ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಮಾರ್ಗಸೂಚಿ: ಧಾರ್ಮಿಕ ಸಮಾರಂಭ ನಿಷೇಧ, ರಾಜಕೀಯ ಕಾರ್ಯಕ್ರಮಕ್ಕೆ ಅವಕಾಶ

Last Updated 16 ಏಪ್ರಿಲ್ 2021, 20:28 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣ ಸಾರ್ವಜನಿಕ ಸಭೆ, ಸಮಾರಂಭ ಮತ್ತು ವಿವಿಧ ಆಚರಣೆಗಳಲ್ಲಿ ಜನ ಸೇರುವುದಕ್ಕೆ ಕಠಿಣ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳಿಗ್ಗೆ ಕೋವಿಡ್ ನಿರ್ವಹಣೆ ಕುರಿತು ತುರ್ತುಸಭೆ ನಡೆಸಲಾಯಿತು. ಆ ಸಂದರ್ಭದಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಇದನ್ನು ಆಧರಿಸಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದಾರೆ.

ಹೊಸ ಮಾರ್ಗಸೂಚಿಯ ಪ್ರಕಾರ, ಧಾರ್ಮಿಕ ಆಚರಣೆ ಮತ್ತು ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ತೆರೆದ ಪ್ರದೇಶದಲ್ಲಿ 200 ಜನ ಮೀರದಂತೆ ರಾಜಕೀಯ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಲಾಗಿದೆ.

ಮದುವೆಗಳನ್ನು ತೆರೆದ ಪ್ರದೇಶದಲ್ಲಿ ನಡೆಸುವುದಾದರೆ 200 ಜನ ಮೀರಬಾರದು. ಕಲ್ಯಾಣ ಮಂಟಪ, ಸಭಾಂಗಣ, ಹಾಲ್‌ಗಳಲ್ಲಿ 100 ಜನ ಮೀರಬಾರದು. ಸಾಮಾಜಿಕ ಸಮಾರಂಭಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನ್ವಯ ವ್ಯಕ್ತಿಗಳ ನಡುವೆ 3.25 ಚದರಡಿ ಅಂತರ ಕಾಯ್ದುಕೊಂಡು ನಡೆಸಬಹುದು.

ಜನ್ಮದಿನ ಮತ್ತು ಇತರ ಆಚರಣೆಗಳು ತೆರೆದ ಪ್ರದೇಶದಲ್ಲಿ ನಡೆಸುವುದಾದರೆ 50 ಜನ ಮೀರಬಾರದು, ಸಭಾಂಗಣ ಮತ್ತು ಹಾಲ್‌ಗಳಲ್ಲಿ 25 ಜನ ಮೀರಬಾರದು. ನಿಧನದ ಸಂದರ್ಭದಲ್ಲಿ ತೆರೆದ ಪ್ರದೇಶದಲ್ಲಿ 50 ಜನ ಮತ್ತು ಮುಚ್ಚಿದ ಪ್ರದೇಶದಲ್ಲಿ 25 ಜನ ಮೀರಬಾರದು. ಶವಸಂಸ್ಕಾರ/ ಅಂತ್ಯಕ್ರಿಯೆಯಲ್ಲಿ 25 ಕ್ಕೂ ಹೆಚ್ಚುಜನ ಭಾಗವಹಿಸಬಾರದು ಎಂದು ತಿಳಿಸಿದೆ.

ಇತರ ಯಾವುದೇ ಸಮಾರಂಭದಲ್ಲಿ ಹಾಲ್‌ನ ವಿಸ್ತೀರ್ಣಕ್ಕೆ ಅನುಗುಣವಾಗಿ 50 ಕ್ಕೂ ಹೆಚ್ಚು ಜನ ಇರಬಾರದು. ಸಭಾಂಗಣ, ಕಲ್ಯಾಣ ಮಂಟಪ, ಸಿನಿಮಾಮಂದಿರ, ಹಾಲ್‌ಗಳು ಮತ್ತು ಆಚರಣೆಗೆ ಜನ ಸೇರುವ ಪ್ರದೇಶದಲ್ಲಿ ಕಡ್ಡಾಯವಾಗಿ ಸ್ಯಾನಿಟೈಸ್‌ ಮಾಡಬೇಕು.

ಈ ಆದೇಶವು ಬಿಬಿಎಂಪಿ ವ್ಯಾಪ್ತಿ ಮತ್ತು ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗುತ್ತದೆ. ಇದನ್ನು ಉಲ್ಲಂಘಿಸಿದರೆ ವಿಪತ್ತು ನಿರ್ವಹಣೆ ಕಾಯ್ದೆ 2005 ಸೆಕ್ಷನ್‌ 51 ರಿಂದ 60 ಅನ್ವಯ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ.

ಬಿಎಸ್‌ವೈಗೆ ಎರಡನೇ ಬಾರಿ ಕೋವಿಡ್‌

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೋವಿಡ್‌ ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಯಡಿಯೂರಪ್ಪ ಶುಕ್ರವಾರ ಎಂ.ಆರ್‌.ರಾಮಯ್ಯ ಆಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡರು.

ಈ ಹಿಂದೆ ಲಾಕ್‌ಡೌನ್‌ ಸಂದರ್ಭದಲ್ಲೂ ಸೋಂಕಿಗೆ ಒಳಗಾಗಿದ್ದರು. ಇದೀಗ ಎರಡನೇ ಬಾರಿ ಸೋಂಕಿಗೆ ಒಳಗಾಗಿದ್ದಾರೆ. ‘ಅಲ್ಪ ಪ್ರಮಾಣದಲ್ಲಿ ರೋಗ ಲಕ್ಷಣಗಳಿರುವುದರಿಂದ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ’ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

20ಕ್ಕೆ ಮುಂದಿನ ತೀರ್ಮಾನ

‘ಈ ಹಿಂದಿನ ನಿರ್ಧಾರದಂತೆ ಏಪ್ರಿಲ್‌ 20ರವರೆಗೂ ಎಂಟು ನಗರಗಳಲ್ಲಿ ರಾತ್ರಿ ಕರ್ಫ್ಯೂ ಮುಂದುವರಿಯಲಿದೆ’ ಎಂದು ಯಡಿಯೂರಪ್ಪ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೋವಿಡ್‌ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞರು ವರದಿ ನೀಡಿದ್ದಾರೆ. ಎಂಟು ನಗರಗಳಲ್ಲಿ ರಾತ್ರಿ ಕರ್ಫ್ಯೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಬೇರೆ ಕಡೆಗಳಲ್ಲೂ ಜಾರಿಗೊಳಿಸುವ ಕುರಿತು ಉನ್ನತಮಟ್ಟದ ಸಭೆಯ ಬಳಿಕ ತೀರ್ಮಾನಕ್ಕೆ ಬರಲಾಗುವುದು’ ಎಂದರು.

ಸರ್ವಪಕ್ಷಗಳ ಸಭೆ ರದ್ದು

ಕೋವಿಡ್ ವಿಚಾರವಾಗಿ ಭಾನುವಾರ ನಡೆಯಬೇಕಿದ್ದ ಸರ್ವಪಕ್ಷಗಳ ನಾಯಕರ ಸಭೆಯನ್ನು ರದ್ದುಪಡಿಸಲಾಗಿದೆ. ಯಡಿಯೂರಪ್ಪ ಅವರು ಕೋವಿಡ್‌ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಕಾರಣ ಸಭೆ ಮುಂದೂಡಲಾಗಿದೆ.

ಕೋವಿಡ್‌ ಸ್ಥಿತಿಯನ್ನು ನಿಭಾಯಿಸಲು ವಿರೋಧ ಪಕ್ಷಗಳ ನಾಯಕರ ಸಲಹೆ ಸೂಚನೆಗಳನ್ನು ಪಡೆಯಲು ನಿರ್ಧರಿಸಲಾಗಿತ್ತು. ಒಂದು ಹಂತದಲ್ಲಿ ಆಸ್ಪತ್ರೆಯಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲು ಯಡಿಯೂರಪ್ಪ ತೀರ್ಮಾನಿಸಿದ್ದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT