಮದ್‌ ಸೇರಿದಂತೆ ಹಲವರು ಅವಕಾಶ ಕೋರಿದರು. ‘ಶೂನ್ಯ ವೇಳೆಯ ನೋಟಿಸ್‌ ನೀಡಿದವರಿಗಷ್ಟೆ ಮಾತನಾಡಲು ಅವಕಾಶ’ ಎಂದ ಸಭಾಧ್ಯಕ್ಷರು, ಶಾಸಕರ ಬೇಡಿಕೆ ತಿರಸ್ಕರಿಸಿದರು.

ಕಾನೂನು ರೂಪಿಸಿದ್ದೇ ಕಾಂಗ್ರೆಸ್: ಮಾಧುಸ್ವಾಮಿ
‘ಜಾತ್ರೆ, ಉತ್ಸವಗಳಲ್ಲಿ ವ್ಯಾಪಾರ, ವಹಿವಾಟಿಗೆ ನಿರ್ಬಂಧ ಹೇರುವುದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಆದರೆ, ಆಯಾ ಧಾರ್ಮಿಕ ಸಂಸ್ಥೆಗಳ ಜಮೀನುಗಳಲ್ಲಿ ಹಿಂದೂಗಳಲ್ಲದವರಿಗೆ ವಹಿವಾಟು ನಡೆಸಲು ಗುತ್ತಿಗೆ ನೀಡಬಾರದು ಎಂಬ ಅಂಶ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು–2002ರಲ್ಲಿ ಇದೆ. ಅದರ ಪ್ರಕಾರ, ಆಯಾ ದೇವಾಲಯದವರು ತೀರ್ಮಾನ ಕೈಗೊಂಡಿರಬಹುದು’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

‘ಇದು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರೂಪಿಸಿರುವ ನಿಯಮ. ದೇವಸ್ಥಾನದ ಪ್ರಾಂಗಣ ಮತ್ತು ದೇವಸ್ಥಾನಕ್ಕೆ ಸೇರಿದ ಆಸ್ತಿಗಳಲ್ಲಿ ವಹಿವಾಟು ನಿರ್ಬಂಧಿಸಲು ಕಾನೂನಿನಲ್ಲಿ ಅಧಿಕಾರವಿದೆ. ಅದನ್ನು ಹೊರತುಪಡಿಸಿದ ಸ್ಥಳಗಳಲ್ಲೂ ನಿರ್ಬಂಧ ವಿಧಿಸಿರುವುದು ಕಂಡುಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದರು.

*
ಜಾತ್ರೆ ವೇಳೆ ವ್ಯವಸ್ಥಾಪನಾ ಸಮಿತಿಯವರೇ ಅಂಗಡಿಗಳನ್ನು ಗುತ್ತಿಗೆ ಆಧಾರದಲ್ಲಿ ನೀಡುತ್ತಾರೆ. ಹೀಗಾಗಿ, ಇದು ನೇರವಾಗಿ ಸರ್ಕಾರದ ವ್ಯಾಪ್ತಿಗೆ ಬರುವ ವಿಷಯವಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

*
ನಿಯಮ, ಕಾನೂನು ಮಾಡು ವಾಗ ಏನೇ ಉದ್ದೇಶ ಇರ ಬಹುದು, ಈಗ ಮುಕ್ತ ವ್ಯಾಪಾರಕ್ಕೆ ಅವಕಾಶ ಇದೆ. ದುರುದ್ದೇಶದಿಂದ ನಿರ್ಬಂಧ ವಿಧಿಸುವವರ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು.
-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

*
ಅಭಿವೃದ್ಧಿ ಬಗ್ಗೆ ಮಾತನಾಡಲು ಬಿಜೆಪಿ ಬಳಿ ಸರಕಿಲ್ಲ. ಹೀಗಾಗಿ, ಕರಾವಳಿಯಲ್ಲಿರುವ ಸಂಘರ್ಷವನ್ನು ರಾಜ್ಯಕ್ಕೆ ಹಬ್ಬಿಸಲು ಹೊರಟಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಕೊಳ್ಳಿ ಇಡುವ ಕೆಲಸ ಶುರುವಾಗಿದೆ.
-ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT