ಸೋಮವಾರ, ಜನವರಿ 24, 2022
28 °C

ಆರಗ ಜ್ಞಾನೇಂದ್ರ ವಯಸ್ಸಿನಲ್ಲಿ ದೊಡ್ಡವರು, ರಾಜಕೀಯದಲ್ಲಿ ಎಳಸು: ಡಿಕೆಶಿ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಾದಯಾತ್ರೆಗೆ ಗೃಹ ಸಚಿವರ ಅನುಮತಿಯೂ ಬೇಡ, ರಕ್ಷಣೆಯೂ ಬೇಡ. ಹೋರಾಟಗಾರರು ಯಾರೂ ಕೋಳಿ ಕೇಳಿ ಮಸಾಲೆ ಅರಿತಾರಾ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ದೇವೇಗೌಡರು, ಚಂದ್ರಶೇಖರ ಪಾದಯಾತ್ರೆ ನಡೆಸಿದಾಗ ಸ್ಟ್ಯಾಂಪ್‌ ಹಾಕಿ ಅನುಮತಿ ಕೊಟ್ಟಿದ್ದರಾ’ ಎಂದೂ ಪ್ರಶ್ನಿಸಿದರು.

‘ಗೃಹ ಸಚಿವರಿಗೆ ರಾಜಕೀಯ ಅನುಭವ ಇಲ್ಲ. ವಯಸ್ಸಿನಲ್ಲಿ ಅವರು ದೊಡ್ಡವರಿರಬಹುದು. ಆದರೆ, ರಾಜಕೀಯದಲ್ಲಿ ಎಳಸು’ ಎಂದು ಆರಗ ಜ್ಞಾನೇಂದ್ರ ಅವರನ್ನು ಲೇವಡಿ ಮಾಡಿದ ಶಿವಕುಮಾರ್‌, ಪಾದಯಾತ್ರೆಗೆ ಹೋಂ ಮಿನಿಸ್ಟರ್ ಬರಲಿ. ಅವರಿಗೆ ಬ್ಯಾಲದ ಹಣ್ಣಿನ ಪಾನಕ ಕುಡಿಸಿ ಕಳಿಸುತ್ತೇವೆ. ರಾಮ ರಸ ಅಲ್ಲ, ಪಾನಕ ಕುಡಿಸಿ ಕಳಿಸುತ್ತೇವೆ’ ಎಂದರು.

‘ರಸ್ತೆಯಲ್ಲಿ ನಾನು ನಡೆಯಲು ಬಿಜೆಪಿ ನಾಯಕರ ಅನುಮತಿ ಬೇಕಾ? ಹೋರಾಟ, ಪಾದಯಾತ್ರೆ ಮಾಡಲು ಇವರ ಅನುಮತಿ ಕೇಳಬೇಕಾ? ಅಶೋಕಣ್ಣನಿಗೆ (ಸಚಿವ ಅಶೋಕ), ಕೆಲವು ನಾಯಕರಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇದ್ದರೆ ತಾನೇ?’ ಎಂದರು.

‘ಮೇಕೆದಾಟು ಯೋಜನೆ ಸಂಬಂಧ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಡಿಪಿಆರ್ ಮಾಡಿ ಕೇಂದ್ರಕ್ಕೆ ಕಳುಹಿಸಿದ್ದರು. ಕೇಂದ್ರ ಪರಿಸರ ಇಲಾಖೆ ಅನುಮೋದನೆ ಕೊಡಬೇಕಾಗಿತ್ತು. ಸಿದ್ದರಾಮಯ್ಯ ಅಲ್ಲ, ಡಿಕೆಶಿಯೂ ಅಲ್ಲ. ಪಾದಯಾತ್ರೆ ವಿಚಾರದಲ್ಲಿ ನನಗೆ ಯಾವ ವೈಯಕ್ತಿಕ ಹಿತಾಸಕ್ತಿಯೂ ಇಲ್ಲ. ನನ್ನಲ್ಲಿ ಹೋರಾಟದ ಸಣ್ಣ ಗುಣ ಇದ್ದಿದ್ದಕ್ಕೆ ದೇವೇಗೌಡರ ಎದುರು ಹಿಂದೆ ಚುನಾವಣೆಗೆ ನಿಲ್ಲಿಸಿದ್ದರು. ಸೋತಿರಬಹುದು, ಆದರೆ ಅಂಥ ಹೋರಾಟಗಾರರ ಎದುರು ನನ್ನನ್ನು ನಿಲ್ಲಿಸಬೇಕು ಅಂದರೆ ನನ್ನ ಹೋರಾಟದ ಗುಣ ಕಾರಣ ಅಲ್ವಾ‘ ಎಂದರು.

‘ನಮ್ಮ ಪಾದಯಾತ್ರೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಪಾದಯಾತ್ರೆಯಲ್ಲಿ 4–5 ಆಂಬ್ಯುಲೆನ್ಸ್​​ಗಳು ಇರುತ್ತವೆ. ಸಾವಿರಾರು ಎಳನೀರು ಕೊಡುವುದಕ್ಕೆ ಮಂಡ್ಯ, ಮದ್ದೂರು ಜನ ಸಿದ್ಧ ಇದ್ದಾರೆ. ನೂರು ಜನ ಬರುತ್ತಾರೋ, ಐದು ನೂರು ಜನ ಬರುತ್ತಾರೋ, ಐದು ಸಾವಿರ ಜನ ಬರುತ್ತಾರೋ, ಒಟ್ಟಾರೆ ಎಲ್ಲರಿಗೂ ಆಹ್ವಾನ ಕೊಡುತ್ತಿದ್ದೇವೆ. ಯಾರಿಗೂ ಬಲವಂತ ಇಲ್ಲ‘ ಎಂದರು.

ಸುಲಿಗೆ: ‘ವಿಮಾನದ ಮೂಲಕ (ಹೊರದೇಶ) ಬಂದವರಿಂದ ಕೋವಿಡ್‌ ತಪಾಸಣೆ ಹೆಸರಿನಲ್ಲಿ  ಸುಲಿಗೆ ಮಾಡುವ ದೊಡ್ಡ ದಂಧೆ ನಡೆಯುತ್ತಿದೆ. ನೆಗಡಿ ಬಂದವರಿಗೂ ಕೋವಿಡ್‌ ಪಾಸಿಟಿವ್ ವರದಿ ಕೊಡುತ್ತಿದ್ದಾರೆ. ಹೊರಗಡೆಯಿಂದ ಇಲ್ಲಿಗೆ ಬಂದವರಿಗೆಲ್ಲ ಪಾಸಿಟಿವ್ ವರದಿ ಕೊಟ್ಟು ಹಣ ವಸೂಲಿ ಮಾಡ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಗಮನಹರಿಸಬೇಕು‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು