ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌– ರೂಪಾಂತರಿ ಪತ್ತೆಗೆ ಜೀನೋಮ್‌ ಸೀಕ್ವೆನ್ಸಿಂಗ್‌

Last Updated 22 ಜೂನ್ 2021, 22:14 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌ನ ಬೇರೆ ಬೇರೆ ರೂಪಾಂತರಿ ತಳಿಗಳು ಪತ್ತೆಯಾಗುತ್ತಿರುವುದು ಬಿಬಿಎಂಪಿಯ ಚಿಂತೆಗೆ ಕಾರಣವಾಗಿದೆ. ಇದುವರೆಗೆ ಕೊರೊನಾ ವೈರಸ್‌ನ ರೂ‍ಪಾಂತರಿ ಪತ್ತೆಗೆ ಆರೋಗ್ಯ ಇಲಾಖೆ ಮಾತ್ರ ಗಂಟಲದ ದ್ರವದ ಮಾದರಿಗಳ ಜೀನೋಮ್‌ ಸೀಕ್ವೆನ್ಸಿಂಗ್‌ (ಡಿಎನ್‌ಎ ಜೋಡಣೆಯ ಕ್ರಮ) ಪತ್ತೆ ಪರೀಕ್ಷೆ ನಡೆಸುತ್ತಿತ್ತು. ಬಿಬಿಎಂಪಿಯೂ ಬುಧವಾರದಿಂದ ಜೀನೋಮ್ ಸೀಕ್ವೆನ್ಸಿಂಗ್‌ ಪರೀಕ್ಷೆ ನಡೆಸಲಿದೆ.

‘ಕೊರೋನಾ ವೈರಾಣುವಿನ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ ರೂಪಾಂತರಿ ತಳಿಗಳು ಪತ್ತೆಯಾಗುತ್ತಿರುವುದರಿಂದ ಬಿಬಿಎಂಪಿಯೂ ಜೀನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗಳನ್ನು ನಡೆಸಲಿದೆ. ಸೋಂಕು ದೃಢಪಡುವ ಗಂಟಲ ದ್ರವಗಳ ಮಾದರಿಗಳಲ್ಲಿ ಶೇ 5ರಷ್ಟನ್ನು ಈ ಪ್ರಕ್ರಿಯೆಗೆ ಒಳಪಡಿಸಲಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.

‘ಇದುವರೆಗೆ ಆರೋಗ್ಯ ಇಲಾಖೆ ನಗರದ ಎರಡು ಪ್ರಯೋಗಾಲಯಗಳಲ್ಲಿ ಜೀನೋಮ್‌ ಸೀಕ್ವೆನ್ಸಿಂಗ್‌ ನಡೆಸುತ್ತಿತ್ತು. ಬುಧವಾರದಿಂದ ಬಿಬಿಎಂಪಿಯೂ ಒಂದು ಪ್ರಯೋಗಾಲಯದಲ್ಲಿ ಜೀನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆ ನಡೆಸಲಿದೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

‘ಡೆಲ್ಟಾ ಪ್ಲಸ್‌ ರೂಪಾಂತರಿಯಲ್ಲಿ ಏನೇನು ಬದಲಾವಣೆಗಳಾಗಿವೆ ಎಂಬ ಬಗ್ಗೆ ತಜ್ಞರ ಸಮಿತಿ ಅಧ್ಯಯನ ನಡೆಸುತ್ತಿದೆ. ಸಮಿತಿಯ ಶಿಫಾರಸಿನ ಆಧಾರದಲ್ಲಿ ಅದರ ಹರಡುವಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಮುಖ್ಯ ಆಯುಕ್ತರು ತಿಳಿಸಿದರು.

‘ಬೇರೆ ರಾಜ್ಯಗಳಿಂದ ನಗರಕ್ಕೆ ಬರುವವರನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ಕೋವಿಡ್‌ ಮೊದಲ ಅಲೆಗೆ ಹೋಲಿಸಿದರೆ, ಎರಡನೇ ಅಲೆಯ ಸಂದರ್ಭದಲ್ಲಿ ರಾಜ್ಯಗಳ ನಡುವಿನ ಸಂಚಾರಕ್ಕೆ ನಿರ್ಬಂಧ ಕಡಿಮೆ ಮಾಡಲಾಗಿತ್ತು. ಆದರೂ ಸಮಸ್ಯಾತ್ಮಕ ಸನ್ನಿವೇಶಗಳು ಎದುರಾದರೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಗರದ ಬಹುತೇಕ ವಾರ್ಡ್‌ಗಳಲ್ಲಿ ಕೋವಿಡ್‌ ಸೋಂಕು ಪತ್ತೆ ದರ ಶೇ 8ಕ್ಕಿಂತ ಕಡಿಮೆ ಇದೆ. ಈಗ ನಗರದಲ್ಲಿ ನಿತ್ಯ 800ರಿಂದ 900ರಷ್ಟು ಕೋವಿಡ್‌ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ಕೆಲ ವಾರ್ಡ್‌ನಲ್ಲಿ ಒಂದು ದಿನ ಹೆಚ್ಚು ಪ್ರಕರಣಗಳು ಪತ್ತೆಯಾದರೆ, ಇನ್ನೊಂದು ದಿನ ಬೇರೆ ವಾರ್ಡ್‌ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುತ್ತದೆ. ಒಂದೇ ವಾರ್ಡ್‌ನಲ್ಲಿ ಸತತ ನಾಲ್ಕೈದು ಪ್ರಕರಣ ಪತ್ತೆಯಾದರೆ ಸೋಂಕು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಇಂತಹ ವಾರ್ಡ್‌ನಲ್ಲಿ ಪಾಲಿಕೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಸೋಂಕಿತರ ಜೊತೆ ಸಂಪರ್ಕ ಹೊಂದಿದವರ ಪತ್ತೆಗೆ ಕ್ರಮ ವಹಿಸುತ್ತಿದ್ದಾರೆ’ ಎಂದರು.

‘ನಗರದಲ್ಲಿ ಲಾಕ್‌ಡೌನ್‌ ಸಡಿಲಿಕೆ ಆದರೂ ಜನ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಚಾಚೂತಪ್ಪದೇ ಅನುಸರಿಸಬೇಕು. ಈ ಬಗ್ಗೆ ನಿಗಾ ಇಡಲು ಮಾರ್ಷಲ್‌ಗಳನ್ನು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದರು.

‘ಮಕ್ಕಳಲ್ಲಿ ಸೋಂಕು ಪತ್ತೆ: ಅನುಪಾತ ಹೆಚ್ಚಳವಿಲ್ಲ’

‘ನಗರದಲ್ಲಿ ಮಕ್ಕಳಲ್ಲಿ ಸೋಂಕು ಪತ್ತೆ ದರದಲ್ಲಿ ಅಷ್ಟೇನು ಏರಿಳಿತವಿಲ್ಲ. ಅದು ಒಂದೇ ಅನುಪಾತದಲ್ಲಿದೆ. ಮುಂಬರುವ ದಿನಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆಲ್ಲ ಕೋವಿಡ್‌ ಲಸಿಕೆ ಕೊಡಲಿದ್ದೇವೆ. ಆದರೆ, ಮಕ್ಕಳಿಗೆ ಲಸಿಕೆ ನೀಡುತ್ತಿಲ್ಲ. ವಯಸ್ಕರೆಲ್ಲರೂ ಲಸಿಕೆ ಪಡೆದರೆ, ಮಕ್ಕಳಿಗೆ ಸೋಂಕು ತಗಲುವ ಸಾಧ್ಯತೆಗಳು ಕಡಿಮೆ ಆಗಲಿವೆ. ತನ್ಮೂಲಕ ಮಕ್ಕಳಿಗೂ ಕೋವಿಡ್‌ನಿಂದ ಸುರಕ್ಷತೆ ಸಿಗಲಿದೆ ಎಂಬುದು ತಜ್ಞರ ಅಭಿಪ್ರಾಯ’ ಎಂದು ಗೌರವ್‌ ಗುಪ್ತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT