ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಾಯ್ತು ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆ ಕಾರಣ: ಏನದು?

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ
Last Updated 6 ಜುಲೈ 2022, 19:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಉಣಕಲ್‌ನ ದಿ ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿ ಮಂಗಳವಾರ ನಡೆದ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅವರ ಬರ್ಬರ ಹತ್ಯೆಗೆ, ಆರೋಪಿ ಮಹಾಂತೇಶ ಶಿರೂರ ಮಾರಾಟ ಮಾಡಿದ್ದ ಗುರೂಜಿಗೆ ಸೇರಿದ್ದ ₹5 ಕೋಟಿ ಮೌಲ್ಯದ ಆಸ್ತಿಯೇ ಕಾರಣ ಎನ್ನುವ ಅಂಶ ಪೊಲೀಸ್‌ ತನಿಖೆಯಿಂದ ತಿಳಿದುಬಂದಿದೆ.

ಗೋಕುಲ ರಸ್ತೆ ಬಳಿ ಮಹಾಂತೇಶನ ಹೆಸರಲ್ಲಿ ಗುರೂಜಿ ಬೆನಾಮಿ ಆಸ್ತಿ ಮಾಡಿದ್ದರು. ಅದನ್ನು ₹5 ಕೋಟಿಗೆ ಮಹಾಂತೇಶ ಮಾರಾಟ ಮಾಡಿದ್ದ. ಆ ಹಣ ನೀಡುವಂತೆ ಗುರೂಜಿ ಒತ್ತಡ ಹಾಕುತ್ತಿದ್ದರು. ಇಬ್ಬರ ನಡುವೆ ಅನೇಕ ಸಲ ಜಗಳ ನಡೆದಿತ್ತು. ಇದೇ ಕಾರಣಕ್ಕೆ ಮಹಾಂತೇಶ, ತನ್ನ ಸಹಚರ ಮಂಜುನಾಥ ಮರೇವಾಡನೊಂದಿಗೆ ಹತ್ಯೆಗೆ ಸಂಚು ರೂಪಿಸಿದ್ದ.

ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಇಬ್ಬರೂ, ಸಂಸ್ಥೆ ಹೆಸರಲ್ಲಿ ಹಣ ಪಡೆದು ವಂಚಿಸಿದ್ದರು ಎಂಬ ಕಾರಣಕ್ಕೆ ಗುರೂಜಿ 2016ರಲ್ಲಿ ಇಬ್ಬರನ್ನೂ ಕೆಲಸದಿಂದ ತೆಗೆದಿದ್ದರು. ಆಸ್ತಿ ಹಾಗೂ ಹಣಕಾಸಿನ ವಿಷಯದಲ್ಲಿ ಇಬ್ಬರ ನಡುವೆ ಏರ್ಪಟ್ಟ ಕಲಹವೇ ಹತ್ಯೆಗೆ ಕಾರಣವಾಗಿದೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮಹಾಂತೇಶ 2008ರಿಂದ ಮುಂಬೈನಲ್ಲಿ ಸರಳವಾಸ್ತು ಸಂಸ್ಥೆ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ. ಗುರೂಜಿ ಆಪ್ತನಾಗಿಯೂ ವಿಶ್ವಾಸ ಗಳಿಸಿದ್ದರಿಂದ, ಮಹಾಂತೇಶ ಮತ್ತು ಅವನ ಪತ್ನಿ ವನಜಾಕ್ಷಿ ಹೆಸರಿನಲ್ಲಿ ಹುಬ್ಬಳ್ಳಿಯ ಕೆಲವೆಡೆ ಗುರೂಜಿ ಆಸ್ತಿ ಮಾಡಿದ್ದರು. ಅಲ್ಲದೆ, ತಮ್ಮ ಹೆಸರಲ್ಲಿ ಮತ್ತು ಅವರ ಆಪ್ತವಲಯದ ಕೆಲವರ ಹೆಸರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಗಳು ತಿಳಿಸಿದ್ದಾರೆ. ಎಸಿಪಿ ವಿನೋದ ಮುಕ್ತೇದಾರ ನೇತೃತ್ವದ ತಂಡ ಅವುಗಳ ಪತ್ತೆಗೆ ಮುಂದಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

6 ದಿನ ಪೊಲೀಸ್ ವಶಕ್ಕೆ: ಹತ್ಯೆ ನಡೆದ ಸ್ಥಳವಾದ ಹೋಟೆಲ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಚಾಕುಗಳನ್ನು ಆರೋಪಿಗಳು ಎಸೆದು ಹೋಗಿದ್ದ ಉಣಕಲ್‌ನ ನವೀನ್‌ ಹೋಟೆಲ್‌ನ ಪೆಟ್ರೋಲ್‌ ಬಂಕ್‌ ಬಳಿಗೆ ಬುಧವಾರ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಮಾಡಲಾಗಿದೆ. ಸಂಜೆ ಒಂದನೇ ಸೆಷನ್ಸ್ ಕೋರ್ಟ್‌ಗೆ ಆರೋಪಿಗಳನ್ನು ಹಾಜರುಪಡಿಸಿದ ಪೊಲೀಸರು, ಆರು ದಿನ ಪೊಲೀಸ್‌ ವಿಚಾರಣೆಗೆ ಪಡೆದುಕೊಂಡಿದ್ದಾರೆ.ಆರೋಪಿಗಳು ಗುರೂಜಿ ದೇಹದ ವಿವಿಧ ಭಾಗಗಳಿಗೆ ಒಟ್ಟು 53 ಬಾರಿ ಚಾಕುವಿನಿಂದ ಇರಿದಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ.

ಎನ್‌ಕೌಂಟರ್‌ ಭೀತಿ: ಹತ್ಯೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳನ್ನು ಬೆಳಗಾವಿಯ ರಾಮದುರ್ಗದಲ್ಲಿ ಪೊಲೀಸರು ಬಂಧಿಸಿ ಕರೆದೊಯ್ಯುವಾಗ ಆರೋಪಿ ಮಹಾಂತೇಶ, ‘ನಾವೇ ಪೊಲೀಸರಿಗೆ ಕಾಲ್ ಮಾಡಿ ಶರಣಾಗುವುದಾಗಿ ಹೇಳಿದ್ದೇವೆ. ನಾವೇ ಬರುತ್ತೇವೆ’ ಎಂದು ಹೇಳಿರುವ ವಿಡಿಯೊ ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂತ್ಯಕ್ರಿಯೆ: ಕುಟುಂಬದವರು ಹಾಗೂ ಸಂಬಂಧಿಕರ ಆಕ್ರಂದನದ ನಡುವೆ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ನಗರದ ಸುಳ್ಳ ರಸ್ತೆಯಲ್ಲಿರುವ ಅವರ ಜಮೀನಿನಲ್ಲಿ ಬುಧವಾರ ನೆರವೇರಿತು. ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ನೂರಾರು ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತಿಮ ವಿಧಿ ವಿಧಾನಗಳು ನಡೆದವು.

‘ದೊಡ್ಡ ತಪ್ಪು ಮಾಡಿದ ಪತಿ’

‘ಚಂದ್ರಶೇಖರ ಗುರೂಜಿ ಒಳ್ಳೆಯವರು. ದೇವರಂತಹ ಮನುಷ್ಯ. ಎಲ್ಲರನ್ನೂ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನನ್ನ ಗಂಡ ಅವರ ಹತ್ಯೆ ಮಾಡಿ ದೊಡ್ಡ ತಪ್ಪು ಮಾಡಿದ್ದಾರೆ. ಇದರಿಂದ ನನ್ನ ಹಾಗೂ ಮಕ್ಕಳ ಜೀವನವೂ ಹಾಳಾಯಿತು. ಅವರು ಮಾಡಿದ ತಪ್ಪಿಗೆ, ಏನು ಶಿಕ್ಷೆ ಇದೆಯೋ ಅದನ್ನು ಅನುಭವಿಸಲಿ’ಎಂದು ಆರೋಪಿ ಮಹಾಂತೇಶ ಶಿರೂರ ಪತ್ನಿ ವನಜಾಕ್ಷಿ ಹೇಳಿದರು.

***

ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, ಆರು ದಿನ ಪೊಲೀಸ್‌ ವಶಕ್ಕೆ ಪಡೆದಿದ್ದೇವೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ

– ಲಾಭೂರಾಮ್‌, ಕಮಿಷನರ್‌, ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರೇಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT